ವಿಜಯ ದರ್ಪಣ ನ್ಯೂಸ್…..
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ
(SIR)ಅಭಿಯಾನಕ್ಕೆ ತಹಶಿಲ್ದಾರ್ ಗಗನಸಿಂಧು ಚಾಲನೆ

ಶಿಡ್ಲಘಟ್ಟ : ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ರಮದ ಮೂಲಕ ತಾಲ್ಲೂಕಿನ ವಿವಿದೆಡೆಡ ಇರುವ ಶತಾಯುಷಿ ಮತದಾರರನ್ನು ಗೌರವಿಸುವ ಜೊತೆಗೆ ಅವರ ಸಮಸ್ಯೆಗಳನ್ನು ಆಲಿಸುವ ಕಾರ್ಯವೂ ನಡೆದಿರುವುದು ಗಮನಾರ್ಹವಾಗಿದೆ.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR)ಅಭಿಯಾನದ ಅಂಗವಾಗಿ ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮದ 100 ವರ್ಷ ಪೂರೈಸಿರುವ ಶತಾಯುಷಿ ಬೈಯಮ್ಮ ಕೋಂ ಮಲಿಯಪ್ಪ ಅವರ ನಿವಾಸಕ್ಕೆ ತಹಶೀಲ್ದಾರ್ ಗಗನಸಿಂಧು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭೇಟಿ ನೀಡಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿದರು.
ಮನೆ ಬಾಗಿಲಿಗೆ ಬಂದ ಅಧಿಕಾರಿಗಳೊಂದಿಗೆ ಮಾತನಾಡಿದ ಬೈಯಮ್ಮ ಅವರು, ಕಳೆದ ಮೂರು ವರ್ಷಗಳಿಂದ ತಮ್ಮ ವೃದ್ಧಾಪ್ಯ ವೇತನ ಸ್ಥಗಿತಗೊಂಡಿದ್ದು, ಹಲವಾರು ಬಾರಿ ಸಂಬಂಧಪಟ್ಟ ಕಚೇರಿಗಳಿಗೆ ಅಲೆದರೂ ಸಮಸ್ಯೆ ಇಂದಿಗೂ ಬಗೆಹರಿದಿಲ್ಲ ಎಂದು ಕಣ್ಣೀರಿಟ್ಟು ತಮ್ಮ ಅಳಲನ್ನು ವ್ಯಕ್ತಪಡಿಸಿದರು.
ವಯಸ್ಸಾದ ಸಮಯದಲ್ಲಿ ಜೀವನೋಪಾಯಕ್ಕೆ ಆಸರೆಯಾಗಿದ್ದ ಪಿಂಚಣಿಯನ್ನು ಶೀಘ್ರದಲ್ಲೇ ಮರು ಆರಂಭಿಸಿಕೊಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು.
ಶತಾಯುಷಿ ಬೈಯಮ್ಮ ಅವರ ಮನವಿಗೆ ಸ್ಪಂದಿಸಿದ ತಹಶೀಲ್ದಾರ್ ಗಗನಸಿಂಧು ಅವರು, ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸಿ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕರು ಹಾಗೂ ಮತದಾರರ ನೋಂದಣಾಧಿಕಾರಿ ಎಸ್.ಎಸ್.ಅಬೀದ್, ಸಿಡಿಪಿಒ ವಿದ್ಯಾ ವಸ್ತ್ರದ್ ಕಂದಾಯ ನಿರೀಕ್ಷಕ ಶಶಿಧರ್, ಗ್ರಾಮ ಲೆಕ್ಕಿಗ ಮುನಿರಾಜು ಹಾಗು BLO ಗಳು ಪಾಲ್ಗೊಂಡಿದ್ದರು.









