ಸಂಘಕ್ಕೆ ರೈತರು ಗುಣಮಟ್ಟದ ಹಾಲು ಸರಬರಾಜು ಮಾಡಬೇಕು: ಜಯಸಿಂಹ ಕೃಷ್ಣಪ್ಪ
ಬಂಗಾರಪೇಟೆ, ಜು.2 :ರೈತರು ಗುಣಮಟ್ಟದ ಹಾಲನ್ನು ಪೂರೈಕೆ ಮಾಡಬೇಕು, ನೀವು ಡೈರಿಗೆ ಪೂರೈಸುವ ಹಾಲು ದೇಶದ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧರಿಗೆ ಹಾಗೂ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿಯ ಅಭಿಷೇಕ ಮತ್ತು ಲಡ್ಡು ತಯಾರಿಕೆಗೆ ಬಳಸಲಾಗುತ್ತದೆ ಎಂದು ಕೋಲಾರ ಹಾಲು ಒಕ್ಕೂಟದ ಕೆಜಿಎಫ್ ಕ್ಷೇತ್ರದ ನಿರ್ದೆಶಕ ಜಯಸಿಂಹ ಕೃಷ್ಣಪ್ಪ ಹೇಳಿದರು.
ತಾಲೂಕಿನ ತೊಪ್ಪನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನೂತನವಾಗಿ ನಿರ್ಮಿಸ ಲಾಗಿರುವ ಎಂ.ವಿ.ಕೆ. ಸಭಾಂಗಣ ಹಾಗೂ ಪಶು ಆಹಾರ ದಾಸ್ತಾನು ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು ಹಾಲು ಒಕ್ಕೂಟದಲ್ಲಿ ಅತಿ ಹೆಚ್ಚು ಹಾಲು ಪೂರೈಕೆ ಮಾಡುವ ಕ್ಷೇತ್ರವೆಂದರೆ ಕೆಜಿಎಫ್ ಕ್ಷೇತ್ರವಾಗಿದೆ, ಈ ಕ್ಷೇತ್ರದ ರೈತರು ಪ್ರತಿದಿನ ಸುಮಾರು 1.25 ಲಕ್ಷ ಲೀಟರ್ ಹಾಲನ್ನು ಒಕ್ಕೂಟಕ್ಕೆ ಪೂರೈಸುತ್ತಿದ್ದಾರೆ. ಮುಂದಿನ ವರ್ಷದೊಳಗೆ ಈ ಪ್ರಮಾಣ 1.50 ಲಕ್ಷ ಲೀಟರ್ ತಲುಪಿದರೂ ಆಶ್ಚರ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು, ರೈತರು ಬೆಳೆಯುವ ಅನೇಕ ಕೃಷಿ ಉತ್ಪನ್ನಗಳಿಗೆ ನಿಗದಿತ ಬೆಲೆ ಇರುವುದಿಲ್ಲ. ಆದರೆ ಹಾಲಿಗೆ ನಿಗದಿತ ಬೆಲೆ ದೊರೆಯುತ್ತಿರುವುದರಿಂದ ಸಾವಿರಾರು ರೈತರು ಹೈನುಗಾರಿಕೆಯನ್ನು ಅವಲಂಬಿಸಿ ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದಾರೆ ಎಂದರು.
ಹಾಲು ಸಂಗ್ರಹಣೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಲಾಗಿದ್ದು, ರೈತರಿಗೆ ಸಕಾಲದಲ್ಲಿ ಹಣ ಪಾವತಿಯಾಗುವ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿ ಸಲಾಗಿದೆ, ಉತ್ತಮ ಗುಣಮಟ್ಟದ ಹಾಲಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಕೋಲಾರ ಜಿಲ್ಲೆಯನ್ನು ರಾಜ್ಯದಲ್ಲೇ ಮಾದರಿ ಹಾಲು ಉತ್ಪಾದನಾ ಜಿಲ್ಲೆಯಾಗಿ ರೂಪಿಸಲಾಗಿದೆ ಎಂದರು.
ಹಾಲು ಒಕ್ಕೂಟವು ರೈತರ ಆಸ್ತಿಯಾಗಿದ್ದು, ಅವರ ಹಿತಾಸಕ್ತಿಯನ್ನು ಕಾಪಾಡುವುದು ನಿರ್ದೇಶಕ ಮಂಡಳಿಯ ಜವಾಬ್ದಾರಿಯಾಗಿದೆ, ಡೈರಿ ಕ್ಷೇತ್ರದಲ್ಲಿ ಎದುರಾಗುತ್ತಿರುವ ಸವಾಲುಗಳನ್ನು ರೈತರು ಮತ್ತು ಒಕ್ಕೂಟ ಪರಸ್ಪರ ಸಹಕಾರದಿಂದ ಎದುರಿಸಿದರೆ ಮಾತ್ರ ಅಭಿವೃದ್ಧಿ ಸಾಧ್ಯ. ಪ್ರತಿದಿನ ಲಕ್ಷಾಂತರ ಲೀಟರ್ ಹಾಲು ಸಂಗ್ರಹಿಸುವ ಮೂಲಕ ಲಕ್ಷಾಂತರ ರೈತ ಕುಟುಂಬಗಳ ಬದುಕಿಗೆ ಒಕ್ಕೂಟ ಆಧಾರವಾಗಿದೆ ಎಂದರು.
ವೇದಿಕೆಯಲ್ಲಿ ಒಕ್ಕೂಟದ ವ್ಯವಸ್ಥಾಪಕ ಡಾ.ಚೇತನ್, ಡಾ. ಮುರಳಿ, ಉಪ ವ್ಯವಸ್ಥಾಪಕ ಡಾ.ಗಿರೀಶ್ ಗೌಡ, ಸಂಘದ ಅಧ್ಯಕ್ಷ ಕೆಂಪೇಗೌಡ, ಉಪಾಧ್ಯಕ್ಷ ಗುರಪ್ಪ, ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಶ್ರೀನಿವಾಸ್, ಚಂಗಲರಾಯರೆಡ್ಡಿ, ಸಿಇಒ ರಾಮಚಂದ್ರ, ವಿಸ್ತರಣಾಧಿಕಾರಿಗಳಾದ ಸದಾಶಿವಯ್ಯ, ಭಾನುಪ್ರಕಾಶ್, ನಟ ರಾಜ್, ಅಂಬರೀಶ್, ವಿನೋದ್ ರೆಡ್ಡಿ, ಸಂಘದ ಎಲ್ಲಾ ನಿರ್ದೆಶಕರು ಹಾಜರಿದ್ದರು