ರಾಮನಗರ: ನರಕವೆಂಬ ಮಾಯಾಲೋಕದಲ್ಲಿ ಬಿದ್ದು ಸ್ವರ್ಗದಲ್ಲಿದ್ದೇವೆಂದು ನಂಬಿ ಬದುಕುತ್ತಿದ್ದೇವೆ. ಆದರೆ ನಮ್ಮ ಬದುಕು ಭ್ರಮೆಯಿಂದ ಕೂಡಿದ್ದು ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಹೇಳಿದರು.
ಅವರು ಕೃಷ್ಣಾಪುರದೊಡ್ಡಿಯ ಕೆ.ಎಸ್.ಮುದ್ದಪ್ಪ ಸ್ಮಾರಕ ಟ್ರಸ್ಟ್ ಮತ್ತು ಕರ್ನಾಟಕ ಜಾನಪದ ಅಕಾಡೆಮಿ ಸಹಯೋಗದಲ್ಲಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ತಳಸಮುದಾಯಗಳ ಮಹಾಬೆಳಕು ಮಂಟೇಸ್ವಾಮಿ ಕಾವ್ಯಗಾಯನ ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಧರ್ಮದಿಂದ ಮೆರೆಯುತ್ತಿದ್ದ ಸಮುದಾಯಗಳನ್ನು ಧರ್ಮದೆಡೆಗೆ ಸಾಗಿಸಲು ನಡೆದ ಹೋರಾಟದಲ್ಲಿ ವಿವೇಕ ಮೆರೆದ ಮಂಟೇಸ್ವಾಮಿಯನ್ನು ಅರ್ಥ ಮಾಡಿಕೊಳ್ಳದೆ ಕೇವಲ ಪೂಜಾರ್ಹ ವ್ಯಕ್ತಿಯನ್ನಾಗಿ ಭಾವಿಸಿದ್ದು, ಈ ಸಮಾಜದ ದುರಂತ ಎಂದು ವಿಷಾಧಿಸಿದರು.
ವಿಚಾರ ಮಂಡನೆ ಮಾಡಿದ ಜಾನಪದ ವಿದ್ವಾಂಸ ಡಾ. ಎಂ.ಬೈರೇಗೌಡ ಮಂಟೇಸ್ವಾಮಿ ಕೇವಲ ವ್ಯಕ್ತಿಯಲ್ಲ, ಅದೊಂದು ಶಕ್ತಿ. ಸುದೀರ್ಘವಾದ ಪಯಣದಲ್ಲಿ ತನ್ನೊಡನೆ ಹಲವರನ್ನು ಕರೆತಂದು ಅವರಿಗೆ ಒಂದು ನೆಲೆಯನ್ನು ಒದಗಿಸಿದ್ದು ಇತಿಹಾಸವೇ ಸರಿ. ಸೆರೆಯಲ್ಲಿದ್ದ ನೆಲಮೂಲ ಸಂಸ್ಕೃತಿಗೆ ಅಗತ್ಯವೆನಿಸುವ ವ್ಯವಸಾಯ ಸಂಬಂಧಿ ಉಪಕರಣಗಳ ತಯಾರಿಕೆಗೆ ಅಗತ್ಯವಾದ ಕಬ್ಬಿಣವನ್ನು ಹೊರತಂದದ್ದು ಮಂಟೇಸ್ವಾಮಿಯವರ ಮಹತ್ಕಾರ್ಯಗಳಲ್ಲಿ ಒಂದು.
ಈ ಹಿನ್ನೆಲೆಯಲ್ಲಿ ಇಡೀ ದಕ್ಷಿಣ ಕರ್ನಾಟಕದ ಜನಸಮುದಾಯಗಳನ್ನು ಕತ್ತಲಿನಿಂದ ಬೆಳಕಿಗೆ ತರುವ ಕಾರ್ಯವನ್ನು ಮಾಡಿದ್ದಾರೆ. ಈ ಯಜ್ಞದಲ್ಲಿ ರಾಚಪ್ಪಾಜಿ, ಚನ್ನಾಜಮ್ಮ, ದೊಡ್ಡಮ್ಮತಾಯಿ, ಕೆಂಪಾಚಾರಿ (ಸಿದ್ದಪ್ಪಾಜಿ), ಇವರ ಮೂಲಕ ಸಾಧನೆಗಳನ್ನು ಮಾಡುತ್ತಾ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿದ್ದು ದೊಡ್ಡ ಕೆಲಸವೇ ಸರಿ ಎಂದು ವಿವರಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಸಂಚಾಲಕಿ ಡಾ.ಎಂ.ಕೆಂಪಮ್ಮ, ಅಕಾಡೆಮಿಯಿಂದ ಬೆಂಗಳೂರು ದಕ್ಷಿಣ ಜಿಲ್ಲೆಯ ಕೇಂದ್ರಸ್ಥಾನವಾದ ರಾಮನಗರದಲ್ಲಿ ಯಾವುದೇ ಕಾರ್ಯಕ್ರಮಗಳು ನಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಂದಿನ ಕಾರ್ಯಕ್ರಮ ಒಂದು ಮೈಲಿಗಲ್ಲಾಗಿ ಉಳಿಯುತ್ತದೆ ಎಂದು ಹೇಳಿದರು.
ಲಕ್ಷೀಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ತುಳಸೀರಾಮ್ ಶೆಟ್ಟಿ ಮಾತನಾಡಿ, ಮಂಟೇಸ್ವಾಮಿಯನ್ನು ಅರ್ಥ ಮಾಡಿಕೊಳ್ಳಬೇಕಾದರೆ ಮಧ್ಯಕಾಲೀನ ಸಾಮಾಜಿಕ ಸ್ಥಿತಿಗತಿಗಳನ್ನು ಗ್ರಹಿಸಬೇಕಾಗುತ್ತದೆ. ಆ ಮೂಲಕ ಅವರು ಮಾಡಿದ ಸಮಾಜೋಧಾರ್ಮಿಕ ಕ್ರಿಯೆಗಳ ಕಡೆಗೆ ನಾವು ಗಮನ ಹರಿಸಬೇಕಾಗಿದೆ ಎಂದು ಹೇಳಿದರು.
ಕಾಲೇಜು ಪ್ರಾಂಶುಪಾಲ ಅನ್ಸರ್ ಉಲ್ಹಕ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಎಸ್.ನರಸಿಂಹಸ್ವಾಮಿ, ಮಂಡ್ಯ ಮಹಿಳಾ ಕಾಲೇಜಿನ ಪ್ರಾಧ್ಯಾಪಕಿ ಡಾ.ಎನ್.ಎಸ್.ದೇವಿಕಾ ಪಾಲ್ಗೊಂಡಿದ್ದರು.
ಸಾಹಿತಿ ಅರುಣ್ ಕವಣಾಪುರ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಕಂಚಿನ ಕಂಠದ ಕಾರಯ್ಯ, ಸಾಮಂದಯ್ಯ, ಮೇಡುಮುತ್ತುಕೋಟೆ ಮಹಾದೇವು, ಮಂಟೇಸ್ವಾಮಿ ಕಾವ್ಯ ಗಾಯನ ಪ್ರೇಕ್ಷಕರ ಮನರಂಜಿಸಿತು.