ವಿಜಯ ದರ್ಪಣ ನ್ಯೂಸ್….
ಸಡಗರ ಸಂಭ್ರಮದಿಂದ ನಡೆದ ಶ್ರೀ ಮಾರಿಯಮ್ಮ ಜಾತ್ರಾ ಮಹೋತ್ಸವ

ಬಂಗಾರಪೇಟೆ: ಪುರಾತನ ಕಾಲದಿಂದಲೂ ಗ್ರಾಮೀಣ ಪ್ರದೇಶಗಳಲ್ಲಿ ನೆಲೆಸಿರುವ ಗ್ರಾಮದೇವತೆಗಳನ್ನು ಸೇರಿದಂತೆ ನಿತ್ಯ ದೇವರನ್ನು ಆರಾಧಿಸುತ್ತಾ ಪೂಜೆ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುವುದರ ಜೊತೆಗೆ ಮಾನಸಿಕ ಒತ್ತಡಗಳು ಕಡಿಮೆಯಾಗುತ್ತವೆ ಹಾಗೂ ಗ್ರಾಮಗಳಲ್ಲಿ ಒಗ್ಗಟ್ಟಿಗೆ ನಾಂದೀಯಾಗಲಿದೆ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಿ.ವಿ.ಮಹೇಶ್ ಹೇಳಿದರು.
ತಾಲೂಕಿನ ಮಾಗೊಂಡಿ ಗ್ರಾಮ ಸಕ್ಕನಹಳ್ಳಿ ಜಾತ್ರಾ ಮಹೋತ್ಸವ ಅಂಗವಾಗಿ ವಿಶೇಷ ಪೂಜೆಯನ್ನು ನೆರವೇರಿಸಿ ಮಾತನಾಡಿದ ಅವರು, ಇಂದಿನ ಯಾಂತ್ರಿಕ ಯುಗದಲ್ಲಿ ಕೆಲಸಗಳ ಒತ್ತಡದಿಂದ ಮನುಷ್ಯನಿಗೆ ನೆಮ್ಮದಿ ಕಡಿಮೆಯಾಗುತ್ತಿದೆ. ಒತ್ತಡದಿಂದ ಹೊರಬರಲು ನಿತ್ಯ ದೇವಾಲಯಗಳಿಗೆ ಹೋಗಿ ಪೂಜೆ ಸಲ್ಲಿಸಿ ಸ್ವಲ್ಪ ಸಮಯ ಕಳೆದರೆ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಹಾಗೇಯೇ ಗ್ರಾಮಗಳಲ್ಲಿ ಪ್ರತಿ ವರ್ಷವೂ ಗ್ರಾಮ ದೇವತೆಗಳಿಗೆ ವಿಶೇಷವಾಗಿ ಪೂಜೆ ಸಲ್ಲಿಸುವುದರ ಮೂಲಕ ಮನಸ್ಸಿಗೆ ನೆಮ್ಮದಿ ತರಲಿದೆ ಎಂದರು.
ಇತ್ತೀಚೆಗಿನ ದಿನಗಳಲ್ಲಿ ಭಕ್ತಿ ಶ್ರದ್ದಾ ಕೇಂದ್ರಗಳಿಗೆ ಜನ ಹೆಚ್ಚಾಗಿ ಬರಲು ಮುಂದಾಗಿದ್ದಾರೆ. ಹಿಂದೂ ಧರ್ಮದಲ್ಲಿ ವಿವಿಧ ಬಗೆಯ ಆಚರಣೆ ಹಾಗೂ ನಂಬಿಕೆಗಳು ಇದ್ದು, ಹಲವಾರು ದೇವತೆಗಳನ್ನು ಪೂಜಿಸಲಾಗುವುದು. ಅಂತಹ ದೇವತೆಗಳಲ್ಲಿ ಗ್ರಾಮ ದೇವತೆಗಳು ಸಹ ಒಂದಾಗಿದ್ದು, ಪ್ರತಿ ವರ್ಷ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ದೇವತೆಗಳ ಆರಾಧನೆ ಮಾಡುವ ಅಂಗವಾಗಿ ಸಂಬಂಧಿಕರನ್ನು ಕರೆಯಿಸಿ ಗೌರವಿಸುವುದು. ಗ್ರಾಮಗಳಲ್ಲಿ ನೆಲೆಸಿರುವ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸುವುದು ಇರುವ ಪದ್ದತಿಯನ್ನು ಹಲವು ವರ್ಷಗಳಿಂದಲೂ ಮುಂದು ವರೆಸಿಕೊಂಡು ಹೋಗುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ ಎಂದರು.
ಟಿಎಪಿಸಿಎಂಎಸ್ ನಿರ್ದೇಶಕ ಹುಣಸನಹಳ್ಳಿ ಶ್ರೀನಿವಾಸ, ಕೆಸರನಹಳ್ಳಿ ಮಂಜುನಾಥ್, ಸಕ್ಕನಹಳ್ಳಿ ಕುಪೇಂದ್ರ, ಕಾರಪೆಂಟರ್ ವೆಂಕಟೇಶ್, ಮುನಿರಾಜು, ವೆಂಕಟೇಶಪ್ಪ, ಮುನಿರೆಡ್ಡಿ, ಸಂದೀಪ್, ರಘು, ಮುರಳಿ, ರೈಲ್ವೆ ಮುನಿಸ್ವಾಮಿ, ಶ್ರೀನಿವಾಸ್ ಇತರರು ಇದ್ದರು.










