--Ads--

ಪ್ರೇಮ ಪಯಣಕೆ ಭಾವ ತೀರದ ಓಲೆ

On: July 11, 2026 4:29 PM
Follow ಮಾಡಿ
--Ads--

Whatsapp Channel

Join Now

Telegram Group

Join Now

 

ನನ್ನೊಲವಿನ ಸೂರಿ
‘ನವಿಲಿನ ಗರಿಯಂತೆ ಕಪ್ಪಗಿರುವ ದಟ್ಟವಾದ ಕೂದಲನ್ನು ಹೆಣೆದು, ಹೆಣೆದಿರುವ ಉದ್ದ ಜಡೆಗೆ ಮೈಸೂರು ಮಲ್ಲೆ ಮುಡಿವ ನೀನು ಸ್ಟೈಲ್ ಮಾಡುವ ಹುಡುಗಿಯರ ಗುಂಪಿಗೆ ಸೇರುವುದಿಲ್ಲ ಎಂದೆನಿಸಿತು. ಬಳ್ಳಿಯಂತಿರುವ ಮೈಮಾಟ, ಕಮಲದ ದಳಗಳಂತಿರುವ ಕಂಗಳು, ಹಂಸದ ನಡಿಗೆ, ನಕ್ಷತ್ರದಂತೆ ಹೊಳೆವ ಮಂದಹಾಸ, ನಿನ್ನ ಮಧುರ ಕಂಠದಲ್ಲಿ ನನ್ನ ಹೆಸರ ಕೇಳಿ ಮನದಲ್ಲಿ ಹುಡುಗಿಯ ಧ್ವನಿ ಎಷ್ಟು ಚೆನ್ನಾಗಿದೆ ಎಂದು ಹೇಳಿಕೊಂಡೆ. ಹೊಳೆವ ನಿನ್ನ ಕಂಗಳ ಕಾಂತಿಗೆ ಸೋತು ಬೆರಗಾಗಿರುವೆ. ಗುಲಾಬಿಯಂತೆ ಕೋಮಲವಾಗಿರುವೆ. ನಿನ್ನ ಕಂಗಳ ಕಪ್ಪು ಪರದೆಯೊಳಗೆ ಸಿಲುಕಿರುವೆ. ಹೃದಯದಲ್ಲಿ ಪ್ರೀತಿ ಕಲರವ ಹಾಡಿದೆ ಒಲವೆ. ನೀನೇ ನನ್ನ ಕಾಪಾಡಬೇಕು ಚೆಲುವೆ. ಇಷ್ಟು ಕಾಲ ಅದೆಲ್ಲಿ ಅಡಗಿದ್ದೆ? ಅಮೃತ ಗಳಿಗೆಯಲ್ಲಿ ಕಣ್ಣಿಗೆ ಬಿದ್ದೆ. ಮಂಡೆಯೂರಿ ಕೂತು ನಿವೇದನೆ ಮಾಡಿಕೊಳ್ಳುವೆ ನನ್ನೊಲವ ಒಪ್ಪಿಕೊ ನನ್ನೊಲವೆ.’
ಎಂದು ಮುದ್ದಾದ ಕೈ ಬರಹದಲ್ಲಿ ನಿನ್ನ ಉತ್ಕಟ ಪ್ರೀತಿ ಹರಿಬಿಟ್ಟು ಬರೆದಿದ್ದ ಒಲವಿನೋಲೆ ಓದಿ ಒಪ್ಪಿಕೊಳ್ಳದೇ ಇರದಾದೆ. ‘ಹರಿಯುವ ಒಲವಿನ ನದಿಗೆ ತಡೆಗೋಡೆ ಕಟ್ಟುವುದು ಒಳಿತಲ್ಲವವಲ್ಲವೇ? ಹಾಗೆಂದೆ ಒಪ್ಪಿಕೊಂಡೆ ನಿನ್ನೊಲವಿಗೆ ನನ್ನೊಲವೆ. ಸ್ವಾರ್ಥದ ಮಹಲಿನಲ್ಲಿ ಪ್ರೇಮದೊಲವನ್ನು ಒಟ್ಟುವವನು ನೀನಲ್ಲವೆಂದು ನಂಬಿರುವೆ.’ ಎಂದು ನಾನುತ್ತರಿಸಿದೆ. ಅಂದಿನಿಂದ ಶುರುವಾಯಿತು ಕಾಲೇಜಿನ ಕಾರಿಡಾರಿನಲ್ಲಿ ಕದ್ದುಮುಚ್ಚಿ ಒಲವಿನೋಲೆಗಳ ವಿನಿಮಯ. ಸಿರಿ ನನ್ನ ಹೆಸರಿನಲ್ಲಿ ಮಾತ್ರ ಇದೆ. ಮನೆಯಲ್ಲಿ ಬಡತನ ಕಾಲು ಮುರಿದುಕೊಂಡು ಬಿದ್ದಿದೆ ಎಂದೆ ಚಿಂತಿಸದಿರು ಅದೆಲ್ಲ ಶಾಶ್ವತವಲ್ಲ ಎಂದು ಧೈರ್ಯ ತುಂಬಿದೆ.
ದೊಡ್ಡಸ್ತನ ತೋರಿಸಲು ಸಾಲ ಮಾಡಿ ಕಾರಿನಲ್ಲೇ ಓಡಾಡುತ್ತಾರೆ. ಅಂಥದ್ದರಲ್ಲಿ ಕನಸಿನಲ್ಲಿ ಕಂಡರಿಯದ ಶ್ರೀಮಂತಿಕೆಯ ವೈಭವ ಇದ್ದರೂ ಸೈಕಲ್ ತುಳಿಯುತ ಕಾಲೇಜಿಗೆ ಬರುವ ನಿನ್ನ ಸರಳ ಜೀವನ ಕಂಡು ಬೆಚ್ಚಿ ಬಿದ್ದೆ. ಮಹಡಿಯ ವಿಶಾಲವಾಗಿದ್ದ ಕೋಣೆಗಳ್ಳುಳ್ಳ ಬಂಗಲೆ ಸುತ್ತಮುತ್ತಲಿನ ನೋಟ ರಾಜಮಹಲನ್ನು ನೆನಪಿಸುವಂತಿತ್ತು. ಹುಡುಗಿಯರ ಕಂಡರೆ ಕೈ ಕುಲುಕಿ ಮಾತನಾಡಿಸಲು ಮುಂದಾಗುವ ಹುಡುಗರೇ ಹೆಚ್ಚು. ಆದರೆ ಹುಡುಗಿಯರೆಂದರೆ ಮಾರು ದೂರ ನಿಲ್ಲುವ ಗುಣ ಕಂಡ ಆ ಕ್ಷಣವೇ ನಿನ್ನ ಮೇಲೆ ಮಮತೆ ಮೂಡಿತು. ಕೋಟಿ ಕೋಟಿ ಆಸ್ತಿ ಎಸ್ಟೇಟ್, ಫ್ಯಾಕ್ಟರಿ ಮತ್ತು ಬಂಗಲೆ ಮೇಲೆ ನಿನ್ನ ಹೆಸರಿದ್ದರೂ ನೀನು ಮಾತ್ರ ಸೀದಾ ಸಾದಾ ಹುಡುಗ. ಆದರೆ ನಡೆಯಲ್ಲಿ ಚುರುಕುತನ ಎದ್ದು ಕಾಣುತ್ತದೆ.

ಪ್ರಶಾಂತತೆ ಎದ್ದು ಕಾಣುವ ಮುಖ, ಕಣ್ಣಲ್ಲಿ ಮಿನುಗುವ ಮೃದುತ್ವ ಎಂಥ ಕಲ್ಲು ಹೃದಯದವರನ್ನೂ ಕರಗಿಸುತ್ತದೆ. ಸಿರಿವಂತಿಕೆಗೂ ನೆಮ್ಮದಿಗೂ ಎಣ್ಣೆ ಸೀಗೆಕಾಯಿ ಸಂಬಂಧ ಆದರೆ ನೀನು ಮಾತ್ರ ಇಷ್ಟು ನೆಮ್ಮದಿಯಾಗಿ ಇದ್ದೀಯಲ್ಲ ಎಂದು ಹೆಮ್ಮೆಯಿಂದ ಹೇಳಿಕೊಂಡಿತ್ತು ಮನಸ್ಸು. ದುಡ್ಡು ಆಸ್ತಿ ನೋಡಿ ಹೆಣ್ಣು ಕೊಡುವವರು ಮನೆ ಮುಂದೆ ಸಾಲು ಹಚ್ಚಿರುತ್ತಾರೆ. ಸಿರಿವಂತ ಮನೆತನದಿಂದಲೇ ಹೆಣ್ಣು ತಂದು ಮದುವೆ ಮಾಡುತ್ತೇವೆಂದು ಹಟ ಮಾಡುವ ಶ್ರೀಮಂತ ತಂದೆ ತಾಯಿಯರು ತುಂಬಿ ತುಳುಕುತ್ತಿದ್ದಾರೆ. ಅಂತಹದ್ದರಲ್ಲಿ ನಿನ್ನ ಹೆತ್ತವರು ಆದರ್ಶವೆನಿಸುತ್ತಾರೆ.
ಒತ್ತಾಯ ಮಾಡಿ ನನ್ನನ್ನು ನಿಮ್ಮ ಮನೆಗೆ ಕರೆದೊಯ್ದಾಗ ಯಾರ ಮುಖದಲ್ಲೂ ಶ್ರೀಮಂತಿಕೆಯ ದರ್ಪ ಎದ್ದು ಕಾಣಲಿಲ್ಲ. ‘ಶ್ರೀಮಂತರ ಮನೆ ನೋಟ ಚೆಂದ ಊಟ ಅಷ್ಟರಲ್ಲೆ.’ ಎಂಬ ಮಾತುಗಳನ್ನು ಕೇಳಿದ್ದ ನನಗೆ, ಬೇಡ ಬೇಡವೆಂದರೂ ವಿಧವಿಧವಾದ ತಿಂಡಿ ತಿನಿಸು ಹಣ್ಣುಹಂಪಲ ಬಲವಂತ ಮಾಡಿ ತಿನ್ನಿಸಿದರು. ನಡುನಡುವೆ ನನ್ನ ಓದಿನ ಬಗ್ಗೆ ವಿಚಾರಿಸಿದರು. ಇನ್ಮೇಲೆ ಓದಿಗೆ ಏನೇ ಅನುಕೂಲ ಬೇಕಿದ್ದರೂ ಮುಜುಗರ ಮಾಡಿಕೊಳ್ಳದೇ ನನ್ನ ಕೇಳಬಹುದು ಎಂದಿದ್ದರು ನಿಮ್ಮ ತಂದೆ. ಓದುವುದರ ಜೊತೆಗೆ ಊಟ ತಿಂಡಿಗಳ ವಿಷಯದಲ್ಲೂ ಗಮನ ಹರಿಸಬೇಕೆಂದು ಹೇಳುವುದನ್ನು ಮರೆಯಲಿಲ್ಲ ನಿನ್ನ ತಾಯಿ. ಸಹಬಾಳ್ವೆ ಮತ್ತು ಹಂಚಿ ಉಣ್ಣುವ ಸಾಕಾರ ಮೂರ್ತಿ ಎಂದೆನಿಸಿದರು ನಿನ್ನ ಹೆತ್ತವರು. ಪಡೆದದ್ದನ್ನು ಪರರಿಗೂ ಹಂಚಬೇಕೆನ್ನುವ ಔದಾರ್ಯ ಗುಣ ಅವರದು. ಸ್ವಾರ್ಥದ ಸುಳಿಗೆ ಸಿಲುಕಿರುವ ಇಂದಿನ ಸಿರಿವಂತರಿಗೆ ನಿಜಕ್ಕೂ ಮಾದರಿ. ನಿಮ್ಮಮ್ಮ ಅಂದರೆ ನನ್ನತ್ತೆ ಅಡಿಯಿಂದ ಮುಡಿಯವರೆಗೂ ದಿಟ್ಟಿಸಿ ನೋಡಿದರು. ‘ಶ್ರೀಗೌರಿಯಂತೆ ಮುದ್ದಾಗಿರುವೆ.’ ಎಂದು ಮೆಚ್ಚುಗೆಯ ನುಡಿಗಳನ್ನಾಡಿದರು. ಆಗ ಕಣ್ಣು ಕ್ಷಣ ತುಂಬಿತ್ತು. ನಾನು ಅಂದುಕೊಂಡಿರುವಂತೆ ಇವರಲ್ಲ ಎನ್ನುವ ಅನಿಸಿಕೆ ಮೂಡಿ ಒಂದು ರೀತಿಯ ತೃಪ್ತಿ ಮೂಡಿತ್ತು. ಸಂಕಟದಲ್ಲಿ ಜೊತೆಗೂಡುವ ಒಳ್ಳೆಯ ಮನಸ್ಸು ‘ನಾನು ಮತ್ತು ನನ್ನ ಕುಟುಂಬ’ ಎಂಬ ಸಂಕುಚಿತ ಮನೋಭಾವದಿದಿಂದ ಹೊರಬಂದು ನಮ್ಮವರು ಎಂಬ ವಿಶಾಲಮನೋಭಾವ ನಿನ್ನಲ್ಲಿ ಬೆಳೆಯಲು ನಿನ್ನ ಹೆತ್ತವರೆ ಕಾರಣ ಎಂದೆನಿಸಿತು. ಮಾನವೀಯತೆ ಮುಂದೆ ಯಾವ ಸಿರಿವಂತಿಕೆಯೂ ದೊಡ್ಡದಲ್ಲ ಎಂಬ ಭಾವ ಮೂಡಿತ್ತು.

ಪಾರ್ಕಿನಲ್ಲಿ ಭೇಟಿಯಾಗಬೇಕೆಂದು ನಿರ್ಧರಿಸಿದ ಸಮಯವದು. ಮುಸ್ಸಂಜೆಯ ಸಮಯ ಎತ್ತರದ ಗಿಡಮರಗಳು, ಹತ್ತಿರಕ್ಕೆ ಇದ್ದಂತಹ ಹೂಗಿಡಗಳು, ಸುತ್ತಲೂ ತೀಡುತ್ತಿದ್ದ ತಂಗಾಳಿ, ಮನಮೋಹಕ ದೃಶ್ಯ ಒಂದು ಕ್ಷಣ ಮೈ ಮರೆಸಿತ್ತು. ತುಂಬಾ ಹತ್ತಿರದಿಂದ ಈ ಸೌಂದರ್ಯವ ಆಸ್ವಾದಿಸಬೇಕು ಎಂದು ಮನಸ್ಸು ಹೇಳುತ್ತಿತ್ತು. ಯಾರೋ ಬಂದರೂ ಹೆಜ್ಜೆಯ ಸದ್ದಿಗೆ ನಿನ್ನ ನೋಡುವ ಕುತೂಹಲದಿಂದ ತಿರುಗಿ ನೋಡುತ್ತಿದ್ದೆ. ಕೊನೆಗೂ ನಿನ್ನ ಪಾದಗಳ ಸದ್ದು ಕೇಳಿಸಿತು. ಮೊದಲ ಮಳೆಯ ಮೊದಲ ತುಂತುರು ಹನಿಗಳು ಬಯಲಲ್ಲಿ ಬೀಳುತ್ತಿತ್ತು. ನಿನ್ನ ಪ್ರೀತಿಯ ಹೊದಿಕೆ ಬಾನಂಚಿನವರೆಗೂ ರಮ್ಯ ಮನೋಹರವಾಗಿತ್ತು.
ಪೂರ್ಣ ಕತ್ತಲು ಆವರಿಸುವ ಮುನ್ನ ತೇಲಿಸಿ ಬಿಡು ಸವಿಜೇನಿನ ಮುತ್ತಿನ ಹೊನಲಲಿ ಎನ್ನುತ್ತಿತ್ತು ತುಂಟ ಮನಸ್ಸು. ಪಕ್ಕದಲ್ಲೇ ಕೂತಿದ್ದ ನಿನ್ನುಸಿರಿನ ಬಿಸಿ ಮೈಗೆ ತಾಗುತ್ತಿತ್ತು. ಹೆಗಲಿಗೆ ಹೆಗಲು ತಾಕಿತ್ತು. ಎರಡು ದೇಹಗಳಿಗೂ ಬೆಚ್ಚನೆಯ ಅಪ್ಪುಗೆ ಬೇಕಿತ್ತು. ಕೈಗಳು ಹಿಡಿಯುವುದಕ್ಕೆ ಅಧರಗಳು ಅಂಟಿಕೊಳ್ಳುವುದಕ್ಕೆ ಕಾಯುತ್ತಿದ್ದವು. ನಾಚಿಕೆ ಮೂಡಿಸುವ ಸಾವಿರ ಸಾವಿರ ಬಯಕೆಗಳು ಎತ್ತರೆತ್ತರಕ್ಕೆ ನಿಲ್ಲತೊಡಗಿದ್ದವು.ಇಬ್ಬರ ನಡುವಿನ ಅಂತರ ಕರಗಿ ಹೋಗಿತ್ತು. ಕೆಂದುಟಿಯ ಹೋಳಿಗೆಯ ಊಟಕ್ಕೆ ಮನಸ್ಸು ತಯಾರಾಗಿತ್ತು. ಹೀಗೆ ಮನದಲ್ಲಿ ಪ್ರಣಯದ ಮೆರವಣಿಗೆ. ಸಾಗಿತ್ತು. ಅಷ್ಟರಲ್ಲಿ ಬಾಚಿ ತಬ್ಬಿ ನೀನಿತ್ತೆ ಹಣೆಗೆ ಹೂಮುತ್ತು.
ಮೆಲ್ಲಗೆ ತೆಕ್ಕೆಯಿಂದ ಹೊರಬಂದು ನೀನಾಡಿದ ಮಾತು ನನ್ನ ಕಣ್ಣು ತೆರೆಸಿತ್ತು. ‘ಮುರಿದು ಬಿದ್ದ ಸೇತುವೆ, ತಳ ಒಡೆದ ನಾವೆ ನಾವಾಗಬಾರದು. ಹರೆಯದ ಅಲೆಗಳ ರಭಸಕ್ಕೆ ಕೊಚ್ಚಿಹೋದ ಜೀವದೋಣಿಗಳು ಅದೆಷ್ಟೋ ಲೆಕ್ಕವಿಲ್ಲದಷ್ಟು. ಹಾರಿ ಹೋದ ಯುವಜೋಡಿ ಹಕ್ಕಿಗಳ ರೆಕ್ಕೆಗಳ ಸದ್ದನ್ನು ಗೂಡಿನಲ್ಲಿರುವ ತಾಯಿ ತಂದೆ ಹಕ್ಕಿಗಳು ನೆನೆಯದಂತೆ ಮಾಡಬೇಕು. ಮೌನದಲ್ಲಿ ನೆನೆದು ಕಣ್ಣೀರು ಹಾಕದಂತೆ ನೋಡಿಕೊಳ್ಳಬೇಕು.’ ನಿನ್ನ ಮಾತುಗಳಲ್ಲಿ ತೂಕವಿದೆ. ಹೆಣ್ಣಾದ ನಾನೇ ಈ ರೀತಿಯ ಪ್ರೀತಿಗೆ ಬಿದ್ದು ಬದುಕು ಹಾಳುಮಾಡಿಕೊಳ್ಳುವುದನ್ನು ತಡೆದೆ. ನಿಮ್ಮಮ್ಮ ನನ್ನನ್ನು ಸೊಸೆಯಾಗಿ ಮನೆ ತುಂಬಿಸಿಕೊಳ್ಳಲು ಒಪ್ಪಿದ್ದಾರೆಂಬ ಸಂತಸದ ಸುದ್ದಿಯನ್ನು ತಿಳಿಸಿದೆ.
ಅಂದು ರಾತ್ರಿ ಪ್ರೀತಿಯ ರಂಗಿನ ತರಂಗಗಳಿಗೆ ಮನವು ಹುಚ್ಚೆದ್ದು ಕುಣಿಯಿತು. ನಿದಿರೆ ಬಾರದೆ ನಿನ್ನೊಂದಿಗೆ ಕಳೆದ ಸವಿನೆನಪುಗಳ ಹೆಕ್ಕುತ್ತ ಮಂಚದ ಮೇಲೆ ಮೈ ಚೆಲ್ಲಿದ್ದೆ. ‘ಅರ್ಧ ತೆರೆದ ಬಾಗಿಲ ಮೇಲೆ ನಿನ್ನ ಕೈ ತಟ್ಟಬಹುದೆಂದುಕೊಂಡು ಕಿವಿಗೊಟ್ಟು ಕೂತೆ. ಆಗು ಬಾ ಕೊರೆಯುವ ಚಳಿಗೆ ಹೊದಿಕೆ ಎಂದೆಲ್ಲ ಕವಿತೆಯನ್ನೂ ಬರೆದೆ.’ ಈಗ ಅದೆಲ್ಲ ಸವಿನೆನಪಿನ ಕಥೆ. ನಡೆಯಬೇಕಿದೆ ಇಂದಿನ ಇರುಳಿಂದ ಇಬ್ಬರದೂ ಜೋಡಿ (ಚಕೋರ ಚಕ್ರವಾಕ) ಪಕ್ಷಿಗಳಂತೆ ನಿತ್ಯ ಪ್ರೇಮಿಗಳಾಗಬೇಕಿದೆ. ಪ್ರೀತಿ ಪ್ರೇಮ ಪ್ರಣಯದ ಕಥೆ ಜೊತೆ ವಸಂತಕಾಲ ಮುಂದುವರೆಸಬೇಕಿದೆ.
ಇಂತಿ ನಿನ್ನೊಲವಿನ ಸಿರಿ

ಲೇಖನ
– ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨

WhatsApp

Join Now

Telegram

Join Now

Instagram

Join Now