ವಿಜಯ ದರ್ಪಣ ನ್ಯೂಸ್….
ಬಲಾಡ್ಯರ ಪಾಲದ ಮುಜರಾಯಿ ಜಾಮೀನು: ಪ್ರತಿಷ್ಠಾಪನೆ ಭಾಗ್ಯ ಕಾಣದ ದೇವಾಲಯ

ಶಿಡ್ಲಘಟ್ಟ, ಜು.11: ತಾಲ್ಲೂಕಿನ ಜಪ್ತಿಹೊಸಹಳ್ಳಿ ಗ್ರಾಮದಲ್ಲಿ ಸುಮಾರು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ವಿಶಾಲವಾಗಿ ವೈಭವದಿಂದ ನಿರ್ಮಾಣಗೊಂಡಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯ ಕಳೆದ ಆರು ವರ್ಷಗಳಿಂದ ಪ್ರತಿಷ್ಠಾಪನೆ ಭಾಗ್ಯ ಸಿಗದೆ ಬಣ್ಣ ಕಳೆದುಕೊಳ್ಳುವ ಹಂತಕ್ಕೆ ಬಂದು ನಿಂತಿದೆ.
ಸದ್ಯ ಯಾವುದೇ ರಾಜಕೀಯ ಕಾರಣವಿಲ್ಲದಿದ್ದರೂ, ಗ್ರಾಮದ ಎರಡು ಗುಂಪುಗಳ ನಡುವಿನ ಭಿನ್ನಾಭಿಪ್ರಾಯಗಳು ದೇವಾಲಯದ ಭವಿಷ್ಯವನ್ನೇ ಮಸುಕಾಗಿಸುತ್ತಿವೆ. ಈಗಲೂ ಮೂಲ ಸ್ಥಾನವಾದ ಚಿಕ್ಕ ಗುಡಿಯಲ್ಲಿ ನಿತ್ಯ ಪೂಜೆ ನಡೆಯುತ್ತಿದ್ದು, ಮುಜರಾಯಿ ಇಲಾಖೆಯು ಸಹ ಇದಕ್ಕೂ ನಮಗೂ ಸಂಬಂಧವಿಲ್ಲ ಎನ್ನುವ ರೀತಿಯಲ್ಲಿ ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಮಾಜಿ ಗ್ರಾಮ ಪಂಚಾಯತಿ ಸದಸ್ಯ ಪ್ರಕಾಶ್ ಆರೋಪಿಸಿದ್ದಾರೆ.
ತಾಲ್ಲೂಕಿನಲ್ಲಿ 214 ಕ್ಕೂ ಹೆಚ್ಚು ಮುಜರಾಯಿ ಇಲಾಖೆಯ ದೇವಾಲಯಗಳಿವೆ.ಈ ದೇವಾಲಯಗಳ ನಿತ್ಯ ಪೂಜೆ, ನಿರ್ವಹಣೆ ಹಾಗೂ ಅರ್ಚಕರ ಕುಟುಂಬದ ಜೀವನೋಪಾಯಕ್ಕಾಗಿ ಹಿಂದಿನ ಆಡಳಿತಗಳು ಮತ್ತು ಸರ್ಕಾರಗಳು ಮುಜರಾಯಿ ಜಮೀನುಗಳನ್ನು ಮೀಸಲಿಟ್ಟಿದ್ದವು.ಆದರೆ ಇಂದು ಅನೇಕ ಕಡೆಗಳಲ್ಲಿ ಈಜಮೀನುಗಳು ಪ್ರಭಾವಿ ವ್ಯಕ್ತಿಗಳ ಪಾಲಾಗಿರುವ ಆರೋಪಗಳು ಕೇಳಿಬರುತ್ತಿವೆ.
ಶಿಡ್ಲಘಟ್ಟತಾಲೂಕಿನ ಜಪ್ತಿಹೊಸಹಳ್ಳಿ ಗ್ರಾಮ ಇದಕ್ಕೆ ಒಂದು ಉದಾಹರಣೆಯಾಗಿ ಪರಿಣಮಿಸಿದೆ. ಸರ್ವೆ ನಂ 6 ರಲ್ಲಿ 2 ಎಕರೆ 6 ಗುಂಟೆ ಜಮೀನು ಶ್ರೀ ಆಂಜನೇಯಸ್ವಾಮಿ ಹೆಸರಿನಲ್ಲಿ ಇದ್ದರೂ ಇದುವರಿಗೂ ದೇವಸ್ಥಾನದ ಅಭಿವೃದ್ಧಿ ಕೆಲಸಕ್ಕಾಗಲಿ ಅಥವಾ ನಿತ್ಯ ಪೂಜೆ ಮಾಡುವ ಅರ್ಚಕರಿಗಾಗಲಿ ನಯಾ ಪೈಸೆ ಹಣವಾಗಲಿ ಅಥವಾ ಧವಸ ಧಾನ್ಯವಾಗಲಿ ನೀಡದೆ ಅತಿಕ್ರಮಿಸುವ ಮೂಲಕ ದೌರ್ಜನ್ಯ ನಡೆಸುತ್ತಿದ್ದಾರೆ. ಎಂದು ಮೂರು ತಲೆಮಾರಿನಿಂದ ಪೂಜೆ ಸಲ್ಲಿಕೊಂಡು ಕುಟುಂಬದ ನಿರ್ವಹಣೆ ಮಾಡಲಾಗದೆಯಾವುದೇ ಮೂಲ ಆದಾಯವೂ ಇಲ್ಲದೆ ಕೇವಲ ಪೂಜೆ ಕಾರ್ಯ ಮಾಡಿಕೊಂಡು ಜೀವನ ಸಾಗಿಸಿಕೊಂಡು ಬರುತ್ತಿರುವ ಅರ್ಚಕ ಕೃಷ್ಣಯ್ಯಾಚಾರ್ ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.
ಈ ದೇವಾಲಯಕ್ಕೆ ಸಂಬಂಧಿಸಿದ ಮುಜರಾಯಿ ಜಮೀನುಗಳ ಮೇಲೆ ಪ್ರಭಾವಿ ವ್ಯಕ್ತಿಗಳು ಅತಿಕ್ರಮಣ ನಡೆಸಿದ್ದಾರೆ. ಎಂಬ ಆರೋಪ ಯಿ ಜಮೀನುಗಳ ಮೇಲೆ ಸ್ಥಳೀಯರಿಂದ ಕೇಳಿಬರುತ್ತಿದೆ.ಕೆಲವು ಕಡೆಗಳಲ್ಲಿ ನಕಲಿ ದಾಖಲೆಗಳ ಮೂಲಕ ಖಾತೆ ಬದಲಾವಣೆ ನಡೆದಿರುವ ಶಂಕೆಯೂ ವ್ಯಕ್ತವಾಗಿದೆ.
ಮುಜರಾಯಿ ಜಮೀನುಗಳ ಮೂಲ ಉದ್ದೇಶ ಅರ್ಚಕರ ವೈಯಕ್ತಿಕ ಆಸ್ತಿ ಸೃಷ್ಟಿಸುವುದಲ್ಲ. ಆ ಜಮೀನಿನಿಂದ ಬರುವ ಆದಾಯವನ್ನು ನಿತ್ಯ ಪೂಜೆ, ದೀಪ, ನೈವೇದ್ಯ, ಉತ್ಸವಗಳು, ದೇವಾಲಯದ ನಿರ್ವಹಣೆ ಹಾಗೂ ಅರ್ಚಕರ ಕುಟುಂಬದ ಜೀವನೋಪಾಯಕ್ಕಾಗಿ ಬಳಸಬೇಕೆಂಬ ಉದ್ದೇಶದಿಂದಲೇ ಅವುಗಳನ್ನು ಮೀಸಲಿಡಲಾಗಿತ್ತಾದರೂ ಆಜಮೀನುಗಳಿಂದ ಆದಾಯವೇ ಬರದ ಪರಿಸ್ಥಿತಿ ನಿರ್ಮಾಣವಾದರೆ, ಅರ್ಚಕರ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತವೆ. ಜೊತೆಗೆ ದೇವಾಲಯಗಳಲ್ಲಿಯೂ ನಿತ್ಯ ಧಾರ್ಮಿಕ ಚಟುವಟಿಕೆಗಳು ಕುಂಠಿತವಾಗುವ ಅಪಾಯ ಎದುರಾಗುತ್ತದೆ.
ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯಿದೆ.1997ರ ಪ್ರಕಾರದೇವಾಲಯಗಳ ಆಸ್ತಿಯನ್ನು ರಕ್ಷಿಸುವ ಜವಾಬ್ದಾರಿ ಮುಜರಾಯಿ ಇಲಾಖೆಯ ಮೇಲಿದೆ. ದೇವಾಲಯದ ಆಸ್ತಿಗಳ ಮೇಲಿನ ಅತಿಕ್ರಮಣ ತೆರವುಗೊಳಿಸುವುದು ಹಾಗೂ ಆ ಆಸ್ತಿಯಿಂದ ಬರುವ ಆದಾಯವನ್ನು ದೇವಾಲಯದ ಉದ್ದೇಶಕ್ಕೇ ಬಳಸುವಂತೆ ನೋಡಿಕೊಳ್ಳುವುದು ಇಲಾಖೆಯ ಕರ್ತವ್ಯವಾಗಿದೆ.
ಇನ್ನು ದೇವಾಲಯಕ್ಕೆ ಸೇರಿದ ಮುಜರಾಯಿ ಜಮೀನುಗಳ ಮೇಲೆ ಅತಿಕ್ರಮಣ ನಡೆದಿರುವ ಆರೋಪದಿಂದ ಅರ್ಚಕರಿಗೆ ಬರಬೇಕಾದ ಆದಾಯವೂ ಸ್ಥಗಿತಗೊಂಡಿದೆ. ದೇವಾಲಯದ ಆಸ್ತಿಯನ್ನು ರಕ್ಷಿಸಿ, ಆದರ ಆದಾಯವನ್ನು ದೇವಾಲಯ ಮತ್ತು ಆರ್ಚಕರಸೇವೆಗೆ ಬಳಸುವ ಜವಾಬ್ದಾರಿ ಮುಜರಾಯಿ ಇಲಾಖೆಯ ಮೇಲಿದೆ. ಇದೀಗ ಈ ಸಮಸ್ಯೆಗೆ ಶೀಘ್ರ ಪರಿಹಾರ ಸಿಗಬೇಕೆಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.
ಶೀಘ್ರವಾಗಿ ಜಪ್ತಿಹೊಸಹಳ್ಳಿ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಾಲಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಸಿಗುತ್ತದೆಯೇ? ಮುಜರಾಯಿ ಜಮೀನುಗಳು ಮತ್ತೆ ದೇವಾಲಯ ಮತ್ತು ಅರ್ಚಕರ ಸೇವೆಗೆ ಮರಳುತ್ತವೆಯೇ? ಎಂಬ ಪ್ರಶ್ನೆಗೆ ಗ್ರಾಮದ ಸ್ಥಳೀಯರು ಉತ್ತರ ಸಿಗಬೇಕಿದೆ.
ಲೇಖನ : ಎಂ ಎನ್ ನಾಗಭೂಷಣ್








