ವಿಜಯ ದರ್ಪಣ ನ್ಯೂಸ್…
ಚಿಕ್ಕದಾಸರಹಳ್ಳಿ ಬ್ಯಾಟರಾಯಸ್ವಾಮಿ ದೇವಾಲಯದಲ್ಲಿ ಹುಂಡಿ ಹಣ ಕಳವು

ಶಿಡ್ಲಘಟ್ಟ : ಮುಜರಾಯಿ ಇಲಾಖೆಗೆ ಸೇರಿದ ದೇವಾಲಯದ ಬಾಗಿಲು ಮುರಿದು ಒಳನುಗ್ಗಿದ ಖತರ್ನಾಕ್ ಕಳ್ಳರು, ಹುಂಡಿಯಲ್ಲಿದ್ದ 50 ಸಾವಿರ ರೂ.ಗಳಿಗು ಅಧಿಕ ಹಣವನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ಚಿಕ್ಕದಾಸರಹಳ್ಳಿ ಗ್ರಾಮದ ಗುಡ್ಡದ ಮೇಲಿರುವ ಶ್ರೀಬ್ಯಾಟರಾಯಸ್ವಾಮಿ ದೇವಾಲಯದಲ್ಲಿ ನಡೆದಿದೆ.
ರಾತ್ರಿ ವೇಳೆ ದೇವಾಲಯಕ್ಕೆ ನುಗ್ಗಿರುವ ಕಳ್ಳರು, ಮೊದಲು ದೇವಾಲಯದ ಬಾಗಿಲನ್ನು ಮುರಿದು ಒಳ ಪ್ರವೇಶಿಸಿದ್ದಾರೆ ಬಳಿಕ ಹುಂಡಿಯನ್ನು ಒಡೆದು ಅದರಲ್ಲಿದ್ದ ಹಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಬೆಳಿಗ್ಗೆ ದೇವಾಲಯಕ್ಕೆ ಬಂದ ಸ್ಥಳೀಯರಿಗೆ ಕಳ್ಳತನ ನಡೆದಿರುವುದು ಗೊತ್ತಾಗಿದೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತಹಸೀಲ್ದಾರ್ ಗಗನಸಿಂಧು ಹಾಗೂ ಗ್ರಾಮಾಂತರ ಠಾಣೆಯ ಪಿಎಸ್ಐ ಸುನೀಲ್ , ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ದೇವಾಲಯದ ಬಾಗಿಲು ಹಾಗೂ ಹುಂಡಿಯನ್ನು ಪರಿಶೀಲಿಸಿದ ಪೊಲೀಸರು, ಕಳ್ಳರ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.ತಹಸೀಲ್ದಾರ್ ಗಗನಸಿಂಧು ಮಾತನಾಡಿ , ಬ್ಯಾಟರಾಯಸ್ವಾಮಿ ದೇವಾಲಯದಲ್ಲಿ ಈ ಹಿಂದೆಯೂ ಹಲವಾರು ಬಾರಿ ಕಳ್ಳತನ ಪ್ರಕರಣಗಳು ನಡೆದಿವೆ, ಕಳ್ಳರನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ,ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ದೇವಾಲಯದ ಆವರಣದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಆದರೆ ದೇವಾಲಯದಲ್ಲಿ ಈ ಹಿಂದೆಯೂ ಹಲವು ಬಾರಿ ಕಳ್ಳತನ ನಡೆದಿದ್ದರೂ ಇದುವರೆಗೂ ಶಾಶ್ವತವಾಗಿ ಭದ್ರತಾ ಕ್ರಮಗಳನ್ನು ಕೈಗೊಳ್ಳದಿರುವ ಬಗ್ಗೆ ಚಿಕ್ಕದಾಸರಹಳ್ಳಿ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇವಾಲಯಕ್ಕೆ ಸೂಕ್ತ ಭದ್ರತೆ ಒದಗಿಸುವುದರ ಜತೆಗೆ, ಹಿಂದಿನ ಕಳ್ಳತನ ಪ್ರಕರಣಗಳನ್ನೂ ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಪತ್ತೆಹಚ್ಚಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗ್ರಾಮಾಂತರ ಪೊಲೀಸರು ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದು, ದೇವಾಲಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಲಭ್ಯವಿರುವ ಸುಳಿವುಗಳು ಹಾಗೂ ಸಿಸಿ ಕ್ಯಾಮೆರಾ ದೃಶ್ಯಾವಳಿಗಳ ಆಧಾರದ ಮೇಲೆ ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.








