ವಿಜಯ ದರ್ಪಣ ನ್ಯೂಸ್….
ವಿಜಯಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ: 12 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ವಾಹನಗಳು ವಶ, ಓರ್ವ ಬಂಧನ

ವಿಜಯಪುರ: ದೇವನಹಳ್ಳಿ ತಾಲ್ಲೂಕು ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಎರಡು ಪ್ರತ್ಯೇಕ ಕಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ವಿಜಯಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಒಟ್ಟು 12 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು 7 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಎರಡೂ ಪ್ರಕರಣಗಳ ತನಿಖೆ ಕೈಗೊಂಡಿದ್ದ ವಿಜಯಪುರ ಪೊಲೀಸರು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ವಿ. ಚಂದ್ರಕಾಂತ್, ಅಪರ ಪೊಲೀಸ್ ಅಧೀಕ್ಷಕರಾದ ವೆಂಕಟೇಶ್ ಪ್ರಸನ್ನ, ಲಕ್ಷ್ಮೀ ನಾರಾಯಣ್ ಹಾಗೂ ದೊಡ್ಡಬಳ್ಳಾಪುರ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕ ಎಸ್. ಪಾಂಡುರಂಗ ಅವರ ಮಾರ್ಗದರ್ಶನದಲ್ಲಿ, ವಿಜಯಪುರ ಠಾಣೆಯ ಪೊಲೀಸ್ ನಿರೀಕ್ಷಕ ಲಕ್ಷ್ಮೀನಾರಾಯಣ ನೇತೃತ್ವದಲ್ಲಿ ಪಿಎಸ್ಐ ಸುನೀಲ್ ಕುಮಾರ್ ಆರ್. ಮತ್ತು ಸಿಬ್ಬಂದಿಯ ಹೆಡ್ ಕಾನ್ ಸ್ಟೆಬಲ್ ಗಳಾದ ಮಧುಕುಮಾರ್, ಮೊಹಮ್ಮದ್ ಮುಕ್ತಿಯಾರ್, ಕಾನ್ ಸ್ಟೆಬಲ್ ಗಳಾದ ಮಂಜುನಾಥ, ಪ್ರವೀಣ, ಪ್ರದೀಪ್, ಅರುಣ್ ಕುಮಾರ್ ಮತ್ತು ಮಧುಚಂದ್ರ ಇವರ ವಿಶೇಷ ತಂಡವನ್ನು ರಚಿಸಲಾಗಿತ್ತು.
ಕಾರ್ಯಾಚರಣೆ ನಡೆಸಿದ ತಂಡವು, ಕಾನೂನಿನೊಂದಿಗೆ ಸಂಘರ್ಷಕ್ಕೊಳಗಾದ ಬಾಲಕನನ್ನು ಪತ್ತೆ ಮಾಡಿ ವಶಕ್ಕೆ ಪಡೆದು, ಆತನಿಂದ ಕಳ್ಳತನ ಮಾಡಿದ್ದ ಚಿನ್ನದ ವಡವೆಗಳನ್ನು ಮತ್ತು 7 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದೆ.
ಮತ್ತೊಬ್ಬ ಆರೋಪಿ ಶಿಡ್ಲಘಟ್ಟ ತಾಲ್ಲೂಕು ಭಕ್ತರಹಳ್ಳಿ ಗ್ರಾಮದ ವಿಜಯಕುಮಾರ್ ಬಿನ್ ಗೋಪಾಲಗೌಡ ಎಂಬಾತನಿಂದ ಕಳ್ಳತನ ಮಾಡಿದ್ದ ಒಟ್ಟು 8,50,000ರೂ. ಬೆಲೆ ಬಾಳುವ 65 ಗ್ರಾಂ ಚಿನ್ನದ ವಡವೆ ಮತ್ತು ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.










