ವಿಜಯ ದರ್ಪಣ ನ್ಯೂಸ್…..
ರಾಜ್ಯದ ಎಲ್ಲಾ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕು : ರೈತ ಸಂಘದ ಅದ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್

ಶಿಡ್ಲಘಟ್ಟ : ರಾಜ್ಯ ಸರ್ಕಾರ 100 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ರಾಜ್ಯದ ಇನ್ನುಳಿದ ಎಲ್ಲಾ ತಾಲ್ಲೂಕು ಬರಪೀಡಿತ ಎಂದು ಘೋಷಿಸಬೇಕು ಇದು ಕಣ್ಣೂರೆಸುವ ತಂತ್ರ ಆಗಬಾರದು ಎಂದು ಹಸಿರು ಸೇನೆ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದರು.
ತಾಲ್ಲೂಕಿನ ವೀರಾಪುರ ಮತ್ತೀತರೆ ಗ್ರಾಮಗಳ ಹೊಲಗಳಿಗೆ ಭೇಟಿ ನೀಡಿ ಬಿತ್ತನೆ, ಬರದ ಸ್ಥಿತಿ ಕುರಿತು ರೈತರೊಂದಿಗೆ ಚರ್ಚಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ರಾಜ್ಯದ ಎಲ್ಲಾ ಜಿಲ್ಲೆ, ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ, ಕೂಡಲೇ ಬರ ಪರಿಹಾರ ವಿತರಿಸಬೇಕು ರೈತರಿಗೆ ಬೆಳೆ ವಿಮೆ ಮಂಜೂರು ಮಾಡಬೇಕು ಎಂದರು.
ಈ ಮೊದಲು ಶೇ.25 ಮಾತ್ರ ಬಿತ್ತನೆಯಾದರೆ ಬರ ಎಂದು ಘೋಷಿಸಲಾಗುತ್ತಿತ್ತು ಆದರೆ ಇದೀಗ ಆ ನಿಯಮ ಬದಲಿಸಿ ಮಳೆ ಆಧಾರದಲ್ಲಿ ಬರ ನಿರ್ಧರಿಸಲಾಗುತ್ತಿದ್ದು ಇದು ಸರಿಯಾದ ಕ್ರಮವಲ್ಲ ಸಾಕಷ್ಟು ಮಳೆ ಬಿದ್ದರೂ ಸಕಾಲಕ್ಕೆ ಬಿತ್ತನೆ ಮಾಡಲು ಸಾಧ್ಯವಾಗುವುದಿಲ್ಲ ಈ ವರ್ಷವೂ ಅಂತದ್ದೇ ಪರಿಸ್ಥಿತಿ ಹಲವು ಕಡೆ ಇದೆ, ಹಾಗಾಗಿ ಮಳೆ ಆಧಾರದಡಿ ಬರ ಘೋಷಣೆ ಮಾಡದೆ ಬಿತ್ತನೆ ಆಧಾರದಲ್ಲಿ ಬರ ಘೋಷಣೆ ಮಾಡುವಂತೆ ಅವರು ಒತ್ತಾಯಿಸಿದರು.
ನಮ್ಮಲ್ಲಿ ಇದೀಗ ಕಷ್ಟದ ಕಾಲವಿದೆ ಇಂತಹ ಪರಿಸ್ಥಿತಿಯಲ್ಲಿ ಕಾವೇರಿ ನೀರು ತಮಿಳುನಾಡಿಗೆ ಹರಿಸುವ ವಿಚಾರದಲ್ಲಿ ಕಾನೂನನ್ನು ಬಿಟ್ಟು ಪರಸ್ಪರ ಪರಿಸ್ಥಿತಿ ಅವಲೋಕನ ಮಾಡಿ ಅಗತ್ಯ ನೀರು ಪಡೆಯಬೇಕು ಎಂದರು.
ಬಹುತೇಕ ಕೆರೆ-ಕುಂಟೆಗಳಲ್ಲಿ ನೀರು ಬತ್ತಿದೆ, ಡ್ಯಾಂಗಳಲ್ಲೂ ಸಾಕಷ್ಟು ನೀರಿಲ್ಲ ಆದರೆ ತಮಿಳುನಾಡಿನ ಅನೇಕ ಡ್ಯಾಂಗಳಲ್ಲಿ ಸಾಕಷ್ಟು ನೀರು ಇದೆ ಹಾಗಾಗಿ ಎರಡೂ ರಾಜ್ಯಗಳ ಮುಖ್ಯಸ್ಥರು, ಕಾವೇರಿ ಪ್ರಾಧಿಕಾರದ ಮುಖ್ಯಸ್ಥರು ಎರಡೂ ರಾಜ್ಯಗಳಲ್ಲಿನ ನೀರಿನ ಸ್ಥಿತಿಗತಿ ಅಧ್ಯಯನ ಮಾಡಿ ನೀರು ಬಿಡಬೇಕು ಎಂದು ಹೇಳಿದರು.
ಕೈಗಾರಿಕೆಗಳಿಗೆ ಜಮೀನು ಬೇಕಾದಾಗ ಸರ್ಕಾರವು ರೈತರ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆ ಬಿಡಬೇಕು, ಬದಲಿಗೆ ರೈತರೆ ಕೊಟ್ಟರೆ ಪಡೆಯಬೇಕು, ಅಂತಹ ಕಾನೂನು ಜಾರಿ ಆಗಬೇಕು ಸರ್ಕಾರ ಉದ್ದಿಮೆದಾರರು ಹಾಗೂ ರೈತರ ನಡುವೆ ದಲ್ಲಾಳಿಯಂತೆ ಕಾರ್ಯನಿರ್ವಹಿಸುವುದನ್ನು ಬಿಡಬೇಕು ಎಂದರು.
ಈ ವೇಳೆ ವೀರಾಪುರದ ಅಶ್ವತ್ಥಮ್ಮ ಅವರ ಜಮೀನನ್ನು ವೀಕ್ಷಿಸಲಾಯಿತು.ಈ ಸಂದರ್ಭದಲ್ಲಿ ರೈತ ಸಂಘದ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾದೂರು ಮಂಜುನಾಥ್ ,ಗೋಪಾಲ್, ವೇಣು, ವೀರಾಪುರ ಮುನಿನಂಜಪ್ಪಬಿ.ನಾರಾಯಣಸ್ವಾಮಿ,ಹೆಚ್.ಕೆ.ರಮೇಶ್,ಬಸವರಾಜ್ ,ಮಂಜುನಾಥ್ ಮುಂತಾದವರು ಹಾಜರಿದ್ದರು.











