ವಿಜಯ ದರ್ಪಣ ನ್ಯೂಸ್….
ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಸ್ಪಂದಿಸಿ ಶೀಘ್ರ ವಿಲೇವಾರಿ ಮಾಡಿ : ಶಾಸಕ ಬಿ.ಎನ್.ರವಿಕುಮಾರ್

ಶಿಡ್ಲಘಟ್ಟ : ಜನ ಸಾಮಾನ್ಯರು, ರೈತರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳೇ ಹೆಚ್ಚಾಗಿವೆ ಅದರಲ್ಲೂ ಕಳೆದ ಸುಮಾರು 30ರಿಂದ 50 ವರ್ಷಗಳಿಂದ ಬಾಕಿ ಉಳಿದಿರುವ ಪೋಡಿ ದುರಸ್ತಿ ಕಾರ್ಯ ರೈತರಿಗೆ ವಿದಾನಸಭಾ ಕ್ಷೇತ್ರಾದ್ಯಂತ ತೀವ್ರ ತೊಂದರೆಯಾಗಿದೆ ಎಂದು ಶಾಸಕ ಬಿ.ಎನ್. ರವಿಕುಮಾರ್ ಬೇಸರ ವ್ಯಕ್ತಪಡಿಸಿದರು.
ನಗರದ ತಾಲ್ಲೂಕು ಕಚೇರಿಯ ಮೊದಲನೇ ಮಹಡಿಯಲ್ಲಿನ ನೂತನ ತಹಶಿಲ್ದಾರ್ ನ್ಯಾಯಾಲಯ ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿದ ಅವರು
ರೈತರು ಹಾಗೂ ಸಾರ್ವಜನಿಕರು ಹೆಚ್ಚಾಗಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಕಂದಾಯ ಇಲಾಖೆಯಲ್ಲಿಯೇ ಪರಿಹಾರ
ಕಂಡುಕೊಳ್ಳಬೇಕಾಗಿರುವುದರಿಂದ, ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು
ಎಂದು ಹೇಳಿದರು.
ಜಮೀನುಗಳ ಗಡಿ ಗುರುತಿಸುವಿಕೆ, ದಾಖಲೆಗಳಲ್ಲಿನ ವ್ಯತ್ಯಾಸ ಹಾಗೂ ಪೋಡಿ ಸಮಸ್ಯೆಗಳಿಂದ ರೈತರು ಕಚೇರಿಗಳಿಗೆ ಅಲೆದಾಡುವಂತಾಗಬಾರದು ,ಈ ಸಮಸ್ಯೆಗಳನ್ನು ಪರಿಹರಿಸಲು ತಹಶೀಲ್ದಾರ್, ಎ.ಡಿ.ಎಲ್.ಆರ್, ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಆಡಳಿತಾಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ರಾಜ್ಯ ಸರ್ಕಾರ ರಾಜ್ಯಾದ್ಯಂತ ಹಮ್ಮಿಕೊಂಡಿರುವ ‘ಪೋಡಿ ಮುಕ್ತ’ ಅಭಿಯಾನವು ರೈತರ ಬಹುಕಾಲದ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಮಹತ್ವದ ಕಾರ್ಯಕ್ರಮ ಆಗಿದೆ ಈ ಉದ್ದೇಶ ಯಶಸ್ವಿಯಾಗಬೇಕಾದರೆ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ, ಬಾಕಿ ಇರುವ ಪ್ರಕರಣಗಳನ್ನು ಆದ್ಯತೆಯ ಮೇರೆಗೆ ವಿಲೇವಾರಿ ಮಾಡಬೇಕು ಎಂದು ಕಿವಿಮಾತು ಹೇಳಿದರು.
ನೂತನ ಸಭಾಂಗಣವು ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ, ಸಾರ್ವಜನಿಕ ಸಮಸ್ಯೆಗಳ ಚರ್ಚೆ ಹಾಗೂ ಆಡಳಿತಾತ್ಮಕ ಕಾರ್ಯಚಟುವಟಿಕೆಗಳಿಗೆ ಅನುಕೂಲವಾಗಲಿದೆ, ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಮೂಲಸೌಕರ್ಯಗಳ ಜೊತೆಗೆ ಅಧಿಕಾರಿಗಳ ನಿಸ್ವಾರ್ಥ ಕಾರ್ಯವು ಮುಖ್ಯವಾಗಿದೆ ಎಂದರು.
ತಹಶೀಲ್ದಾರ್ ಗಗನಸಿಂಧು ಮಾತನಾಡಿ, ಪೋಡಿ ಮುಕ್ತ ಅಭಿಯಾನ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಎಲ್ಲಾ ಹಂತದ ಅಧಿಕಾರಿಗಳು ಸಹಕಾರದಿಂದ ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಕಂದಾಯ ಇಲಾಖೆಗೆ ಸಂಬಂಧಿಸಿದ ಸಾರ್ವಜನಿಕರ ಸಮಸ್ಯೆಗಳಿಗೆ ಕಾನೂನಿನ ಚೌಕಟ್ಟಿನಲ್ಲಿ ತ್ವರಿತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಕೆ.ಎನ್.ಸುಬ್ಬಾರೆಡ್ಡಿ, ಕ.ದ.ಸಂ.ಸ ಜಿಲ್ಲಾ ಸಂಚಾಲಕ ಮೇಲೂರು ಮಂಜುನಾಥ್, ಐ.ಎನ್.ಟಿ.ಯು.ಸಿ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಎನ್. ಮುನೀಂದ್ರ, ಮುಗಿಲಡಿಪಿ ನಂಜಪ್ಪ, ಪ್ರಭಾಕರ್ ರೆಡ್ಡಿ ಹಾಗೂ ತಾಲ್ಲೂಕು ಕಚೇರಿ ಸಿಬ್ಬಂದಿ ಪಾಲ್ಗೊಂಡಿದ್ದರು.










