--Ads--

ಪಿ ಜಿ ಆರ್. ಸಿಂಧ್ಯಾ ಅವರ ಜೀವನ ಶಿಸ್ತು, ಮೌಲ್ಯ ಮತ್ತು ಜನಸೇವೆಗೆ ಮಾದರಿ: ಮಾಜಿ ಸಿಎಂ ಸಿದ್ದರಾಮಯ್ಯ

On: September 19, 2026 5:42 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಪಿ ಜಿ ಆರ್. ಸಿಂಧ್ಯಾ ಅವರ ಜೀವನ ಶಿಸ್ತು, ಮೌಲ್ಯ ಮತ್ತು ಜನಸೇವೆಗೆ ಮಾದರಿ: ಮಾಜಿ ಸಿಎಂ ಸಿದ್ದರಾಮಯ್ಯ

ತಾಂಡವಪುರ, ಸೆಪ್ಟೆಂಬರ್ 19 :
ಪಿ.ಜಿ.ಆರ್. ಸಿಂಧ್ಯಾ ಅವರು ಯಾವುದೇ ಇಲಾಖೆ ನೀಡಿದರೂ ಅದನ್ನು ಅಚ್ಚುಕಟ್ಟಾಗಿ, ಶಿಸ್ತಿನಿಂದ ಹಾಗೂ ಸಮರ್ಥವಾಗಿ ನಿರ್ವಹಿಸುತ್ತಿದ್ದ ಹಾರ್ಡ್ ವರ್ಕರ್ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ ರವರು ಸ್ಮರಿಸಿದರು.

ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಅವರ ಕುರಿತಾದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಪಿ.ಜಿ.ಆರ್. ಸಿಂಧ್ಯಾ ಅವರ ಹುಟ್ಟುಹಬ್ಬ ಎಂಬುದು ನನಗೆ ಗೊತ್ತಿರಲಿಲ್ಲ. ‘ನನ್ನ ಪುಸ್ತಕ ರಿಲೀಸ್ ಇದೆ, ಬಿಡುಗಡೆ ಮಾಡುವುದಕ್ಕೆ ನೀವು ಬರಬೇಕು’ ಎಂದು ಆಹ್ವಾನಿಸಿದ್ದರು. ನನಗೆ ಯಾರು ಯಾರು ಬರುತ್ತಾರೆ ಎಂಬುದನ್ನೂ ಹೇಳಿರಲಿಲ್ಲ. ಆದರೆ ಅವರ ಮೇಲಿನ ಪ್ರೀತಿ, ಸ್ನೇಹ ಮತ್ತು ಅಭಿಮಾನದಿಂದ ನಾನು ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ ಎಂದರು.

ಇಂದು ಪಿ.ಜಿ.ಆರ್. ಸಿಂಧ್ಯಾ ಅವರು 78ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ನನಗೆ 80 ವರ್ಷವಾಗಿರುವುದರಿಂದ ಅವರು ನನಗಿಂತ ಎರಡು ವರ್ಷ ಚಿಕ್ಕವರು ಎಂದು ಹೇಳಿದ ಸಿದ್ದರಾಮಯ್ಯ ಅವರು, ಅವರಿಗೆ ಆಯಸ್ಸು, ಆರೋಗ್ಯ ದೊರೆಯಲಿ. ಇನ್ನಷ್ಟು ವರ್ಷಗಳ ಕಾಲ ಜನಸೇವೆ ಹಾಗೂ ಸಮಾಜ ಸೇವೆ ಮಾಡುವಂತಾಗಲಿ ಎಂದು ಶುಭ ಹಾರೈಸಿದರು.

ಸಿಂಧ್ಯಾ ಅವರ ಧರ್ಮಪತ್ನಿ ಗೀತಾ ಸಿಂಧ್ಯಾ ಅವರು ಕಾರ್ಯಕ್ರಮಕ್ಕೆ ಆಗಮಿಸಿರುವುದನ್ನು ಉಲ್ಲೇಖಿಸಿದ ಅವರು, ಅವರ ಮನೆಯಲ್ಲಿ ತಾನು ಅನೇಕ ಬಾರಿ ಊಟ ಮಾಡಿದ್ದೇನೆ. ನೀವಿಬ್ಬರೂ ಚೆನ್ನಾಗಿದ್ದೀರಿಯಲ್ವಾ, ಅದೇ ನನಗೆ ಬಹಳ ಸಂತೋಷ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಸಿಂಧ್ಯಾ ಅವರ ಸಾರ್ವಜನಿಕ ಜೀವನ ಮದುವೆಯಾದ ನಂತರ ಪ್ರಾರಂಭವಾಯಿತೋ ಅಥವಾ ಅದಕ್ಕೂ ಮುಂಚೆಯೇ ಪ್ರಾರಂಭವಾಯಿತೋ ಗೊತ್ತಿಲ್ಲ. 1980ರಲ್ಲಿ ಮದುವೆಯಾದರು ಎಂದು ನೆನಪಿದೆ. ಮದುವೆಯಾದ ಕೆಲವೇ ವರ್ಷಗಳಲ್ಲಿ ಮಂತ್ರಿಯಾದರು. ನನಗಿಂತ ಮೊದಲೇ ಮಂತ್ರಿಯಾದರು ಎಂದರು.

ನಾನು ಎರಡು ಬಾರಿ ಮುಖ್ಯಮಂತ್ರಿ ಆದೆ, ಸಿಂಧ್ಯಾ ಅವರು ಆಗಲಿಲ್ಲ ಎಂದು ಅವರು, ಮುಖ್ಯಮಂತ್ರಿ ಆಗಲು ಅವಕಾಶ ಯಾರೂ ಕೊಡುವುದಿಲ್ಲ, ಅವಕಾಶವನ್ನು ನಾವೇ ಪಡೆದುಕೊಳ್ಳಬೇಕು. ಅವಕಾಶಕ್ಕೆ ತಕ್ಕಂತಹ ಕೆಲಸ ಮಾಡಬೇಕು ಎಂದರು. ಮುಖ್ಯಮಂತ್ರಿ ಆಗುವ ಎಲ್ಲಾ ಯೋಗ್ಯತೆ ಸಿಂಧ್ಯಾ ಅವರಲ್ಲೂ ಇದೆ ಎಂದು ಹೇಳಿದರು.

ಸಿಂಧ್ಯಾ ಅವರು ಹಳ್ಳಿಯಿಂದ ಬಂದವರು. ಮಲವಾಡಿ ಅವರ ಊರು. ಅವರ ತಂದೆಯ ಹೆಸರು ಪಾಂಡುರಂಗರಾವ್ ಸಿಂಧ್ಯಾ. ಸಿಂಧ್ಯಾ ಅವರ ನಿಜವಾದ ಹೆಸರು ಗಣೇಶ್ ರಾವ್ ಸಿಂಧ್ಯಾ. ಪಾಂಡುರಂಗರಾವ್ ಅವರ ಮಗ ಗಣೇಶ್ ರಾವ್ ಸಿಂಧ್ಯಾ. ಅದಕ್ಕಾಗಿ ನಾನು ಅವರನ್ನು ಯಾವಾಗಲೂ ‘ರಾಯಾ’ ಎಂದು ಕರೆಯುತ್ತಿದ್ದೆ. ಅವರು ಅದಕ್ಕೆ ಎಂದಿಗೂ ಕೋಪಿಸಿಕೊಳ್ಳುತ್ತಿರಲಿಲ್ಲ ಎಂದು ಸಿದ್ದರಾಮಯ್ಯ ಅವರು ನೆನಪಿಸಿಕೊಂಡರು.

ರಾಮಕೃಷ್ಣ ಹೆಗಡೆ ಅವರ ಮಂತ್ರಿಮಂಡಲದಲ್ಲಿ ಸಿಂಧ್ಯಾ ಅವರು ಮಂತ್ರಿಯಾಗಿದ್ದರು. ಆರೋಗ್ಯ ಸಚಿವರು, ಗೃಹ ಸಚಿವರು, ಸಾರಿಗೆ ಸಚಿವರು, ಸಮಾಜ ಕಲ್ಯಾಣ ಸಚಿವರು ಹಾಗೂ ಹಣಕಾಸು ಸಚಿವರಾಗಿ ವಿವಿಧ ಇಲಾಖೆಗಳ ಜವಾಬ್ದಾರಿ ನಿರ್ವಹಿಸಿದ್ದರು.

ಸಿಂಧ್ಯಾ ಅವರು ಹಣಕಾಸು ಸಚಿವರಾದ ಸಂದರ್ಭದಲ್ಲಿ, ‘ಹೇಗಿದೆ ಇಲಾಖೆ?’ ಎಂದು ನಾನು ಕೇಳಿದ್ದೆ. ಅದಕ್ಕೆ ಅವರು, ‘ನನಗೆ ಆದೇಶ ಇದೆ, ನೀವೇನು ತಪ್ಪು ಮಾಡಿದ್ದೀರಿ ಎಂಬುದನ್ನು ಹುಡುಕುತ್ತಿದ್ದೇನೆ’ ಎಂದು ಹೇಳಿದ್ದರು. ಆಗ ನಾನು, ‘ನಾನು ಏನೇನು ತಪ್ಪು ಮಾಡಿದ್ದೇನೆ ಎಂದು ಹುಡುಕುತ್ತಿದ್ದೀಯಾ?’ ಎಂದು ಕೇಳಿದ್ದೆ ಎಂದು ಸಿದ್ದರಾಮಯ್ಯ ಅವರು ನಗುತ್ತಾ ನೆನಪಿಸಿಕೊಂಡರು.

ಧರ್ಮಸಿಂಗ್ ಅವರ ಕಾಲದಲ್ಲಿ ನಾನು ಹಣಕಾಸು ಸಚಿವನಾಗಿದ್ದೆ. ದೇವೇಗೌಡರ ಕಾಲದಲ್ಲೂ, ಜೆ.ಎಚ್. ಪಟೇಲ್ ಅವರ ಕಾಲದಲ್ಲೂ ಹಣಕಾಸು ಸಚಿವನಾಗಿದ್ದೆ. ಸುಮಾರು ಆರೂವರೆ ವರ್ಷ ನಾನು ಹಣಕಾಸು ಸಚಿವನಾಗಿದ್ದೆ. ಬಳಿಕ ಸಿಂಧ್ಯಾ ಅವರು ಹಣಕಾಸು ಸಚಿವರಾದರು ಎಂದು ಹೇಳಿದರು.

ದೇವೇಗೌಡರ ಪುತ್ರ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಸಿಂಧ್ಯಾ ಅವರು ಮಂತ್ರಿಯಾಗಿದ್ದರು. ನಾನು ಎಕ್ಸ್‌ಪೆಲ್ ಆದ ಬಳಿಕ ಅವರು ಮಂತ್ರಿಯಾಗಿದ್ದು, ಹಣಕಾಸು ಸಚಿವರಾಗಿದ್ದರು. ನನ್ನನ್ನು ದೇವೇಗೌಡರು ಪಕ್ಷದಿಂದ ಉಚ್ಚಾಟನೆ ಮಾಡಿದ್ದರು. ಎಂ.ಪಿ. ಪ್ರಕಾಶ್ ಅವರು ಉಪಮುಖ್ಯಮಂತ್ರಿಯಾಗಿದ್ದರು ಹಾಗೂ ಸಿಂಧ್ಯಾ ಅವರು ಹಣಕಾಸು ಸಚಿವರಾಗಿದ್ದರು ಎಂದು ಸ್ಮರಿಸಿದರು.

ಸಿಂಧ್ಯಾ ಅವರ ಮೇಲೆ ನನಗೆ ಬಹಳ ಪ್ರೀತಿ ಇತ್ತು. ಯಾಕೆಂದರೆ ಅವರು ಹಾರ್ಡ್ ವರ್ಕರ್. ಹಾರ್ಡ್ ವರ್ಕರ್‌ಗಳ ಮೇಲೆ ನನಗೆ ಬಹಳ ಪ್ರೀತಿ. ಯಾವುದೇ ಇಲಾಖೆ ಕೊಟ್ಟರೂ ಅದನ್ನು ಬಹಳ ಸಮರ್ಥವಾಗಿ ನಿಭಾಯಿಸುತ್ತಿದ್ದರು ಎಂದು ಸಿದ್ದರಾಮಯ್ಯ ಅವರು ಹೇಳಿದರು.

ದೇವೇಗೌಡರು ಮುಖ್ಯಮಂತ್ರಿಯಾದಾಗ ನಾನು, ಸಿಂಧ್ಯಾ, ಜಾಲಪ್ಪ ಮತ್ತು ದೇವೇಗೌಡರು ನಾಲ್ವರು ಸೇರಿ ಮಂತ್ರಿಮಂಡಲ ರಚನೆ ಕುರಿತು ಚರ್ಚೆ ಮಾಡಿದ್ದೆವು. ಕೋಲಾರದ ಜಾಲಪ್ಪನವರ ಗೆಸ್ಟ್‌ಹೌಸ್‌ನಲ್ಲಿ ಆ ಚರ್ಚೆ ನಡೆದಿತ್ತು. ಆಗ ನಾನು ದೇವೇಗೌಡರಿಗೆ ಕಂದಾಯ ಇಲಾಖೆ ನೀಡುವಂತೆ ಕೇಳುತ್ತಿದ್ದೆ. ಜಾಲಪ್ಪನವರು ಕೂಡ ಅದೇ ಇಲಾಖೆ ಕೇಳುತ್ತಿದ್ದರು. ಆಗ ದೇವೇಗೌಡರು ‘ನಮಗೆ ನಂಬಿಕಸ್ಥರು ಬೇಕು, ನೀನೇ ಹಣಕಾಸು ಇಲಾಖೆ ತೆಗೆದುಕೋ’ ಎಂದು ನನಗೆ ಹೇಳಿದರು. ಹಾಗಾಗಿ ನಾನು ಹಣಕಾಸು ಸಚಿವನಾದೆ ಎಂದು ತಿಳಿಸಿದರು.

ನಾನು ಎಕನಾಮಿಕ್ಸ್ ಓದಿರಲಿಲ್ಲ. ನಾನು ಬಿ.ಎಸ್ಸಿಯಲ್ಲಿ ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ಓದಿದ್ದೆ. ನಂತರ ಕಾನೂನು ಓದಿದ್ದೆ. ಹಣಕಾಸು ಇಲಾಖೆ ಬೇಡ ಎಂದು ದೇವೇಗೌಡರಿಗೆ ಹೇಳಿದ್ದೆ. ಆದರೆ ಅವರು ‘ನಮಗೆ ನಂಬಿಕಸ್ಥರು ಬೇಕು’ ಎಂದು ಹೇಳಿ ನನಗೆ ಹಣಕಾಸು ಇಲಾಖೆ ನೀಡಿದರು. ಸಿಂಧ್ಯಾ ಅವರು ಗೃಹ ಇಲಾಖೆ ಬೇಕು ಎಂದು ಕೇಳಿದ್ದರು ಎಂದು ಸಿದ್ದರಾಮಯ್ಯ ಅವರು ನೆನಪಿಸಿಕೊಂಡರು.

ಯಾವುದೇ ಇಲಾಖೆ ಜವಾಬ್ದಾರಿ ವಹಿಸಿಕೊಂಡಾಗ ಅದನ್ನು ಅಚ್ಚುಕಟ್ಟಾಗಿ, ಶಿಸ್ತಿನಿಂದ ಹಾಗೂ ಸಮರ್ಥವಾಗಿ ನಡೆಸುವ ಕೆಲಸವನ್ನು ಸಿಂಧ್ಯಾ ಮಾಡುತ್ತಿದ್ದರು ಎಂದು ಅವರು ಹೇಳಿದರು.

‘Uncompromised Life: The P.G.R. Sindhia Story’ ಎಂಬ ಹೆಸರಿನ ಪುಸ್ತಕದಲ್ಲಿ ಸಿಂಧ್ಯಾ ಅವರು ಹಣಕಾಸು ಸಚಿವರಾಗಿದ್ದಾಗ ಏನು ಮಾಡಿದರು, ಗೃಹ ಸಚಿವರಾಗಿದ್ದಾಗ ಏನು ಮಾಡಿದರು ಎಂಬುದನ್ನು ದಾಖಲಿಸಲಾಗಿದೆ. ಸಿಂಧ್ಯಾ ಅವರ ಕೆಲಸದ ಶಿಸ್ತು ಹಾಗೂ ಇಲಾಖೆಯನ್ನು ಸಮರ್ಥವಾಗಿ ನಡೆಸಿದ ರೀತಿಯನ್ನು ಗಮನಿಸಿ ಪುಸ್ತಕದ ಲೇಖಕ ಖಂಡೇಲ್‌ವಾಲ್ ಅವರು ಈ ಜೀವನ ಚರಿತ್ರೆಯನ್ನು ಬರೆದಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಸಿಂಧ್ಯಾ ಅವರು ಈ ಪುಸ್ತಕ ಚೆನ್ನಾಗಿ ಬರೆದಿದ್ದಾರೆ ಎಂದು ಹೇಳಿದ್ದು ನನಗೆ ನೆನಪಿದೆ. ಪುಸ್ತಕವನ್ನು ನನ್ನ ಕೈಗೆ ಕೊಟ್ಟಾಗಲೂ ಅವರು ಈ ಮಾತನ್ನು ಹೇಳಿದ್ದರು ಎಂದರು.

‘Uncompromised’ ಎಂಬ ಶೀರ್ಷಿಕೆಗೆ ತಕ್ಕಂತೆ ಸಿಂಧ್ಯಾ ಅವರು ಜೀವನ ನಡೆಸಿದ್ದಾರೆ. ಅವರು ಸದಾ ಪ್ರವಾಸ ಮಾಡುತ್ತಿದ್ದರು. ಅವರ ಮನೆ ಬಳಿ ಸಾವಿರಾರು ಜನ ಬರುತ್ತಿದ್ದರು. ಇವೆಲ್ಲವನ್ನೂ ಗೀತಾ ಅವರು ನೋಡಿಕೊಳ್ಳುತ್ತಿದ್ದರು. ಮಕ್ಕಳನ್ನು ಓದಿಸುವುದು, ಅವರಿಗೆ ಶಿಸ್ತು ಕಲಿಸುವುದು, ಕುಟುಂಬವನ್ನು ಒಗ್ಗಟ್ಟಿನಿಂದ ಕರೆದೊಯ್ಯುವುದು ಸೇರಿದಂತೆ ಅನೇಕ ಜವಾಬ್ದಾರಿಗಳನ್ನು ಗೀತಾ ಅವರು ನಿರ್ವಹಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಹಳ್ಳಿಯ ಜೀವನದ ರೀತಿಯಲ್ಲಿ ಸಂಸಾರವನ್ನು ನಡೆಸಬೇಕಾಗುತ್ತದೆ. ಗೀತಾ ಅವರು ಸಹಕಾರ ನೀಡದೇ, ಮನೆ ನೋಡಿಕೊಳ್ಳದೇ ಹೋಗಿದ್ದರೆ ಸಿಂಧ್ಯಾ ಅವರು ಈ ಮಟ್ಟಕ್ಕೆ ಬೆಳೆಯಲು ಹಾಗೂ ಈ ಹೆಸರನ್ನು ಗಳಿಸಲು ಸಾಧ್ಯವಾಗುತ್ತಿರಲಿಲ್ಲ. ಅವರ ತ್ಯಾಗ, ಸಹಕಾರ, ಶಿಸ್ತು ಮತ್ತು ಮೌಲ್ಯಗಳ ಆಧಾರದ ಮೇಲೆ ಮಕ್ಕಳಿಗೆ ಶಿಕ್ಷಣ ನೀಡಿದ ರೀತಿಯಿಂದ ಸಿಂಧ್ಯಾ ಅವರಿಗೆ ಉತ್ತಮ ಸಮಾಜ ಸೇವೆ ಮಾಡಲು ಸಾಧ್ಯವಾಯಿತು ಎಂಬುದು ನನ್ನ ಅಭಿಪ್ರಾಯ ಎಂದು ಹೇಳಿದರು

ಯಾವುದೇ ಚುನಾವಣೆ ಬಂದರೂ, ಅದು ಕೌನ್ಸಿಲ್ ಚುನಾವಣೆ ಆಗಿರಲಿ, ರಾಜ್ಯಸಭಾ ಚುನಾವಣೆ ಆಗಿರಲಿ, ಸಾರ್ವತ್ರಿಕ ಚುನಾವಣೆ ಆಗಿರಲಿ ಅಥವಾ ಬೈ-ಎಲೆಕ್ಷನ್ ಆಗಿರಲಿ, ಅದರ ಜವಾಬ್ದಾರಿಯನ್ನು ರಾಮಕೃಷ್ಣ ಹೆಗಡೆಯವರು ಸಿಂಧ್ಯಾ, ಜೀವರಾಜ್ ಆಳ್ವ ಹಾಗೂ ದೇಶಪಾಂಡೆ ಅವರಿಗೆ ನೀಡುತ್ತಿದ್ದರು ಎಂದು ಸಿದ್ದರಾಮಯ್ಯ ಹೇಳಿದರು.

ಈ ವಿಚಾರದಲ್ಲಿ ನಾನು ಸಿಂಧ್ಯಾ ಅವರನ್ನು ರೇಗಿಸುತ್ತಿದ್ದೆ. ಒಂದು ದಿನ ಅವರು ನನ್ನನ್ನು ಮನೆಗೆ ಊಟಕ್ಕೆ ಕರೆದುಕೊಂಡು ಹೋಗಿ ಕೂರಿಸಿದರು. ಅಲ್ಲಿ ಯಾರ್ಯಾರಿಗೆ ಹಣ ನೀಡಬೇಕೋ ಅದನ್ನೆಲ್ಲಾ ನನ್ನ ಎದುರಿಗೇ ನೀಡಿದರು. ಬಳಿಕ, ‘ನೋಡಪ್ಪಾ, ನೀನು ಅಪವಾದಗಳನ್ನು ಮಾಡುತ್ತಿದ್ದಿಯಲ್ಲ, ಇದಕ್ಕೋಸ್ಕರ ನಾವು ಅಪವಾದಗಳನ್ನು ಹೊರಬೇಕಾಗಿದೆ’ ಎಂದು ಹೇಳಿದರು. ಆ ದಿನದಿಂದ ನಾನು ಅವರನ್ನು ರೇಗಿಸುವುದನ್ನು ಬಿಟ್ಟೆ ಎಂದು ಸಿದ್ದರಾಮಯ್ಯ ಅವರು ನೆನಪಿಸಿಕೊಂಡರು.

ಸಿಂಧ್ಯಾ ಅವರು ಯಾವಾಗಲೂ ಮಂತ್ರಿಯಾಗಿರುತ್ತಿದ್ದರು. ಅವರು ಎಕ್ಸ್‌ಪರ್ಟ್ ಆಗಿದ್ದರು. ಸಂಘಟನೆ ಮಾಡುವುದರಲ್ಲಿ ಬಹಳ ಚಾತುರ್ಯ ಹೊಂದಿದ್ದರು. ಯಾವುದೇ ಇಲಾಖೆಯನ್ನು ಸಮರ್ಥವಾಗಿ ನಡೆಸುತ್ತಿದ್ದರು ಎಂದರು.

ರಾಮಕೃಷ್ಣ ಹೆಗಡೆಯವರು 1983ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ನಾನು ಕನ್ನಡ ಕಾವಲು ಸಮಿತಿ ಅಧ್ಯಕ್ಷನಾಗಿದ್ದೆ. ಒಂದು ಬಾರಿ ಒಂದು ಕೆಲಸಕ್ಕಾಗಿ ಸಾರಿಗೆ ಇಲಾಖೆಗೆ ಹೋಗಿದ್ದೆ. ಸಿಂಧ್ಯಾ ಅವರು ‘ಮಾಡಿಕೊಡುತ್ತೇನೆ’ ಎಂದು ಹೇಳಿದ್ದರು. ಆದರೆ 15 ದಿನ ಕಳೆದರೂ ಕೆಲಸ ಮಾಡಲಿಲ್ಲ. ಅನಿವಾರ್ಯವಾಗಿ ಸಿಂಧ್ಯಾ ಅವರೊಂದಿಗೆ ಜಗಳ ಮಾಡಬೇಕಾಯಿತು. ಜಗಳ ಮಾಡಿದ ಮರುದಿನವೇ ಕೆಲಸ ಮಾಡಿಕೊಟ್ಟರು ಎಂದು ಸಿದ್ದರಾಮಯ್ಯ ಅವರು ನಗುತ್ತಾ ಹೇಳಿದರು.

ಸಿಂಧ್ಯಾ ಅವರು ಶಿವಮೊಗ್ಗದವರು. ಅವರು ನನಗೆ ಬಹಳ ಕ್ಲೋಸ್ ಫ್ರೆಂಡ್. ನಮ್ಮ ನಡುವೆ ಜಗಳವಾದರೂ ಮರುದಿನವೇ ಮತ್ತೆ ಮಾತನಾಡುತ್ತಿದ್ದೆವು ಎಂದರು.
ಜೆ.ಎಚ್. ಪಟೇಲ್ ಅವರ ಕಾಲದಲ್ಲಿ ಎಲ್ಲ ಕ್ಯಾಬಿನೆಟ್ ಸಬ್‌ಕಮಿಟಿಗಳಿಗೂ ನನ್ನನ್ನೇ ಅಧ್ಯಕ್ಷರನ್ನಾಗಿ ಮಾಡುತ್ತಿದ್ದರು. ಸಿಂಧ್ಯಾ ಅವರು ಅನಿವಾರ್ಯವಾಗಿ ಸದಸ್ಯರಾಗಿರುತ್ತಿದ್ದರು. ನಾನು ಹೇಳಿದ್ದಕ್ಕೆಲ್ಲ ಅವರು ಒಪ್ಪಿಕೊಳ್ಳುತ್ತಿದ್ದರು. ನಾವೆಲ್ಲರೂ ಸಹಕರಿಸೋಣ ಎಂದು ಹೇಳುತ್ತಿದ್ದರು ಎಂದು ಸಿದ್ದರಾಮಯ್ಯ ಹೇಳಿದರು.

ಸಿಂಧ್ಯಾ ಅವರಿಗೆ ಆಯಸ್ಸು, ಆರೋಗ್ಯ ದೊರೆಯಲಿ. ಇನ್ನಷ್ಟು ಸಮಾಜ ಸೇವೆ ಮಾಡುವಂತಾಗಲಿ. ಈಗಲೂ ಅವರು ಸಮಾಜ ಸೇವೆ ಮಾಡುತ್ತಿದ್ದಾರೆ. ಸ್ಕೌಟ್ಸ್ ಅಂಡ್ ಗೈಡ್ಸ್‌ನಲ್ಲಿ ರಾಜ್ಯ ಮಟ್ಟದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. 2017ರಲ್ಲಿ ಮೈಸೂರಿನಲ್ಲಿ ಜಂಬೂರಿ ನಡೆಸಿದ್ದರು. ಆಗ ನನ್ನಿಂದ ಹಣವನ್ನೂ ತಗೊಂಡಿದ್ದರು ಎಂದು ಹೇಳಿದರು.

ಯಾವುದೇ ಕಷ್ಟಗಳನ್ನು ಎದುರಿಸಿದರೂ ಜನರ ಪರವಾಗಿ, ಸಮಾಜದ ಪರವಾಗಿ ಹಾಗೂ ಅಭಿವೃದ್ಧಿಯ ಪರವಾಗಿ ಕೆಲಸ ಮಾಡುವ ಚಾಕಚಕ್ಯತೆ ಸಿಂಧ್ಯಾ ಅವರಲ್ಲಿದೆ. ಆ ಚಾಕಚಕ್ಯತೆ ನನಗೂ ಇದ್ದರೆ ಚೆನ್ನಾಗಿರುತ್ತಿತ್ತು ಎಂದು ಕೆಲವೊಮ್ಮೆ ಅಸೂಯೆ ಪಡುವಷ್ಟು ಅವರಲ್ಲಿ ಆ ಗುಣವಿತ್ತು ಎಂದರು.

ಸಿಂಧ್ಯಾ ಅವರು ಒಂದು ರೀತಿಯಲ್ಲಿ ‘ಹೇಟ್ ಅಂಡ್ ಲವ್’ ಸ್ನೇಹಿತರು. ಅವರು ತಮ್ಮ ಆತ್ಮಕಥನವನ್ನೂ ಬರೆದಿದ್ದಾರೆ. ಖಂಡೇಲವಾಲಾ ಅವರು ಅದನ್ನು ಬಹಳ ಚೆನ್ನಾಗಿ ರೂಪಿಸಿದ್ದಾರೆ. ಅವರಿಗೆ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ಮಧುಸೂದನ್ ಅವರು ಕೂಡ ಅವರೊಂದಿಗೆ ಸೇರಿಕೊಂಡಿದ್ದಾರೆ. ಅವರಿಗೂ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.

ಅಧಿಕಾರ ಸಿಕ್ಕರೆ ಬೇಡ ಎನ್ನುವವರು ಯಾರೂ? ನಾನೂ ಪ್ರಯತ್ನಿಸುತ್ತೇನೆ ಎಂದು ಸಿದ್ದರಾಮಯ್ಯ ಅವರು ಹಾಸ್ಯ ಚಟಾಕಿ ಹಾರಿಸಿದರು.

ಈ ಸಮಾರಂಭದಲ್ಲಿ ಸುತ್ತೂರು ಮಠದಿಶರಾದ ಶಿವರಾತ್ರಿಶ್ವರ ದೇಸಿ ಕೇಂದ್ರ ಮಹಾಸ್ವಾಮಿಗಳು ಸಚಿವರಾದ ಈಶ್ವರ ಖಂಡ್ರೆ ಯುಟಿ ಖಾದರ್ ಮಾಜಿ ಸಚಿವ ಬಿ ಎಲ್ ಶಂಕರ್ ಶ್ರೀದಂತೆ ಇನ್ನು ಅನೇಕ ಗಣ್ಯ ವ್ಯಕ್ತಿಗಳು ಸಮಾರಂಭದಲ್ಲಿ ಭಾಗಿಯಾಗಿದ್ದರು

WhatsApp

Join Now

Telegram

Join Now

Instagram

Join Now