ವಿಜಯ ದರ್ಪಣ ನ್ಯೂಸ್…..
ಗಣೇಶ ಚತುರ್ಥಿ ದಿನ ಆನೆ, ಹುಲಿಗೆ ರೈತರು ಬಲಿ : ಪ್ರತ್ಯೇಕ ಪ್ರಕರಣದಲ್ಲಿ ವನ್ಯಜೀವಿಯಿಂದ ಹತರಾದ ಕುಟುಂಬಸ್ಥರ ಗೋಳಾಟ

ತಾಂಡವಪುರ ಸೆಪ್ಟೆಂಬರ್ 15 ಗೌರಿ ಗಣೇಶ ಹಬ್ಬದ ದಿನ ರೈತರಿಬ್ಬರಿಗೆ ಆನೆ ಮತ್ತು ಹುಲಿಗಳು ದುಸ್ವಪ್ನವಾಗಿ ಕಾಡಿದ್ದು, ಪ್ರತ್ಯೇಕ ಪ್ರಕರಣದಲ್ಲಿ ಈ ದಾಳಿಯಲ್ಲಿ ಇಬ್ಬರು ವಯರ್ರುದ್ದರೂ ಮೃತಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.
ಚಾಮರಾಜನಗರ: ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ತಾಲೂಕಿನ ಬಡಗಲಪುರ ಗ್ರಾಮದಲ್ಲಿ ಹುಲಿ ದಾಳಿಗೆ ಬಸವಣ್ಣ (65) ಎಂಬುವರು ಮೃತಪಟ್ಟಿದ್ದಾರೆ.
ಸೋಮವಾರ ಸಂಜೆ ಜಮೀನಿನಲ್ಲಿ ಕೆಲಸ ಮಾಡುವಾಗ ಹುಲಿ ದಾಳಿ ನಡೆಸಿದ್ದು ಕೊಂದು ಹಾಕಿದೆ. ಅರ್ಧ ದೇಹವನ್ನು ತಿಂದಿದ್ದು, ಉಳಿದರ್ಧ ದೇಹವನ್ನು ಸಮೀಪದ ಕಬ್ಬಿನ ತೋಟಕ್ಕೆ ಎಳೆದೊಯ್ದಿದೆ.
ರಾತ್ರಿಯಾದರೂ ಬಸವಣ್ಣ ಮನೆಗೆ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಜಮೀನಿಗೆ ತೆರಳಿ ನೋಡಿದಾಗ ಹುಲಿ ದಾಳಿ ನಡೆಸಿರುವುದು ಬೆಳಕಿಗೆ ಬಂದಿದೆ.
ಕಾಡಾನೆ ದಾಳಿಗೆ ರೈತ ಬಲಿ
ಕಾಡಾನೆ ದಾಳಿ ನಡೆಸಿ ರೈತನನ್ನು ಬಲಿ ಪಡೆದ ಘಟನೆ ಗುಂಡ್ಲುಪೇಟೆ ತಾಲೂಕಿನ ಕೋಟೆಕೆರೆ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಓಂಕಾರ್ ಅರಣ್ಯ ವಲಯದ ಕೋಟಕೆರೆ ಗ್ರಾಮದ ಜನ್ನೂರನಾಯಕ (68) ಮೃತ ದುರ್ದೈವಿ. ಇವರು ತಮ್ಮ ಜಮೀನಿನಲ್ಲಿ ಹಸುಗಳನ್ನು ಕಟ್ಟಿಹಾಕುತ್ತಿದ್ದ ವೇಳೆ ಏಕಾಏಕಿ ಕಾಡಾನೆಯೊಂದು ದಾಳಿ ನಡೆಸಿದ್ದು, ಸೊಂಡಲಿ ಬಲವಾಗಿ ತಿವಿದು ಗಂಭೀರ ಗಾಯಗೊಳಿಸಿದೆ. ಇದರಿಂದ ತೀವ್ರ ಅಸ್ವಸ್ಥಗೊಂಡಿದ್ದ ಜನ್ನೂರ ನಾಯಕರನ್ನು ತಕ್ಷಣ ಬೇಗೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆಯನ್ನು ಕೊಡಿಸಿ, ನಂತರ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅದೇ ದಿನ ಅವರು ಮೃತಪಟ್ಟಿದ್ದಾರೆ.

ನಂತರ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಕುಟುಂಬಸ್ಥರಿಗೆ ಪರಿಹಾರದ ಮೊತ್ತ 20 ಲಕ್ಷ ರೂ.ಗಳ ಚೆಕ್ ವಿತರಿಸಿ, ಕುಟುಂಬದ ಸದಸ್ಯರಿಗೆ ಕೆಲಸ ಕೊಡುವ ಭರವಸೆ ಮತ್ತು ಕಾಡಾನೆಗಳ ದಾಳಿಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.










