ವಿಜಯ ದರ್ಪಣ ನ್ಯೂಸ್……
ಮತ್ತೆ ಮತ್ತೆ ಘಟಿಸುವ ದುರಂತ, ಕಾಲ್ತುಳಿತ ಎಂಬ ಮಾಸ್ ಸಿಂಡ್ರೋಮ್……

ಇತ್ತೀಚಿನ ವರ್ಷಗಳಲ್ಲಿ ಮತ್ತೊಂದು ಸಾಮಾಜಿಕ ಸಾಂಕ್ರಾಮಿಕ ರೋಗ ಪ್ರಾಕೃತಿಕ ವಿಕೋಪದಂತೆ ದಿಢೀರನೆ
ತೊಂದರೆ ಕೊಡುತ್ತಿದೆ. ಅದುವೇ ಕಾಲ್ತುಳಿತಗಳು ಎಂಬ ಭಯಂಕರ ದುರ್ಘಟನೆಗಳು…..
ಈ ಕಾಲ್ತುಳಿತ ಪ್ರಕರಣಗಳು ಭಾರತಕ್ಕೆ ಹೊಸದೇನು ಅಲ್ಲ. ಆಗಾಗ ನಡೆಯುತ್ತಲೇ ಇರುತ್ತವೆ. ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ತುಂಬಾ ಹೆಚ್ಚು ಹೆಚ್ಚು ಈ ರೀತಿಯ ಘಟನೆಗಳು ನಡೆಯುತ್ತಿವೆ. ಆಗೆಲ್ಲಾ ಸಿನಿಮಾ ಮಂದಿರಗಳಲ್ಲಿ ಸಿನಿಮಾ ಟಿಕೆಟ್ ಪಡೆಯುವ ಕ್ಯೂನಲ್ಲಿ ಕಾಲ್ತುಳಿತಗಳಾಗುತ್ತಿದ್ದವು. ಚುನಾವಣಾ ಸಂದರ್ಭದಲ್ಲಿ ರಾಜಕಾರಣಿಗಳು ಹಂಚುವ ಸೀರೆ, ಪಂಚೆ, ಹಣ ಮುಂತಾದ ಸಮಯದಲ್ಲಿ, ಇನ್ನು ಕೆಲವು ಸಲ ಆಹಾರ ಪದಾರ್ಥಗಳ ಹಂಚಿಕೆಯ ಸಂದರ್ಭದಲ್ಲಿ ಅದನ್ನು ಪಡೆಯಲು ಕಾಲ್ತುಳಿತ ಉಂಟಾಗುತ್ತಿತ್ತು. ಪ್ರಖ್ಯಾತ ದೇವಸ್ಥಾನದ ಪ್ರವೇಶಕ್ಕಾಗಿ ಅಥವಾ ವಿಶೇಷ ಸಂದರ್ಭದಲ್ಲಿಯೂ ಕಾಲ್ತುಳಿತಗಳು ಉಂಟಾಗುತ್ತಿದೆ. ತಿರುಪತಿ, ಶಬರಿಮಲೆ, ವೈಷ್ಣೋದೇವಿ ಮುಂತಾದ ಕಡೆ ಆಗಾಗ ಕಾಲ್ತುಳಿತಗಳು ಸಂಭವಿಸುತ್ತಿರುತ್ತವೆ.
ಇತ್ತೀಚಿನ ವರ್ಷಗಳಲ್ಲಿ ಕುಂಭಮೇಳ ಸಂದರ್ಭದಲ್ಲಿ, ಒರಿಸ್ಸಾದ ಜಗನ್ನಾಥ ರಥೋತ್ಸವದಲ್ಲಿ, ತಿರುಪತಿ ಮತ್ತು ಶಬರಿಮಲೆಯ ದೇವಸ್ಥಾನಗಳಲ್ಲಿ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಐಪಿಎಲ್ ಕ್ರಿಕೆಟ್ ವಿಜಯೋತ್ಸವದ ಸಂದರ್ಭದಲ್ಲಿ, ನಿನ್ನೆ ಮೊನ್ನೆ ಕೊಲ್ಕತ್ತಾ ಸೇರಿ ದೇಶದ ಇತರ ಭಾಗಗಳಲ್ಲಿ ಒಂದಷ್ಟು ಜನ ನಿಧನರಾಗಿ ಸಾಕಷ್ಟು ಜನ ಗಾಯಗೊಂಡಿದ್ದಾರೆ.
ಮೊದಲನೆಯದಾಗಿ,
ಕಾಲ್ತುಳಿತ ಎಂಬುದು ಒಂದು ಸ್ವಯಂಕೃತಾಪರಾಧ, ಭಾವವೇಶದ ಮೂರ್ಖತನ, ಭದ್ರತಾ ವ್ಯವಸ್ಥೆಯ ವೈಫಲ್ಯ, ದಡ್ಡತನದ ಅನಾಗರಿಕ ವರ್ತನೆ ಎಂಬುದು ವಾಸ್ತವ. ಏಕೆಂದರೆ ಎಷ್ಟೋ ಬಾರಿ ಯಾವುದೇ ಪ್ರಚೋದನೆ ಇಲ್ಲದೇ ಅಥವಾ ಕೆಲವು ಕಿಡಿಗೇಡಿಗಳ ತುಂಟಾಟದಿಂದ ಅಥವಾ ಗುಂಪಿನ ಗಾಳಿಮಾತುಗಳಿಂದ ಅಥವಾ ಯಾವುದಾದರೂ ಪ್ರಚೋದನೆಯಿಂದ ಅಥವಾ ವಿಧ್ವಂಸಕ ಕೃತ್ಯದ ಭಾಗವಾಗಿ ಜನರಲ್ಲಿ ಗಾಬರಿ ಉಂಟಾದಾಗ ಅನಾವಶ್ಯಕವಾಗಿ ಓಡಿ ಹೋಗುವ ಸಂದರ್ಭದಲ್ಲಿ ಈ ದುರ್ಘಟನೆಗಳು ನಡೆಯುತ್ತವೆ.
ಈ ರೀತಿಯ ದುರ್ಘಟನೆಗಳು ನಡೆಯುವ ಸಂದರ್ಭದಲ್ಲಿ ಸರ್ಕಾರಗಳು ಪರಿಹಾರ ಘೋಷಿಸಿ, ತನಿಖೆಗೆ ಆದೇಶಿಸಿ ಕೈ ತೊಳೆದುಕೊಳ್ಳುತ್ತದೆ. ಅಲ್ಲಿಗೆ ವಿಷಯ ಮುಕ್ತಾಯವಾಗಿ ಮತ್ತೊಂದು ದುರ್ಘಟನೆಯವರೆಗೂ ಸುದ್ದಿಯೇ ಇರುವುದಿಲ್ಲ.
ವಾಸ್ತವವಾಗಿ ಇಂದಿನ ಆಧುನಿಕ ಕಾಲದಲ್ಲಿ ಕಾಲ್ತುಳಿತ ತಡೆಯಲು ಸಾಕಷ್ಟು ಮಾರ್ಗಗಳಿವೆ. ಸಂಪೂರ್ಣ ಅಲ್ಲದಿದ್ದರೂ ಕಾಲ್ತುಳಿತದ ತೀವ್ರತೆಯನ್ನು ಖಂಡಿತ ಕಡಿಮೆ ಮಾಡಬಹುದು. ಆದರೆ ರಾಜಕೀಯ ಮತ್ತು ಆಡಳಿತಗಾರರ ಇಚ್ಛಾಶಕ್ತಿ ಇಲ್ಲದೇ ಇರುವುದರಿಂದ ಈ ದುರಂತಗಳು ಮತ್ತೆ ಮತ್ತೆ ಸಂಭವಿಸುತ್ತದೆ.
ಕಾರ್ಯಕ್ರಮಗಳನ್ನು ಆಯೋಜಿಸುವ ಸಂದರ್ಭ, ಸಮಯ, ಅದಕ್ಕಾಗಿ ಸಿದ್ಧವಾಗಿರುವ ವೇದಿಕೆ ಮತ್ತು ಪ್ರದೇಶ, ಅದರಲ್ಲಿ ಭಾಗವಹಿಸುವವರ ಸಂಖ್ಯೆ, ಅತಿಥಿ ಯಾರು, ಸಮಯಕ್ಕೆ ಸರಿಯಾಗಿ ಆ ಕಾರ್ಯಕ್ರಮ ನಡೆಯುತ್ತದೆಯೇ, ನಿರೀಕ್ಷೆಗಿಂತ ಹಲವು ಪಟ್ಟು ಹೆಚ್ಚು ಜನರು ಬರಲು ಪ್ರಾರಂಭವಾದಾಗ ಪೋಲೀಸ್ ಗುಪ್ತಚರ ಇಲಾಖೆ ಅದನ್ನು ಗುರುತಿಸಿ ಮಾಹಿತಿ ನೀಡುವುದು ಮುಂತಾದ ಅನೇಕ ವಿಷಯಗಳು ಇಲ್ಲಿ ಅಡಕವಾಗಿರುತ್ತದೆ.
ಇದೆಲ್ಲವನ್ನು ಮೀರಿ ಜನರ ವಿವೇಚನೆಯೂ ಬಹಳ ಮುಖ್ಯವಾಗುತ್ತದೆ. ಟಿವಿ ಮಾಧ್ಯಮಗಳು, ಮೊಬೈಲ್ ಲೈವ್ ಗಳು ಇರುವಾಗ ಅನಾವಶ್ಯಕವಾಗಿ ಕೆಲವು ಕಾರ್ಯಕ್ರಮಗಳಿಗೆ ಹೋಗದೇ ಇರುವುದು, ಮಕ್ಕಳನ್ನು ಮತ್ತು ದೈಹಿಕ ದುರ್ಬಲರನ್ನು ಅಂತಹ ಕಾರ್ಯಕ್ರಮಗಳಿಂದ ದೂರ ಇಡುವುದು ಮುಂತಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.
ಅನಾವಶ್ಯಕವಾಗಿ ಒಂದೇ ಜಾಗದಲ್ಲಿ ಲಕ್ಷಾಂತರ ಜನ ಸೇರುವುದು, ಸೇರಿದ ಮೇಲೆ ಹುಚ್ಚುಚ್ಚಾಗಿ ವರ್ತಿಸುವುದು, ದಿಢೀರನೆ ಭಯಗೊಳ್ಳುವುದು, ದಿಗ್ಭ್ರಮೆಯಾಗುವುದು, ತಾನು, ತನ್ನ ಕುಟುಂಬ ಮಾತ್ರ ಸುರಕ್ಷಿತವಾಗಬೇಕು ಎಂದು ಒಟ್ಟು ಪರಿಸ್ಥಿತಿಯನ್ನು ಅವಲೋಕಿಸದೆ ಓಡುವುದು, ಸಿಕ್ಕಸಿಕ್ಕರವನ್ನು, ಕೆಳಗೆ ಬಿದ್ದವರನ್ನು ತುಳಿಯುವುದು, ಅಂತಹ ಸಂದರ್ಭದಲ್ಲಿ ವೈದ್ಯಕೀಯ ಸೌಕರ್ಯಗಳನ್ನು ಒದಗಿಸದೆ ಇರುವುದು, ಪೊಲೀಸರ ನಿರ್ಲಕ್ಷ್ಯ, ಸೂಕ್ಷ್ಮ ಗ್ರಹಿಕೆಯ ವೈಫಲ್ಯ ಎಲ್ಲವೂ ಸೇರಿ ಕಾಲ್ತುಳಿತಗಳು ನಿರಂತರವಾಗಿ ಸಂಭವಿಸುತ್ತಿರುತ್ತದೆ.
ಭಾರತೀಯರ ಮೋಕ್ಷದ ಹಾದಿಯ ನಂಬಿಕೆಗಳಲ್ಲಿ ಜ್ಞಾನ, ಭಕ್ತಿ, ಕರ್ಮ, ಯೋಗ ( ರಾಜ ) ಮಾರ್ಗಗಳಲ್ಲಿ ಅತಿ ಹೆಚ್ಚು ಸಂಖ್ಯೆಯ ಜನರನ್ನು ಆಕರ್ಷಿಸಿರುವುದು ಭಕ್ತಿ ಮಾರ್ಗ ಮತ್ತು ಅತ್ಯಂತ ಭಾವನಾತ್ಮಕ ಸೆಳೆತವನ್ನು ಹೊಂದಿರುವುದು ಸಹ ಭಕ್ತಿ ಮಾರ್ಗವೇ. ಅದಕ್ಕೆ ಮೂಲ ಕಾರಣ ಅತ್ಯಂತ ಭಕ್ತಿ ಎಂಬ ಭಾವ ಅತ್ಯಂತ ಆಂತರಿಕವಾದದ್ದು, ಸುಲಭವಾದದ್ದು, ಸರಳವಾದದ್ದು, ಶ್ರಮವಿಲ್ಲದ್ದು, ಚಿಂತನೆಯ ಅಗತ್ಯವಿಲ್ಲದ್ದು, ಓದು ಅಧ್ಯಯನಗಳ ಅವಶ್ಯಕತೆ ಇಲ್ಲದ್ದು, ಹೆಚ್ಚು ಪ್ರದರ್ಶನ ಕಾಣುವಂತದ್ದು ಮತ್ತು ದೈವಿಕ ಶಕ್ತಿಯ ಮೇಲಿನ ನಂಬಿಕೆ ಹೆಚ್ಚು ಆಕರ್ಷಕವಾದದ್ದು ಎಂದು ಸಾಮಾನ್ಯ ಜನರು ಭಾವಿಸಿರುವುದು. ಆ ಕಾರಣದಿಂದಲೇ ಭಕ್ತಿ ಮಾರ್ಗ ದೇಶದಲ್ಲಿ ವ್ಯಾಪಕವಾಗಿ ಹರಡಿದೆ.
ಜ್ಞಾನ ಮಾರ್ಗವನ್ನು ಅನುಸರಿಸಲು ಸಾಕಷ್ಟು ಅಧ್ಯಯನ, ಚಿಂತನೆ, ವಿಶಾಲ ಮನೋಭಾವ, ಪ್ರಬುದ್ಧತೆ, ದೂರದೃಷ್ಟಿ, ಏಕಾಗ್ರತೆ, ಸಮಗ್ರತೆ ಬೇಕಾಗುತ್ತದೆ. ಕರ್ಮ ಮಾರ್ಗ ಅನುಸರಿಸಲು ಶ್ರಮ ಸಂಸ್ಕೃತಿಯ ಎಲ್ಲಾ ಲಕ್ಷಣಗಳನ್ನು ಅನುಸರಿಸಬೇಕು. ಕಾಯಕ ನಿಷ್ಠೆ ಪ್ರದರ್ಶಿಸಬೇಕು, ಬೆವರು ಹರಿಸಬೇಕು. ದೈಹಿಕ ಶ್ರಮ ಅತ್ಯಗತ್ಯ. ಹಾಗೆಯೇ ಯೋಗ ಮಾರ್ಗ ಅಥವಾ ರಾಜಮಾರ್ಗದಲ್ಲಿ ದೀರ್ಘಕಾಲ ಏಕಾಗ್ರತೆಯಿಂದ ಸಾಕಷ್ಟು ಸಾಧನೆ ಮಾಡಬೇಕು. ಅದೂ ಸಹ ಹೆಚ್ಚು ಶ್ರಮದಾಯಕ. ದೇಹ ಮತ್ತು ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಬೇಕು. ಆದರೆ ಭಕ್ತಿ ಮಾರ್ಗದಲ್ಲಿ ನಂಬಿಕೆಯೊಂದೇ ಸಾಕು.
ಆದರೆ ವಾಸ್ತವದಲ್ಲಿ ಭಕ್ತಿ ಮಾರ್ಗವೇ ಅತ್ಯಂತ ಕಠಿಣ. ಭಕ್ತಿ ಎಂಬುದು ಒಂದು ಮಾನಸಿಕ ಶ್ರದ್ಧೆ. ಆಂತರಿಕ ಶುದ್ಧತೆ, ಆತ್ಮಸಾಕ್ಷಿಯ ನಡವಳಿಕೆ, ದೈವಿಕ ಪ್ರಜ್ಞೆಯ ಮೇಲಿನ ಅಪಾರ ನಂಬಿಕೆ, ಒಳ್ಳೆಯತನದ ವರ್ತನೆ, ದುಷ್ಟ ಶಕ್ತಿಗಳ ವಿರುದ್ಧ ಶಿಷ್ಟ ಶಕ್ತಿಯ ಅನುಸರಣೆ. ಎಲ್ಲಕ್ಕಿಂತ ಹೆಚ್ಚಾಗಿ ಸಮರ್ಪಣಾ ಭಾವ ಅತ್ಯಂತ ಮುಖ್ಯವಾದದ್ದು. ಇದನ್ನೂ ಮೀರಿ ವರ್ಣನೆಗೂ ನಿಲುಕದ ಕೆಲವು ಭಾವಗಳನ್ನು ಭಕ್ತಿ ಒಳಗೊಂಡಿದೆ. ಅದರೊಳಗಡೆ ಜ್ಞಾನವೂ, ಕರ್ಮವೂ, ಯೋಗವು ಮಿಳಿತಗೊಂಡಾಗ ಅದರ ಶಕ್ತಿ ದುಪ್ಪಟ್ಟಾಗುತ್ತದೆ. ಅದನ್ನು ಜನರು ಹೆಚ್ಚಾಗಿ ಗ್ರಹಿಸದೆ ಕೇವಲ ಮೇಲ್ನೋಟದ ಆಚರಣೆಗಳಿಗೆ ಮಾತ್ರ ಸೀಮಿತಗೊಳಿಸಿದ್ದಾರೆ.
ಈಗ ಅದೇ ಭಕ್ತಿ ಅಜ್ಞಾನವಾಗಿ, ಮೌಢ್ಯವಾಗಿ, ಸಂಪ್ರದಾಯವಾಗಿ, ಮೂಡನಂಬಿಕೆಯಾಗಿ, ಒಣ ಆಚರಣೆಯಾಗಿ, ಪ್ರದರ್ಶನದ ಗೊಂಬೆಯಾಗಿ, ಸ್ವಾರ್ಥ, ದುರಾಸೆಯ ಮಾರ್ಗವಾಗಿ ಬದಲಾಗಿ ಅದೊಂದು ಮೇಲ್ನೋಟದ ತೋರಿಕೆಯ ಭಾವವಾಗಿದೆ.
ಹೌದು ನಿಜ, ದೇವರ ದರ್ಶನ ಪಡೆದರೆ ಅದರಿಂದ ಯಾರಿಗೂ ತೊಂದರೆ ಇಲ್ಲ, ಯಾರಿಗೂ ನಷ್ಟವೂ ಇಲ್ಲ, ಜೊತೆಗೆ ದೈವಿಕ ನಂಬಿಕೆಯವರಿಗೆ ಒಂದಷ್ಟು ಆತ್ಮವಿಶ್ವಾಸ, ಮಾನಸಿಕ ಸ್ಥೈರ್ಯ ದೊರೆಯುತ್ತದೆ. ಅದರಲ್ಲಿ ಅನುಮಾನವಿಲ್ಲ. ಸ್ಥಳೀಯರಿಗೆ ವ್ಯಾಪಾರ ವ್ಯವಹಾರಗಳು ವೃದ್ಧಿಸುತ್ತದೆ. ಪ್ರವಾಸೋದ್ಯಮ ಅಭಿವೃದ್ಧಿ ಹೊಂದುತ್ತದೆ. ಅಷ್ಟರಮಟ್ಟಿಗೆ ಭಕ್ತಿಯನ್ನು ಒಪ್ಪಬಹುದು. ಅದರಾಚೆ ಯೋಚಿಸಿದಾಗ ಭಕ್ತಿಯ ಸಾಮರ್ಥ್ಯದ ಬಗ್ಗೆ ಅನುಮಾನಗಳು ಸೃಷ್ಟಿಯಾಗುವುದಿಲ್ಲವೇ. ಯೋಚಿಸುವ ಮೆದುಳು ಈ ವಾಸ್ತವವನ್ನು ಗ್ರಹಿಸಿ ಉತ್ತರ ಹುಡುಕುವ ಮನಸ್ಸು ಸದಾ ಕಾಡುತ್ತಲೇ ಇರುವಾಗ ಅದನ್ನು ವ್ಯಕ್ತಪಡಿಸುವ ಬಗೆ ಹೇಗೆ.
ಕೆಲವು ಮೂಲಭೂತವಾದಿ ಸನಾತನ ಧರ್ಮದ ಅನುಯಾಯಿಗಳು ಮತ್ತೊಂದು ಪ್ರಶ್ನೆ ಕೇಳಬಹುದು. ನೀವು ಇದನ್ನು ಕೇವಲ ಹಿಂದೂ ಧರ್ಮದಶರಿಗೆ ಮಾತ್ರ ಪ್ರಶ್ನಿಸುವುದು ಏಕೆ ? ಭಾರತದಲ್ಲಿಯೇ ಇರುವ ಎಷ್ಟೋ ಮಸೀದಿಗಳು, ಚರ್ಚುಗಳು, ಜೈನಬಸದಿಗಳು, ಬೌದ್ಧ ಸ್ತೂಪಗಳು, ಸಿಖ್ ಗುರುದ್ವಾರಗಳು, ಲಿಂಗಾಯತ ಮಠಗಳು ಮುಂತಾದ ದೈವ ಕೇಂದ್ರಿತ ಸ್ಥಳಗಳ ಬಗ್ಗೆ ಇದೇ ಪ್ರಶ್ನೆ ಕೇಳಬಹುದಲ್ಲವೇ ?
ಖಂಡಿತ ಹೌದು, ಅತಿಮಾನುಷ ದೈವಶಕ್ತಿ ಎಂದು ನಂಬಿ ಅದರ ದರ್ಶನಕ್ಕೆ, ಅದರ ಪ್ರಭಾವಕ್ಕೆ, ಅದರ ವಿಶಿಷ್ಟ ಶಕ್ತಿಗೆ, ಅದು ನೀಡುವ ಪ್ರತಿಫಲದ ಅಪೇಕ್ಷೆಗೆ ಭಕ್ತಿಯಿಂದ ನಮಿಸುವ ಎಲ್ಲರಿಗೂ ಇದು ಅನ್ವಯಿಸುತ್ತದೆ. ಇಸ್ರೇಲ್ ನವರು ಗಾಜಾಪಟ್ಟಿಗೆ ನುಗ್ಗಿ ಸುಮಾರು 70 ಸಾವಿರಕ್ಕೂ ಹೆಚ್ಚು ಅಮಾಯಕರನ್ನು ಕೊಲ್ಲುತ್ತಿರುವಾಗ ಪಕ್ಕದಲ್ಲಿ ಇರುವ ಮೆಕ್ಕಾ ಮದೀನಾದ ನಿಮ್ಮ ದೇವರು ಅವರನ್ನು ಕಾಪಾಡಬಹುದಿತ್ತಲ್ಲವೇ, ಸಿರಿಯಾ, ಲೆಬನಾನ್, ಇರಾನ್, ಇರಾಕ್, ಆಫ್ಘಾನಿಸ್ತಾನ್, ಪಾಕಿಸ್ತಾನಗಳಲ್ಲಿ ನಡೆಯುವ ಘರ್ಷಣೆಗಳಲ್ಲಿ ಅಪಾರ ಜನ ಸಾಯುವುದನ್ನು ನಿಮ್ಮ ದೇವರು ತಡೆಯಬಹುದಿತ್ತಲ್ಲವೇ, ಹಾಗೆಯೇ ಇಸ್ರೇಲ್ ನಲ್ಲಿ, ಉಕ್ರೇನ್ ನಲ್ಲಿ ರಷ್ಯಾದಲ್ಲಿ, ಫ್ರಾನ್ಸ್ ನಲ್ಲಿ ಅನೇಕ ಘರ್ಷಣೆಗಳು ನಡೆದು ಅಮಾಯಕರು, ದೈವಭಕ್ತರು ಸಾಯುತ್ತಿರುವುದನ್ನು ಜೀಸಸ್ ತಡೆಯಬಹುದಿತ್ತಲ್ಲವೇ,
ಇಲ್ಲಿಯೇ ಧರ್ಮಸ್ಥಳದಲ್ಲಿ ಆ ವಿದ್ಯಾರ್ಥಿನಿ ಸೌಜನ್ಯಳ ಅತ್ಯಾಚಾರದ ಸಾವನ್ನು ಧರ್ಮಸ್ಥಳದ ಮಂಜುನಾಥರೋ, ಜೈನ ಧಾರ್ಮಿಕ ಶಕ್ತಿಯೋ ತಡೆಯಬಹುದಿತ್ತಲ್ಲವೇ, ಅನೇಕ ಸಿಖ್ಖರ ಸಾವಿರಾರು ಮಾರಣಹೋಮವನ್ನು ಆ ಧರ್ಮದ ಗುರುಗಳು ಅಥವಾ ದೇವರು ನಿಲ್ಲಿಸಬಹುದಿತ್ತಲ್ಲವೇ, ಬೌದ್ಧರ ಮೇಲಿನ ಅನೇಕ ಸಾಮೂಹಿಕ ಹತ್ಯೆಯನ್ನು ಬೌದ್ಧ ದೇವರು ಅಥವಾ ನಂಬಿಕೆಯ ಶಕ್ತಿ ತಡೆಯಬಹುದಿತ್ತಲ್ಲವೇ, ಲಿಂಗಾಯಿತ ಮಠಗಳು ಬಸವಣ್ಣನನ್ನೇ ದೇವರೆಂದು ಭಕ್ತಿಯಿಂದ ಪೂಜಿಸುವ ನಂಬಿಕೆಯವರಿಗೆ ಉತ್ತರ ಕರ್ನಾಟಕದ ಅನೇಕ ನೆರಹಾವಳಿಯನ್ನು, ಅಮಾಯಕ ಹತ್ಯೆಗಳನ್ನು ಬಸವಣ್ಣನವರು ನಿಲ್ಲಿಸಬಹುದಿತ್ತಲ್ಲವೇ.
ಇಲ್ಲಿ ಕೆಲವು ಧಾರ್ಮಿಕ ಪಂಥಗಳು ದೇವರನ್ನು ನಂಬುವುದಿಲ್ಲ. ಅತಿ ಮಾನುಷ ಶಕ್ತಿಯಲ್ಲಿ ನಂಬಿಕೆ ಇಲ್ಲ. ಆದ್ದರಿಂದ ಬೌದ್ಧ, ಜೈನ, ಸಿಖ್, ಲಿಂಗಾಯತ ಧರ್ಮಗಳಲ್ಲಿ ಮನುಷ್ಯನ ಪ್ರಯತ್ನವೇ ಮುಖ್ಯ ಎಂದು ಭಾವಿಸುವವರಿಗೆ ಇದು ಅನ್ವಯಿಸುವುದಿಲ್ಲ. ಕೇವಲ ಆ ಧರ್ಮಗಳ ದೇವರು ಎಂದು ಅತಿಮಾನುಷ ಶಕ್ತಿಯ ಬಗ್ಗೆ ನಂಬಿಕೆ ಇರುವವರಿಗೆ ಮಾತ್ರ ಇದು ಅನ್ವಯಿಸುತ್ತದೆ.
ಈ ದೈವಿಕ ಭಕ್ತಿ ಹೆಚ್ಚಾಗಿ ಇರುವುದು ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ನರಲ್ಲಿ. ಈ ಎಲ್ಲವೂ ಆ ದೇವರುಗಳಿಗೆ ಹೆಚ್ಚು ಅನ್ವಯಿಸುತ್ತದೆ. ಏಕೆಂದರೆ ಈ ಸಮುದಾಯದ ಬಹುತೇಕ ಜನ ದೇವರನ್ನು ನಂಬಿದ್ದಾರೆ ಮತ್ತು ಎಲ್ಲಾ ಆಗುಹೋಗುಗಳಿಗೆ ದೇವರೇ ಕಾರಣ ಎಂದು ಪ್ರತಿನಿತ್ಯ ದೇವರನ್ನು ಸ್ಮರಿಸುತ್ತಾರೆ. ದೇವರಿಗಾಗಿ ಅನೇಕ ಪೂಜೆ ಪುನಸ್ಕಾರ, ಹೋಮ ಹವನ, ಪ್ರಾರ್ಥನೆ, ಉತ್ಸವ, ಉಪವಾಸ, ಯಾತ್ರೆ, ಪ್ರವಾಸ ಎಲ್ಲವನ್ನೂ ಮಾಡುತ್ತಾರೆ. ಆದ್ದರಿಂದ ದೇವರು ಸಹ ಇವರಿಗಾಗಿ ಏನನ್ನಾದರೂ ಮಾಡಬಾರದೆ, ಮುಖ್ಯವಾಗಿ ನೋವು ಸಂಕಷ್ಟಗಳನ್ನು ಪರಿಹರಿಸಿ ನ್ಯಾಯವನ್ನು, ನೀತಿಯನ್ನು, ಸಮಾನತೆಯನ್ನು ಎತ್ತಿ ಹಿಡಿಯಬಾರದೆ ಎಂಬುದಷ್ಟೇ ನಮ್ಮ ಪ್ರಶ್ನೆ.
ನಾವು ಮತ್ತು ನಮ್ಮ ಚಟುವಟಿಕೆಗಳು ವಾಸ್ತವವಾಗಿ ಜ್ಞಾನದ ಅಂಚಿನಲ್ಲಿಯೇ, ಅರಿವಿನಲ್ಲಿಯೇ ಸಾಗಿದಾಗ ಬದುಕಿನ ಗುಣಮಟ್ಟ ಹೆಚ್ಚಾಗುತ್ತದೆ. ಭ್ರಮೆಗೆ ಒಳಗಾಗಿ, ದುರಾಸೆಗೆ ಒಳಗಾಗಿ ಇಲ್ಲದ ಶಕ್ತಿಯನ್ನು ಅವಲಂಬಿಸಿದರೆ ಜೀವನದ ಗುಣಮಟ್ಟ ಕಡಿಮೆಯಾಗಬಹುದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ…….
ಅಲ್ಲದೆ ಇತ್ತೀಚೆಗೆ ಇದೊಂದು ಸಾಂಕ್ರಾಮಿಕ, ಸಾಮಾಜಿಕ ರೋಗವಾಗಿ ಪರಿವರ್ತನೆ ಆಗಿರುವುದರಿಂದ ಈ ಕ್ಷಣದಲ್ಲಿ ನನ್ನ ಮನಸ್ಸಿನಲ್ಲಿ ಆತಂಕ ಸೃಷ್ಟಿ ಮಾಡುತ್ತಿರುವುದು ಈಗ ನಡೆಯುತ್ತಿರುವ ಮೈಸೂರು ದಸರಾ ಉತ್ಸವದ ಸಂದರ್ಭದ ಬಹುದೊಡ್ಡ ಗುಂಪನ್ನು ನಿಯಂತ್ರಿಸುವ ಸವಾಲು. ಬಹುಶಃ ನನಗಿರುವ ಮಾಹಿತಿಯಂತೆ ಮೈಸೂರು ದಸರಾ ಸಂದರ್ಭದಲ್ಲಿ ಅತ್ಯಂತ ಭೀಕರ ಎನ್ನುವ ಯಾವುದೇ ಕಾಲ್ತುಳಿತ ಇಲ್ಲಿಯವರೆಗೂ ಸಂಭವಿಸಿಲ್ಲ ಎನಿಸುತ್ತದೆ. ಅಲ್ಲಿ ಸಾಕಷ್ಟು ಮುಂಜಾಗ್ರತೆ ವಹಿಸಲಾಗುವುದು. ಸಣ್ಣಪುಟ್ಟ ಘಟನೆಗಳು ಆನೆ ರೊಚ್ಚಿಗೆದ್ದಾಗ ಆಗಿರುವ ಕೆಲವು ಘಟನೆಗಳನ್ನು ಹೊರತುಪಡಿಸಿದರೆ ಅಂತಹ ಗಂಭೀರ ಕಾಲ್ತುಳಿತ ಸಂಭವಿಸಿಲ್ಲ.
ಆದರೆ ಹಾಗೆಂದು ನಿರ್ಲಕ್ಷಿಸುವಂತಿಲ್ಲ. ಆಕಸ್ಮಿಕಗಳು ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು. ಸರಿಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆಯಲ್ಲಿರುವ ದಸರಾ ಸಂದರ್ಭದಲ್ಲಿ ಮುಖ್ಯ ದಿನದಂದು ಈ ಪ್ರಮಾಣದ ಜನಸಂಖ್ಯೆಯನ್ನು ನಿಯಂತ್ರಿಸುವುದು ತುಂಬಾ ಕಷ್ಟವಿದೆ. ಎಷ್ಟು ಸಾಧ್ಯವೋ ಅಷ್ಟು ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕು. ನಾಗರೀಕರು ಸಹ ತುಂಬಾ ಜವಾಬ್ದಾರಿಯಿಂದ ವರ್ತಿಸಬೇಕು.
ಹಾಗೆಯೇ ಹೆಚ್ಚು ಜನರು ಭಾಗವಹಿಸುವ ಎಲ್ಲಾ ಮೆರವಣಿಗೆ, ಕಾರ್ಯಕ್ರಮ, ಉತ್ಸವ, ಜಾತ್ರೆಗಳ ಸಂದರ್ಭದಲ್ಲಿ ವಹಿಸುವ ಎಚ್ಚರಿಕೆಯ ಕ್ರಮಗಳ ಬಗ್ಗೆ ಪುನರ್ ವಿಮರ್ಶೆ ಮಾಡಿ ಹೊಸ ಪರ್ಯಾಯ ಮಾರ್ಗಗಳ ಹುಡುಕಾಟ ನಡೆಸಬೇಕಾಗಿದೆ…….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9663750451……
9844013068……











