--Ads--

ಪುರುಷರ ಕ್ಷೌರಿಕ ವೃತ್ತಿಗೆ ಹೆಣ್ಣಿನ ಸ್ಪರ್ಶ ನೀಡಿದ ದೇವಿ ತಂಗವೇಲು

On: October 20, 2026 5:17 AM
Follow ಮಾಡಿ
--Ads--

Whatsapp Channel

Join Now

Telegram Group

Join Now
ವಿಜಯ ದರ್ಪಣ ನ್ಯೂಸ್….

ಪುರುಷರ ಕ್ಷೌರಿಕ ವೃತ್ತಿಗೆ ಹೆಣ್ಣಿನ ಸ್ಪರ್ಶ ನೀಡಿದ ದೇವಿ ತಂಗವೇಲು

ತಮಿಳುನಾಡಿದ ತಿರುಪ್ಪೂರಿನ ಚಿಕಣ್ಣ ಸರ್ಕಾರಿ ಕಲಾ ಕಾಲೇಜಿನಿಂದ 2006 ರಲ್ಲಿ ದೇವಿ ಬಿಕಾಂ ಪದವಿ ಪಡೆದಳು. ಪದವಿ ಪತ್ರ ಹಿಡಿದು ಸಾಮಾನ್ಯವಾಗಿ ಎಲ್ಲರಂತೆ ಕೆಲಸಕ್ಕಾಗಿ ಅಲೆದು ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದಳು. ಬೆಳಗೆ 9 ರಿಂದ ಸಂಜೆ ಆರರ ತನಕದ ಕೆಲಸ. ಆಗ ಅವಳಿಗೆ ಕೊಡುತ್ತಿದ್ದ ಸಂಬಳ ಮೂರು ಸಾವಿರ ಮಾತ್ರ.
 ಒಂದು ದಿನ ತನ್ನ ತಂದೆಯ ಕಟಿಂಗ್ ಶಾಪ್ ಗೆ ಬಂದಿದ್ದಳು. ತಂದೆಗೆ ತಲೆ ಸುತ್ತು ಬಂದು ಕೂತರು. ಆಗ ಅವರು ಅರ್ಧಮಾಡಿದ ಶೇವಿಂಗ್ ನ್ನು ದೇವಿ ಪೂರ್ಣಗೊಳಿಸಿದಳು. ಆಗ ಅವಳು ರೇಜರ್ ಹಿಡಿದಾಗ ಮಿಂಚಿನಂತೆ ಐಡಿಯಾವೊಂದು ಹೊಳೆಯಿತು. ನಾನು ಬೇರೆಯವರ ಹತ್ತಿರ ಕನಿಷ್ಠ ಕೂಲಿಗೆ ಯಾಕೆ ಬೆಳಗೆಯಿಂದ ಸಂಜೆ ತನಕ ದುಡಿಯಬೇಕು. ತಂದೆಯ ಕಟಿಂಗ್ ಶಾಪಲ್ಲಿ ಯಾಕೆ ನಾನೂ ಕಟಿಂಗ್ ಶೇವಿಂಗ್ ಮಾಡಬಾರದು ಅನ್ನಿಸಿತು. ಬಾಲ್ಯದಿಂದಲೂ ಅಪ್ಪನ ಕೆಲಸವನ್ನು ನೋಡುತ್ತಲೇ ಬೆಳೆದ ಕಾರಣ ಕಟಿಂಗ್ ಶೇವಿಂಗ್ ದೊಡ್ಡ ವಿದ್ಯೆಯೇನಲ್ಲ ಮಾಡಬಲ್ಲೆ ಎಂಬ ಆತ್ಮವಿಶ್ವಾಸ ಅವಳಲ್ಲಿತ್ತು. ಮರುದಿನದಿಂದ ಕಟಿಂಗ್ ಶಾಪಲ್ಲಿ ರೇಜರ್ ಹಿಡಿದು ನಿಂತಳು. ಇದು ನಡೆದದ್ದು ತಮಿಳುನಾಡಿನ ಕೊಯಮತ್ತೂರು ಬಳಿಯ ಪಲ್ಲಡಂನಲ್ಲಿರುವ ಸಣ್ಣದಾದ ತಂಗಮ್ ಸಲೂನಿನಲ್ಲಿ.
ಮರುದಿನ ಕಟಿಂಗ್ ಗೆ ಅಂತ ಬಂದವರು ದೇವಿಯನ್ನು ನಿಮ್ಮ ಅಪ್ಪ ಎಲ್ಲಿ ಎಂದು ಕೇಳುತ್ತಿದ್ದರು. ಆದರೆ ದೇವಿ ಅಪ್ಪನಿಗೆ ಹುಶಾರಿಲ್ಲ ನಾನೇ ಕಟಿಂಗ್ ಶೇವಿಂಗ್ ಮಾಡುತ್ತೇನೆ ಬನ್ನಿ ಕೂತುಕೊಳ್ಳಿ ಎಂದು ಕರೆಯುತ್ತಿದ್ದಳು. ಗಂಡಸರು ತಕ್ಷಣ ಮುಜುಗರಕ್ಕೆ ಒಳಗಾದವರಂತೆ ಕಾಲು ಕೀಳುತ್ತಿದ್ದರು. ಗಂಡುಬೀರಿಯಂತೆ ಕಟಿಂಗ್ ಮಾಡಲು ಬಂದಿದ್ದಾಳೆ ಎನ್ನುವ ಮಾತುಗಳೂ ಹರಿದಾಡಿದವು. ಅಪ್ಪನೂ ಬೇಡ ಅನ್ಸುತ್ತೆ ಮಗಳೇ ಎಂದು ಚೂರು ತಗ್ಗಿದ ದನಿಯಲ್ಲಿ ಹೇಳಿದ್ದರು. ದೇವಿ ಅದಾವುದಕ್ಕೂ ತಗ್ಗಲಿಲ್ಲ. ಹೀಗೆ ಸ್ವಲ್ಪ ದಿನ ಆದ ಮೇಲೆ ನಿಧಾನಕ್ಕೆ ಒಬ್ಬೊಬ್ಬರೇ ತಲೆ ಕೊಟ್ಟು ಕೂರ ತೊಡಗಿದರು. ಗಂಡಸರಿಗೆ ಅಭ್ಯಾಸವಾಗತೊಡಗಿತು.
 ಇದೀಗ ಎರಡು ದಶಕ ಪೂರೈಸಿದ ದೇವಿ ತಂಗವೇಲು ತನ್ನದೇ ಆದ ‘ಭುವನದೇವಿ ಹೇರ್ ಲೈನ್’ ಎನ್ನುವ ಹೊಸ ಸುಸಜ್ಜಿತ ಶಾಪ್ ಹೊಂದಿದ್ದಾರೆ. ಇದೀಗ ಪಲ್ಲಡಂ ನಲ್ಲಿ ಅತಿ ಬೇಡಿಕೆಯ ಕೇಶ ವಿನ್ಯಾಸಕಿಯಾಗಿ ರೂಪುಗೊಂಡಿದ್ದಾರೆ. ಮಾರ್ಕೆಟ್ ನಲ್ಲಿ ಬರುವ ಹೊಸ ಹೊಸ ಹೇರ್ ಕಟ್ ಪಲ್ಲಡಂ ನಲ್ಲಿ ಆರಂಭವಾಗುವುದೇ ದೇವಿಯವರ ಶಾಪಲ್ಲಿ. ಹಾಗಾಗಿ ‘ಅಜಿತ್ ಹೇರ್ ಸೈಲ್’ ಮತ್ತು ‘ಸಿಂಗಮ್ ಸೂರ್ಯ ಸ್ಟೈಲ್’ ಗಾಗಿ ಅವಳ ಬಳಿ ಯುವಕರು ಸಾಲುಗಟ್ಟುತ್ತಾರೆ. ಹೀಗೆ ಕಟಿಂಗ್ ಮಾಡಿಸಲು ಬರುತ್ತಿದ್ದ ಯುವಕನೊಂದಿಗೆ ಪ್ರೀತಿ ಮೊಳೆತು ಮುಂದೆ ಇಬ್ಬರೂ ಮದುವೆಯಾದರು.
 ನಗರಗಳಲ್ಲಿ ಮಹಿಳೆಯರು ಯುನಿಸೆಕ್ಸ್ ಸ್ಪಾ ಅಥವಾ ಸಲೂನ್‌ನಲ್ಲಿ ಕತ್ತರಿ ಹಿಡಿದು ಕೂದಲು ಕತ್ತರಿಸುವುದು ಸಾಮಾನ್ಯ ದೃಶ್ಯ. ಆದರೆ ದೇವಿಯ ಕಥೆಯೇ ಬೇರೆ. ಸಲೂನ್ ಶಾಪ್ ಅಂದರೆ ಗಂಡಸರು ಗಂಡಸರಿಗಾಗಿ ಎನ್ನುವಂತಿದ್ದ ಪುರುಷ ಪ್ರಧಾನ ಗ್ರಹಿಕೆಯನ್ನು ಬದಲಿಸಿದ್ದರು. ಮುಖ್ಯವಾಗಿ ತನ್ನ ಕುಟುಂಬ ಆರ್ಥಿಕವಾಗಿ ದುಸ್ಥಿತಿಯಲ್ಲಿದ್ದಾಗ ರೇಜರ್ ಮತ್ತು ಕತ್ತರಿ ಹಿಡಿದವರು. ಹೀಗೆ ಗಂಡಸರಿಗೆ ಮಾತ್ರ ಸೀಮಿತವಾಗಿದ್ದ ಕ್ಷೌರಿಕ ಕೆಲಸದ ಗಂಡು ನೋಟವನ್ನು ಬದಲಿಸಿದರು.
 “ಇಪ್ಪತ್ತು ವರ್ಷಗಳ ಹಿಂದೆ ನಾನು ನಮ್ಮ ಸಲೂನ್‌ಗೆ ಬಂದು ಕಟಿಂಗ್ ಶೇವಿಂಗ್ ಪ್ರಾರಂಭಿಸಿದಾಗ, ಒಬ್ಬ ಗಂಡಸು ಕೂಡ ಬರುತ್ತಿರಲಿಲ್ಲ. ಆ ದಿನಗಳಲ್ಲಿ ನಾನು ಮತ್ತು ನನ್ನ ತಂದೆ ಸುಮ್ಮನೆ ಕುಳಿತುಕೊಳ್ಳುತ್ತಿದ್ದೆವು. ನಾನು ಕಟಿಂಗ್ ಶೇವಿಂಗ್ ಮಾಡುತ್ತಿದ್ದರಿಂದ ನನ್ನ ತಂದೆಯ ಹತ್ತಿರ ರೆಗುಲರ್ ಆಗಿ ಬರುತ್ತಿದ್ದವರೂ ಬರುತ್ತಿರಲಿಲ್ಲ. ಈಗ ಈ ಸ್ಥಿತಿ ಪೂರಾ ಬದಲಾಗಿದೆ” ಎಂದು ದೇವಿ ಆರಂಭದ ದಿನಗಳನ್ನು ನೆನೆಯುತ್ತಾರೆ. ಮುಂದುವರಿದು, ”ಬಾಲ್ಯದಿಂದಲೂ ನಾನು ನನ್ನ ಬಿಡುವಿನ ವೇಳೆಯನ್ನು ನನ್ನ ತಂದೆಯ ಸಲೂನ್‌ನಲ್ಲಿ ಕಳೆಯುತ್ತಿದ್ದೆ ಮತ್ತು ಅವರ ಕೆಲಸವನ್ನು ಗಮನಿಸುತ್ತಿದ್ದೆ. ಅವರು ಯಾರದ್ದೋ ಕೆನ್ನೆಗಳ ಮೇಲೆ ಫೋಮ್ ಹಚ್ಚುವುದನ್ನು ನೋಡಲು ನಾನು ಇಷ್ಟಪಡುತ್ತಿದ್ದೆ. ಅವರು ತಮ್ಮ ಎಡ ಅಂಗೈಗೆ ರೇಜರ್ ಅನ್ನು ಉಜ್ಜಿ ನಂತರ ಕ್ಷೌರ ಮಾಡುತ್ತಿದ್ದರು. ಅವರನ್ನು ನೋಡುವುದು ರೋಮಾಂಚನಕಾರಿಯಾಗಿತ್ತು. ಆದರೆ ಒಂದು ದಿನ ನಾನೇ ಅವರ ಉತ್ತರಾಧಿಕಾರಿಯಾಗುತ್ತೇನೆ ಎಂದು ಕನಸು ಮನಸಿನಲ್ಲಿಯೂ ಊಹಿಸಿರಲಿಲ್ಲ” ಎಂದು ಅವರು ಹೇಳುತ್ತಾರೆ.
 ದೇವಿ ಇದೀಗ ಪಲ್ಲಡಂ ಸರ್ಕಾರಿ ಆಸ್ಪತ್ರೆ ಮತ್ತು ಬಸ್ ನಿಲ್ದಾಣದ ಬಳಿ ಅತ್ಯಂತ ಜನದಟ್ಟಣೆಯ ಸಲೂನ್ ಅನ್ನು ಹೊಂದಿದ್ದಾರೆ.

WhatsApp

Join Now

Telegram

Join Now

Instagram

Join Now