ಗ್ರಾಮೀಣ/ನಗರ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಗೌರವಧನದ ಆಧಾರದ ಮೇಲೆ ನೇಮಕಾತಿಗೆ ಅರ್ಜಿ ಆಹ್ವಾನ .

ವಿಜಯ ದರ್ಪಣ ನ್ಯೂಸ್ , ದೇವನಹಳ್ಳಿ 
ಬೆಂಗಳೂರು ಗ್ರಾ. ಜಿಲ್ಲೆ ಜೂನ್ 28

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಗ್ರಾಮೀಣ ಪುನರ್ವಸತಿ ಯೋಜನೆಯಡಿ ಗ್ರಾಮ ಪಂಚಾಯಿತಿ ಮಟ್ಟದಿಂದ ಜಿಲ್ಲಾ ಮಟ್ಟದವರೆಗೂ ವಿಕಲಚೇತನರ ಸಮಸ್ಯೆಗಳಿಗೆ ನೇರವಾಗಿ ಸ್ಪಂದಿಸಲು ಅನುಕೂಲವಾಗುವಂತೆ ಸರ್ಕಾರದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದಕ್ಕಾಗಿ ಸ್ಥಳೀಯ ಸಮರ್ಥ ವಿಕಲಚೇತನರನ್ನು ಗ್ರಾಮ ಪಂಚಾಯಿತಿಗಳಿಗೆ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನಾಗಿ ಹಾಗೂ ನಗರಸಭೆಗೆ ನಗರ ಪುನರ್ವಸತಿ ಕಾರ್ಯಕರ್ತರನ್ನಾಗಿ ಗೌರವಧನದ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ವಿಕಲಚೇತನ ಅಭ್ಯರ್ಥಿಗಳು ಷರತ್ತುಗಳಿಗೊಳಪಟ್ಟು ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲಾತಿಗಳೊಂದಿಗೆ 2023ರ ಜುಲೈ 15 ರ ಒಳಗಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕಚೇರಿ, ನಂ.03 ನೆಲಮಹಡಿ, ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ಕುಂದಾಣ ಹೋಬಳಿ, ದೇವನಹಳ್ಳಿ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಲ್ಲಿಗೆ ಸಲ್ಲಿಸುವುದು.

*ನೇಮಕಾತಿ ಮಾಡಬೇಕಾದ ಗ್ರಾಮ ಪಂಚಾಯಿತಿಗಳು/ನಗರಸಭೆಯ ಹೆಸರು*

ನೆಲಮಂಗಲ ತಾಲ್ಲೂಕಿನ ದೊಡ್ಡಬೆಲೆ ಗ್ರಾಮ ಪಂಚಾಯಿತಿ,
ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರ ಗ್ರಾಮ ಪಂಚಾಯಿತಿ,
ದೇವನಹಳ್ಳಿ ತಾಲ್ಲೂಕಿನ ಕಾರಹಳ್ಳಿ ಗ್ರಾಮ ಪಂಚಾಯಿತಿ,
ಹೊಸಕೋಟೆ ತಾಲೂಕಿನ ಶಿವನಾಪುರ, ದೇವನಗುಂದಿ, ಸೂಲಿಬೆಲೆ ಗ್ರಾಮ ಪಂಚಾಯಿತಿಗಳು ಹಾಗೂ
ಹೊಸಕೋಟೆ ನಗರಸಭೆಯಲ್ಲಿ 02 ಹುದ್ದೆಗಳು.

*ಷರತ್ತುಗಳು*

ಶೇಕಡಾ 40 ಹಾಗೂ ಅದಕ್ಕಿಂತ ಹೆಚ್ಚು ಅಂಗವಿಕಲತೆ ಹೊಂದಿರಬೇಕು (ಯು.ಡಿ.ಐ.ಡಿ ಲಗತ್ತಿಸಬೇಕು.).
ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತೀರ್ಣರಾದವರಿಗೆ ಆದ್ಯತೆ, ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತೀರ್ಣರಾದವರು ಸಿಗದೆ ಇದ್ದ ಸಂದರ್ಭದಲ್ಲಿ ಅನುತ್ತೀರ್ಣರಾದವರನ್ನು ಪರಿಗಣಿಸಲಾಗುವುದು.18 ರಿಂದ 45 ರ ವಯೋಮಿತಿಯಲ್ಲಿದ್ದು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚರಿಸಿ ಮಾಹಿತಿ/ಸೌಲಭ್ಯ ಕಲ್ಪಿಸಲು ಸಮರ್ಥರಾಗಿರಬೇಕು.

ಗೌರವಧನದ ನೇಮಕಾತಿಯು ಒಂದು ವರ್ಷದ ನಂತರ ಪುನರ್ ಪರಿಶೀಲನೆಗೆ ಒಳಪಟ್ಟಿರುತ್ತದೆ. ಪುನರ್ ಪರಿಶೀಲನೆಯಲ್ಲಿ ಕೆಲಸ ಕಾರ್ಯಗಳ ನಿರ್ವಹಣೆ, ಅಂಗವಿಕಲರೊಂದಿಗೆ ಸಂಬಂಧ ವಿವಿಧ ಇಲಾಖೆಗಳೊಂದಿಗೆ/ಸ್ವಯಂ ಸೇವಾ ಸಂಸ್ಥೆ, ಸಮುದಾಯದೊಂದಿಗೆ ವಿಕಲಚೇತನ ಅಭಿವೃದ್ಧಿಗಾಗಿ ಇಟ್ಟುಕೊಂಡಿರುವ ಸಂಬಂಧಗಳನ್ನು ಪರಿಶೀಲಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು.
ಹುದ್ದೆಯು ಗೌರವಧನದ ಆಧಾರದ ಮೇಲೆ ಇರುವುದರಿಂದ ಇವರನ್ನು ಯಾವಾಗ ಬೇಕಾದರೂ ಕೆಲಸದಿಂದ ತೆಗೆದು ಹಾಕಬಹುದಾಗಿದೆ / ಬಿಡುಗಡೆ ಮಾಡಬಹುದಾಗಿದೆ.

ಗೌರವಧನ ಆಧಾರದ ಮೇಲೆ ಕೆಲಸ ನಿರ್ವಹಿಸುವುದರಿಂದ ಖಾಯಂಗೊಳಿಸಲು ಕೋರಲು ಅವಕಾಶವಿರುವುದಿಲ್ಲ. ಸಮರ್ಥ ವಿಕಲಚೇತನರಾಗಿರಬೇಕು ತೀರ್ವತರ, ವಿಕಲಚೇತನರಾಗಿರಬಾರದು.
ಸಂಬಂಧಪಟ್ಟ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸವಿರುವ ಬಗ್ಗೆ ತಹಶೀಲ್ದಾರರಿಂದ ಪಡೆದ ವಾಸಸ್ಥಳ ದೃಢೀಕರಣ ಪತ್ರ ಲಗತ್ತಿಸುವುದು.
ಮಾಹೆಯಾನ ಗೌರವಧನ ರೂ.9,000/- ನೀಡಲಾಗುವುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ.ಎನ್.ಎಂ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.