ವಿಜಯ ದರ್ಪಣ ನ್ಯೂಸ್….
ಹಳೆಯ ಕಾಂಗ್ರೆಸ್ಸಿಗರ, ಹೊಸ ಕಾಂಗ್ರೆಸ್ಸಿಗರ ಎಂಬುದು ಮುಖ್ಯವಲ್ಲ ಪಕ್ಷಕ್ಕೆ ನಿಷ್ಠೆ ಇರಬೇಕು :ರಾಜೀವ್ ಗೌಡ

ಶಿಡ್ಲಘಟ್ಟ : ಹಳೆಯ ಕಾಂಗ್ರೆಸ್ಸಿಗರ, ಹೊಸ ಕಾಂಗ್ರೆಸ್ಸಿಗರ ಎಂಬುದು ಮುಖ್ಯವಲ್ಲ ,ಪಕ್ಷದ ಭಾವುಟ ಕಟ್ಟಿ ಪಕ್ಷ ವನ್ನು ಸಂಘಟಿಸುವವರು ಯಾರೇ ಆಗಲಿ ಅವರೇ ಮುಖ್ಯವೇ ಹೊರತು ಅಮಾವಾಸೆ ಹುಣ್ಣಿಮೆಗೆ ಆಗೊಮ್ಮೆ ಈಗೊಮ್ಮೆ ಬಂದು ಹೋಗುವವರು ಪಕ್ಷಕ್ಕೆ ಮುಖ್ಯವಲ್ಲ ಎಂದು ಕೆಪಿಸಿಸಿ ಸಂಯೋಜಕ, ಕಾಂಗ್ರೆಸ್ ಮುಖಂಡ ರಾಜೀವ್ಗೌಡ ಕಿಡಿ ಕಾರಿದರು.
ನಗರದ ಕಾಂಗ್ರೆಸ್ ಭವನದಲ್ಲಿ ‘ವಿಧಾನ ಪರಿಷತ್ ಆಗ್ನೇಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆಮಠ್’ ಅವರ ಪರ ಚುನಾವಣೆ ಪ್ರಚಾರದ ವೇಳೆ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡೇ ಪಕ್ಷಕ್ಕೆ ದ್ರೋಹ ಬಗೆಯುವವರಿಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುವ ಕೆಲಸ ಆಗಲಿದೆ ನಿಯತ್ತಾಗಿ ಇರುವುದಾದರೆ ಇರಿ, ಇಲ್ಲವಾದಲ್ಲಿ ಪಕ್ಷ ಬಿಡಿ, ಪಕ್ಷದ ಹೈಕಮಾಂಡ್ ಈ ಬಗ್ಗೆ ಗಂಭೀರ ಚಿಂತನೆ ನಡೆಸಿದೆ ಎಚ್ಚರಿಸಿದರು.
ಕೆಲ ಮುಖಂಡರು ಹಳೆಯ ಕಾಂಗ್ರೆಸ್ಸಿಗರು ಹಾಗೂ ಹೊಸ ಕಾಂಗ್ರೆಸ್ಸಿಗರು ಎಂದು ನಮ್ಮ ನಮ್ಮಲ್ಲೆ ತಾರತಮ್ಯ ಮಾಡುತ್ತಿದ್ದಾರೆ ನಮ್ಮೆಲ್ಲರಿಗೂ ತಾಯಿಯಂತಿರುವ ಕಾಂಗ್ರೆಸ್ ಭವನ ಬಿಟ್ಟು ಅವರ ಮನೆಯಲ್ಲಿ ಪಕ್ಷದ ಸಭೆ, ಸಮಾರಂಭ ನಡೆಸುವವರು ಕಾಂಗ್ರೆಸ್ಸಿಗರೇ ಅಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್ ಮುಖಂಡ ಶಶಿಧರ್ ಮುನಿಯಪ್ಪ ಹಾಗೂ ಪುಟ್ಟು ಆಂಜಿನಪ್ಪ ಅವರ ಹೆಸರು ಪ್ರಸ್ತಾಪಿಸದೆ ಟಾಂಗ್ ಅವರು ನೀಡಿದರು.
ಶಶಿ ಹುಲಿಕುಂಟೆಮಠ್ ಅವರು ವಿದ್ಯಾರ್ಥಿ ದೆಸೆಯಲ್ಲಿ ಇದ್ದಾಗಿನಿಂದಲೂ ಸಂಘಟನೆಯಲ್ಲಿ ತೊಡಗಿಕೊಂಡಿದ್ದು ಪಕ್ಷದ ಮುಖಂಡರು ,ಕಾರ್ಯಕರ್ತರು ಅವರ ಪರ ಮತಯಾಚಿಸಬೇಕು ಹಾಗು ಪದವಿಧರ ಮತದಾರ ಬಂಧುಗಳು ಮತ ಚಲಾಯಿಸುವಂತೆ ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್ ಮಾತನಾಡಿ,
ಕಾಂಗ್ರೆಸ್ ಸರಕಾರದ ಸಾಧನೆಗಳನ್ನು ಪದವೀಧರರು ಮತ್ತು ಶಿಕ್ಷಕರಿಗೆ ಮನವೊಲಿಸಿ ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟಿಮಠ್ ಅವರ ಪರ ಮತಯಾಚಿಸಬೇಕೆಂದು ಮನವಿ ಮಾಡಿದರು.
ಸರಕಾರಿ ನೌಕರರು ಹಾಗೂ ಶಿಕ್ಷಕರಿಗೆ ನಿವೃತ್ತಿ ನಂತರ ನೀಡುವ ಹೊಸ ಪಿಂಚಣಿ ಬದಲಿಗೆ ಈ ಹಿಂದೆ ಇದ್ದ ಹಳೆಯ ಮಾದರಿ ಪಿಂಚಣಿ ಯೋಜನೆಯನ್ನು ಮರು ಜಾರಿ ಮಾಡಲು ನಮ್ಮ ಸರಕಾರ ಬದ್ಧವಾಗಿದೆಈ ಕುರಿತು ಗಂಭೀರ ಚಿಂತನೆ ನಡೆದಿದೆ ಎಂದು ತಿಳಿಸಿದರು.
ಅಭ್ಯರ್ಥಿ ಶಶಿಹುಲಿಕುಂಟೆಮಠ್ ಮಾತನಾಡಿ, ಈ ಮೊದಲು ಜೆಡಿಎಸ್ ಮತ್ತು ಬಿಜೆಪಿ ಮೂಲಕ ವಿಧಾನ ಪರಿಷತ್ ಆಯ್ಕೆ ಆದವರು ಮತ್ತೆ ಈ ಕ್ಷೇತ್ರಗಳಿಗೆ ಕಾಲಿಟ್ಟಿಲ್ಲ ವಿಧಾನ ಪರಿಷತ್ ಕಲಾಪದಲ್ಲಿ ಶಿಕ್ಷಕರು, ಪದವೀಧರರ ಸಮಸ್ಯೆ ಕುರಿತು ಒಂದೇ ಒಂದು ಪ್ರಶ್ನೆಯನ್ನು ಕೇಳುವ ಕೆಲಸವನ್ನು ಕೂಡ ಮಾಡಿಲ್ಲ ಅಂತಹವರನ್ನು ಗೆಲ್ಲಿಸಿ ಕಳುಹಿಸುವುದಾದರೂ ಏನು ಪ್ರಯೋಜನ ಎಂದರು.
ಕೇವಲ ಚುನಾವಣೆ ಸಮಯದಲ್ಲಿ ನಾನು ಚುನಾವಣೆ ಕಣಕ್ಕೆ ಇಳಿದಿಲ್ಲ ಬದಲಿಗೆ 22 ವರ್ಷಗಳಿಂದಲೂ ಹೋರಾಟದ ಬದುಕು ಅನುಭವದೊಂದಿಗೆ ಚುನಾವಣೆಗೆ ಸ್ಪರ್ಧಿಸಿದ್ದೇನೆ ನನಗೆ ಮೊದಲ ಪ್ರಾಶಸ್ತ್ರದ ಮತ ನೀಡಿ ಗೆಲ್ಲಿಸಿ ವಿಧಾನ ಪರಿಷತ್ಗೆ ಕಳುಹಿಸುವ ಮೂಲಕ ಅತಿ ಕಿರಿಯ ಸದಸ್ಯನನ್ನು ಗೆಲ್ಲಿಸಿದ ಕೀರ್ತಿಗೆ ನೀವು ಪಾತ್ರರಾಗಬೇಕು ಎಂದು ಮನವಿ ಮಾಡಿದರು.
ಗೆದ್ದ ಮೇಲೆ ರೆಸಾರ್ಟ್ ರಾಜಕೀಯ ಮಾಡುವವರನ್ನು ಬಿಟ್ಟು ನಿಮ್ಮೊಂದಿಗೆ ಸೇರಿ ಕೆಲಸ ಮಾಡುವ ನನಗೆ ಒಮ್ಮೆ ಅವಕಾಶ ಕೊಡಿ ಎಂದು ಕೋರಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೇಶವರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸಹನಾ ರಾಜೀವ್ ಗೌಡ, ಕೃಷ್ಣಾರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಾಲ್ಫಿನ್ ನಾಗರಾಜ್, ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ಗುಡಿಯಪ್ಪ , ಕಾವೇರಿ ಹ್ಯಾಂಡ್ ಲೂಮ್ಸ್ ಅಧ್ಯಕ್ಷ ಬಿ.ಜಿ.ಗಣೇಶ್, ಕೆಪಿಸಿಸಿ ಸದಸ್ಯ ಗುಡಿಹಳ್ಳಿ ನಾರಾಯಣಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷ ಅಪ್ಸರ್ ಪಾಷ, ವೆಂಕಟೇಶ್ ಮತ್ತಿತರರು ಹಾಜರಿದ್ದರು.











