ವಿಜಯ ದರ್ಪಣ ನ್ಯೂಸ್……
ಜಿ. ನಾಗರಾಜ್ ಅಭಿಮಾನಿಗಳ ಬಳಗದಿಂದ ಎರಡನೇ ವರ್ಷದ ಕ್ರಿಕೆಟ್ ಟೂರ್ನಮೆಂಟ್ ಆಯೋಜನೆ
ಯುವಕರಲ್ಲಿ ಕ್ರೀಡಾಸ್ಫೂರ್ತಿ, ಸ್ನೇಹ ಮತ್ತು ಒಗ್ಗಟ್ಟು ಬೆಳೆಸಲು ಕ್ರೀಡಾಕೂಟಗಳು ಸಹಕಾರಿ: ಎಲ್.ಎನ್. ಮಂಜುನಾಥ್

ತಾವರೆಕೆರೆ : ಯುವಕರಲ್ಲಿ ಕ್ರೀಡಾಸಕ್ತಿಯನ್ನು ಬೆಳೆಸುವ ಜತೆಗೆ ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳನ್ನು ಯುವಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಹೊಸಕೋಟೆ ತಾಲೂಕಿನ ಮುಗಬಾಳ ಗ್ರಾಮದಲ್ಲಿ ಸಮಾಜಸೇವಕ ಜಿ. ನಾಗರಾಜ್ ಅವರ ಅಭಿಮಾನಿಗಳ ಬಳಗದ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಹೆಸರಿನಲ್ಲಿ ಎರಡನೇ ವರ್ಷದ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿತ್ತು.
ಟೂರ್ನಮೆಂಟ್‌ನಲ್ಲಿ ಹೊಸಕೋಟೆ ತಾಲೂಕಿನ ವ್ಯಾಪ್ತಿಗೆ ಬರುವ ಸುಮಾರು ನಾಲ್ಕು ಹೋಬಳಿಗಳಿಂದ 16 ತಂಡಗಳು ಭಾಗವಹಿಸಿದ್ದು, ಕ್ರೀಡಾಕೂಟವು ಸ್ಥಳೀಯ ಕ್ರೀಡಾಪ್ರೇಮಿಗಳ ಗಮನ ಸೆಳೆಯಿತು. ಮುಗಬಾಳ ಹಾಗೂ ಚಿಕ್ಕನಲ್ಲಾಲ ಗ್ರಾಮದ ಮೈದಾನಗಳಲ್ಲಿ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸುವ ಮೂಲಕ ಗ್ರಾಮೀಣ ಪ್ರದೇಶದ ಯುವಕರಿಗೆ ತಮ್ಮ ಕ್ರೀಡಾ ಪ್ರತಿಭೆ ಪ್ರದರ್ಶಿಸಲು ಅವಕಾಶ ಕಲ್ಪಿಸಲಾಯಿತು.
ಸಮಾಜಸೇವಕ ಹಾಗೂ ಉದ್ಯಮಿ ಎಲ್.ಎನ್. ಮಂಜುನಾಥ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಸಮಾಜಸೇವಕ ಜಿ. ನಾಗರಾಜ್ ಹಾಗೂ ಅವರ ಅಭಿಮಾನಿಗಳ ಬಳಗದವರು ಹೊಸಕೋಟೆ ತಾಲೂಕು, ಮಾಲೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ಹಾಗೂ ಡಾ. ಬಿ.ಆರ್. ಅಂಬೇಡ್ಕರ್, ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ , ಬಸವಣ್ಣ ಹೀಗೆ ದೇಶ ಕಂಡ ಮಹಾನ್ ವ್ಯಕ್ತಿಗಳ ಪುತ್ತಳಿಗಳು ಅನಾವರಣ ಮಾಡಿದ್ದಾರೆ ಹಾಗೂ ಇನ್ನೂ ಮಾಡುತ್ತಿದ್ದಾರೆ ಜೊತೆಗೆ ಯುವಕರಲ್ಲಿ ಕ್ರೀಡಾ ಸ್ಪೂರ್ತಿ ಹೆಚ್ಚಿಸಲು ಇಂತಹ ಟೂರ್ನಮೆಂಟ್ ಗಳನ್ನು ಸಹ ಉತ್ತಮ ರೀತಿಯಲ್ಲಿ ನಾಗರಾಜಣ್ಣನವರು ಆಯೋಜನೆ ಮಾಡುತ್ತಿದ್ದಾರೆ ಎಂದರು.
ಇಂದಿನ ಯುವಜನತೆ ಕ್ರೀಡೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಕ್ರಿಕೆಟ್‌ನಂತಹ ಕ್ರೀಡೆಗಳು ಯುವಕರಲ್ಲಿ ಶಿಸ್ತು, ಆತ್ಮವಿಶ್ವಾಸ, ತಂಡದ ಮನೋಭಾವ ಹಾಗೂ ಪರಸ್ಪರ ಸಹಕಾರವನ್ನು ಬೆಳೆಸುತ್ತವೆ. ವಿವಿಧ ಗ್ರಾಮಗಳ ಯುವಕರು ಒಂದೇ ವೇದಿಕೆಯಲ್ಲಿ ಸೇರಿ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಸ್ನೇಹ, ಸೌಹಾರ್ದತೆ ಮತ್ತು ಬಾಂಧವ್ಯ ಮತ್ತಷ್ಟು ಗಟ್ಟಿಯಾಗುತ್ತದೆ ಎಂದು ತಿಳಿಸಿದರು.
ಭಗತ್ ಸಿಂಗ್ ಅವರ ಹೆಸರಿನಲ್ಲಿ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಿರುವುದು ವಿಶೇಷವಾಗಿದ್ದು, ಕ್ರೀಡೆಯ ಮೂಲಕ ಯುವಕರನ್ನು ಒಗ್ಗೂಡಿಸುವ ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುವ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇಂತಹ ಉತ್ತಮ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಎಲ್ಲಾ ಕ್ರೀಡಾಪ್ರೇಮಿಗಳು ಹಾಗೂ ಜಿ. ನಾಗರಾಜ್ ಅವರ ಅಭಿಮಾನಿಗಳ ಬಳಗದ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮುಗಬಾಳ ಗ್ರಾಮದ ಗ್ರಾಮಸ್ಥರು, ಕ್ರೀಡಾಪ್ರೇಮಿಗಳು ಹಾಗೂ ಜಿ. ನಾಗರಾಜ್ ಅವರ ಅಭಿಮಾನಿಗಳ ಬಳಗದ ಸದಸ್ಯರು ಉಪಸ್ಥಿತರಿದ್ದರು.









