ವಿಜಯ ದರ್ಪಣ ನ್ಯೂಸ್…….
ವಕೀಲರ ಮೇಲಿನ ಹಲ್ಲೆ ಖಂಡಿಸಿ ಹೊಸಕೋಟೆ ವಕೀಲರ ಸಂಘದಿಂದ ಪ್ರತಿಭಟನೆ

ತಾವರೆಕೆರೆ : ಗೌರಿಬಿದನೂರಿನ ವಕೀಲ ಸಣ್ಣಪ್ಪ ವೆಂಕಟರಮಣಪ್ಪ ಅವರ ಮೇಲೆ ನಡೆದ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ, ಹೊಸಕೋಟೆ ವಕೀಲರ ಸಂಘದ ವತಿಯಿಂದ ಇಂದು ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಹೊಸಕೋಟೆ ತಾಲೂಕು ವಕೀಲರ ಸಂಘದ ಅಧ್ಯಕ್ಷ ರಾಧಾಕೃಷ್ಣರವರು ಮಾತನಾಡಿ ವಕೀಲರ ಸಂಘದ ಪ್ರತಿನಿಧಿಗಳು, ಸಮಾಜದಲ್ಲಿ ನಡೆಯುವ ಅನ್ಯಾಯ, ದೌರ್ಜನ್ಯ ಹಾಗೂ ಅಕ್ರಮಗಳ ವಿರುದ್ಧ ಹೋರಾಡಿ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವ ಜವಾಬ್ದಾರಿ ವಕೀಲರ ಮೇಲಿದೆ. ಆದರೆ, ಸಮಾಜಕ್ಕೆ ನ್ಯಾಯ ಒದಗಿಸುವ ವಕೀಲರ ಮೇಲೆಯೇ ದೌರ್ಜನ್ಯ ನಡೆಯುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಕೀಲ ಸಣ್ಣಪ್ಪ ವೆಂಕಟರಮಣಪ್ಪ ಅವರ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಕೂಡಲೇ ಬಂಧಿಸಿ, ಕಾನೂನುಬದ್ಧವಾಗಿ ಕಠಿಣ ಶಿಕ್ಷೆ ವಿಧಿಸುವ ಮೂಲಕ ಸಮಾಜಕ್ಕೆ ಸೂಕ್ತ ಸಂದೇಶ ನೀಡಬೇಕು ಎಂದು ಒತ್ತಾಯಿಸಿದರು.
ವಕೀಲರ ಮೇಲೆ ಯಾವುದೇ ರೀತಿಯ ಹಲ್ಲೆ ಅಥವಾ ದೌರ್ಜನ್ಯ ನಡೆದರೂ ಅದನ್ನು ಸಹಿಸುವುದಿಲ್ಲ. ವಕೀಲರನ್ನು ಗೌರವಿಸುವುದು ನ್ಯಾಯಾಲಯ ಮತ್ತು ನ್ಯಾಯ ವ್ಯವಸ್ಥೆಯನ್ನು ಗೌರವಿಸಿದಂತೆ. ಈ ಹೋರಾಟವನ್ನು ಇಲ್ಲಿಗೆ ನಿಲ್ಲಿಸುವುದಿಲ್ಲ. ನ್ಯಾಯ ದೊರೆಯುವವರೆಗೂ ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಅಲ್ಲದೆ, ಹಲ್ಲೆಗೊಳಗಾದ ವಕೀಲರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ಆಗ್ರಹಿಸಿದರು.
ಹಿರಿಯ ವಕೀಲ ರವೀಂದ್ರ ಮಾತನಾಡಿ, ವಕೀಲರು ಸಮಾಜದಲ್ಲಿ ನ್ಯಾಯ ಒದಗಿಸುವ ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಕಾನೂನು ಸೇವೆಗಳ ಮೂಲಕ ಬಡವರು ಹಾಗೂ ಸಾಮಾನ್ಯ ಜನರಿಗೆ ನ್ಯಾಯ ದೊರಕಿಸಿಕೊಡುವ ಕೆಲಸವನ್ನು ವಕೀಲರು ಮಾಡುತ್ತಿದ್ದಾರೆ. ಇಂತಹ ವಕೀಲರ ಮೇಲೆಯೇ ಹಲ್ಲೆ ಮತ್ತು ದೌರ್ಜನ್ಯ ನಡೆಯುತ್ತಿರುವುದು ಅತ್ಯಂತ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ವಕೀಲರ ಸಂಘದ ಅಧ್ಯಕ್ಷ ರಮೇಶ್ ಮಾತನಾಡಿ ವಕೀಲರು ತಮ್ಮ ಬಳಿ ಬರುವ ಕಕ್ಷಿದಾರರಿಗೆ ಕಾನೂನಿನ ಚೌಕಟ್ಟಿನಲ್ಲಿ ಸಲಹೆ ಮತ್ತು ಮಾರ್ಗದರ್ಶನ ನೀಡುವುದು ಅವರ ಕರ್ತವ್ಯವಾಗಿದೆ. ಆದರೆ, ಕಾನೂನು ಸಲಹೆ ನೀಡಿದ ಕಾರಣಕ್ಕೆ ವಕೀಲರ ಮೇಲೆ ಹಲ್ಲೆ ನಡೆಸುವುದು ಸರಿಯಲ್ಲ. ವಕೀಲರಿಗೆ ಸೂಕ್ತ ರಕ್ಷಣೆ ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಈಗಾಗಲೇ ರಾಜ್ಯಾದ್ಯಂತ ವಕೀಲರ ಸುರಕ್ಷತೆಗಾಗಿ ಪ್ರತ್ಯೇಕ ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ತರಬೇಕೆಂದು ಹಲವು ಹೋರಾಟಗಳನ್ನು ನಡೆಸಲಾಗಿದೆ. ಬೆಳಗಾವಿಯಲ್ಲಿಯೂ ಸಾವಿರಾರು ವಕೀಲರು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಆದರೂ ವಕೀಲರಿಗೆ ಸೂಕ್ತ ರಕ್ಷಣೆ ದೊರೆಯದಿರುವುದು ಬೇಸರದ ಸಂಗತಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಹೊಸಕೋಟೆ ತಾಲೂಕು ವಕೀಲರ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಹಿರಿಯ, ಕಿರಿಯ ವಕೀಲರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.











