ವಿಜಯ ದರ್ಪಣ ನ್ಯೂಸ್……
ವಿಶೇಷ ಲೇಖನ
ಎಂಎಂ ದಾವೂದ್ ಕುಶಾಲನಗರ
ಗ್ಯಾರಂಟಿಗಳ ಬೆಳಕಿನಲ್ಲಿ ಮರೆಮಾಚಿದ ಬೆಲೆ ಏರಿಕೆಯ ಕರಾಳ ನೆರಳು

ಸರ್ಕಾರದ ಸಾಧನೆಗೆ ಚಪ್ಪಾಳೆ ತಟ್ಟುವ ಮುನ್ನ ಜನರ ಜೇಬಿನ ಲೆಕ್ಕವನ್ನೂ ಒಮ್ಮೆ ನೋಡಿ… 200 ಅಂಶಗಳ ದರ ಏರಿಕೆಯ ಪಟ್ಟಿ ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸುವವರು ಯಾರು?
ಒಂದು ಕೈಯಲ್ಲಿ ಗ್ಯಾರಂಟಿ ಮತ್ತೊಂದು ಕೈಯಲ್ಲಿ ತೆರಿಗೆ ಮತ್ತು ಶುಲ್ಕಗಳ ಲೆಕ್ಕ ಜನಸಾಮಾನ್ಯರ ಬದುಕು ಮಾತ್ರ ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದೆಯೇ
ಪ್ರಜಾಪ್ರಭುತ್ವದಲ್ಲಿ ಚುನಾವಣೆ ಗೆಲ್ಲುವುದು ಒಂದು ಸಾಧನೆಯಾಗಿರಬಹುದು ಅಧಿಕಾರ ಹಿಡಿಯುವುದು ಒಂದು ರಾಜಕೀಯ ಯಶಸ್ಸಾಗಿರಬಹುದು ಜನರಿಗೆ ಭರವಸೆ ನೀಡುವುದು ರಾಜಕೀಯದ ಭಾಗವಾಗಿರಬಹುದು. ಆದರೆ ಜನರ ಬದುಕನ್ನು ಸುಧಾರಿಸುವುದು ಮಾತ್ರ ಆಡಳಿತದ ನಿಜವಾದ ಪರೀಕ್ಷೆ. ಈ ಪರೀಕ್ಷೆಯಲ್ಲಿ ಸರ್ಕಾರಗಳನ್ನು ಅಳೆಯಬೇಕೇ ಹೊರತು, ಜಾಹೀರಾತುಗಳಲ್ಲಿನ ಸಾಧನೆಗಳ ಮೂಲಕವಲ್ಲ.
ಕರ್ನಾಟಕದ ರಾಜಕೀಯದಲ್ಲಿ ಇಂದು ಗ್ಯಾರಂಟಿ ಯೋಜನೆಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ ಸರ್ಕಾರ ತನ್ನ ಯೋಜನೆಗಳನ್ನು ಸಮರ್ಥಿಸಿಕೊಳ್ಳುತ್ತಿದೆ ವಿರೋಧ ಪಕ್ಷಗಳು ಟೀಕೆ ಮಾಡುತ್ತಿವೆ ರಾಜಕೀಯ ವೇದಿಕೆಗಳಲ್ಲಿ ಭಾಷಣಗಳ ಸುರಿಮಳೆಯಾಗುತ್ತಿದೆ ಈ ಗದ್ದಲದ ನಡುವೆ ಒಂದು ಪ್ರಶ್ನೆ ಮಾತ್ರ ಗಂಭೀರವಾಗಿ ಕೇಳಬೇಕಾಗಿದೆ.
ಸೌಲಭ್ಯ ಪಡೆದ ಜನರ ಕೈಯಲ್ಲಿ ಕೊನೆಯಲ್ಲಿ ಎಷ್ಟು ಹಣ ಉಳಿಯುತ್ತಿದೆ?
ಇದು ಸಾಮಾನ್ಯ ಪ್ರಶ್ನೆಯಲ್ಲ ಪ್ರತಿಯೊಂದು ಕುಟುಂಬದ ಅಡುಗೆಮನೆಯಿಂದ ಆರಂಭವಾಗಿ ರೈತನ ಹೊಲ ಕಾರ್ಮಿಕನ ದುಡಿಮೆ ವ್ಯಾಪಾರಿಯ ಅಂಗಡಿ ಉದ್ಯೋಗಿಯ ಸಂಬಳ ಮತ್ತು ಮಧ್ಯಮ ವರ್ಗದ ಮನೆಯ ಮಾಸಿಕ ಬಜೆಟ್ವರೆಗೆ ತಲುಪುವ ಪ್ರಶ್ನೆ.
2023ರಿಂದ 2026ರವರೆಗಿನ ಅವಧಿಗೆ ಸಂಬಂಧಿಸಿದಂತೆ ಸಾರ್ವಜನಿಕ ಚರ್ಚೆಗೆ ಬಂದಿರುವ 200 ಅಂಶಗಳ ದರ ಮತ್ತು ಶುಲ್ಕಗಳ ಪಟ್ಟಿಯನ್ನು ಒಮ್ಮೆ ಗಮನಿಸಿ ಇದು ಕೇವಲ ಸಂಖ್ಯೆಗಳ ಸರಮಾಲೆಯಲ್ಲ ಜನರ ದೈನಂದಿನ ಬದುಕಿಗೆ ಸಂಬಂಧಿಸಿದ ಹಲವು ಆರ್ಥಿಕ ವಿಚಾರಗಳನ್ನು ಮುಂದಿಡುವ ಪಟ್ಟಿಯಾಗಿದೆ.
ನಂದಿನಿ ಹಾಲು ಮೊಸರು ತುಪ್ಪ ಬೆಣ್ಣೆಯ ದರದಿಂದ ಆರಂಭವಾಗುವ ಚರ್ಚೆ ಪೆಟ್ರೋಲ್ ಡೀಸೆಲ್ ವಿದ್ಯುತ್ ನೀರು ಬಸ್ ಪ್ರಯಾಣ ಮೆಟ್ರೋ ಮತ್ತು ಆಟೋ ದರಗಳವರೆಗೆ ಸಾಗುತ್ತದೆ. ಮನೆ ಕಟ್ಟುವವನಿಗೆ ಆಸ್ತಿ ನೋಂದಣಿಇ-ಖಾತಾ ಕಟ್ಟಡ ಪರವಾನಗಿ ಸರ್ವೆ ಶುಲ್ಕಗಳ ಪ್ರಶ್ನೆ ವಾಹನ ಹೊಂದಿರುವವನಿಗೆ ನೋಂದಣಿ ಫಿಟ್ನೆಸ್ ಹೊಗೆ ತಪಾಸಣೆ ಮತ್ತು ಪರವಾನಗಿ ಶುಲ್ಕಗಳ ಹೊರೆ ಆಸ್ಪತ್ರೆ ಶಿಕ್ಷಣ ಸರ್ಕಾರಿ ಉದ್ಯೋಗದ ಅರ್ಜಿ ಪಂಚಾಯಿತಿ ಮತ್ತು ನಗರಸಭೆಯ ಸೇವೆಗಳವರೆಗೂ ಈ ಪಟ್ಟಿಯಲ್ಲಿ ಹಲವು ವಿಚಾರಗಳಿವೆ
ಇಲ್ಲಿ ಒಂದನ್ನು ಮರೆಯಬಾರದು ಪಟ್ಟಿಯಲ್ಲಿರುವ 200 ಅಂಶಗಳೂ ಒಂದೇ ಸ್ವರೂಪದ ಜಾರಿಯಾದ ದರ ಏರಿಕೆಗಳಲ್ಲ ಕೆಲವು ಪರಿಷ್ಕರಣೆಗಳು ಕೆಲವು ಶುಲ್ಕಗಳು ಕೆಲವು ಪ್ರಸ್ತಾವನೆಗಳು ಹಾಗೂ ಕೆಲವು ಮಾಹಿತಿಗಳಿಗೆ ಅಧಿಕೃತ ದೃಢೀಕರಣ ಅಗತ್ಯವಿದೆ ಈ ಎಲ್ಲ ಅಂಶಗಳ ಹಿಂದಿರುವ ಸಾರ್ವಜನಿಕ ಪ್ರಶ್ನೆಯನ್ನು ನಿರ್ಲಕ್ಷಿಸುವಂತಿಲ್ಲ.
ಗ್ಯಾರಂಟಿ ಕೊಟ್ಟಿದ್ದೇವೆ ಎನ್ನುವುದೇ ಆಡಳಿತದ ಪೂರ್ಣ ಸಾಧನೆಯೇ?
ಒಂದು ಕುಟುಂಬಕ್ಕೆ ಉಚಿತ ವಿದ್ಯುತ್ ಸೌಲಭ್ಯ ದೊರೆಯಬಹುದು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಅವಕಾಶ ಸಿಗಬಹುದು ಆರ್ಥಿಕ ನೆರವಿನ ಯೋಜನೆಗಳಿಂದ ಕೆಲವು ಕುಟುಂಬಗಳಿಗೆ ಅನುಕೂಲವಾಗಬಹುದು ಇವುಗಳ ಪ್ರಯೋಜನವನ್ನು ನಿರಾಕರಿಸುವ ಅಗತ್ಯವಿಲ್ಲ
ಅದೇ ಕುಟುಂಬ ಹಾಲು ಖರೀದಿಸುವಾಗ ಅಡುಗೆ ಅನಿಲ ಬಳಸುವಾಗ ವಾಹನಕ್ಕೆ ಇಂಧನ ತುಂಬಿಸುವಾಗ ಮಕ್ಕಳ ಶಿಕ್ಷಣಕ್ಕೆ ಹಣ ಪಾವತಿಸುವಾಗ ಮನೆ ಕಟ್ಟುವಾಗ ಅಥವಾ ಆಸ್ಪತ್ರೆಯ ಬಾಗಿಲು ತಟ್ಟುವಾಗ ಎದುರಿಸುವ ವೆಚ್ಚವನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಬೇಕಲ್ಲವೇ?*
*ಒಂದು ಕಡೆ ಸೌಲಭ್ಯ ಸಿಕ್ಕಿತು ಎಂದು ಇನ್ನೊಂದು ಕಡೆ ಬೀಳುವ ಆರ್ಥಿಕ ಹೊರೆಯ ಬಗ್ಗೆ ಮಾತನಾಡಬಾರದೆಂಬ ನಿಯಮವೇನಿದೆ?
ರಾಜಕೀಯದಲ್ಲಿ ಲಾಭದ ಲೆಕ್ಕ ಮಾತ್ರವಲ್ಲ ಜನರ ಮೇಲಿನ ಹೊರೆಯ ಲೆಕ್ಕವೂ ಇರಬೇಕು ಸರ್ಕಾರ ತನ್ನ ಸಾಧನೆಗಳ ಶ್ವೇತಪತ್ರ ಹೊರಡಿಸುವಂತೆ ಜನರ ಮೇಲೆ ವಿಧಿಸಿರುವ ತೆರಿಗೆ ಮತ್ತು ಶುಲ್ಕಗಳ ಸಮಗ್ರ ವಿವರಗಳನ್ನೂ ಸಾರ್ವಜನಿಕರ ಮುಂದಿಡಲಿ
ಜನರ ಜೇಬು ರಾಜಕೀಯ ಪ್ರಯೋಗಗಳ ಪ್ರಯೋಗಾಲಯವಾಗಬಾರದು
ಸರ್ಕಾರಕ್ಕೆ ಆದಾಯ ಬೇಕು ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬೇಕು ಸಾರ್ವಜನಿಕ ಸೇವೆಗಳನ್ನು ನಿರ್ವಹಿಸಲು ಸಂಪನ್ಮೂಲ ಬೇಕು ಇದನ್ನು ಯಾರೂ ಅಲ್ಲಗಳೆಯುವುದಿಲ್ಲ ಆ ಸಂಪನ್ಮೂಲ ಸಂಗ್ರಹಿಸುವಾಗ ಜನರ ಆರ್ಥಿಕ ಸಾಮರ್ಥ್ಯ ಜೀವನ ವೆಚ್ಚ ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನು ಪರಿಗಣಿಸುವುದು ಅಷ್ಟೇ ಮುಖ್ಯ
ಸರ್ಕಾರಗಳು ಬಜೆಟ್ನಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಅಂಕಿ-ಅಂಶಗಳನ್ನು ಮಂಡಿಸಬಹುದು ತಿಂಗಳ ಸಂಬಳ ಮುಗಿಯುವ ಮೊದಲೇ ಮನೆಯ ಖರ್ಚಿನ ಲೆಕ್ಕ ಮುಗಿಸುವ ಕುಟುಂಬದ ಸಂಕಷ್ಟವನ್ನು ಯಾವ ಬಜೆಟ್ ಅಂಕಿ ವಿವರಿಸುತ್ತದೆ?
ರೈತ ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಸಿಗದಿದ್ದರೆ ಕಾರ್ಮಿಕನಿಗೆ ದುಡಿಮೆಗೆ ತಕ್ಕ ಆದಾಯ ದೊರೆಯದಿದ್ದರೆ ಸಣ್ಣ ವ್ಯಾಪಾರಿಗೆ ವ್ಯಾಪಾರ ನಡೆಸುವುದು ಕಷ್ಟವಾದರೆ ಮಧ್ಯಮ ವರ್ಗದ ಕುಟುಂಬಕ್ಕೆ ಉಳಿತಾಯವೇ ಸಾಧ್ಯವಾಗದಿದ್ದರೆ ಅಭಿವೃದ್ಧಿಯ ಅಂಕಿ-ಅಂಶಗಳ ಅರ್ಥವೇನು?
ಅಭಿವೃದ್ಧಿ ಎಂದರೆ ಸರ್ಕಾರದ ಖಜಾನೆ ತುಂಬುವುದಷ್ಟೇ ಅಲ್ಲ ಜನರ ಬದುಕಿನಲ್ಲಿ ನೆಮ್ಮದಿ ತುಂಬುವುದೂ ಹೌದು
ಕಾಂಗ್ರೆಸ್ ಇರಲಿ ಬಿಜೆಪಿ ಇರಲಿ ಪ್ರಶ್ನೆ ಮಾತ್ರ ಒಂದೇ
ಇಲ್ಲಿ ಯಾರನ್ನೂ ರಾಜಕೀಯವಾಗಿ ಸಮರ್ಥಿಸಿಕೊಳ್ಳುವ ಅಗತ್ಯವಿಲ್ಲ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೂ ಇದೇ ಪ್ರಶ್ನೆ ಕೇಳಬೇಕು ಬಿಜೆಪಿ ಅಧಿಕಾರಕ್ಕೆ ಬಂದಾಗಲೂ ಇದೇ ಪ್ರಶ್ನೆ ಕೇಳಬೇಕು ನಾಳೆ ಬೇರೆ ಪಕ್ಷ ಆಡಳಿತ ನಡೆಸಿದರೂ ಇದೇ ಮಾನದಂಡ ಅನ್ವಯವಾಗಬೇಕು.
ಅಧಿಕಾರದಲ್ಲಿರುವವರು ಜನರಿಗೆ ಉತ್ತರ ನೀಡಬೇಕು ವಿರೋಧ ಪಕ್ಷದಲ್ಲಿರುವವರು ದಾಖಲೆಗಳೊಂದಿಗೆ ಪ್ರಶ್ನಿಸಬೇಕು ರಾಜಕೀಯ ನಾಯಕರು ತಮ್ಮ ಪಕ್ಷದ ಪರವಾಗಿ ಮಾತನಾಡುವ ಮೊದಲು ಜನರ ಪರವಾಗಿ ಮಾತನಾಡುವ ಜವಾಬ್ದಾರಿಯನ್ನೂ ಅರಿಯಬೇಕು
ಪಕ್ಷದ ಧ್ವಜ ಹಿಡಿದಿರುವ ಕಾರ್ಯಕರ್ತನಿಗೂ ಒಂದು ಕುಟುಂಬವಿದೆ ರಾಜಕೀಯ ಭಾಷಣ ಮಾಡುವ ನಾಯಕನಿಗೂ ಮನೆಯ ಖರ್ಚಿದೆ ಸರ್ಕಾರವನ್ನ್ನು ಟೀಕಿಸುವವನಿಗೂ ವಿದ್ಯುತ್ ಬಿಲ್ ಬರುತ್ತದೆ ಸರ್ಕಾರವನ್ನು ಸಮರ್ಥಿಸುವವನಿಗೂ ಪೆಟ್ರೋಲ್ ತುಂಬಿಸಲೇಬೇಕು
ಹಾಗಿರುವಾಗ ಬೆಲೆ ಏರಿಕೆ ಎಂಬುದು ಯಾವ ಪಕ್ಷದ ಕಾರ್ಯಕರ್ತನನ್ನೂ ಬಿಟ್ಟು ಹೋಗುವುದಿಲ್ಲ ಇದು ಪಕ್ಷದ ಸಮಸ್ಯೆಯಲ್ಲ ಜನಜೀವನದ ಸಮಸ್ಯೆ.
ಕೊಡಗಿನ ಜನರ ಬದುಕಿನ ಲೆಕ್ಕವನ್ನೂ ಕೇಳಬೇಕಿದೆ
ಕೊಡಗು ಜಿಲ್ಲೆಯ ಆರ್ಥಿಕತೆ ಕೃಷಿ ಕಾಫಿ ಪ್ರವಾಸೋದ್ಯಮ ಸಣ್ಣ ವ್ಯಾಪಾರ ಮತ್ತು ಕಾರ್ಮಿಕರ ದುಡಿಮೆಯ ಮೇಲೆ ನಿಂತಿದೆ ಇಂಧನದ ಬೆಲೆ ವಿದ್ಯುತ್ ವೆಚ್ಚ ಕಟ್ಟಡ ಸಾಮಗ್ರಿಗಳ ದರ ಸಾರಿಗೆ ವೆಚ್ಚ ಮತ್ತು ವಿವಿಧ ಪರವಾನಗಿ ಶುಲ್ಕಗಳ ಬದಲಾವಣೆಗಳು ಜಿಲ್ಲೆಯ ಆರ್ಥಿಕ ಚಟುವಟಿಕೆಗಳ ಮೇಲೂ ಪರಿಣಾಮ ಬೀರಬಹುದು
ಕಾಫಿ ಬೆಳೆಗಾರನಿಗೆ ಉತ್ಪಾದನಾ ವೆಚ್ಚ ಕಡಿಮೆಯಾಗಬೇಕಿದೆ ಸಣ್ಣ ವ್ಯಾಪಾರಿಗೆ ವ್ಯಾಪಾರ ನಡೆಸಲು ಅನುಕೂಲಕರ ವಾತಾವರಣ ಬೇಕಿದೆ ಪ್ರವಾಸೋದ್ಯಮ ಉದ್ಯಮಿಗೆ ಅನಗತ್ಯ ಶುಲ್ಕಗಳ ಹೊರೆ ಕಡಿಮೆಯಾಗಬೇಕಿದೆ ಸಾಮಾನ್ಯ ಕುಟುಂಬಕ್ಕೆ ಕೈಗೆಟುಕುವ ದರದಲ್ಲಿ ಮೂಲಭೂತ ಸೌಲಭ್ಯಗಳು ದೊರೆಯಬೇಕಿದೆ
ಕೊಡಗು ಕೇವಲ ಪ್ರವಾಸಿಗರಿಗಾಗಿ ಇರುವ ಜಿಲ್ಲೆಯಲ್ಲ ಇಲ್ಲಿ ಬದುಕುತ್ತಿರುವ ಜನರಿಗೂ ಸಮಾನ ಆದ್ಯತೆ ಬೇಕು ಪ್ರವಾಸೋದ್ಯಮದ ಆದಾಯದ ಲೆಕ್ಕದ ಜೊತೆಗೆ ಸ್ಥಳೀಯ ಜನರ ಬದುಕಿನ ಲೆಕ್ಕವನ್ನೂ ಸರ್ಕಾರಗಳು ನೋಡಬೇಕು
2023ರಿಂದ ಇಲ್ಲಿಯವರೆಗೆ ವಿವಿಧ ಇಲಾಖೆಗಳ ಮೂಲಕ ಜಾರಿಗೊಳಿಸಿರುವ ತೆರಿಗೆ ಮತ್ತು ಶುಲ್ಕ ಪರಿಷ್ಕರಣೆಗಳ ಸಮಗ್ರ ವಿವರವನ್ನು ಸರ್ಕಾರ ಬಹಿರಂಗಪಡಿಸಬಹುದೇ?
ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ದೊರೆತ ಪ್ರಯೋಜನ ಮತ್ತು ಅದೇ ಅವಧಿಯಲ್ಲಿ ಕುಟುಂಬಗಳ ಮೇಲೆ ಬಿದ್ದ ಹೆಚ್ಚುವರಿ ಆರ್ಥಿಕ ಹೊರೆಯ ಕುರಿತು ಸಮಗ್ರ ಅಧ್ಯಯನ ನಡೆಸಲಾಗಿದೆಯೇ?
ತೆರಿಗೆ ಮತ್ತು ಶುಲ್ಕ ಸಂಗ್ರಹ ಹೆಚ್ಚಾದ ಪ್ರಮಾಣಕ್ಕೆ ಅನುಗುಣವಾಗಿ ಸಾರ್ವಜನಿಕ ಸೇವೆಗಳ ಗುಣಮಟ್ಟ ಸುಧಾರಿಸಿದೆಯೇ?
ಬಡವರು ರೈತರು ಕಾರ್ಮಿಕರು ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಬೆಲೆ ಏರಿಕೆಯ ಹೊರೆ ತಗ್ಗಿಸಲು ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ?
ಹೊಸ ತೆರಿಗೆ ಮತ್ತು ಶುಲ್ಕಗಳನ್ನು ವಿಧಿಸುವ ಮೊದಲು ಸಾರ್ವಜನಿಕರ ಅಭಿಪ್ರಾಯ ಪಡೆಯುವ ವ್ಯವಸ್ಥೆ ಏಕೆ ಬಲಪಡಿಸಬಾರದು?
ರಾಜಕೀಯದಲ್ಲಿ ಅಧಿಕಾರ ಬದಲಾಗುವುದು ಸಹಜ ಪಕ್ಷಗಳು ಬರುತ್ತವೆ ಹೋಗುತ್ತವೆ ನಾಯಕರು ಬದಲಾಗುತ್ತಾರೆ ಚುನಾವಣಾ ಭರವಸೆಗಳು ಬದಲಾಗುತ್ತವೆ ಜನರ ಬದುಕಿನ ಸಮಸ್ಯೆಗಳು ಮಾತ್ರ ಸರ್ಕಾರದ ಬದಲಾವಣೆಯಿಂದ ತಕ್ಷಣ ಮಾಯವಾಗುವುದಿಲ್ಲ.
ಜನರಿಗೆ ಉಚಿತ ಸೌಲಭ್ಯ ನೀಡುವುದು ಒಳ್ಳೆಯದು ಅದಕ್ಕಿಂತ ಮುಖ್ಯವಾಗಿ ಜನರು ತಮ್ಮ ಆದಾಯದಲ್ಲಿ ಗೌರವಯುತವಾಗಿ ಬದುಕುವಂತಹ ಆರ್ಥಿಕ ಪರಿಸ್ಥಿತಿ ನಿರ್ಮಿಸುವುದು ಪ್ರತಿಯೊಂದು ಸೌಲಭ್ಯವನ್ನೂ ರಾಜಕೀಯ ಸಾಧನೆಯಾಗಿ ಬಿಂಬಿಸುವ ಮೊದಲು ಅದರ ನೈಜ ಪರಿಣಾಮವನ್ನು ಅಳೆಯಬೇಕು
ಜನರು ಮತ ಹಾಕುವಾಗ ರಾಜಕೀಯ ಪಕ್ಷವನ್ನು ಆಯ್ಕೆ ಮಾಡುತ್ತಾರೆ ಪ್ರತಿದಿನ ಬದುಕುವಾಗ ತಮ್ಮ ಕುಟುಂಬದ ಭವಿಷ್ಯವನ್ನು ಉಳಿಸಿಕೊಳ್ಳಲು ಹೋರಾಡುತ್ತಾರೆ.
ಸರ್ಕಾರಗಳು ಜನರ ಹಣದಿಂದ ನಡೆಯುತ್ತವೆ ಜನರ ಮತದಿಂದ ಅಧಿಕಾರ ಪಡೆಯುತ್ತವೆ ಹಾಗಿರುವಾಗ ಜನರ ಪ್ರಶ್ನೆಗಳಿಗೆ ಉತ್ತರ ನೀಡುವುದು ಉಪಕಾರವಲ್ಲ ಅದು ಆಡಳಿತದ ಕರ್ತವ್ಯ
ಅಧಿಕಾರದಲ್ಲಿರುವವರಿಗೆ ಒಂದು ನೆನಪು: ಜನರ ಜೇಬು ಖಾಲಿಯಾದರೆ ಸರ್ಕಾರದ ಸಾಧನೆಯ ಜಾಹೀರಾತುಗಳು ಅವರ ಅಡುಗೆಮನೆಯ ಒಲೆಯನ್ನು ಉರಿಸಲಾರವು
ಜನರ ಬದುಕು ಸುಧಾರಿಸಿದಾಗ ಮಾತ್ರ ಆಡಳಿತದ ಸಾಧನೆಗೆ ನಿಜವಾದ ಅರ್ಥ ಬರುತ್ತದೆ ಉಳಿದದ್ದೆಲ್ಲ ರಾಜಕೀಯ ಲೆಕ್ಕಾಚಾರ ಮಾತ್ರ.
✍🏽 ಎಂಎಂ ದಾವೂದ್
9945375180









