ವಿಜಯ ದರ್ಪಣ ನ್ಯೂಸ್……
ಜೋಳರಾಜನ ಕಥೆ ಮೂಲಕ ಸಾಮಾಜಿಕ ಮತ್ತು ಪ್ರಾದೇಶಿಕ ಅಸಮಾನತೆಯ ವಿರುದ್ಧ ಧ್ವನಿ ಎತ್ತಿರುವುದು ಶ್ಲಾಘನೀಯ : ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನಕದಾಸರು ತಮ್ಮ ‘ರಾಮಧಾನ್ಯ ಚರಿತೆ’ ಕೃತಿಯ ಮೂಲಕ ರಾಗಿಯ ಶ್ರೇಷ್ಠತೆಯನ್ನು ಪ್ರತಿಪಾದಿಸಿದಂತೆ, ಸಂಗಮೇಶ ಬಾದವಾಡಗಿ ಅವರು ‘ಜೋಳರಾಜನ ಕಥೆ’ ಕೃತಿಯ ಮೂಲಕ ಜೋಳದ ಮಹತ್ವವನ್ನು ಹಾಗೂ ಸಮಾಜದಲ್ಲಿರುವ ಸಾಮಾಜಿಕ ಮತ್ತು ಪ್ರಾದೇಶಿಕ ಅಸಮಾನತೆಯ ಪ್ರಶ್ನೆಯನ್ನು ಪರಿಣಾಮಕಾರಿಯಾಗಿ ಮುಂದಿಟ್ಟಿದ್ದಾರೆ. ಇದು ವಿಶಿಷ್ಟವಾದ ಕೃತಿಯಾಗಿದ್ದು, ಇಂತಹ ಸಾಹಿತ್ಯಿಕ ಪ್ರಯತ್ನಗಳು ಸಮಾನತೆಯ ಸಮಾಜ ನಿರ್ಮಾಣಕ್ಕೆ ಪೂರಕವಾಗಿವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಸಂಗಮೇಶ ಬಾದವಾಡಗಿ ಅವರು ಬರೆದಿರುವ ‘ಜೋಳರಾಜನ ಕಥೆ’ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಕನಕದಾಸರ ‘ರಾಮಧಾನ್ಯ ಚರಿತೆ’ಯ ಆಶಯ ಮತ್ತು ಜೋಳರಾಜನ ಕಥೆಯ ವಿಶಿಷ್ಟತೆಯನ್ನು ವಿವರಿಸಿದರು.
‘ರಾಮಧಾನ್ಯ ಚರಿತೆ’ಯಲ್ಲಿ ಭತ್ತ ಮತ್ತು ರಾಗಿಯ ನಡುವೆ ಯಾವುದು ಶ್ರೇಷ್ಠ ಎಂಬ ಚರ್ಚೆ ನಡೆಯುತ್ತದೆ. ಭತ್ತ ಶ್ರೀಮಂತರ ಆಹಾರವಾಗಿದ್ದರೆ, ರಾಗಿ ಶ್ರಮಿಕ ಜನರ ಆಹಾರವಾಗಿತ್ತು. ಈ ಹಿನ್ನೆಲೆಯಲ್ಲಿ ರಾಗಿಯ ಶ್ರೇಷ್ಠತೆಯನ್ನು ಕನಕದಾಸರು ಪ್ರತಿಪಾದಿಸಿದ್ದರು. ಅದೇ ಕಥೆಯಲ್ಲಿ ಜೋಳವೂ ತನ್ನ ಶ್ರೇಷ್ಠತೆಯನ್ನು ಪ್ರತಿಪಾದಿಸಿ, ಸಾಮಾನ್ಯ ಜನರ ಮತ್ತು ಬಡವರ ಆಹಾರವಾಗಿರುವ ತನ್ನ ಮಹತ್ವವನ್ನು ಗುರುತಿಸಬೇಕು ಎಂದು ವಾದಿಸುತ್ತದೆ. ಈ ಹಿನ್ನೆಲೆಯಲ್ಲಿ ಜೋಳರಾಜನ ಕಥೆ ಒಂದು ವಿಶಿಷ್ಟವಾದ ಸಾಹಿತ್ಯಿಕ ಪ್ರಯತ್ನವಾಗಿದೆ ಎಂದು ಹೇಳಿದರು.
ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡ ಅವರು, ಹಿಂದಿನ ದಿನಗಳಲ್ಲಿ ಹಳೆ ಮೈಸೂರು ಭಾಗದಲ್ಲಿ ರಾಗಿ ಮುದ್ದೆ ಸಾಮಾನ್ಯ ಆಹಾರವಾಗಿತ್ತು. ಹಬ್ಬ, ವಿಶೇಷ ಸಂದರ್ಭಗಳು ಅಥವಾ ನೆಂಟರು ಬಂದಾಗ ಮಾತ್ರ ಅನ್ನ ಮಾಡಲಾಗುತ್ತಿತ್ತು. ಬಡ ಕುಟುಂಬಗಳು ರಾಗಿ ಮತ್ತು ಜೋಳದ ಮುದ್ದೆಯನ್ನೇ ಮುಖ್ಯ ಆಹಾರವಾಗಿ ಸೇವಿಸುತ್ತಿದ್ದವು. ಬಡ ಕುಟುಂಬದ ಮಕ್ಕಳಿಗೆ ಅನಾರೋಗ್ಯವಾದಾಗ ಅನ್ನ ತಿನ್ನಿಸಲು ಪಕ್ಕದ ಮನೆಗಳಿಂದ ಅನ್ನ ಕೇಳಿಕೊಂಡು ಬರುತ್ತಿದ್ದ ಘಟನೆಗಳನ್ನು ತಾವು ಬಾಲ್ಯದಲ್ಲಿ ಕಣ್ಣಾರೆ ಕಂಡಿದ್ದಾಗಿ ಸ್ಮರಿಸಿದರು.
ಈ ಅನುಭವಗಳೇ ಬಡವರಿಗೂ ಅನ್ನ ದೊರೆಯಬೇಕು ಎಂಬ ಆಲೋಚನೆಗೆ ಪ್ರೇರಣೆಯಾದವು. ಬಡವರ ಮನೆಗಳಲ್ಲಿಯೂ ಅನ್ನದ ಊಟ ಇರಬೇಕು ಎಂಬ ಉದ್ದೇಶದಿಂದ ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದಾಗಿ ತಿಳಿಸಿದರು. ಆಹಾರ ಭದ್ರತೆ ಪ್ರತಿಯೊಬ್ಬರ ಹಕ್ಕಾಗಿದ್ದು, ಬಡವರು ಮತ್ತು ಶ್ರೀಮಂತರ ನಡುವೆ ಆಹಾರದ ವಿಚಾರದಲ್ಲಿಯೂ ಅಸಮಾನತೆ ಇರಬಾರದು ಎಂಬುದು ಈ ಯೋಜನೆಯ ಆಶಯವಾಗಿದೆ ಎಂದರು.
ಕಲ್ಯಾಣ ಕರ್ನಾಟಕದೊಂದಿಗೆ ತಮ್ಮ ರಾಜಕೀಯ ಮತ್ತು ವೈಯಕ್ತಿಕ ಒಡನಾಟವನ್ನು ಸ್ಮರಿಸಿದ ಸಿದ್ದರಾಮಯ್ಯ ಅವರು, 1991ರಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಮರಿಯಪ್ಪ ಮತ್ತು ಮಹಾದೇವಪ್ಪ ಅವರು ಪ್ರೇರಣೆ ನೀಡಿದ್ದರು. ರಾಜೀವ್ ಗಾಂಧಿ ಅವರ ಹತ್ಯೆಯ ನಂತರ ನಡೆದ ಚುನಾವಣೆಯಲ್ಲಿ ಕೇವಲ ಹತ್ತು ಸಾವಿರ ಮತಗಳ ಅಂತರದಿಂದ ಸೋಲನುಭವಿಸಿದ್ದಾಗಿ ತಿಳಿಸಿದರು. ಕೊಪ್ಪಳದ ಜನರು ನೀಡಿದ ಪ್ರೀತಿ ಮತ್ತು ಆಶೀರ್ವಾದವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಜೋಳವು ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಪ್ರಮುಖ ಬೆಳೆಯಾಗಿದ್ದು, ಶ್ರಮಿಕ ಜನರ ಬದುಕಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಹಿಂದಿನ ಕಾಲದಲ್ಲಿ ಬರಗಾಲದ ಸಂದರ್ಭದಲ್ಲಿ ಜೋಳ ಬಡವರ ಪ್ರಮುಖ ಆಹಾರವಾಗಿತ್ತು. ಈಗಲೂ ಕರ್ನಾಟಕದ ಹಲವು ಭಾಗಗಳಲ್ಲಿ ಬರಗಾಲದ ಪರಿಸ್ಥಿತಿ ತೀವ್ರವಾಗಿದ್ದು, ವಿಶೇಷವಾಗಿ ಕಲ್ಯಾಣ ಕರ್ನಾಟಕದಲ್ಲಿ ಬರದ ಪರಿಣಾಮ ಕ್ರೂರವಾಗಿದೆ. ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿಯೂ ನೀರಿನ ಕೊರತೆ ಉಂಟಾಗಿದೆ. ಈ ಬಾರಿ ರಾಜ್ಯದಾದ್ಯಂತ ಬರಗಾಲ ವ್ಯಾಪಕವಾಗಿ ಆವರಿಸಿದ್ದು, ರೈತರು ಮತ್ತು ಸಾಮಾನ್ಯ ಜನರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಬರಗಾಲದಿಂದ ರೈತ ಕುಟುಂಬಗಳಿಗೆ ಆಗಿರುವ ನಷ್ಟವನ್ನು ಸರಿದೂಗಿಸಲು ರಾಜ್ಯ ಸರ್ಕಾರ ಪ್ರತಿ ರೈತ ಕುಟುಂಬಕ್ಕೆ 5,000 ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದ್ದು, ಈಗಾಗಲೇ 2,500 ರೂಪಾಯಿ ಬಿಡುಗಡೆ ಮಾಡಿದೆ. ಆದರೆ ರಾಜ್ಯದಲ್ಲಿ ಬರಗಾಲದಿಂದ ಸುಮಾರು 60,000 ಕೋಟಿ ರೂಪಾಯಿಗಳಷ್ಟು ನಷ್ಟ ಉಂಟಾಗಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (NDRF) ಮಾನದಂಡಗಳ ಪ್ರಕಾರ ಸುಮಾರು 20,000 ಕೋಟಿ ರೂಪಾಯಿ ನಷ್ಟದ ಅಂದಾಜು ಮಾಡಲಾಗಿದೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಕೇಂದ್ರ ಸರ್ಕಾರವೂ ರಾಜ್ಯದ ನೆರವಿಗೆ ಧಾವಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕದಲ್ಲಿ ಪ್ರತಿ ಮೂರು ಅಥವಾ ನಾಲ್ಕು ವರ್ಷಗಳಿಗೊಮ್ಮೆ ಬರಗಾಲ ಎದುರಾಗುವ ಪರಿಸ್ಥಿತಿ ಇದೆ. ಇದು ಕೇವಲ ಕರ್ನಾಟಕಕ್ಕೆ ಸೀಮಿತವಾಗಿಲ್ಲ, ದೇಶದ ವಿವಿಧ ಭಾಗಗಳಲ್ಲಿಯೂ ಬರಗಾಲದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕುಡಿಯುವ ನೀರಿಗೂ ತೊಂದರೆಯಾಗುತ್ತಿರುವ ಇಂತಹ ಸಂಕಷ್ಟದ ಸಂದರ್ಭದಲ್ಲಿ ರೈತರು ಮತ್ತು ಜನಸಾಮಾನ್ಯರಿಗೆ ನೆರವಾಗುವುದು ಸರ್ಕಾರಗಳ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕದ ಹಿಂದುಳಿದಿರುವಿಕೆಗೆ ಐತಿಹಾಸಿಕ ಕಾರಣಗಳಿವೆ. ಈ ಪ್ರದೇಶ ಹಿಂದೆ ನಿಜಾಮರ ಆಡಳಿತಕ್ಕೆ ಒಳಪಟ್ಟಿದ್ದರಿಂದ ಮೈಸೂರು ಸಂಸ್ಥಾನದಂತೆ ಮೂಲಸೌಕರ್ಯ, ಶಿಕ್ಷಣ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಅಗತ್ಯವಾದ ಆದ್ಯತೆ ದೊರೆಯಲಿಲ್ಲ. ಇದರಿಂದ ಕರ್ನಾಟಕದಲ್ಲಿ ಪ್ರಾದೇಶಿಕ ಅಸಮಾನತೆ ನಿರ್ಮಾಣವಾಯಿತು. ಈ ಅಸಮಾನತೆಯನ್ನು ನಿವಾರಿಸಲು ಎಸ್.ಎಂ. ಕೃಷ್ಣ ಅವರ ಆಡಳಿತಾವಧಿಯಲ್ಲಿ ನಂಜುಂಡಪ್ಪ ಸಮಿತಿ ರಚನೆಯಾಗಿ, ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಶಿಫಾರಸುಗಳನ್ನು ಮಾಡಿತು. ನಂತರ ತಮ್ಮ ಆಡಳಿತಾವಧಿಯಲ್ಲಿ ಗೋವಿಂದರಾವ್ ಸಮಿತಿಯನ್ನು ರಚಿಸಿ, ಪ್ರಾದೇಶಿಕ ಅಸಮಾನತೆಯ ನಿವಾರಣೆಗೆ ಮತ್ತಷ್ಟು ಕ್ರಮಗಳನ್ನು ಕೈಗೊಂಡಿದ್ದಾಗಿ ತಿಳಿಸಿದರು.
ಕಲ್ಯಾಣ ಕರ್ನಾಟಕದ ಅಭಿವೃದ್ಧಿಯಲ್ಲಿ ಸಂವಿಧಾನದ 371(J)ನೇ ವಿಧಿಯ ತಿದ್ದುಪಡಿ ಐತಿಹಾಸಿಕ ಮಹತ್ವ ಹೊಂದಿದೆ. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ, ಲಾಲ್ ಕೃಷ್ಣ ಅಡ್ವಾಣಿಯವರು ಉಪಪ್ರಧಾನಿ ಆಗಿದ್ದರು, ಅಂದು ಹೈದ್ರಾಬಾದ್ ಕರ್ನಾಟಕಕ್ಕೆ ವಿಶೇಷ ಸಾಂವಿಧಾನಿಕ ಪ್ರಾತಿನಿಧ್ಯದ ಬೇಡಿಕೆ ಇಟ್ಟಾಗ ಅದು ಸಾಧ್ಯವಿಲ್ಲ ಎಂದು ನಿರಾಕರಿಸಿದ್ದರು. 2013ರಲ್ಲಿ ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಂದಿನ ಪ್ರಧಾನಮಂತ್ರಿ ಮನಮೋಹನ್ ಸಿಂಗ್, ಸೋನಿಯಾ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಯತ್ನ ಮತ್ತು ಒತ್ತಡದ ಫಲವಾಗಿ 371(J) ಜಾರಿಗೆ ಬಂದಿತು. ಈ ಭಾಗದ ಅಭಿವೃದ್ಧಿಗೆ ಸಂಬಂಧಿಸಿದ ವರದಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಲಾಯಿತು. ಇದರ ಪರಿಣಾಮವಾಗಿ ಕಲ್ಯಾಣ ಕರ್ನಾಟಕದ ಅನೇಕ ಯುವಕರು ವೈದ್ಯರು, ಎಂಜಿನಿಯರ್ಗಳು, ಶಿಕ್ಷಕರು ಮತ್ತು ಪ್ರಾಧ್ಯಾಪಕರಾಗಲು ಅವಕಾಶ ದೊರೆತಿದೆ ಎಂದು ವಿವರಿಸಿದರು.
ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಅಜಯ್ ಸಿಂಗ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿ, ತಮ್ಮ ಆಡಳಿತಾವಧಿಯಲ್ಲಿ 5,000 ಕೋಟಿ ರೂಪಾಯಿ ಅನುದಾನ ನೀಡಲಾಗಿತ್ತು. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಕಲ್ಯಾಣ ಕರ್ನಾಟಕವನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಲಾಗಿತ್ತು ಎಂದರು. ಪ್ರಾದೇಶಿಕ ಅಸಮಾನತೆ ನಿವಾರಣೆಯಾಗದೆ ಕರ್ನಾಟಕದ ಸಮಗ್ರ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.
ಸಾಮಾಜಿಕ ಅಸಮಾನತೆಯ ಕುರಿತು ಮಾತನಾಡಿದ ಅವರು, ಬಾಬಾಸಾಹೇಬ್ ಅಂಬೇಡ್ಕರ್ ಅವರು ಪ್ರತಿಯೊಬ್ಬರಿಗೂ ಆರ್ಥಿಕ ಮತ್ತು ಸಾಮಾಜಿಕ ಶಕ್ತಿ ದೊರೆತಾಗ ಮಾತ್ರ ಸಮಾನತೆಯ ಸಮಾಜ ನಿರ್ಮಾಣ ಸಾಧ್ಯ ಎಂದು ಪ್ರತಿಪಾದಿಸಿದ್ದರು. ಬಸವಣ್ಣ, ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿ ಅವರು ಕನಸು ಕಂಡಿದ್ದು ಜಾತಿ, ಧರ್ಮ ಮತ್ತು ವರ್ಗಗಳ ಆಧಾರದ ಮೇಲೆ ಭೇದಭಾವವಿಲ್ಲದ ಸಮಸಮಾಜದ ನಿರ್ಮಾಣವಾಗಿತ್ತು. ಆದರೆ ಇಂದಿಗೂ ಜಾತೀಯತೆ, ಮೂಢನಂಬಿಕೆ ಮತ್ತು ಕಂದಾಚಾರಗಳು ಸಮಾಜದಲ್ಲಿ ಮುಂದುವರಿದಿರುವುದು ದುರದೃಷ್ಟಕರ ಎಂದು ಹೇಳಿದರು.
12ನೇ ಶತಮಾನದಲ್ಲಿಯೇ ಬಸವಣ್ಣನವರು ‘ಇವನಾರವ ಇವನಾರವ ಎಂದೆನಿಸದಿರಯ್ಯಾ, ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯಾ’ ಎಂಬ ವಚನದ ಮೂಲಕ ಸಮಾನತೆ ಮತ್ತು ಸಹೋದರತ್ವದ ಸಂದೇಶ ಸಾರಿದ್ದರು. ಆದರೆ ಇಂದಿಗೂ ಜಾತೀಯತೆ ಸಂಪೂರ್ಣವಾಗಿ ನಿರ್ಮೂಲನೆಯಾಗಿಲ್ಲ. ವಿದ್ಯಾವಂತರಲ್ಲಿಯೂ ಜಾತೀಯತೆ ಮತ್ತು ಮೂಢನಂಬಿಕೆಗಳು ಕಂಡುಬರುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವ ಬೆಳೆಸಿಕೊಳ್ಳುವ ಮೂಲಕ ಇಂತಹ ಮನೋಭಾವನೆಗಳನ್ನು ತೊಡೆದುಹಾಕಬೇಕು ಎಂದು ಕರೆ ನೀಡಿದರು.
ಸಾಮಾಜಿಕ ಅಸಮಾನತೆ ಮತ್ತು ಪ್ರಾದೇಶಿಕ ಅಸಮಾನತೆ ಎರಡೂ ನಿವಾರಣೆಯಾದಾಗ ಮಾತ್ರ ಸಮಸಮಾಜ ನಿರ್ಮಾಣ ಸಾಧ್ಯ. ಪ್ರತಿಯೊಬ್ಬರೂ ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಮಾನವೀಯತೆಯಿಂದ ಬದುಕಬೇಕು. ದ್ವೇಷದ ಬದಲಿಗೆ ಪ್ರೀತಿ ಮತ್ತು ಸಹಬಾಳ್ವೆಯ ಮನೋಭಾವ ಬೆಳೆಸಿಕೊಳ್ಳಬೇಕು. ಇತಿಹಾಸವನ್ನು ಅರಿತುಕೊಂಡಾಗ ಮಾತ್ರ ಭವಿಷ್ಯವನ್ನು ರೂಪಿಸಲು ಸಾಧ್ಯ ಎಂಬ ಅಂಬೇಡ್ಕರ್ ಅವರ ಚಿಂತನೆಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಂಗಮೇಶ ಬಾದವಾಡಗಿ ಅವರು ‘ಜೋಳರಾಜನ ಕಥೆ’ ಕೃತಿಯ ಮೂಲಕ ಕಲ್ಯಾಣ ಕರ್ನಾಟಕದ ಜನಜೀವನ, ಶ್ರಮಿಕ ವರ್ಗದ ಆಹಾರ ಸಂಸ್ಕೃತಿ ಮತ್ತು ಸಮಾಜದಲ್ಲಿರುವ ಅಸಮಾನತೆಯ ವಿಚಾರಗಳನ್ನು ಜನರ ಮುಂದಿಟ್ಟಿರುವುದು ಶ್ಲಾಘನೀಯ. ಕನಕದಾಸರ ‘ರಾಮಧಾನ್ಯ ಚರಿತೆ’ಯ ಆಶಯವನ್ನು ಮುಂದುವರಿಸುವ ರೀತಿಯಲ್ಲಿ ರಚನೆಯಾಗಿರುವ ಈ ಕೃತಿಗೆ ಸಮಾಜದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.
ಕೊನೆಯದಾಗಿ, ಜಾತೀಯತೆ ಮತ್ತು ಪ್ರಾದೇಶಿಕ ಅಸಮಾನತೆ ಇಲ್ಲದ, ಎಲ್ಲರಿಗೂ ಸಮಾನ ಅವಕಾಶಗಳು ದೊರೆಯುವ ಸಮೃದ್ಧ ಕರ್ನಾಟಕ ನಿರ್ಮಾಣವಾಗಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಲೇಖಕ ಸಂಗಮೇಶ ಬಾದವಾಡಗಿ ಆಶಯ ಮಾತುಗಳಾಡಿದರು. ಬೀದರ ಸಂಸದ ಸಾಗರ್ ಈಶ್ವರ ಖಂಡ್ರೆ ಮಾತಾಡಿದರು. ಕನ್ನಡ ಅಭಿವೃದ್ದಿ ಪ್ರಾಧಿಕಾರ ಅಧ್ಹಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ಗ್ರಂಥಾವಲೋಕನ ಮಾಡಿದರು. ಗಾಂಧಿ ಭವನ ಅಧ್ಯಕ್ಷರಾದ ಡಾ.ವುಡೆ ಪಿ.ಕೃಷ್ಣ, ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯ ಅಧ್ಯಕ್ಷ ಮಹೇಶ್ ಬಾಬು ಸುರ್ವೆ ಪ್ರೊ.ಬಿ.ಎಂ.ಹಿರೇಮಠ ವೇದಿಕೆಯಲ್ಲಿದ್ದರು. ಪತ್ರಕರ್ತ ಹಾಗೂ ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ್ ಸೇಡಂ ಕಾರ್ಯಕ್ರಮ ನಿರೂಪಿಸಿದರು. ಬಸವರಾಜ ವಕೀಲ ಸ್ವಾಗತಿಸಿದರು. ಡಿ.ಎಂ.ಭತ್ತದ ವಂದಿಸಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಾ.ಪುರುಷೋತ್ತಮ ಬಿಳಿಮಲೆ ಸೇರಿದಂತೆ ಎಲ್ಲ ಗಣ್ಯರನ್ನು ಸತ್ಕರಿಸುವಾಗ ಒಂದು ಕೆ ಜಿ ಜೋಳ ಪಾಕೆಟ್ ಸಹ ಕೊಟ್ಟು ಗೌರವಿಸಿದ್ದು ವಿಶೇಷವೆನಿಸಿತು.










