ವಿಜಯ ದರ್ಪಣ ನ್ಯೂಸ್………
ಸಿದ್ದಾರ್ಥ ನಗರದ ಯುವಕರಿಂದ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಧ್ವಜಾರೋಹಣ: ಕನ್ನಡಾಭಿಮಾನ ಮೆರೆದ ಯುವಕರು

ತಾವರೆಕೆರೆ : ಕನ್ನಡ ನಾಡು, ನುಡಿ, ಭಾಷೆ ಹಾಗೂ ಸಂಸ್ಕೃತಿಯ ಮೇಲಿನ ಅಭಿಮಾನವನ್ನು ಸಾರುವ ನಿಟ್ಟಿನಲ್ಲಿ ಸಂತೆ ಗೇಟ್ ಸರ್ಕಲ್ನಲ್ಲಿ ಸಿದ್ದಾರ್ಥ ನಗರದ ಯುವಕರ ಬಳಗದ ವತಿಯಿಂದ ಮೊದಲನೇ ವರ್ಷದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಸಂತೆ ಗೇಟ್ ಸರ್ಕಲ್ನಲ್ಲಿ ವಿಶೇಷ ವಾದ್ಯಮೇಳದೊಂದಿಗೆ ಕನ್ನಡ ಧ್ವಜಾರೋಹಣ ನೆರವೇರಿಸಲಾಯಿತು. ಸಾರ್ವಜನಿಕರಿಗೆ ಅನ್ನದಾಸೋಹ ವ್ಯವಸ್ಥೆ ಮಾಡುವ ಮೂಲಕ ಯುವಕರು ಮಾನವೀಯತೆ ಮತ್ತು ಸಾಮಾಜಿಕ ಕಳಕಳಿಯನ್ನು ಮೆರೆದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಚಕ್ರವರ್ತಿ ಅವರು, ಕನ್ನಡ ರಾಜ್ಯೋತ್ಸವ ಎಂಬುದು ಕೇವಲ ನವೆಂಬರ್ ತಿಂಗಳ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಪ್ರತಿಯೊಬ್ಬ ಕನ್ನಡಿಗನೂ ತನ್ನ ದಿನನಿತ್ಯದ ಬದುಕಿನಲ್ಲಿ ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡಬೇಕು. ನಮ್ಮ ನಾಡಿನ ನೆಲ, ಜಲ, ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಇಂದಿನ ಯುವಜನತೆ ಕನ್ನಡದ ಇತಿಹಾಸ ಮತ್ತು ಹಿರಿಮೆಯನ್ನು ಅರಿತುಕೊಂಡು ಕನ್ನಡ ಭಾಷೆಯ ಬಳಕೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಉದ್ಯಮಿಗಳು ಹಾಗೂ ಸಮಾಜಸೇವಕರಾದ ಗಂಗಾಧರ್ ಶೆಟ್ಟಿ ಮಾತನಾಡಿ, ಇಂದಿನ ಯುವಕರು ಒಗ್ಗಟ್ಟಿನಿಂದ ಸಂಘಟಿತರಾಗಿ ಇಂತಹ ಸಾಮಾಜಿಕ, ಸಾಂಸ್ಕೃತಿಕ ಹಾಗೂ ನಾಡು-ನುಡಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಸಂತಸದ ಸಂಗತಿಯಾಗಿದೆ. ಇಂತಹ ಕಾರ್ಯಕ್ರಮಗಳಿಂದ ಯುವಕರಲ್ಲಿ ಪರಸ್ಪರ ಸ್ನೇಹ, ವಿಶ್ವಾಸ ಹಾಗೂ ಬಾಂಧವ್ಯ ವೃದ್ಧಿಯಾಗುತ್ತದೆ. ಯುವಕರು ಕೇವಲ ವೈಯಕ್ತಿಕ ಜೀವನಕ್ಕೆ ಸೀಮಿತವಾಗದೆ ಸಮಾಜಮುಖಿ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಬೇಕು. ಕನ್ನಡ ರಾಜ್ಯೋತ್ಸವ ನಮ್ಮೆಲ್ಲರ ಹೆಮ್ಮೆಯ ನಾಡಹಬ್ಬವಾಗಿದ್ದು, ಕನ್ನಡದ ಸಂಸ್ಕೃತಿ, ಪರಂಪರೆ ಮತ್ತು ಅಭಿಮಾನವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವಾಗಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರಾಜ್ ಗೋಪಾಲ್ , ಕಾಂಗ್ರೆಸ್ ಯುವ ಮುಖಂಡರು ಮುನಿರಾಜು , ಜಾಂಬವ ಯುವ ಸೇನೆಯ ರಾಜ್ಯಾಧ್ಯಕ್ಷರಾದ ರಮೇಶ್ ಚಕ್ರವರ್ತಿ, ಪೂಜಾನ ಅಗ್ರಹಾರ ಗ್ರಾಮ ಪಂಚಾಯಿತಿ ಸದಸ್ಯರಾದ ರಮೇಶ್, ಯಲ್ಲಪ್ಪ ,ಜೆಸಿಬಿ ರಮೇಶ್ ,ಆಯೋಜಕ ಅಕ್ಷಯ್, ಸಿದ್ದಾರ್ಥ ನಗರದ ಯುವಕರ ಬಳಗವು ಕಾರ್ಯಕ್ರಮದಲ್ಲಿ ಹಾಜರಿದ್ದರು.










