ವಿಜಯ ದರ್ಪಣ ನ್ಯೂಸ್…….
ದಾಸ ಶ್ರೇಷ್ಠ ಕನಕದಾಸರ 539ನೇ ಜಯಂತ್ಯೋತ್ಸವ
ಜಿಲ್ಲಾಡಳಿತ ಭವನ ಆವರಣದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಾಣ ಕಾರ್ಯ ಶೀಘ್ರ ಆರಂಭ: ಸಚಿವ ಕೆ.ಹೆಚ್ ಮುನಿಯಪ್ಪ

ದೇವನಹಳ್ಳಿ , ಬೆಂಗಳೂರು ಗ್ರಾಮಾಂತರ ಜಿಲ್ಲೆ, ನ.26 : ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಆವರಣದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಗೆ ಜಾಗ ಗುರುತಿಸಲಾಗಿದ್ದು ಶೀಘ್ರ ಕಾಮಗಾರಿ ಆರಂಭಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಹೇಳಿದರು.
ದೇವನಹಳ್ಳಿ ಟೌನ್ ನ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾಡಳಿತ ಭವನದ ಆವರಣದಲ್ಲಿ ರಾಯಣ್ಣ ಪ್ರತಿಮೆ ನಿರ್ಮಿಸಲು ಜಾಗ ಗುರುತಿಸಿ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ರಾಯಣ್ಣರ ಪ್ರತಿಮೆ ನಿರ್ಮಾಣ ಕಾರ್ಯ ಸಂಘದ ವತಿಯಿಂದ ಆಗುತ್ತದೆ. ಪ್ರತಿಮೆಗೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.

ಯಾವೆಲ್ಲ ಸಮುದಾಯದವರು ಸಂಘದ ಮೂಲಕ ಸಮುದಾಯ ಭವನ ನಿರ್ಮಾಣಕ್ಕೆ ಮನವಿ ಸಲ್ಲಿಸುತ್ತಾರೆ ಅಂತವರಿಗೆ ಬಯಪ ಪ್ರಾಧಿಕಾರ ವತಿಯಿಂದ ಸಿಎ ನಿವೇಶನ ಮಂಜೂರು ಮಾಡಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.ಆ ಭವನಗಳಿಗೆ ತಗಲುವ ಅನುದಾನ ಬಿಡುಗಡೆ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಕನಕದಾಸರು 15 ನೇ ಶತಮಾನದ ಸಮಾಜದ ಸುಧಾರಕರು, ದಾಸರು ಸಮಾನತೆ, ಭ್ರಾತೃತ್ವ ಸೌಹಾರ್ದತೆಯನ್ನು ಸಮಾಜಕ್ಕೆ ಸಾರಿದರು. ಧ್ಯಾನ, ಭಕ್ತಿಯಿಂದ ದೇವರನ್ನು ಪ್ರತ್ಯಕ್ಷವಾಗಿ ಕಂಡ ಮಹಾನ್ ಸಂತ ಕನಕದಾಸರು. ಅವರ ಕೀರ್ತನೆಗಳು, ಆಧ್ಯಾತ್ಮಿಕ ಚಿಂತನೆಗಳ ಮೂಲಕ ಸಮಾಜ ಸುಧಾರಣೆಗೆ ಅವರ ಕೊಡುಗೆ ಅಪಾರವಾದದ್ದು ಕನಕದಾಸರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಸಾಗೋಣ ಎಂದರು.
ದೇವನಹಳ್ಳಿ ತಾಲ್ಲೂಕು ನಿವೃತ್ತ ಶಿಕ್ಷಕರಾದ ಶ್ರೀ ರಾಮಯ್ಯ ಅವರು ಉಪನ್ಯಾಸ ನೀಡಿ ಕನಕದಾಸರ ಜೀವನ ಚರಿತ್ರೆ, ಕನಕದಾಸರ ಕೀರ್ತನೆಗಳು, ಕನಕದಾಸರು ಜಾತಿ, ಮತ, ಮೇಲು-ಕೀಳು ಎಂಬ ಭೇದವನ್ನು ತಿರಸ್ಕರಿಸಿದರು. ದೇವರ ಮುಂದೆ ಎಲ್ಲರೂ ಒಂದೇ ಎಂಬ ಸತ್ಯವನ್ನು ಸಾರಿದರು ಎಂಬ ಕನಕದಾಸರ ಸಂದೇಶಗಳನ್ನು ತಿಳಿಸಿದರು.

ವಿಶೇಷ ಆಹ್ವಾನಿತರಾಗಿ ಬಿಗ್ ಬಾಸ್ ಸೀಸನ್ 12 ರ ವಿಜೇತರು, ಕನ್ನಡ ಚಿತ್ರರಂಗದ ಕಲಾವಿದರಾದ ಗಿಲ್ಲಿ ನಟ ಕಾರ್ಯಕ್ರಮದಲ್ಲಿ ಪ್ರೇಕ್ಷಕರನ್ನು ರಂಜಿಸಿದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ, ಅಪರ ಜಿಲ್ಲಾಧಿಕಾರಿ ರಂಗನಾಥ್, ಜಿಪಂ ಉಪಕಾರ್ಯದರ್ಶಿ ಶಿವಕುಮಾರ್, ದೇವನಹಳ್ಳಿ ತಹಶೀಲ್ದಾರ್ ಅನಿಲ್, ಇಒ ಮುನಿರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಕಲ್ಪನಾ, ಕುರುಬರ ಸಂಘದ ಜಿಲ್ಲಾಧ್ಯಕ್ಷ ಮಹೇಶ್, ತಾಲ್ಲೂಕು ಅಧ್ಯಕ್ಷ ಕೋದಂಡರಾಮಯ್ಯ, ಮುಖಂಡರಾದ ಪ್ರಸನ್ನ ಕುಮಾರ್, ಶಾಂತಕುಮಾರ್, ಕೆಸಿ ಮಂಜುನಾಥ್, ಸ್ಥಳೀಯ ಜನಪ್ರತಿನಿಧಿಗಳು, ಸಂಘಟನೆಗಳ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.









