ಪ್ರಜ್ಞಾವಂತರಾಗಿ ಪ್ರಜಾಪ್ರಭುತ್ವ ದ ಉಳಿವಿಗಾಗಿ ಮತದಾನ ಮಾಡಿ – ಹಿರಿಯ ಸಿವಿಲ್ ನ್ಯಾಯಾಧೀಶ ಶೈಲ ಭೀಮಸೇನ ಭಾಗಡಿ
ವಿಜಯ ದರ್ಪಣ ನ್ಯೂಸ್ ………
ಜಿಲ್ಲಾಪಂಚಯತ್ ಸಭಾಂಗಣದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ
ಪ್ರಜ್ಞಾವಂತರಾಗಿ ಪ್ರಜಾಪ್ರಭುತ್ವ ದ ಉಳಿವಿಗಾಗಿ ಮತದಾನ ಮಾಡಿ – ಹಿರಿಯ ಸಿವಿಲ್ ನ್ಯಾಯಾಧೀಶ ಶೈಲ ಭೀಮಸೇನ ಭಾಗಡಿ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ , ಜನವರಿ 25:
ಮತದಾನ ಮಾಡುವಾಗ ಪ್ರತಿಯೊಬ್ಬ ಅಭ್ಯರ್ಥಿಗಳು ಪ್ರಜ್ಞಾವಂತರಾಗಿ, ನಿರ್ಭೀತರಾಗಿ, ಯಾವುದೇ ಆಸೆ ಆಮಿಷಕ್ಕೆ ಒಳಗಾಗದೆ ಪ್ರಜಾಪ್ರಭುತ್ವದ ಉಳಿವಿಗಾಗಿ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿ ಶೈಲ ಭೀಮಸೇನ ಭಾಗಡಿ ಅವರು ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ʼʼ16ನೇ ರಾಷ್ಟ್ರೀಯ ಮತದಾರರ ದಿನಾಚರಣೆ 2026ʼʼ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನ ಕಾಲದ ಜನರು 90 ವರ್ಷವಾದರೂ ಮತಚಲಾಯಿಸುತ್ತಿದ್ದರು. ಈಗ ಮತದಾನ ಮಾಡುವ ದಿನವನ್ನು ಮೋಜು ಮಾಡುವ ದಿನವನ್ನಾಗಿಸಿಕೊಂಡಿದ್ದಾರೆ.
ಅಭ್ಯರ್ಥಿಗಳು ಮತದಾನ ಮಾಡಲು 18 ವರ್ಷ ಪೂರೈಸಬೇಕೆಂಬ ಹಿನ್ನೆಲೆಯ ಕಾರಣ ಅವರಿಗೆ ಪ್ರಬುದ್ದತೆ ಬಂದಿರುತ್ತದೆ ಎಂದು ತಿಳಿಸಿದರು.
ನಮ್ಮ ಒಂದು ಮತದಿಂದ ದೇಶಕ್ಕೆ ಉತ್ತಮ ನಾಯಕನನ್ನು ಆಯ್ಕೆ ಮಾಡಿಕೊಳ್ಳುವ ಶಕ್ತಿ ಇದೆ ಯಾರು ಮತ ಚಲಾಯಿಸದೆ ಅತ್ಯಮೂಲ್ಯವಾದ ಹಕ್ಕಿನಿಂದ ವಂಚಿತರಾಗಬಾರದು ಎಂದರು.

ಪ್ರಜಾಭುತ್ವವು ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗಗಳ ಆಧಾರದ ಮೇಲೆ ನಡೆಯುತ್ತದೆ. ಭಾರತದ ಸಂವಿಧಾನದಲ್ಲಿ 18 ವರ್ಷ ಪೂರೈಸಿರುವ ಪ್ರತಿಯೊಬ್ಬರೂ ಮತದಾನ ಮಾಡುವ ಹಕ್ಕು ಇದೆ. ಯಾರಿಗೂ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಅಧಿಕಾರವಿಲ್ಲ.
ಭಾರತದ ಪೌರತ್ವ ತ್ಯಜಿಸಿ ಅನ್ಯ ದೇಶದ ಪೌರತ್ವ ಪಡೆದರೆ, ಚುನಾವಣಾ ಪ್ರಕ್ರಿಯೆಯಲ್ಲಿ ಆಮಿಷ ಒಡ್ಡಿ ಅಪರಾಧವೆಸಗಿಸಿದ ನಾಗರೀಕರಿಗೆ, ಜೈಲಿನ ಖೈದಿಗಳಿಗೆ ಮತದಾನದ ಹಕ್ಕನ್ನು ನಮ್ಮ ಸಂವಿಧಾನವು ನೀಡಿಲ್ಲ. ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳು ಹಾಗೂ ಮೂಲಭೂತ ಕರ್ತವ್ಯಗಳ ಕುರಿತು ತಿಳಿಸಿದೆ. ಮತದಾನ ಮೂಲಭೂತ ಹಕ್ಕುಗಳಲ್ಲಿ ಬರುವುದಿಲ್ಲ. ಕಾನೂನಾತ್ಮಕವಾಗಿ ನೀಡಿದ ಹಕ್ಕಾಗಿದ್ದು ಅರ್ಹತೆ ಇದ್ದರೆ ಮತದಾನ ಮಾಡಬಹುದು.
ಪ್ರತಿನಿಧಿಗಳನ್ನು ಮತದಾನ ಮಾಡಿ ಆಯ್ಕೆ ಮಾಡಲಾಗುತ್ತದೆ. ಚುನಾವಣಾ ಸಂದರ್ಭದಲ್ಲಿ ಪ್ರತಿನಿಧಿಯು ಸಮಸ್ಯೆಗಳನ್ನು ಪರಿಹಾರ ಮಾಡುವ ಕುರಿತು ಭರವಸೆ ನೀಡಬಹುದು. ಆಸೆಆಮಿಷ ಒಡ್ಡಲು ಸಾಧ್ಯವಿಲ್ಲ. ಈ ದಿನದ ಉದ್ದೇಶ ಮತದಾನ ಬಗ್ಗೆ ತಿಳುವಳಿಕೆ, ಜಾಗೃತಿಯನ್ನು ಸಮಾಜ ಹಾಗೂ ಕುಟುಂಬಕ್ಕೆ ನೀಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ಮಾತನಾಡಿ ಮತದಾನವನ್ನು ನಿರ್ಭಿತಿಯಿಂದ ಯಾವುದೇ ಆಮಿಷಕ್ಕೆ ಒಳಗಾಗದೆ ಸದೃಢ ಪ್ರಜಾ ಪ್ರಭುತ್ವ ನಿರ್ಮಾಣಕ್ಕೆ ಮತ ಚಲಾಯಿಸಬೇಕು.
ಚುನಾವಣಾ ಆಯೋಗವು 1950 ಜನವರಿ 25ರಂದು ಸ್ಥಾಪನೆಯಾಯಿತು. 2011 ರಿಂದ ಪ್ರತಿ ವರ್ಷ ಜನವರಿ 25 ಅನ್ನು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲಾಗುತ್ತಿದೆ.
ಶಾಲಾ ಮಕ್ಕಳು ತಮ್ಮ ಪೋಷಕರು ಹಾಗೂ ಸುತ್ತಮುತ್ತಲಿನ ಜನರಲ್ಲಿ ಮತ ಚಲಾಯಿಸುವ ಕುರಿತು ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಎಲ್ಲಾ ಪ್ರಜೆಗಳಿಗೆ ಮತದಾನ ಹಕ್ಕು ಮಾತ್ರವಲ್ಲ, ಅದು ಜವಾಬ್ದಾರಿ. ಜಿಲ್ಲೆಯಲ್ಲಿನ 18 ವರ್ಷ ತುಂಬಿದ ಎಲ್ಲಾ ಪ್ರಜೆಗಳು ಮತದಾರರಾಗಿ ನೋಂದಣಿ ಮಾಡಿಸಿಕೊಂಡು ಮತದಾನ ಮಾಡಬೇಕು ಎಂದರು
ಕಾರ್ಯಕ್ರಮದಲ್ಲಿ ಹೊಸದಾಗಿ ನೊಂದಣಿಯಾದ ಯುವ ಮತದಾರರಿಗೆ ಗುರುತಿನ ಚೀಟಿ ವಿತರಿಸಲಾಯಿತು. ಜಿಲ್ಲಾ ಮಟ್ಟದಲ್ಲಿ ಮತದಾರರ ದಿನಾಚರಣೆಯ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಮತಗಟ್ಟೆ ಮೇಲ್ವಿಚಾರಕರು (ಬಿ.ಎಲ್.ಓ) ರವರಿಗೆ ಪ್ರಶಸ್ತಿ ಪತ್ರ ವಿತರಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯ ಪ್ರತಿಜ್ಞಾ ವಿಧಿಯನ್ನು ಅಪರ ಜಿಲ್ಲಾಧಿಕಾರಿ ಅವರು ಭೋದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿಯ ಉಪ ಕಾರ್ಯದರ್ಶಿ ಬಿ. ಶಿವಕುಮಾರ, ಯೋಜನಾ ನಿರ್ದೇಶಕ ವಿಠಲ್ ಕಾವಳೆ, ಮುಖ್ಯ ಲೆಕ್ಕಾಧಿಕಾರಿ ಮಂಜುನಾಥ್ ಸೇರಿದಂತೆ ಜಿಲ್ಲಾ ಮಟ್ಟದ ಅಕಾರಿಗಳು, ವಿವಿಧ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
