ಮಕ್ಕಳ ಶಿಕ್ಷಣ-ರಕ್ಷಣೆ ಕುರಿತ ಸಮಸ್ಯೆಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಿ: ಶಶಿಧರ್ ಕೋಸಂಬೆ
ವಿಜಯ ದರ್ಪಣ ನ್ಯೂಸ್….
ದೊಡ್ಡಬಳ್ಳಾಪುರ ನಗರದಲ್ಲಿ ರಾಜ್ಯದ ಮೊದಲ ಮಕ್ಕಳ ವಿಶೇಷ ನಗರ ಸಭೆ ಆಯೋಜನೆ
ಮಕ್ಕಳ ಶಿಕ್ಷಣ-ರಕ್ಷಣೆ ಕುರಿತ ಸಮಸ್ಯೆಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಿ: ಶಶಿಧರ್ ಕೋಸಂಬೆ

ದೊಡ್ಡಬಳ್ಳಾಪುರ: ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆ ಮಾಡಲು ಪೂರಕ ವಾತಾವರಣ ಸೃಷ್ಠಿಯಾಗಬೇಕು. ಹಾಗೂ ಸಮಾಜದಲ್ಲಿ ಪ್ರತಿಯೊಂದು ಮಗು ಅತ್ಯಂತ ಗೌರವ ಪೂರ್ವಕ, ಘನತೆಯಿಂದ ಜೀವಿಸುವ ಹಕ್ಕು, ಅಭಿವೃದ್ಧಿ ಹೊಂದುವ ಹಕ್ಕು, ರಕ್ಷಣೆ ಹಕ್ಕು ಮತ್ತು ಭಾಗವಹಿಸುವಿಕೆ ಹಕ್ಕುಗಳನ್ನು ಹೊಂದಿರುತ್ತಾರೆ. ಮಕ್ಕಳ ಹಕ್ಕುಗಳಿಗೆ ಚ್ಯುತಿಯಾದಾಗ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ತ್ವರಿತವಾಗಿ ಸಮಸ್ಯೆ ಇತ್ಯರ್ಥ್ಯಗೊಳಿಸಲು ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಶಶಿಧರ್ ಕೋಸಂಬೆ ಅವರು ಹೇಳಿದರು.
ನಗರಸಭೆ ದೊಡ್ಡಬಳ್ಳಾಪುರ, ಯುವ ಸಂಚಲನ ಚಾರಿಟೇಬಲ್ ಟ್ರಸ್ಟ್ ಸಹಯೋಗದಡಿ ಪಟ್ಟಣದ ನಗರಸಭೆ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಮಕ್ಕಳ ವಿಶೇಷ ನಗರಸಭೆ ಕಾರ್ಯಕ್ರಮವನ್ನು ಉದ್ಘಾಡಟಿಸಿ ಅವರು ಮಾತನಾಡಿದರು.
ಮಕ್ಕಳು ಜೀವಿಸುವ ಪರಿಸರದ ಶಾಲೆ, ಮನೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಉಂಟಾಗುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಸಭೆ ಆಯೋಜಿಸಲಾಗಿತ್ತು. ಮಕ್ಕಳ ಹಕ್ಕುಗಳ ಸಮಸ್ಯೆ ಆಲಿಸಲು ಈ ಮೊದಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಾತ್ರ ಗ್ರಾಮಸಭೆ ಮಾಡಲಾಗುತ್ತಿತ್ತು. ನಗರ ಮಟ್ಟದಲ್ಲಿಯೂ ಮಕ್ಕಳು ಸಮಸ್ಯೆಗಳ ಆಗರದಲ್ಲಿ ಜೀವಿಸುತ್ತಾ ಇರುವದರಿಂದ ನಗರ ಪ್ರದೇಶಗಳಲ್ಲಿ ಮಕ್ಕಳ ವಿಶೇಷ ನಗರಸಭೆ ವಿನೂತನ ಕಾರ್ಯವಾಗಿದೆ. ಘನ ಸರ್ಕಾರಕ್ಕೆ ನಗರ, ಪಟ್ಟಣ ಪ್ರದೇಶಗಳಲ್ಲಿಯೂ ಮಕ್ಕಳ ವಿಶೇಷ ನಗರಸಭೆ ಆಯೋಜನೆಯ ಕುರಿತು ಸುತ್ತೋಲೆ ಹೊರಡಿಸುವಂತೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಶಾಲೆಗಳಲ್ಲಿನ ಶೌಚಾಲಯ, ಸ್ವಚ್ಛತೆ, ನೈರ್ಮಲ್ಯ, ಶಿಕ್ಷಕರ ಕೊರತೆ, ಶಾಲಾ ಕೊಠಡಿಗಳ ಕೊರತೆ, ವಿದ್ಯುತ್, ನೀರು ಸರಬರಾಜು, ಸೇರಿದಂತೆ ಕೌಟುಂಬಿಕ ಸಮಸ್ಯೆಗಳನ್ನು ವಿದ್ಯಾರ್ಥಿಗಳು ಆಯೋಗದ ಮುಂದೆ ತೋಡಿಕೊಂಡಿದ್ದು, ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿ, ತುರ್ತಾಗಿ ಸಮಸ್ಯೆಗಳಿಗೆ ಪರಿಹಾರ ನೀಡಿ, ಒಂದು ವಾರದೊಳಗೆ ಅನುಪಾಲನ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದರು.

ಅರಳು ಮಲ್ಲಿಗೆ ಬಾಗಿಲು, ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ನಮ್ಮ ಶಾಲೆಯಲ್ಲಿ ಕಸ ಸಂಗ್ರಹಣೆಯಾಗುತ್ತಿದ್ದು, ಸಕಾಲಕ್ಕೆ ವಿಲೇವಾರಿಯಾಗುತ್ತಿಲ್ಲ ಹಾಗೂ ಶಾಲೆ ಪಕ್ಕದಲ್ಲೇ ಚರಂಡಿ ಇದ್ದು, ಕಲ್ಮಶ ನೀರು ಶಾಲಾವರಣಕ್ಕೆ ನುಗ್ಗಿ ದುರ್ನಾತ ಬರುತ್ತಿದ್ದು, ತುಂಬಾ ಸಮಸ್ಯೆ ಎದುರಾಗುತ್ತದೆ ಎನ್ನುವ ಮಕ್ಕಳ ಪ್ರಶ್ನೆ ಪ್ರತ್ಯುತ್ತರ ನೀಡಿದ ಆಯೋಗದ ಅಧ್ಯಕ್ಷರು ನಗರಸಭೆಯ ಪೌರಾಯುಕ್ತರಿಗೆ ತುರ್ತಾಗಿ ಬಿಇಓ ಮತ್ತು ಪಟ್ಟಣದ ಎಲ್ಲಾ ಶಾಲೆಯ ಮುಖ್ಯಗುರುಗಳೊಂದಿಗೆ ಸಭೆ ಏರ್ಪಡಿಸಿ, ಕಸ ವಿಲೇವಾರಿ, ಶಾಲೆಯ ಸುತ್ತ-ಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಹಾಗೂ ನಗರಗಳಲ್ಲಿ ಬೀದಿ ನಾಯಿಗಳ ಹಾವಳಿ ಮತ್ತು ಇತರೆ ತೊಂದರೆಗಳ ಕುರಿತು ಚರ್ಚಿಸಿ, ಸಭೆಯ ಅನುಪಾಲನ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ, ದೊಡ್ಡಬಳ್ಳಾಪುರದ ಶಾಲೆಯಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ, ಶೌಚಾಲಯವಿದ್ದು, ಇಲ್ಲದಂತಾಗಿದೆ. ಶುಚಿಯಾದ ಆಹಾರ ಪೂರೈಕೆಯಾಗುತ್ತಿಲ್ಲವೆಂದು ಅಳಲು ತೋಡಿದ ಮಕ್ಕಳು. ಇದಕ್ಕೆ ಪ್ರತಿಕ್ರಿಯಿಸ ಅಧ್ಯಕ್ಷರು, ಕ್ಷೇತ್ರ ಶಿಕ್ಷಣಾಧಿಕಾರಿಯೊಂದಿಗೆ ಸಮಾಲೋಚಿಸಿ, ನಿಮ್ಮ ಶಿಕ್ಷಣ ಇಲಾಖೆಗೆ ಒಳಪಡುವ ಶಾಲೆಗಳಲ್ಲಿನ ಸಮಸ್ಯೆಗಳನ್ನು ಅವಲೋಕಿಸಿ, ಸರ್ಕಾರಿ ಸೌಲಭ್ಯ, ಕೊಠಡಿ, ಶೌಚಾಲಯ, ಶಿಕ್ಷಕರ ಕೊರತೆ, ಶುಚಿಯಾದ ಆಹಾರ ಪೂರೈಕೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಪಟ್ಟಿಮಾಡಿ, ಹಂತ ಹಂತವಾಗಿ ಎಲ್ಲಾ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ಕ್ರಮವಹಿಸಿ ಎಂದು ನಿರ್ದೇಶನ ನೀಡಿದರು.
ಸಭೆಯಲ್ಲಿ ಪಟ್ಟಣದ ಬಹುತೇಕ ಶಾಲಾ-ಕಾಲೇಜು ಆವರಣದಲ್ಲಿ ಪುಂಡರ ಹಾವಳಿ ಹೆಚ್ಚಾಗಿದ್ದು, ಧೂಮಪಾನ, ಮಧ್ಯಪಾನ, ಶಾಲಾ ಆಸ್ತಿ-ಪಾಸ್ತಿ ನಾಶಗೊಳಿಸುವಿಕೆ ಹಾಗೂ ಅನೈತಿಕ ಚಟುವಟಿಕೆಗಳು ಮರುಕಳಿಸುತ್ತಿರುವ ಕೂಗು ಕೇಳಿ ಬಂದ ಹಿನ್ನಲೆಯಲ್ಲಿ ಆಯಾ ಶಾಲೆಗೆ ಸಂಬಂಧಿಸಿದ ಪೊಲೀಸ್ ಸಿಬ್ಬಂದಿ ಪ್ರತಿದಿನ ಬೀಟ್ ಮೂಲಕ ಶಾಲಾ-ಕಾಲೇಜು ಆವರಣಗಳಲ್ಲಿ ದುರ್ಘಟನೆಗಳು ಸಂಭವಿಸದಂತೆ ನಿಗಾವಹಿಸಲು ಆಯೋಗದ ಅಧ್ಯಕ್ಷರು ಪೊಲೀಸ್ ಇಲಾಖೆಗೆ ಸೂಚನೆ ನೀಡಿದರು.
ಮಕ್ಕಳ ರಕ್ಷಣಾ ನೀತಿ-2016ರ ಅನ್ವಯ ಶಾಲೆಯಲ್ಲಿ ಸಲಹಾ/ದೂರು ಪೆಟ್ಟಿಗೆ ಅಳವಡಿಸುವುದು, ಮಕ್ಕಳ ಸಹಾಯವಾಣಿ 1098 ಶಾಶ್ವತ ಗೋಡೆ ಫಲಕ, ಕೋಪ್ಟಾ ಕಾಯ್ದೆ-2003ರ ಅನ್ವಯ ಶಾಲಾ ಆವರಣದಲ್ಲಿ 100 ಮೀಟರ್ ಅಂತರದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಸೇವನೆ ನಿಷೇಧ ಕಾಯ್ದೆ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಹಾಗೂ ಪೊಲೀಸ್ ಇಲಾಖೆಗಳು ಜಿಲ್ಲಾ ಮಕ್ಕಳ ರಕ್ಷಣಾ ಘಟಕದೊಂದಿಗೆ ಕರ್ತವ್ಯ ನಿಷ್ಠೆಯಿಂದ ಜಂಟಿಯಾಗಿ ಕಾರ್ಯ ನಿರ್ವಹಿಸಿ ಮಕ್ಕಳ ಹಕ್ಕುಗಳ ರಕ್ಷಣೆಗೆ ಬದ್ಧರಾಗಬೇಕು ಎಂದು ತಿಳಿಸಿದರು.
ಶಾಲೆ ಮಗು ತಮ್ಮ ಶಾಲೆಯೆ ಇಬ್ಬರು ವಿದ್ಯಾರ್ಥಿನಿಯರಿಗೆ ಬಲವಂತವಾಗಿ ಬಾಲ್ಯ ವಿವಾಹ ಮಾಡಿದ್ದ ಮಾಹಿತಿ ಪಡೆದ ಅಧ್ಯಕ್ಷರು ಬೇಸರ ವ್ಯಕ್ತ ಪಡಿಸಿ, ಬಾಲ್ಯ ವಿವಾಹ ಕಾನೂನು ಬಾಹಿರ ಹಾಗೂ ಶಿಕ್ಷಾರ್ಹ ಅಪರಾಧವಾಗಿದ್ದು, ಬಾಲ್ಯ ವಿವಾಹಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬೆಂಬಲಿಸದ ಪ್ರತಿಯೊಬ್ಬರೂ ಅಪರಾಧಿಗಳಾಗಿರುತ್ತಾರೆ. ಈ ವಿಚಾರವನ್ನು ಸಂಬಂಧಿಸಿದ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳಬೇಕು ಎಂದು ಸೂಚಿಸಿದರು.
ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಬಾಲಕೀಯರ ವಸತಿ ನಿಲಯದಲ್ಲಿ ಕೋತಿಗಳ ಹಾವಳಿಗೆ ಕಡಿವಾಣ ಹಾಕಿ ಮತ್ತು ವಿದ್ಯಾರ್ಥಿನಿಯರಿಗೆ ವಿತರಿಸುವ ಸ್ಯಾನಿಟರ್ ಪ್ಯಾಡ್ ಸಕಲಾಕ್ಕೆ ಶುಭ್ರತೆಯಿಂದ ನೀಡಿ ಎಂದ ವಿದ್ಯಾರ್ಥಿನಿಯ ಪ್ರಶ್ನೆಗೆ ಉತ್ತರಿಸಿದ ಅಧ್ಯಕ್ಷರು ಸಭೆಯಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸಲು ನಿರ್ದೇಶಿಸಿದರು.
ಈ ಸಂದರ್ಭದಲ್ಲಿ ನಗರಸಭೆಯ ಅಧ್ಯಕ್ಷೆ ಸುಮಿತ್ರಮ್ಮ, ಪೌರಾಯುಕ್ತ ಕಾರ್ತೀಕ್ ಈಶ್ವರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನಿತಾ ರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ, ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ವಾಸುದೇವ ಶರ್ಮಾ, ಪ್ರಭುದೇವ, ಚಿದಾನಂದ ಮೂರ್ತಿ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.
₹₹₹₹₹₹₹₹₹₹₹₹₹&&&&&₹₹₹₹₹₹₹₹₹₹₹₹₹₹
ಫೆಬ್ರವರಿ 11 ಕ್ಕೆ ವೈಜ್ಞಾನಿಕ ಬೇಸಾಯ ಪದ್ದತಿಯ ಕುರಿತು ರೈತರಿಗೆ ವಿಚಾರ ಸಂಕೀರಣ
ಬಿಜಿಎಸ್ ನಗರ ದೇವನಹಳ್ಳಿ ತಾಲೂಕು ಬೆಂ.ಗ್ರಾ ಜಿಲ್ಲೆ ಫೆ.09:
ತೋಟಗಾರಿಕೆ ಇಲಾಖೆ ವತಿಯಿಂದ ದೇವನಹಳ್ಳಿ ತಾಲ್ಲೂಕಿನ, ಕಸಬಾ ಹೋಬಳಿಯ ಅಣ್ಣೇಶ್ವರ ಗ್ರಾಮ ಪಂಚಾಯತ್ ಕಾರ್ಯಾಲಯದ ಆವರಣದಲ್ಲಿ ಫೆಬ್ರವರಿ 11 ರಂದು ಬೆಳಿಗ್ಗೆ11.00 ಗಂಟೆಗೆ “ಬೆಣ್ಣೆಹಣ್ಣು ಮತ್ತು ಮೆಕಡೇಮಿಯ ಹಣ್ಣಿನ ವೈಜ್ಞಾನಿಕ ಬೇಸಾಯ ಪದ್ದತಿಯ ಕುರಿತು ವಿಚಾರ ಸಂಕೀರಣ” ಹಮ್ಮಿಕೊಳ್ಳಲಾಗಿದೆ.


ವಿಚಾರ ಸಂಕೀರಣದಲ್ಲಿ ವಿಷಯ ತಜ್ಞರಾಗಿ ನಿವೃತ್ತ ತೋಟಗಾರಿಕೆ ಅಪರ ನಿರ್ದೇಶಕರು ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಡಾ. ಹಿತ್ತಲಮನಿ ಎಸ್.ವಿ ರವರು ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು, ಜಿಲ್ಲೆಯ ಎಲ್ಲಾ ರೈತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಲು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
