ಕ್ರೀಡಾಂಗಣ ನಿರ್ಮಾಣ ಮಾಡುವ ನಿರ್ಧಾರವನ್ನು ಸರ್ಕಾರ ಕೈಬಿಡಬೇಕೆಂದು ಆಗ್ರಹಿಸಿ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆಗೆ ಸಂಸದ ಶ್ರೀಕಂಠ ದತ್ತ ಎದುವೀರ್ ಒಡೆಯರ್ ಬೆಂಬಲ
ವಿಜಯ ದರ್ಪಣ ನ್ಯೂಸ್……
ಕ್ರೀಡಾಂಗಣ ನಿರ್ಮಾಣ ಮಾಡುವ ನಿರ್ಧಾರವನ್ನು ಸರ್ಕಾರ ಕೈಬಿಡಬೇಕೆಂದು ಆಗ್ರಹಿಸಿ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆಗೆ ಸಂಸದ ಶ್ರೀಕಂಠ ದತ್ತ ಎದುವೀರ್ ಒಡೆಯರ್ ಬೆಂಬಲ

ತಾಂಡವಪುರ ಫೆಬ್ರವರಿ 24 ಪರಂಪರೆಕ ಕಾರ್ಖಾನೆ ರೇಷ್ಮೆ ನೂಲು ತೆಗೆಯುವ ಘಟಕದ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವ ನಿರ್ಧಾರವನ್ನು ಸರ್ಕಾರ ಕೈ ಬಿಡಬೇಕೆಂದು ಆಗ್ರಹಿಸಿ ಕೆಲಸವನ್ನು ಬಂದ್ ಮಾಡಿ, ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆಗೆ ಸಂಸದ ಶ್ರೀಕಂಠ ದತ್ತ ಯದುವೀರ್ ಒಡೆಯರ್ ಬೆಂಬಲ ವ್ಯಕ್ತಪಡಿಸಿದರು
ಅವರು ಇಂದು ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ ಅವರು ಭೇಟಿ ನೀಡಿ ನಿಮ್ಮ ಬೇಡಿಕೆ ಈಡೇರುವವರೆವಿಗೂ ಕಾರ್ಮಿಕರ ಜೊತೆಗಿದ್ದು ಹೋರಾಟದ ಸಾರಥ್ಯವನ್ನು ವಹಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಟಿ ನರಸೀಪುರ ದಲ್ಲಿ ಇರುವ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ನೂಲು ತೆಗೆಯುವ ಘಟಕದ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಸ್ವಾಧೀನ ಪಡಿಸಿಕೊಂಡಿರುವ ನಿವೇಶನವನ್ನು ಪ್ರತಾಪ್ ಸಿಂಹ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರ ಜೊತೆಗೂಡಿ ಪರಿಶೀಲಿಸಿ, ಕಾರ್ಮಿಕರ ಅಹವಾಲು ಆಲಿಸಿ ಮಾತನಾಡುತ್ತಿದ್ದ ಅವರು ಮೈಸೂರು ಸಿಲ್ಕ್ ಆಗಿ ಆರಂಭಗೊಂಡು ಕೆ ಎಸ್ ಐ ಸಿ ಆಗಿರುವ ಕಾರ್ಖಾನೆ ಆವರಣದಲ್ಲಿ ಸರ್ಕಾರ ಕ್ರೀಡಾಂಗಣ ನಿರ್ಮಾಣ ಮಾಡುವುದು ಬೇಡ. ಸೂಕ್ತವಾದ ಪರ್ಯಾಯ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕು. ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಕಾರ್ಮಿಕರಿಗೆ ಸ್ಥೈರ್ಯವನ್ನು ತುಂಬಿದರು.
ರೇಷ್ಮೆ ಸೀರೆ ರಾಜ್ಯದಲ್ಲಿ ಬೇಡಿಕೆಯುಳ್ಳ ಉತ್ಪನ್ನವಾಗಿದ್ದು, ರಾಜಕಾರಣಿ, ಗಣ್ಯರು ಹಾಗೂ ಅಧಿಕಾರಿಗಳ ಕೈಗಷ್ಟೇ ಸಿಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಸೀರೆಗೆ ರೇಷ್ಮೆ ನೂಲು ಪೂರೈಸುವ ಕಾರ್ಖಾನೆಯ ಪಕ್ಕದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವುದು ಸೂಕ್ತವಲ್ಲ. ಕಾರ್ಮಿಕರ ಪ್ರತಿರೋಧ ಈಗಾಗಲೇ ರಾಜ್ಯ ಸರ್ಕಾರದ ಗಮನಕ್ಕೂ ಹೋಗಿದೆ. ಕಾರ್ಖಾನೆಯನ್ನ ಉಳಿಸಿಕೊಂಡು, ಇಲ್ಲಿನ ಕಾರ್ಮಿಕರಿಗೆ ಹೆಚ್ಚಿನ ಮೂಲಸೌಕರ್ಯವನ್ನು ಕಲ್ಪಿಸಿ ಕೊಡಬೇಕಿರುವುದು ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆಯುತ್ತೇನೆ. ಸರ್ಕಾರ ಕ್ರೀಡಾಂಗಣ ನಿರ್ಮಾಣ ಮಾಡುವ ಯೋಜನೆಯನ್ನು ಕೈಬಿಡುವವರೆಗೂ ಹೋರಾಟ ಮುಂದುವರೆಯಲಿ. ಶ್ರಮಿಕ ವರ್ಗದ ನ್ಯಾಯಯುತ ಬೇಡಿಕೆಗಳು ಈಡೇರಲಿ. ನಮ್ಮ ಬೆಂಬಲವು ನಿಮಗೆ ಎಂದೆಂದಿಗೂ ಇರುತ್ತದೆ ಎಂದು ಯದುವೀರ್ ಕೃಷ್ಣದತ್ತ ಒಡೆಯರ್ ತಿಳಿಸಿದರು.
ಪುರಸಭೆ ಮಾಜಿ ಸದಸ್ಯ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಆರ್.ಅರ್ಜುನ್ ಮಾತನಾಡಿ, ರೇಷ್ಮೆ ಕಾರ್ಖಾನೆ ನಿವೇಶನವನ್ನು ಕ್ರೀಡಾಂಗಣ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಕಳೆದ ನಾಲ್ಕೈದು ದಿನಗಳಿಂದ ಕಾರ್ಮಿಕರು ನಡೆಸುತ್ತಿರುವ ಮುಷ್ಕರದ ಹೋರಾಟಕ್ಕೆ ಮೈಸೂರು ಅರಸರ ವಂಶಸ್ಥರಾದ ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ ಅವರೇ ಬೆಂಬಲ ಸೂಚಿಸಿ ಆಗಮಿಸಿರುವುದು ಅಧಿದೇವತೆ ಚಾಮುಂಡೇಶ್ವರಿ ದೇವಿಯ ಶ್ರೀ ರಕ್ಷೆ ಸಿಕ್ಕಂತಾಗಿದೆ. ನಾಡಿನಲ್ಲಿ ಜನಪರ ಧ್ವನಿಯೆತ್ತುತ್ತಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಬೆಂಬಲ ನೀಡಿರುವುದು ಸಿಂಹ ಬಲ ಬಂದಂತಾಗಿದೆ.
ನಾನು ಕೂಡ ಕ್ರೀಡಾಂಗಣ ಸ್ಥಳವನ್ನು ಬದಲಿಸುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಇಂತಹ ಕಾರ್ಮಿಕ ಪರ ಹೋರಾಟಕ್ಕೆ ಎಲ್ಲರೂ ಬೆಂಬಲಿಸಬೇಕು. ಕೂಡಲೇ ಸರ್ಕಾರ ಇಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವ ನಿರ್ಧಾರವನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.
ಹಿರಿಯ ವಕೀಲ ಎಸ್.ಅರುಣ್ ಕುಮಾರ್ ಮಾತನಾಡಿದರು. ವರುಣ ಪರಾಜಿತ ಅಭ್ಯರ್ಥಿ ತೋಟದಪ್ಪ ಬಸವರಾಜು, ಹಿರಿಯ ಶಸ್ತ್ರಚಿಕಿತ್ಸಕ ಡಾ.ಎಂ.ರೇವಣ್ಣ, ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಸಿ.ಎಂ.ಪ್ರಕಾಶ್, ನಿರ್ದೇಶಕ ಪೂಜಿತ್ ಮೆಡಿಕಲ್ಸ್ ಕುಮಾರ್, ಪುರಸಭೆ ಮಾಜಿ ಸದಸ್ಯ ಎಸ್.ಕೆ.ಕಿರಣ್, ಬಿಜೆಪಿ ಕ್ಷೇತ್ರ ಅಧ್ಯಕ್ಷ ಹಿರಿಯೂರು ಶಿವಕುಮಾರ್(ಸತ್ಯರಾಜ್), ಪ್ರಧಾನ ಕಾರ್ಯದರ್ಶಿ ಡಾ.ಟಿ.ಎಸ್. ಮಲ್ಲಿಕಾರ್ಜುನಸ್ವಾಮಿ, ಜಿಲ್ಲಾ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಆಲಗೂಡು ಮಂಜು, ಅಧ್ಯಕ್ಷ ಚೌಹಳ್ಳಿ ಎಸ್.ಸಿದ್ದರಾಜು, ರೈತ ಮೋರ್ಚಾ ಅಧ್ಯಕ್ಷ ಸೋಮಶೇಖರಪ್ಪ, ಗ್ರಾ.ಪಂ ಸದಸ್ಯ ಕಿರಗಸೂರು ಮಹದೇವಸ್ವಾಮಿ, ಯುವ ಮೋರ್ಚಾ ಅಧ್ಯಕ್ಷರಾದ ರಘು, ಜಯಕುಮಾರ್, ಮುಖಂಡರಾದ ತಿರುಮಕೂಡಲು ಸುನೀಲ್ ಹಾಗೂ ಇತರರು ಇದ್ದರು.
