ವಿಜಯ ದರ್ಪಣ ನ್ಯೂಸ್. …..
ಬಳೆ ತೊಡುವ ಕೈಗಳು ಪಿಸ್ತೂಲ್ ಸಹ ಹಿಡಿದು ಗಡಿಯಲ್ಲಿ ನಿಂತು ದೇಶ ಕಾಯಬಲ್ಲವು: ಜಿಲ್ಲಾ ಕಾರಾಗೃಹದ ಅಧೀಕ್ಷಕಿ ಪ್ರೀತಿ.

ರಾಮನಗರ : ಬಳೆ ತೊಡುವುದು ದೌರ್ಬಲ್ಯದ ಸಂಕೇತವಲ್ಲ. ಬಳೆ ತೊಡುವ ಕೈಗಳು ಪಿಸ್ತೂಲ್ ಸಹ ಹಿಡಿಯಬಲ್ಲವು. ಗಡಿಯಲ್ಲಿ ನಿಂತು ದೇಶ ಕಾಯಬಬಲ್ಲವು. ಅಧಿಕಾರದ ಚುಕ್ಕಾಣಿ ಹಿಡಿದು ರಾಜ್ಯ ಮತ್ತು ದೇಶವನ್ನು ಮುನ್ನಡೆಸಬಲ್ಲವು ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಕಾರಾಗೃಹದ ಅಧೀಕ್ಷಕಿ ಪ್ರೀತಿ. ಆರ್ ತಿಳಿಸಿದರು.
ಇಲ್ಲಿನ ರಾಯರದೊಡ್ಡಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಹಯೋಗದಲ್ಲಿ ‘ನಮ್ಮವರು ಬಳಗ’ ಹಮ್ಮಿಕೊಂಡಿದ್ದ ‘ಮಹಿಳಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಳೆ ತೊಡುವ ಹೆಣ್ಣು ಅಸಹಾಯಕಳು ಎಂದು ನೋಡುವ ಮನಸ್ಥಿತಿಯಿಂದ ಸಮಾಜ ಹೊರಬರಬೇಕು ಎಂದು ತಿಳಿಸಿದರು.
ಹೆಣ್ಣು ಮತ್ತು ಗಂಡು ಪರಸ್ಪರ ಅವಲಂಬಿಗಳು. ದೈಹಿಕ ರಚನೆಯಲ್ಲಿ ಕೆಲ ವ್ಯತ್ಯಾಸ ಬಿಟ್ಟರೆ, ಉಳಿದೆಲ್ಲ ವಿಷಯಗಳಲ್ಲಿ ಸಮಾನರು. ಹೆಣ್ಣು ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆಯ ಶಿಖರ ಏರಿದವರಿಂದ ಪ್ರೇರಣೆ ಪಡೆಯಬೇಕು. ಉತ್ತಮ ಶಿಕ್ಷಣ ಪಡೆದು ಅವಕಾಶಗಳ ಬಗ್ಗೆ ಅರಿತು ತಮ್ಮಿಷ್ಟದ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು ಎಂದರು.
ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಮಾತನಾಡಿ, ಅನಾದಿ ಕಾಲದಿಂದಲೂ ಹೆಣ್ಣು ಶೋಷಣೆಗೆ ಒಳಗಾಗಿದ್ದಾಳೆ. ವೈರುಧ್ಯಗಳ ನಡುವೆಯೂ ರಾಣಿ ಚನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಇಂದಿರಾ ಗಾಂಧಿ, ಪಿ.ವಿ. ಸಿಂಧು, ಸ್ಮೃತಿ ಮಂದಾನ ಸೇರಿದಂತೆ ಹಲವು ಮಹಿಳೆಯರು ಶೌರ್ಯ ಮೆರೆದಿದ್ದಾರೆ. ಮಹಿಳೆ ತನಗೆ ಅವಕಾಶ ಸಿಕ್ಕಾಗಲೆಲ್ಲಾ ಸಾಧಿಸಿ ತೋರಿಸಿರುವ ನಿದರ್ಶನಗಳು ಸಾಕಷ್ಟಿವೆ ಎಂದರು.
ಹಿರಿಯ ಹೋರಾಟಗಾರ್ತಿ ಅನಸೂಯಮ್ಮ, ಹೆಣ್ಣು ಎಂಬ ಕೀಳರಿಮೆಯೇ ಸಾಧಿಸಬೇಕೆಂಬ ಛಲಕ್ಕೆ ತೊಡಕಾಗಿದೆ. ಹೆಣ್ಣು ಮಕ್ಕಳು ಕೀಳರಿಮೆ ಬಿಟ್ಟು ಕ್ರಾಂತಿಯ ಕಿಡಿಗಳಾಗಬೇಕು. ಮಹಿಳೆ ಎಲ್ಲವನ್ನೂ ಹೋರಾಟದ ಮೂಲಕವೇ ಗಳಿಸಿ, ತನ್ನ ಸಾಮರ್ಥ್ಯ ತೋರಿಸಿದ್ದಾಳೆ ಎಂಬುದನ್ನು ಚರಿತ್ರೆ ಗಮನಿಸಿದರೆ ಗೊತ್ತಾಗುತ್ತದೆ ಎಂದು ತಿಳಿಸಿದರು.
ಯುವಶಕ್ತಿ ಮನಸ್ಸು ಮಾಡಿದರೆ ಅಸಾಧ್ಯವಾದುದು ಏನೂ ಇಲ್ಲ. ವಿಶ್ವದಲ್ಲೇ ಅತಿ ಹೆಚ್ಚು ಯುವಜನರನ್ನು ಹೊಂದಿರುವ ದೇಶದಲ್ಲಿ ಯುವಶಕ್ತಿ ಕುಂದುತ್ತಿದೆ. ಭ್ರಷ್ಟಾಚಾರ, ಅನ್ಯಾಯ, ಅಸಮಾನತೆ, ದೌರ್ಜನ್ಯದ ವಿರುದ್ಧ ದನಿ ಎತ್ತಬೇಕಿದ್ದ ಸಮುದಾಯ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಮುಳುಗಿದೆ. ಅದರಿಂದ ಹೊರಬಂದು ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾಗಿರುವ ಎಸ್. ಪ್ರಭಾವತಿ ಮಾತನಾಡಿ, ಅಬಲೆ ಎಂಬ ಕಾರಣಕ್ಕೆ ಹೆಣ್ಣು ಮಕ್ಕಳಿಗೆ ಅವಕಾಶಗಳನ್ನು ನಿರಾಕರಿಸುತ್ತಿದ್ದ ಕಾಲ ಬದಲಾಗಿದೆ. ಅವಕಾಶಗಳನ್ನು ಬಳಸಿಕೊಂಡು ಸಾಧಿಸುವ ಮೂಲಕ, ನಮ್ಮ ಸಾಮರ್ಥ್ಯ ಏನು ಎಂಬುದನ್ನು ತೋರಿಸಬೇಕು. ಅದಕ್ಕಾಗಿ, ಕೀಳರಿಮೆ ಬಿಟ್ಟು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಮುಂದೆ ನಾವೇನಾಗಬೇಕು ಎಂಬುದನ್ನು ವಿದ್ಯಾರ್ಥಿದೆಸೆಯಲ್ಲಿ ನಿರ್ಧರಿಸಿ, ಪರಿಶ್ರಮ ಹಾಕಿದರೆ ಗುರಿ ಮುಟ್ಟಬಹುದು. ಸಾಮಾಜಿಕ ಜಾಲತಾಣ ಮತ್ತು ಮೊಬೈಲ್ ಬಳಕೆಯಿಂದ ದೂರವಿದ್ದು, ದಿನಪತ್ರಿಕೆ ಮತ್ತು ಪುಸ್ತಕಗಳ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ನಾನಿಂದು ನಿಮ್ಮೆದುರು ನಿಂತಿರುವುದಕ್ಕೆ ನನ್ನ ತಂದೆ-ತಾಯಿ ಶ್ರಮ ಕಾರಣ ಎಂದರು.
ನಮ್ಮವರು ಬಳಗದ ಡಾ. ಎಚ್.ಡಿ. ಉಮಾಶಂಕರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಾಂಶುಪಾಲೆ ರಾಧಾ ಜಿ.ಆರ್. ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಉಪಾಧ್ಯಕ್ಷೆ ಗಿರಿಜಮ್ಮ, ಸದಸ್ಯೆ ಬಿ.ಕೆ. ಪವಿತ್ರ, ಪೌರ ಕಾರ್ಮಿಕ ಮಹಿಳೆ ಮಹಾದೇವಿ ಕೊಲ್ಲಾಪುರಿ, ‘ಪ್ರಜಾವಾಣಿ’ಯ ಹಿರಿಯ ಪತ್ರಕರ್ತೆ ರಶ್ಮಿ ಎಸ್., ನಾಟಕ ಅಕಾಡೆಮಿ ಸದಸ್ಯ ಕುಂಬಾಪುರ ವಿ. ಬಾಬು, ನಗರಸಭೆಯ ಕಂದಾಯ ನಿರೀಕ್ಷಕ ನಾಗರಾಜು ಆರ್., ಸಹ ಪ್ರಾಧ್ಯಾಪಕರಾದ ಡಾ. ಟಿ. ದೀಪಕ್ ಕುಮಾರ್, ಪ್ರೊ. ಪುಟ್ಟಸ್ವಾಮಿ, ಸಹಾಯಕ ಪ್ರಾಧ್ಯಾಪಕ ಶ್ರೀನಿವಾಸ ಗೌಡ ಇದ್ದರು.
ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿರುವ ಚನ್ನಪಟ್ಟಣ ತಾಲ್ಲೂಕಿನ ಲಾಳಾಘಟ್ಟದ ಎಸ್. ಪ್ರಭಾವತಿ, ತಂದೆ ಸುಬ್ರಮಣ್ಯ, ತಾಯಿ ಪಂಚಾಮೃತ ಹಾಗೂ ಅತಿಥಿಗಳನ್ನು ಸನ್ಮಾನಿಸಲಾಯಿತು.
ಕಾಂತಾಮಣಿ ಸ್ವಾಗತಿಸಿದರು. ಮನೋವೈದ್ಯಕೀಯ ಸಾಮಾಜಿಕ ಕಾರ್ಯಕರ್ತೆ ಪದ್ಮರೇಖಾ ಎಸ್. ನಿರೂಪಣೆ ಮಾಡಿದರು. ಸಹಾಯಕ ಪ್ರಾಧ್ಯಾಪಕಿ ನಂದಿನಿ ಕೆ.ಎನ್ ಪ್ರಾರ್ಥನೆ ಹಾಡಿದರು.





