ವಿಜಯ ದರ್ಪಣ ನ್ಯೂಸ್….
ನಗರದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧ: ನಗರಸಭಾಧ್ಯಕ್ಷ ಕೆ.ಶೇಷಾದ್ರಿ

ರಾಮನಗರ: ನಗರದ ವಿನಾಯಕನಗರ ಬಡಾವಣೆಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಹತ್ತು-ಹದಿನೈದು ದಿನಗಳಲ್ಲಿಯೇ ಈ ಭಾಗದ ಜನತೆಗೆ ಉತ್ತಮ ಹಾಗೂ ಗುಣಮಟ್ಟದ ರಸ್ತೆ ಲಭಿಸಲಿದ್ದು, ಹಲವು ವರ್ಷಗಳ ರಸ್ತೆ ಸಮಸ್ಯೆಗೆ ಮುಕ್ತಿ ಸಿಗಲಿದೆ ನಗರಸಭಾಧ್ಯಕ್ಷ ಕೆ.ಶೇಷಾದ್ರಿ ತಿಳಿಸಿದರು.
ನಗರದ 2ನೇ ವಾರ್ಡಿನ ವಿನಾಯಕನಗರ ಬಡಾವಣೆಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ವಿನಾಯಕನಗರ ಬಡಾವಣೆಯ ಸಾರ್ವಜನಿಕರು ರಸ್ತೆ ಅಭಿವೃದ್ಧಿಪಡಿಸುವಂತೆ ಮನವಿ ಮಾಡುತ್ತಲೇ ಬಂದಿದ್ದರು. ಅವರ ಮನವಿ ಮೇರೆಗೆ ನಗರೋತ್ಥಾನ ಅಡಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ.
1.36 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದ್ದು, ವಿನಾಯಕನಗರ ಬಡಾವಣೆ 9ನೇ ಬೀದಿ ಪ್ರಭು ಮನೆಯಿಂದ ರಾಮಪ್ಪ ಮನೆವರೆಗೆ, 6ನೇ ಬೀದಿ ಹೊನ್ನಮ್ಮ ಮನೆಯಿಂದ ಶಿವಣ್ಣ ಮನೆವರೆಗೆ, ವಿಜಯನಗರ ಚರ್ಚ್ ರಸ್ತೆಯಿಂದ ಅಪ್ಪಾಜಿ ಮನೆವರೆಗೆ, ನರಸಮ್ಮ ಮನೆ ಬೀದಿ, ಸತೀಶ್ ಮನೆಯಿಂದ ಜಿ. ಶಿವಲಿಂಗಯ್ಯ ಮನೆವರೆಗೆ ಸಿಮೆಂಟ್ ರಸ್ತೆ ಆಗಲಿದೆ. ವಾಟರ್ ಟ್ಯಾಂಕ್ ಸರ್ಕಲ್‌ನಿಂದ ಕಾಮಣ್ಣನಗುಡಿ ಸರ್ಕಲ್, ಶ್ರೀರಾಮ ದೇವಾಲಯದಿಂದ ಆಂಜನೇಯ ದೇವಾಲಯದ ನಾಣಿ ಮನೆ ವರೆಗೆ ರಸ್ತೆ ಡಾಂಬರೀಕರಣವಾಗಲಿದೆ ಎಂದರು.
ನಗರಸಭೆ ಎಂಜಿನಿಯರ್‌ಗಳು ನಿರಂತರವಾಗಿ ಕಾಮಗಾರಿಗಳ ಮೇಲುಸ್ತುವಾರಿ ನೋಡಿಕೊಳ್ಳಲಿದ್ದು ಎಲ್ಲೂ ಕಾಮಗಾರಿಗಳಲ್ಲಿ ಲೋಪದೋಷ ಆಗದಂತೆ ಎಚ್ಚರಿಕೆ ವಹಿಸಬೇ ಕೆಂದು ತಿಳಿಸಲಾಗಿದೆ. ಗುತ್ತಿಗೆದಾರರು ಕೂಡ ಸ್ಥಳೀಯರಾಗಿದ್ದು ಯಾವುದೇ ಲೋಪವಾಗದಂತೆ ಉತ್ತಮ ಗುಣಮಟ್ಟದ ರಸ್ತೆ ಮಾಡಿಕೊಡಲಿದ್ದಾರೆ ಎಂದರು.
ನಗರದ ಸರ್ವಾಂಗೀಣ ಅಭಿವೃದ್ದಿಗೆ ನಗರಸಭೆ ಮತ್ತು ಸದಸ್ಯರು ಕಟಿಬದ್ದರಾಗಿದ್ದೇವೆ. ಮಾದರಿ ನಗರ ನಿರ್ಮಾಣ ನಮ್ಮ ಕನಸಾಗಿದ್ದು ನನಸು ಮಾಡಲು ಬೇಕಾಗಿರುವ ಎಲ್ಲಾ ಅಭಿವೃದ್ದಿ ಕೆಲಸಗಳನ್ನು ಹಂತ ಹಂತವಾಗಿ ಮಾಡಲಾಗುತ್ತಿದೆ. ಹಸಿರು ರಾಮನಗರ, ಪ್ಲಾಸ್ಟಿಕ್ ಮುಕ್ತ ಹಾಗೂ ಸ್ವಚ್ಛ ರಾಮನಗರ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ನಗರಸಭೆ ನಾಮಿನಿ ಸದಸ್ಯ ಗೋವಿಂದರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ದೊಡ್ಡಿ ಸುರೇಶ್, ಅಧಿಕಾರಿಗಳಾದ ವಿಶ್ವನಾಥ್, ನಿರ್ಮಲ ಗುತ್ತಿಗೆ ದಾರ ವಾಸು ಹಾಗೂ ಸ್ಥಳೀಯರು ಇದ್ದರು.











