ವಿಜಯ ದರ್ಪಣ ನ್ಯೂಸ್…..
ಜಾತಿ ರಹಿತ ಪ್ರಜಾಪ್ರಭುತ್ವ ವ್ಯವಸ್ಥೆ ಅಗತ್ಯ: ಬಿ.ಸೋಮಶೇಖರ್

ತಾಂಡವಪುರ ಏಪ್ರಿಲ್ 1 ಜಾತಿ ರಹಿತ ಪ್ರಜಾಪ್ರಭುತ್ವ ವ್ಯವಸ್ಥೆ ಇಂದಿನ ಅಗತ್ಯ ಎಂದು ಮಾಜಿ ಸಚಿವ ಬಿ.ಸೋಮಶೇಖರ್ ಹೇಳಿದರು.
ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪದಲ್ಲಿ ತಿ.ನರಸೀಪುರ ತಾಲೂಕು ಚಾಮರಾಜನಗರ ಲೋಕಸಭಾ ವ್ಯಾಪ್ತಿಗೆ ಬರುವ ಯಾಚೇನಹಳ್ಳಿಯ ನನ್ನವ್ವ ಸಾಂಸ್ಕೃತಿಕ ಕಲಾತಂಡದಿಂದ ಕನ್ನಡ ರಾಜ್ಯೋತ್ಸವ, ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಆಯೋಜಿಸಿದ್ದ ಅಂಬೇಡ್ಕರ್ ಮತ್ತು ಸಂವಿಧಾನ ಕುರಿತ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲವನ್ನೂ ಜಾತಿಯಿಂದ ನೋಡುವ ಮನೋಭಾವ ಹೋಗಬೇಕು. ಶೋಷಿತ ಸಮಾಜದ ವ್ಯಕ್ತಿ ಮಾಡುವ ಒಳ್ಳೆಯ ಕೆಲಸವನ್ನು ಜನರು, ವ್ಯವಸ್ಥೆ ಗುರುತಿಸುವುದಿಲ್ಲ. ಆದರೆ, ಮೇಲ್ವರ್ಗದ ವ್ಯಕ್ತಿಯ ವಿರುದ್ಧ ಏನೇ ಆರೋಪಗಳಿದ್ದರೂ, ಅಕ್ರಮ, ಕೆಟ್ಟ ಕೆಲಸ ಮಾಡಿದರೂ, ಪ್ರಕರಣಗಳು ದಾಖಲಾಗಿದ್ದರೂ ಅವರ ಸಮಾಜ ಬೆನ್ನಿಗೆ ನಿಲ್ಲುತ್ತದೆ. ಇಂತಹ ವ್ಯವಸ್ಥೆ ತಪ್ಪಬೇಕು ಎಂದರು.
ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿರುವ ವ್ಯವಸ್ಥೆ ಬಡವರನ್ನು ಮತ್ತಷ್ಟು ಬಡವರನ್ನಾಗಿ ಮಾಡುತ್ತಿದೆ. ಪ್ರಜಾಪ್ರಭುತ್ವವನ್ನೂ ನಾಶಪಡಿಸುತ್ತಿದೆ. ಅವಕಾಶ ಸಿಕ್ಕಾಗ, ದೂರದೃಷ್ಟಿಯಿಂದ ಒಳ್ಳೆಯ ಯೋಜನೆಗಳನ್ನು ಮಾಡಬೇಕು. ಅಂಥವರನ್ನು ಜನ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ. ಅಂಥ ಕೆಲಸವನ್ನು ಸಾವಿತ್ರಿ ಬಾಯಿ ಫುಲೆ ದಂಪತಿ, ಅಂಬೇಡ್ಕರ್ ಮೊದಲಾದವರು ಮಾಡಿದ್ದಾರೆ. ಅವಮಾನವನ್ನು ಲೆಕ್ಕಿಸದೆ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.
ಇದೇ ವೇಳೆ ಬೆಂಗಳೂರು ದಕ್ಷಿಣ ಜಿಲ್ಲೆಯ ಕೆಡಿಪಿ ಸದಸ್ಯ ಗುರುಮೂರ್ತಿ.ಎನ್.ಸಿ ಅವರಿಗೆ ಡಾ.ಬಿ.ಆರ್. ಅಂಬೇಡ್ಕರ್ ಪುರಸ್ಕಾರ ಪ್ರದಾನ ಮಾಡಲಾಯಿತು.
ಹೂಟಗಳ್ಳಿಯ ಗೀತಾ ಮತ್ತು ತಂಡದವರು ಅಂಬೇಡ್ಕರ್ ಪ್ರಾರ್ಥನಾ ಸಮೂಹ ಗೀತೆ ಹಾಡಿದರು. ತಿ.ನರಸೀಪುರದ ಭೀಮಬಾಯಿ ಮಹಿಳಾ ತಂಡದವರು ಮಹಾನಾಯಕ ನೃತ್ಯ ಪ್ರದರ್ಶನ ನೀಡಿದರು.
ಸುತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ ಮರಳ್ಳಿ ರಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ತಿ.ನರಸೀಪುರ ತಾಲೂಕು ಪಂಚಾಯಿತಿ ತಾಂತ್ರಿಕ ಸಹಾಯಕ ಎಂಜಿನಿಯರ್ ಎಂ.ಕಿರಣ್ ಕುಮಾರ್, ನಿವೃತ್ತ ಶಿಕ್ಷಕ ನಾ.ಗಂಗಾಧರಪ್ಪ, ಲೇಖಕಿ ಪ್ರಭಾಶಾಸ್ತ್ರಿ ಜೋಶುಲ, ನನ್ನವ್ವ ಸಾಂಸ್ಕೃತಿಕ ಕಲಾತಂಡದ ಅಧ್ಯಕ್ಷ ಯಾಚೇನಹಳ್ಳಿ ಮಹದೇವ್ ಪಾಲ್ಗೊಂಡಿದ್ದರು.











