ವಿಜಯ ದರ್ಪಣ ನ್ಯೂಸ್….
ಕವಿ, ಉಪನ್ಯಾಸಕ, ಸಾಂಸ್ಕೃತಿಕ ಪರಿಚಾರಕ ಡಾ.ಸಿಸಿರಾ

ಜನ್ಮ ದಿನದ ಸಂಭ್ರಮ
ಕವಿ, ಸಾಹಿತ್ಯ, ಸಾಂಸ್ಕೃತಿಕ ಸಂಘಟಕ ಕನ್ನಡ ಉಪನ್ಯಾಸಕರು ಆದ ಡಾ.ಸಿಸಿರಾ ಅವರು 1973 ಏಪ್ರಿಲ್ 05 ರಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಸಿದ್ಧನಹಳ್ಳಿಯಲ್ಲಿ ರೈತ ಕಾರ್ಮಿಕರಾದ ಸಿದ್ದೇಗೌಡ, ಪದ್ಮಾ ದಂಪತಿಗೆ ಜನಿಸಿದವರು.ಇವರ
ಪೂರ್ಣ ಹೆಸರು ಸಿದ್ಧನಹಳ್ಳಿ ಸಿದ್ದೇಗೌಡ ರಾಮಲಿಂಗೇಶ್ವರ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಹಾಗೂ ಪಿಹೆಚ್. ಡಿ ಪದವಿ ಪಡೆದು ಪ್ರತಿಷ್ಠಿತ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಉಪನ್ಯಾಸಕರಾಗಿದ್ದಾರೆ.ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾಗಿದ್ದರು.
ಕುವೆಂಪು ಮಂತ್ರ ಮಾಂಗಲ್ಯ ಸಾಹಿತ್ಯದ ಆಶಯದಂತೆ ಎಂ.ಎ. ಪದವೀಧರೆ ಸಿ.ಹೇಮಾವತಿಯೊಂದಿಗೆ ವೈವಾಹಿಕ ಜೀವನ, ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಸ್ಥಾಪಿಸಿಕೊಂಡು ಗಾಂಧೀಜಿ, ವಿವೇಕಾನಂದ, ಅಂಬೇಡ್ಕರ್, ಬಸವಣ್ಣನವರ ಚಿಂತನೆಗಳನ್ನು ಯುವಕರು ಹಾಗೂ ಸಾರ್ವಜನಿಕರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ.
ಸಾಹಿತ್ಯ, ಸಂಸ್ಕೃತಿ ಪರಿಚಾರಕರಾಗಿರುವ ಸಿಸಿರಾ ಅವರು ಸಾಹಿತ್ಯ ಕ್ಷೇತ್ರದಲ್ಲೂ ಕೃಷಿ ಮಾಡಿದ್ದು ಚೈತ್ರ ಚಿತ್ತಾರ, ಪ್ರೇಮ ಗಂಗೆ, ಸ್ವಾತಂತ್ರ್ಯಾನಂತರ, ಸೋನೆಮಳೆ, ತಾಯಿ ನಾಡು, ನಿನ್ನ ಪ್ರೀತಿಯ ಹಿಂದೆ, ಭೂಮಿ ತಬ್ಬಿದ ಆಕಾಶ ಮುಂತಾದ ಕೃತಿಗಳು ಪ್ರಕಟಗೊಂಡಿವೆ.

ಇವರ ಸಾಹಿತ್ಯ ಸಂಸ್ಕೃತಿ ಪರಿಚಾರಕೆಗೆ ಹತ್ತಾರು ಸಂಘಸಂಸ್ಥೆಗಳು ಗೌರವಿಸಿ ಅಭಿನಂದಿಸಿವೆ. ಸಾಹಿತ್ಯ ಪರಿಷತ್ತಿನಿಂದ ‘ಮಯೂರ ವರ್ಮ’ ದತ್ತಿ ಪ್ರಶಸ್ತಿ, ನಾಡೋಜ ಹಂಪನಾ ಅವರಿಂದ ‘ಜನೋಪಕಾರಿ ‘ಬಿರುದು, ವಿದ್ವಾನ್ ಮಲ್ಲೇಪುರಂ ಜಿ.ವೆಂಕಟೇಶ್ ಅವರಿಂದ ‘ಕನ್ನಡ ಮಾಣಿಕ್ಯ ‘ ಮುಂತಾದ ಪ್ರಶಸ್ತಿಗಳು ಸಂದಿವೆ. ಸದಾ ಒಂದಿಲ್ಲೊಂದು ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಿಕ ಕಾರ್ಯಕ್ರಮಗಳನ್ನು ಆಯೋಜಿಸಿ ವಿವಿಧ ಕ್ಷೇತ್ರಗಳಲ್ಲಿ ಸದ್ದಿಲ್ಲದೆ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿ ದತ್ತಿ ಪ್ರಶಸ್ತಿ, ಗೌರವ ಸನ್ಮಾನ ನೀಡಿ ಪ್ರೋತ್ಸಾಹಿಸುತ್ತಿದ್ದಾರೆ. ಇಂದು ಸಿಸಿರಾ ಅವರ ಜನ್ಮದಿನದ ಸಂಭ್ರಮ……






