ವಿಜಯ ದರ್ಪಣ ನ್ಯೂಸ್….
ಮಾನವೀಯ ಗುಣದ ಅಧಿಕಾರಿ ಐ ಎಂ ವಿಠಲಮೂರ್ತಿ : ನಿರ್ದೇಶಕ ಟಿ ಎನ್ ಸೀತಾರಾಮ್

ಬೆಂಗಳೂರು: ಅನ್ಯಾಯವಾದವರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಒಂದು ವ್ಯವಸ್ಥೆ ಮಾಡಬೇಕು. ಅದನ್ನು ಐ.ಎಂ ವಿಠಲಮೂರ್ತಿ ಮಾಡುತ್ತಿದ್ದರು. ಕಾನೂನು ಯಾವಾಗಲೂ ನ್ಯಾಯದ ಕಡೆ ಇರಬೇಕು. ಕಾನೂನನ್ನು ಮನುಷ್ಯನ ಅಗತ್ಯಕ್ಕೆ ತಕ್ಕ ಹಾಗೆ ಸಂವಿಧಾನದ ಚೌಕಟ್ಟಿನಲ್ಲೇ ತಿರುಗಿಸುವ ಕಲೆ ಅವರಿಗಿತ್ತು. ಅವರು ಕಾನೂನು ಪಾಲಿಸುವ ಮಾನವೀಯ ಗುಣದ ಅಧಿಕಾರಿಯೂ ಆಗಿದ್ದರು ಎಂದು ಹಿರಿಯ ನಿರ್ದೇಶಕ ಟಿ.ಎನ್. ಸೀತಾರಾಂ ಹೇಳಿದ್ದಾರೆ.
ನಗರದ ಐಎಎಸ್ ಅಧಿಕಾರಿಗಳ ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಹುರೂಪಿ ಪ್ರಕಾಶನ ಪ್ರಕಟಿಸಿರುವ ನಿವೃತ್ತ ಐಎಎಸ್ ಅಧಿಕಾರಿ ಐ.ಎಂ ವಿಠಲಮೂರ್ತಿ ಅವರ ‘ಬದುಕು ಜಟಕಾ ಬಂಡಿ, ನಾನದರ ಸಾಹೇಬ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು. ಯಾವುದೇ ವಿಷಯ, ಸಮಸ್ಯೆಗಳನ್ನು ನಗುತ್ತ ಆಲಿಸುತ್ತಲೇ ಕಾನೂನಾತ್ಮಕವಾಗಿ ಹೇಗೆ ಬಗೆಹರಿಸಬಹುದು ఎంబ ಬಗ್ಗೆಯೂ ಯೋಚಿಸುತ್ತಿದ್ದರು. ಸಮಸ್ಯೆಗೆ ಶೀಘ್ರು ಪರಿಹಾರ ಒದಗಿಸುವ ಕಾರ್ಯ ಮಾಡುತ್ತಿದ್ದರು. ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಯಾಗಿದ್ದಾಗ ಮಾಡಿದ ಕನ್ನಡ ಕೆಲಸಗಳು ಸಾರ್ಥಕವಾದಂತಹವು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್ ಮಾತನಾಡಿ, ಪುಸ್ತಕದಲ್ಲಿರುವ ಎಲ್ಲ ವಿಷಯಗಳು ಆಸಕ್ತಿದಾಯಕವಾಗಿದೆ ಮುಖ್ಯಮಂತ್ರಿಗಳಾಗಿದ್ದ ಜೆ.ಎಚ್. ಪಟೇಲ್, ಗುಂಡೂರಾವ್, ನರಗುಂದ ಬಂಡಾಯ, ಪಟ್ಟದಕಲ್ಲು ಉತ್ಸವ, ಆಡಳಿತದಲ್ಲಿ ಭ್ರಷ್ಟಾಚಾರ, ಕನ್ನಡಕ್ಕೆ ಒಬ್ಬನೇ ರಾಜಕುಮಾರ ಎಂಬುದರ ಕುರಿತು ಬರೆದಿದ್ದಾರೆ. ಸಿದ್ದರಾಮಯ್ಯ ಬಗ್ಗೆಯೂ ಬರೆದಿದ್ದಾರೆ. ಆದರೆ ಸಿದ್ದರಾಮಯ್ಯ ಅವರನ್ನು ದೇವರಾಜ ಅರಸು ಅವರಿಗೆ ಹೋಲಿಕೆ ಮಾಡುವುದು ಸರಿಯಲ್ಲ. ಅವರ ಆಡಳಿತವನ್ನು ಹತ್ತಿರದಿಂದ ನೋಡಿದ್ದೇನೆ ಎಂದು ಹೇಳಿದರು.
ದಿ ಪ್ರಿಂಟರ್ಸ್ ಪ್ರೈ.ಲಿ ನಿರ್ದೇಶಕ ಕೆ.ಎನ್ ಶಾಂತಕುಮಾರ್, ನಿರ್ದೇಶಕ ಕಾಸರವಳ್ಳಿ, ಪ್ರಕಾಶಕ ಜಿ.ಎನ್. ಮೋಹನ್ ಮತ್ತಿತರರು ಉಪಸ್ಥಿತರಿದ್ದರು.










