ವಿಜಯ ದರ್ಪಣ ನ್ಯೂಸ್……
ಮಾನವನ ದುಡಿಮೆ ಬಸಿದ ಬೆವರಿನ ಬೆಣ್ಣೆಯಂತಾಗಬೇಕು

ಮಧುಗಿರಿ, ಏ 5 : ತಾನು ಬದುಕುವ ಹಾದಿಯನ್ನು ನೋಡಿ ಮನುಕುಲವೇ ಮೆಚ್ಚುವಂತಿರಬೇಕು. ಮನುಕುಲದ ಮನಕ್ಕೆ ಮಸಿ ಬಳಿಯುವ ಜೀವನ ನಮ್ಮದಾಗಬಾರದು. ಜೀವನಕ್ಕೆ ಆದಾಯ ಬೇಕು. ಆದರೆ ಗಳಿಕೆಯೇ ಜೀವನವಾಗಬಾರದು. ಮಾನವನ ದಡಿಮೆ ಬಸಿದ ಬೆವರಿನ ಬೆಣ್ಣೆಯಂತಾಗಬೇಕು ಎಂದು ಟಿವಿವಿ ಕಾಲೇಜಿನ ನಿವೃತ್ತ ಪ್ರಾಚಾರ್ಯ ಸಿ,ಕೃಷ್ಣಪ್ಪ ಹೇಳಿದರು.
ಪಟ್ಟಣದ ಕಾಳಿಕಾಂಬ ದೇವಿಗೆ ವಿಶ್ವ ಶಂಕರ ಫೌಂಡೇಶನ್ ವತಿಯಿಂದ ನಡೆದ 87ನೇ ಬೆಳದಿಂಗಳ ಹುಣ್ಣಿಮೆ ಪೂಜಾ ಸತ್ಸಂಗದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಣ್ಣದ ಬದುಕಿನ ಚಿತ್ತಾರ ನೋಟ-ಕೈ ಮಾತ್ರ ಚೆಂದ ಅನುಭವಿಸಲು ಚೆನ್ನಾಗಿರುವುದಿಲ್ಲ. ಕಷ್ಟಗಳ ಹೊಡೆತಕ್ಕೆ ಬಣ್ಣ ಕರಗಿ ಹೋಗುತ್ತದೆ. ಕಷ್ಟ ಕಾರ್ಪಣ್ಯಕ್ಕೆ ಕರಗದ ಜೀವನ ನಮ್ಮದಾಗಬೇಕು.
ಹಾಗಾದರೆ ನಾವು ನಡೆಯುವ ದಾರಿ ಚೆನ್ನಾಗಿರಬೇಕಲ್ಲವೇ ನಮ್ಮ ಅಂತರಾಳದಲ್ಲಿ ಭಕ್ತಿಯ ಗಿಡ ಹುಟ್ಟಬೇಕು. ಭಕ್ತಿ ಪಂಜಿನ ಬೆಳಕಿನಂತೆ ನಮ್ಮ ಕೈ ಹಿಡಿದು ನಡೆಸುತ್ತದೆ.ಭಕ್ತಿಯ ಬೆಳಕು ಸೂರ್ಯನಷ್ಟೇ ಪ್ರಖರವಾಗಿರುತ್ತದೆ. ಭಕ್ತಿಯ ಗಿಡ ಚಿಗುರಿದವನ ಹೃದಯದಲ್ಲಿ ಶರೀರ ಮೋಹ ಕಾಣದು. ಅಹಂಕಾರ ಗೂಡು ಕಟ್ಟದು. ಉಸಿರಿನಲ್ಲಿ ಭಯವಿರದು ಕಾಮನೆಗಳು ಕಾವಿತೊಡುತ್ತವೆ. ಚಿತ್ತ ನಿರಪೇಕ್ಷವಾಗುತ್ತದೆ. ಜ್ಞಾನ ಪರಮಾನಂದವನ್ನು ಅನುಭವಿಸುತ್ತದೆ. ಭಾವ ದಿಗಂಬರವನ್ನು ಅಪ್ಪಿಕೊಳ್ಳುತ್ತದೆ.
ಒಟ್ಟಾರೆ ಬದುಕು ತೃಪ್ತಿಯ ತುಪ್ಪವಾಗುತ್ತದೆ ತುಪ್ಪದ ಊಟ ಯಾರು ಬೇಕಾದರೂ ಉಣ್ಣಲಿ..ಭಕ್ತಿಯ ಹಾದಿ ಮನುಕುಲವನ್ನು ಎತ್ತರಕ್ಕೆ ಬೆಳೆಸುತ್ತದೆ. ದೇವರಿಗೆ ಪೂಜೆ ಮಾಡಿದರೆ ಸಾಲದು.ಮಾತಾ ಪಿತೃಗಳಿಗೆ ಪೂಜೆ ನಡೆಯಬೇಕು. ಪಾದ ಪೂಜೆಗಿಂತಲೂ ಪದ ಪೂಜೆ ಶ್ರೇಷ್ಠ. ಆಧುನಿಕ ಕಾಲದಲ್ಲಿ ಇಂಥ ಸತ್ಸಂಗಗಳು ಹೆಚ್ಚು ನಡೆಸಬೇಕು ಎಂದರು.
ಇದೇ ಸಂದರ್ಭದಲ್ಲಿ ವಿಶ್ವಶಂಕರ ಫೌಂಡೇಶನ್ ವತಿಯಿಂದ ಪ್ರೊ.ಸಿ.ಕೃಷ್ಣಪ್ಪ ಹಾಗೂ ಹಿರಿಯರಾದ ರಾಮಾಚಾರ್ ರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸೇವಾಕರ್ತರಾದ ಹಳೇಹಟ್ಟಿ ಗೋವಿಂದರಾಜು, ಕಮಲ ಕುಮಾರಿ, ಗುಣಶ್ರೀ, ಶ್ರೀನಿವಾಸ್, ಪುರೋಹಿತ ದೊಡ್ಡರಿ ಸಾಯಿಪ್ರಕಾಶ್, ಈರಣ್ಣ, ಧನುಷ್, ರಮೇಶ್, ಶ್ರೀನಿವಾಸ್, ಶ್ರೀಧರ, ಶಶಾಂಕ್, ಡಾ ಅಮರಾವತಿ ದ್ರೇಹಾಚಾರ್ ಮತ್ತಿತರರು ಭಾಗವಹಿಸಿದ್ದರು.
ಭಜನ-ಪ್ರವಚನ-ಸಂಕೀರ್ತನ
ಬೆಂಗಳೂರು : ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಸುಬ್ರಹ್ಮಣ್ಯನಗರದ ಸೋಸಲೆ ಶ್ರೀ ವ್ಯಾಸರಾಜ ಮಠದಲ್ಲಿ ಏಪ್ರಿಲ್ 7 ರಿಂದ 10ರ ವರೆಗೆ ಧಾರ್ಮಿಕ/ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅವುಗಳ ವಿವರಗಳು ಈ ರೀತಿ ಇವೆ :
ಭಜನಾ ಕಾರ್ಯಕ್ರಮ (ಪ್ರತಿದಿನ ಸಂಜೆ 6 ರಿಂದ 7) : ಏಪ್ರಿಲ್ 7-ಜಾನ್ಹವಿ ಭಜನಾ ಮಂಡಳಿ, ಏಪ್ರಿಲ್ 8-ಸುರಭಿ ಗಾನ ಭಜನಾ ಮಂಡಳಿ, ಏಪ್ರಿಲ್ 9-ಪವಿತ್ರ ಗಾನ ವೃಂದ ಭಜನಾ ಮಂಡಳಿ.
ಪ್ರವಚನ ಕಾರ್ಯಕ್ರಮ (ಪ್ರತಿದಿನ ಸಂಜೆ 7 ರಿಂದ 8) : ಪ್ರವಚನಕಾರರು : ಶ್ರೀ ರಾಮವಿಠಲಾಚಾರ್, ವಿಷಯ : ಭಾವೀಸಮೀರ ಶ್ರೀ ವಾದಿರಾಜರ ವಿರಚಿತ “ಹರಿಸರ್ವೋತ್ತಮ ಸಾರ”.
ಗಾಯನ ಕಾರ್ಯಕ್ರಮ : ಏಪ್ರಿಲ್ 10, ಶುಕ್ರವಾರ ಸಂಜೆ 6-30 ರಿಂದ 8-00ರ ವರೆಗೆ ಯುವ ಗಾಯಕ ಶ್ರೀ ಕೆ.ಪಿ. ಶಿಶಿರ್ ಅವರು “ಹರಿನಾಮ ಸಂಕೀರ್ತನೆ” ನಡೆಸಿಕೊಡಲಿದ್ದು, ಇವರ ಗಾಯನಕ್ಕೆ ಪಿಟೀಲು ವಾದನದಲ್ಲಿ ವಿ|| ಶ್ರೀ ಎಂ.ಎಸ್. ಗೋವಿಂದಸ್ವಾಮಿ ಮತ್ತು ತಬಲಾ ವಾದನದಲ್ಲಿ ಶ್ರೀ ಧ್ರುವ ಆಚಾರ್ಯ ಸಾಥ್ ನೀಡಲಿದ್ದಾರೆ ಎಂದು ಟಿಟಿಡಿ ಹೆಚ್.ಡಿ.ಪಿ.ಪಿ ಸಂಚಾಲಕರಾದ ಡಾ|| ಪಿ. ಭುಜಂಗರಾವ್ ತಿಳಿಸಿದ್ದಾರೆ.
ಕಾರ್ಯಕ್ರಮ ನಡೆಯುವ ಸ್ಥಳ : ಶ್ರೀ ವ್ಯಾಸರಾಜ ಮಠ (ಸೋಸಲೆ), 5ನೇ ಮುಖ್ಯರಸ್ತೆ, ‘ಎ’ ಬ್ಲಾಕ್, ರಾಜಾಜಿನಗರ 2ನೇ ಹಂತ ಸುಬ್ರಹ್ಮಣ್ಯನಗರ, ಬೆಂಗಳೂರು560010






