ವಿಜಯ ದರ್ಪಣ ನ್ಯೂಸ್….
ಕಾಂಗ್ರೆಸ್ ಮಹಿಳಾ ವಿರೋಧಿ ನಡೆ ಬಹಿರಂಗ: ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ

ತಾಂಡವಪುರ ಏಪ್ರಿಲ್ 18: ಕೇಂದ್ರ ಬಿಜೆಪಿಯ ಶೇ.೩೩ರಷ್ಟು ಮೀಸಲು ಜಾರಿಯನ್ನು ವಿರೋಧಿಸುವ ಮೂಲಕ ಕಾಂಗ್ರೆಸ್ ದೇಶದ ಮಹಿಳೆಯರ ಮೂವತ್ತು ವರ್ಷದ ಕನಸನ್ನು ಒಡೆದು ಹಾಕಿ, ಮಹಿಳಾ ವಿರೋಧಿ ನಡೆ ಬಹಿರಂಗವಾಗಿದೆ ಎಂದು ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ ತಿಳಿಸಿದರು.
ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ೭೦ ಕೋಟಿ ಮಹಿಳೆಯರಿದ್ದಾರೆ. ಮಹಿಳೆಯರು ಎಂದರೆ ಕೇವಲ ಸೋನಿಯಾಗಾಂಧಿ, ಇಂದಿರಾಗಾಂಧಿ ಅಥವಾ ಪ್ರಿಯಾಂಕಾ ಗಾಂಧಿ ಮಾತ್ರವೇ? ಈ ಮೂವರು ಮಾತ್ರ ಲೋಕಸಭೆ ಸದಸ್ಯರಾಗಬೇಕೆ? ಬೇರೆ ಯಾರೂ ವಿಧಾನಸಭೆ, ಲೋಕಸಭೆಗೆ ಹೋಗಬಾರದೆ? ಸಾಮಾನ್ಯ ಕುಟುಂಬದ ಹೆಣ್ಣುಮಕ್ಕಳು, ದಲಿತ ಹಾಗೂ ಹಿಂದುಳಿದ ವರ್ಗದ ಮಹಿಳೆಯರು ಸಂಸತ್ತಿಗೆ ಹೋಗುವುದು ಕಾಂಗ್ರೆಸ್‌ಗೆ ಇಷ್ಟವಿಲ್ಲ. ಇಂತಹ ಬೇಜವಾಬ್ದಾರಿಯ ಪರಿಕಲ್ಪನೆಯನ್ನು ರಾಹುಲ್ ಗಾಂಧಿ ಲೋಕಸಭೆಯಲ್ಲಿ ಪ್ರದರ್ಶಿಸಿದ್ದಾರೆ. ಅವರಿಗೆ ಮಹಿಳಾ ಸಬಲೀಕರಣದ ಬಗ್ಗೆ ಕಾಳಜಿ ಇಲ್ಲ ಎಂಬುದು ಈ ನಡವಳಿಕೆಯಿಂದ ಸಾಬೀತಾಗಿದೆ. ನಾರಿ ಶಕ್ತಿ ವಿಧೇಯಕದ ವಿರುದ್ಧ ಮತ ಹಾಕಿ ಮಹಿಳೆಯರ ೩೦ ವರ್ಷಗಳ ಕನಸನ್ನು ನುಚ್ಚುನೂರು ಮಾಡಿದ್ದಾರೆ ಎಂದು ಕಿಡಿಕಾರಿದರು.
ರಾಜೀವ್‌ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಮಹಿಳಾ ಮೀಸಲಾತಿ ಪ್ರಸ್ತಾಪಿಸಿದ್ದರು. ಬಳಿಕ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಜಾರಿಗೆ ಬಂದಿತ್ತು. ಅವರಿಗೆ ಮಹಿಳೆಯರ ಬಗ್ಗೆ ಕಾಳಜಿ ಇದ್ದರೆ ಅಂದೇ ಶೇ.೩೩ ಮೀಸಲಾತಿ ನೀಡಬಹುದಿತ್ತು. ಅದಕ್ಕೆ ಪೂರಕವಾಗಿ ಸಂಪೂರ್ಣ ಬಹುಮತವೂ ಇತ್ತು. ಆದರೆ, ಅವರಿಗೆ ಮಹಿಳಾ ಸಬಲೀಕರಣ ಬೇಕಿಲ್ಲ. ಇಂದು ಕೇಂದ್ರ ಸರ್ಕಾರ ಮೀಸಲಾತಿ ನೀಡಲು ಮುಂದಾದರೆ ಅದನ್ನು ಕಾಂಗ್ರೆಸ್ ವಿರೋಧಿಸುತ್ತದೆ.
ಕಾಂಗ್ರೆಸ್ ಕೇವಲ ಅಭಿವೃದ್ಧಿ ವಿರೋಧಿ ಮಾತ್ರವಲ್ಲ, ಮಹಿಳೆಯರು, ಬಡವರು, ಹಿಂದುಳಿದವರ ವಿರೋಧಿ. ಬಿಜೆಪಿಯಲ್ಲಿ ಮಹಿಳಾ ಶಕ್ತಿಗೆ ಮನ್ನಣೆ: ಮಹಿಳೆಯರಿಗೆ ಉನ್ನತ ಸ್ಥಾನಮಾನ ನೀಡುವಲ್ಲಿ ಬಿಜೆಪಿ ಸದಾ ಮುಂಚೂಣಿಯಲ್ಲಿದೆ. ದ್ರೌಪದಿ ಮುರ್ಮು ಅವರಿಗೆ ದೇಶದ ಅತ್ಯುನ್ನತ ರಾಷ್ಟ್ರಪತಿ ಹುದ್ದೆ, ನಿರ್ಮಲಾ ಸೀತಾರಾಮನ್ ಅವರಿಗೆ ಹಣಕಾಸು ಖಾತೆ, ಸುಷ್ಮಾ ಸ್ವರಾಜ್, ಉಮಾ ಭಾರತಿ, ವಸುಂಧರಾ ರಾಜೆ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
ಶೋಭಾ ಕರಂದ್ಲಾಜೆ ಅವರನ್ನು ಮೈಸೂರಿನ ಉಸ್ತುವಾರಿ ಸಚಿವೆಯಾಗಿಸಿದ್ದು ಬಿಜೆಪಿ. ಮೈಸೂರಿನ ಮೊದಲ ಮಹಿಳಾ ಮೇಯರ್ ಸುನಂದಾ ಫಾಲನೇತ್ರ ಬಿಜೆಪಿಯವರು. ಬಿಜೆಪಿ ಮಹಿಳೆಯರಿಗೆ ಉನ್ನತ ಸ್ಥಾನ ನೀಡಿ, ಗೌರವಿಸುವ ಕೆಲಸ ಮಾಡುತ್ತಿದ್ದರೆ, ಕಾಂಗ್ರೆಸ್ ಮಹಿಳಾ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ. ಮುಂಬರುವ ಚುನಾವಣೆಯಲ್ಲಿ ದೇಶದ ಮಹಿಳೆಯರು ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಒಳ್ಳೆಯ ಕೆಲಸಗಳನ್ನು ವಿರೋಧಿಸುವುದೇ ಕಾಂಗ್ರೆಸ್ ಚಾಳಿಯಾಗಿದೆ. ಆರ್ಟಿಕಲ್ ೩೭೦ ರದ್ದತಿ, ರಾಮಜನ್ಮಭೂಮಿ ಸೇರಿದಂತೆ ಎಲ್ಲವನ್ನೂ ಕಾಂಗ್ರೆಸ್ ವಿರೋಧಿಸಿದ್ದು, ಅಭಿವೃದ್ಧಿಗೆ ಅಡ್ಡಗಾಲು ಹಾಕಿದೆ. ದೇಶದ ಜನ ಕಾಂಗ್ರೆಸ್ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದರು. ದಕ್ಷಿಣ ಭಾರತಕ್ಕೆ ಅನ್ಯಾಯವಾಗಿಲ್ಲ: ಕ್ಷೇತ್ರ ಮರುವಿಂಗಡಣೆಯಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗಿಲ್ಲ. ಕರ್ನಾಟಕದಲ್ಲಿ ಲೋಕಸಭಾ ಸ್ಥಾನಗಳ ಸಂಖ್ಯೆ ೨೮ ರಿಂದ ೪೨ಕ್ಕೆ ಏರಿಕೆಯಾಗಲಿದೆ. ತಮಿಳುನಾಡಿನಲ್ಲಿ ೯ ಸೀಟುಗಳು ಹೆಚ್ಚಾಗಲಿವೆ. ಸೀಟುಗಳ ಸಂಖ್ಯೆ ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ಸ್ಟಾಲಿನ್ ಹಾಗೂ ಕಾಂಗ್ರೆಸ್ ನಾಯಕರು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಮೋಹನ್, ಮಹೇಶ್‌ರಾಜೇ ಅರಸ್, ವಸಂತ್‌ಕುಮಾರ್, ರೇಣುಕಾರಾಜ್ ಇದ್ದರು.









