--Ads--

ವಿಶ್ವ ಭೂಮಿ ದಿನ ಏಪ್ರಿಲ್ 22 World Earth Day April 22.. ವಿಚಿತ್ರವಾದರೂ ಸತ್ಯ….

On: April 23, 2026 3:27 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ವಿಶ್ವ ಭೂಮಿ ದಿನ ಏಪ್ರಿಲ್ 22
World Earth Day April 22
••••••••••••••••••••••••••••••••ವಿಚಿತ್ರವಾದರೂ ಸತ್ಯ……

 

ಪರಿಸರ ನಾಶದಿಂದ ಬರಗಾಲ ತಾಂಡವವಾಡುತ್ತಿದೆ,

ಕೆರೆ ಕಟ್ಟೆ ನಾಶದಿಂದ ಅಂತರ್ಜಲ ಕುಸಿಯುತ್ತಿದೆ,

ಮಳೆ ನೀರಿನ ಅಸಮರ್ಪಕ ನಿರ್ವಹಣೆಯಿಂದ ಕುಡಿಯುವ ನೀರಿಗೆ ಹಾಹಾಕಾರವಾಗುತ್ತಿದೆ,

ಗಿಡಮರಗಳ ನಾಶದಿಂದ ಗಾಳಿ ವಿಷಯುಕ್ತವಾಗುತ್ತಿದೆ,

ಅವೈಜ್ಞಾನಿಕ ರಸ್ತೆಗಳಿಂದ ಭೀಕರ ಅಪಘಾತಗಳಾಗುತ್ತಿವೆ,

ದೊಡ್ಡ ರಸ್ತೆಗಳಲ್ಲೇ ಟ್ರಾಫಿಕ್ ಜಾಮ್ ಗಳಾಗುತ್ತಿವೆ,

ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕಾಡುತ್ತಿದೆ,

ಯುವಜನರಲ್ಲಿ ನಿರುದ್ಯೋಗ ಸಾಮಾನ್ಯವಾಗುತ್ತಿದೆ,

ರೈತರ ಕೃಷಿಭೂಮಿ ಕಂಡವರ ಪಾಲಾಗುತ್ತಿದೆ,

ಬೆಳೆಗಳು ಪ್ರಕೃತಿಯ ಮುನಿಸಿಗೆ ತುತ್ತಾಗುತ್ತಿವೆ,

ಬೆಳೆದರೂ ಬೆಲೆಗಳಿಲ್ಲದೆ ಮಾರುಕಟ್ಟೆ ಕುಸಿಯುತ್ತಿದೆ,

ರೈತರ ಆತ್ಮಹತ್ಯೆಗಳು ಸಹಜವಾಗುತ್ತಿವೆ,

ಕೊಲೆ, ಸುಲಿಗೆ, ಅತ್ಯಾಚಾರಗಳು ಹೆಚ್ಚಾಗುತ್ತಿವೆ,

ಚುನಾವಣೆಗಳು ಹಣ, ಹೆಂಡ ಹಂಚುವ ಹಬ್ಬಗಳಾಗುತ್ತಿವೆ,

ಬಹಳಷ್ಟು ಜನರಲ್ಲಿ ಹತಾಶೆ, ಆಕ್ರೋಶ ಹೆಚ್ಚಾಗುತ್ತಿದೆ,

ಬಡತನ, ಅಸಮಾನತೆ, ಜಾಗೃತ ಮನಸ್ಥಿತಿಯವರಲ್ಲಿ ಅಸಹನೀಯತೆ ಬೆಳೆಸುತ್ತಿದೆ,

ಹೆಜ್ಜೆ ಹೆಜ್ಜೆಗೂ ಭಿನ್ನಾಭಿಪ್ರಾಯ,
ಮಾತು ಮಾತಿಗೂ ವಾದ ವಿವಾದ,
ಪ್ರತಿವಿಷಯಕ್ಕೂ ಅನಾವಶ್ಯಕ ಚರ್ಚೆಗಳು,
ಪ್ರತಿಯೊಂದಕ್ಕೂ ವಿರೋಧ – ಧಿಕ್ಕಾರ,
ಎಲ್ಲದಕ್ಕೂ ಗಲಾಟೆ – ಗಲಭೆಗಳು,
ಎಲ್ಲದರಲ್ಲೂ ಗೊಂದಲ,
ಸ್ಪಷ್ಟತೆ ಎಂಬುದನ್ನೇ ಮರೆಮಾಚಲಾಗಿದೆ.

ಹಾಗಾದರೆ ಇಷ್ಟು ವರ್ಷಗಳ ಮಾನವ ಬದುಕಿನ ಇತಿಹಾಸದಿಂದ
ತಿಳಿದಿದ್ದೇನು, ಗಳಿಸಿದ್ದೇನು, ಪಡೆದದ್ದೇನು.

ನೆಮ್ಮದಿ ಕಳೆದುಕೊಳ್ಳುವುದು – ಯೋಗ ಧ್ಯಾನ ಮಾಡುವುದು,

ಆರೋಗ್ಯ ಕಳೆದುಕೊಳ್ಳುವುದು – ಔಷಧಿ ತೆಗೆದುಕೊಳ್ಳುವುದು,

ಹೊಡೆದಾಟ ಮಾಡಿಕೊಳ್ಳುವುದು – ಜಾಮೀನು ಪಡೆಯುವುದು,

ಹಾದಿ ಬೀದಿ ರಂಪ ಮಾಡುವುದು – ನಾಯಕರಾಗುವುದು,

ಹಣ ಮಾಡುವುದು – ಚುನಾವಣೆಗೆ ಸ್ಪರ್ಧಿಸುವುದು,

ಹಣ ಹಂಚುವುದು – ಮತ ಪಡೆಯುವುದು,

ಅಧಿಕಾರ ಹಿಡಿಯುವುದು – ಮಜಾ ಉಡಾಯಿಸುವುದು.

ಕೇವಲ ಈ ಗೊಂದಲಗಳಲ್ಲೇ ನಾವು ಕಾಲ ಕಳೆದರೆ,
ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ನಮ್ಮನ್ನು ತೊಡಗಿಸಿಕೊಂಡು ಅದ್ಭುತ ಸಾಧನೆಗಳನ್ನು ಮಾಡುವುದೆಂದು,

ಸಿನಿಮಾ ಕ್ಷೇತ್ರದಲ್ಲಿ ಆಸ್ಕರ್ ಪ್ರಶಸ್ತಿ,
ಕ್ರೀಡೆಗಳಲ್ಲಿ ಒಲಿಂಪಿಕ್ ಪ್ರಶಸ್ತಿ,
ಸಾಹಿತ್ಯ, ವಿಜ್ಞಾನ, ಶಾಂತಿ ಕ್ಷೇತ್ರಗಳಲ್ಲಿ ನೊಬೆಲ್ ಪ್ರಶಸ್ತಿ
ಪಡೆಯುವುದು ಯಾವಾಗ.

ಅಥವಾ,

ಇರುವ ನಾಲ್ಕು ಧಾರವಾಹಿಗಳಲ್ಲಿ ಜೀ ಕುಟುಂಬ ಅವಾರ್ಡ್ಸ್, ಸುವರ್ಣ ಟಿವಿ ಅವಾರ್ಡ್ಸ್, ಕಲರ್ಸ್ ಕನ್ನಡ ಅವಾರ್ಡ್ಸ್, ಸಿನಿಮಾ ಕ್ಷೇತ್ರದ ಚಿತ್ರ ರಸಿಕರ ಅವಾರ್ಡ್ಸ್,
ಸಾಹಿತ್ಯದ ಅಕಾಡೆಮಿ ಅವಾರ್ಡ್ಸ್ ಅಥವಾ ರಾಜಕೀಯ ದೊಂಬರಾಟದ ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಇತ್ಯಾದಿಗಳು ಸಾಕೇ.

ಇದೀಗ 10 ರಿಂದ 20 ವರ್ಷದ ಬಾಲ್ಯ – ಪ್ರೌಢಾವಸ್ಥೆಯತ್ತ ಸಾಗುತ್ತಿರುವ ನಮ್ಮ ಯುವ ಪೀಳಿಗೆಗೆ ಯಾವ ರೀತಿಯ ಮಾರ್ಗದರ್ಶನ ಮಾಡುವುದು.
ಹೇಗೆ ಅವರಲ್ಲಿ ಸತ್ಯ ಶೋಧನೆಯ ಚಿಂತನಾ ಮನೋಭಾವ ಬೆಳೆಸುವುದು.

ಅಥವಾ,

Wheeling ಮಾಡಿಕೊಂಡು, Bar ಗಳಲ್ಲಿ Enjoy ಮಾಡಿಕೊಂಡು, Call Center ಗಳಲ್ಲಿ Job ಮಾಡಿಕೊಂಡು ಕಾಲಕಳೆಯುತ್ತಾ, drug addict ಗಳಾಗಿ ಹೇಗೋ ಆಗಿದ್ದು ಆಗಲಿ ಎಲ್ಲಾ ದೇವರು ನೋಡಿಕೊಳ್ಳುತ್ತಾನೆ ಎಂದು ದೇವರ ಮೇಲೆ ಭಾರ ಹಾಕಿ ಬಿಟ್ಟುಬಿಡೋಣವೇ.

ನಾಗರೀಕತೆ ಮತ್ತು ಜನಸಂಖ್ಯೆ ಹೆಚ್ಚಳದಿಂದ ಆದ ಬದಲಾವಣೆ ಗಮನಿಸೋಣ,

ಬಡತನ ಹೆಚ್ಚು ಮಾಡುವುದು ನಂತರ ಅದರ ನಿರ್ಮೂಲನೆಗೆ ಪ್ರಯತ್ನಿಸುವುದು,

ವೃದ್ಧರನ್ನು ಮನೆಯಾಚೆ ಹಾಕುವುದು ವೃದ್ದಾಶ್ರಮಗಳನ್ನು ಹೆಚ್ಚಿಸುವುದು,

ನಿರ್ಗತಿಕರನ್ನು ಹೆಚ್ಚಿಸುವುದು
ಅನಾಥಾಶ್ರಮಗಳನ್ನು ಸ್ಥಾಪಿಸುವುದು,

ಬಾಲಕಾರ್ಮಿಕರನ್ನು ದುಡಿಸಿಕೊಳ್ಳುವುದು
ಅವರಿಗಾಗಿ ರಕ್ಷಣಾ ವ್ಯವಸ್ಥೆ ರೂಪಿಸುವುದು,

ವೇಶ್ಯಾವಾಟಿಕೆ ಹೆಚ್ಚುವಂತೆ ಮಾಡುವುದು
ನಂತರ ಅವರಿಗೆ ಪುನರ್ ವಸತಿ ಕಲ್ಪಿಸುವುದು,

ಭಷ್ಟಾಚಾರ ಹೆಚ್ಚಾಗಲು ಬಿಡುವುದು
ಆಮೇಲೆ ಅದರ ನಿಯಂತ್ರಣಕ್ಕೆ ಮತ್ತೊಂದು ಸಂಸ್ಥೆ ಹುಟ್ಟು ಹಾಕುವುದು,

ಅನಾರೋಗ್ಯಕಾರಿ ವ್ಯವಸ್ಥೆ ಸೃಷ್ಟಿಸುವುದು
ನಂತರ ಆಸ್ಪತ್ರೆಗಳನ್ನು ಹೆಚ್ಚಿಸುವುದು,

ಕಳ್ಳತನ, ವಂಚನೆಗಳು ಹೆಚ್ಚಾಗುವಂತೆ ನಡೆದುಕೊಳ್ಳುವುದು,
ಪೋಲೀಸ್ ಸ್ಟೇಷನ್ ಗಳನ್ನು ಹೆಚ್ಚಿಸುವುದು,

ಕೆರೆಗಳನ್ನು ನಾಶ ಮಾಡುವುದು
ನಂತರ ಕೆರೆ ನಿಯಂತ್ರಣ ಪ್ರಾಧಿಕಾರ ರಚಿಸುವುದು,

ಅಂದರೆ ಶಾಸ್ತ್ರ ಹೇಳೋಕೆ ಬದನೆಕಾಯಿ ತಿನ್ನೋಕೆ ಎಂಬುದು ವಾಸ್ತವವೇ?

ಇದೇನು ಮಕ್ಕಳಾಟವೇ?

147 ಕೋಟಿ ಜನಗಳು ಚುನಾಯಿಸಿದ ಸರ್ಕಾರಗಳಿಗೆ ಜವಾಬ್ದಾರಿ ಇಲ್ಲವೇ?

ಜನರಲ್ಲಿ ಮೌಲ್ಯಯುತ ಜೀವನಮಟ್ಟ ಕಾಪಾಡಿಕೊಳ್ಳಲು ನಮ್ಮನ್ನಾಳುವ ಸರ್ಕಾರಕ್ಕೆ ಇಲ್ಲವೇ?

ನಾವು ಮತದಾನ ಮಾಡುವುದು ನಿರರ್ಥಕವೇ?
ಅಥವಾ
ಕೆಲವೇ ಜನಗಳ ಸುಖಕ್ಕಾಗಿ ರೂಪಿಸಿದ ಪ್ರಜಾಪ್ರಭುತ್ವದ ನಾಟಕವೇ ಇದು?

ಯಾವುದೋ ಕುಂಟುನೆಪ, ಅನುಕೂಲಸಿಂಧು ಸಮರ್ಥನೆ, ಸಿನಿಕತನಗಳಿಗೆ ಇಳಿಯದೆ,
ಆತ್ಮಗಳನ್ನು ಮುಟ್ಟಿಕೊಂಡು ಯೋಚಿಸೋಣ,

ಬದಲಾವಣೆಗೆ ಮುನ್ನುಡಿ ಬರೆಯೋಣ,

ಖಂಡಿತವ ಇದು ಅಸಾಧ್ಯವಲ್ಲ,, ಕನಸಲ್ಲ,

ಆ ಸಾಮರ್ಥ್ಯ ಈ ದೇಶದ ನಾಗರೀಕರಿಗೆ ಇದೆ.

ಹಾಗಾದರೆ ಮುಂದೇನು ?,

ಈ ಸಮಸ್ಯೆಗಳು ನಿಜವೇ ಆಗಿದ್ದಲ್ಲಿ ಪರಿಹಾರವನ್ನೂ ನಾವೇ ಮಾಡಿಕೊಳ್ಳಬೇಕು,
ನಮ್ಮನ್ನಾಳುವ ಸರ್ಕಾರವನ್ನು ನಾವೇ ಆಯ್ಕೆ ಮಾಡಿಕೊಳ್ಳೋಣ,

ಈಗ ಆಗುತ್ತಿರುವುದು ಹಣ, ಹೆಂಡ, ಜಾತಿ, ಧರ್ಮ, ಭಾಷೆ, ಸುಳ್ಳು ಭರವಸೆ,
ಜನರನ್ನು ಮೋಡಿಮಾಡುವ ನವರಂಗಿ ಮಾತುಗಳು ನಮ್ಮನ್ನಾಳುತ್ತಿವೆ,
ನಮ್ಮ ಸಮಸ್ಯೆಗೆ ನಾವೇ ಹೊಣೆಗಾರರು,

ಮನ ಪರಿವರ್ತನೆ, ಮನೆ ಪರಿವರ್ತನೆ, ಮತ ಪರಿವರ್ತನೆ,
ನಮ್ಮಲ್ಲೂ ಬದಲಾವಣೆ ತರಬಹುದು.
ನಮ್ಮ ಜೀವನ ಮಟ್ಟ ಹೆಚ್ಚಿಸಬಹುದು.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9663750451…….
9844013068…….

WhatsApp

Join Now

Telegram

Join Now

Instagram

Join Now