ವಿಜಯ ದರ್ಪಣ ನ್ಯೂಸ್…..
ಕನ್ನಡ ಮರೆತಿಲ್ಲ: ರಜನೀಕಾಂತ್ ಆರ್ಟ್ ಆಫ್ ಲಿವಿಂಗ್ ಸತ್ಸಂಗದಲ್ಲಿ ಭಾಗಿ

ಬೆಂಗಳೂರು ನಾನು ಕನ್ನಡವನ್ನು ಮರೆತಿಲ್ಲ. ಹೆಚ್ಚಾಗಿ ತಮಿಳುನಾಡಿನಲ್ಲೇ ಇದ್ದ ಕಾರಣ ಕನ್ನಡ ಭಾಷೆಯನ್ನು ಮಾತನಾಡುವುದಕ್ಕೆ ಆಗಿಲ್ಲ. ಮನೆಯಲ್ಲಿ ಕನ್ನಡ ಹಾಗೂ ಮಾತೃಭಾಷೆ ಮರಾಠಿ ಎರಡನ್ನೂ ಮಾತನಾಡುತ್ತೇನೆ ಎಂದು ಸೂಪರ್ ಸ್ಟಾರ್ ರಜನೀಕಾಂತ್ ಹೇಳಿದ್ದಾರೆ.
ನಗರದ ಆರ್ಟ್ ಆಫ್ ಲಿವಿಂಗ್‌ನಲ್ಲಿ ಆಯೋಜಿಸಿದ್ದ ಸತ್ಸಂಗದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೆಂಗಳೂರಿನ ನಂಟು, ಕನ್ನಡ ಮೇಲಿನ ಪ್ರೀತಿಯನ್ನು ಹೇಳಿಕೊಂಡಿದ್ದಾರೆ. ಕನ್ನಡ ಭಾಷೆಯನ್ನು ಮರೆತಿಲ್ಲ. ಆದರೆ, ಈಗ ಟಚ್ ಬಿಟ್ಟು ಹೋಗಿದೆ. ಕನ್ನಡ ನನಗೆ ಬರುತ್ತದೆ. ಅದನ್ನು ನಾನು ಮರೆತಿಲ್ಲ. ಎಲ್ಲರಿಗೂ ಗೊತ್ತಿರೋ ಹಾಗೆ ನಾನು ಸಿನಿಮಾ ರಂಗಕ್ಕೆ ಬರುವ ಮುನ್ನಾ ಬಸ್ ಕಂಡಕ್ಟರ್ ಆಗಿ ಬೆಂಗಳೂರಿನಲ್ಲಿ 25 ವರ್ಷ ಕೆಲಸ ಮಾಡಿದ್ದೇನೆ. ಬಳಿಕ ತಮಿಳಿನಾಡಿಗೆ ಹೋಗಿ 52 ವರ್ಷ ಅಲ್ಲಿದ್ದೇನೆ.
ಅಲ್ಲಿ ಕನ್ನಡ ಮಾತನಾಡೋರು ಯಾರೂ ಇಲ್ಲ. ಅದಕ್ಕೇನೆ ಕನ್ನಡ ಟಚ್ ಬಿಟ್ಟು ಹೋಗಿದೆ. ನನ್ನ ಮಾತೃ ಭಾಷೆ ಮರಾಠಿ ಆಗಿದೆ. ಆದರೆ, ಮನೆಯಲ್ಲಿ ಮರಾಠಿ ಹಾಗೂ ಕನ್ನಡ ಎರಡೂ ಭಾಷೆಯಲ್ಲಿ ಮಾತನಾಡುತ್ತೇವೆ ಎಂದು ಹೇಳಿದ್ದಾರೆ.
ರವಿಶಂಕರ್ ಗುರೂಜಿ ಒಮ್ಮೆ ಫೋನ್ ಮಾಡಿ ನಿಮಗೆ ಹೆಚ್ಚು ಕೆಲಸ, ಶೂಟಿಂಗ್ ಇಲ್ಲ ಎಂದರೆ, ಒಂದೆರಡು ದಿನ ಆಶ್ರಮಕ್ಕೆ ಬಂದು ಹೋಗಿ ಅಂತ ಹೇಳಿದರು. ಸತ್ಸಂಗ ಇರುತ್ತದೆ. ಬನ್ನಿ ಅಂದರು. ಈ ಸತ್ಸಂಗದಲ್ಲಿ ಅದೆಷ್ಟು ಜನ ಬರ್ತಾರೆ ಅಂತ ಕೇಳಿದೆ. ಕೆಲವೊಮ್ಮೆ ಸಾವಿರ ಜನ ಇರ್ತಾರೆ. ಇನ್ನು ಕೆಲವೊಮ್ಮೆ ಇನ್ನೂ ಜಾಸ್ತಿ ಇರುತ್ತದೆ ಅಂತ ಗೊತ್ತಾಯಿತು. ಇಷ್ಟು ಜನಕ್ಕೆ ನಾನು ಯಾವ ಭಾಷೆಯಲ್ಲಿ ಮಾತನಾಡೋಕು ಅಂತಲೂ ಕೇಳಿದೆ. ಹಿಂದಿ, ಇಂಗ್ಲಿಷ್ ಅಥವಾ ಕನ್ನಡದಲ್ಲೂ ಮಾತನಾಡಿ ಎಂದಿದ್ದರು ಎಂದರು.





