ಉಸಿರಾಟಕ್ಕೂ ಕಷ್ಟಪಡುತ್ತಿರುವ ವಿದ್ಯಾರ್ಥಿಗಳ ಬಗ್ಗೆ ಮಂಗಳೂರು ಪಾಲಿಕೆ, ಜಿಲ್ಲಾಡಳಿತಕ್ಕೆ ಮರುಕ ಇಲ್ಲವೇ? :ಕ್ರಿಸ್ಟನ್ ಮಿನೇಜಸ್
ವಿಜಯ ದರ್ಪಣ ನ್ಯೂಸ್….
ಉಸಿರಾಟಕ್ಕೂ ಕಷ್ಟಪಡುತ್ತಿರುವ ವಿದ್ಯಾರ್ಥಿಗಳ ಬಗ್ಗೆ ಮಂಗಳೂರು ಪಾಲಿಕೆ, ಜಿಲ್ಲಾಡಳಿತಕ್ಕೆ ಮರುಕ ಇಲ್ಲವೇ? :ಕ್ರಿಸ್ಟನ್ ಮಿನೇಜಸ್
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಾಮಂಜೂರು ಸಮೀಪದ ಪಚ್ಚನಾಡಿಯ ಡಂಪಿಂಗ್ ಯಾರ್ಡ್ ಸುತ್ತಮುತ್ತಲ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಆರೋಗ್ಯ ಸಮಸ್ಯೆಯ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಎನ್ ಎಸ್ ಯು ಐ ಮಂಗಳೂರು ನಗರ ದಕ್ಷಿಣ ಅಧ್ಯಕ್ಷ
ಕ್ರಿಸ್ಟನ್ ಮಿನೇಜಸ್ ಪತ್ರ ಬರೆದು ತ್ವರಿತವಾಗಿ ಪರಿಹಾರಕ್ಕೆ ಆಗ್ರಹ ಮಾಡಿದ್ದಾರೆ.
ಬುದ್ದಿವಂತರ ನಾಡು, ಶಿಕ್ಷಿತರ ಜಿಲ್ಲೆ ಎಂದು ಖ್ಯಾತಿ ಹೊಂದಿರುವ ದಕ್ಷಿಣ ಕನ್ನಡದ ಮಂಗಳೂರು ನಗರದಲ್ಲಿ ಹಲವಾರು ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಗಳು ಹಾಗೂ ಕಾಲೇಜುಗಳಿವೆ. ಪ್ರಥಮ ದರ್ಜೆ ಕಾಲೇಜುಗಳು, ಇಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ವಿಧ್ಯಾಭ್ಯಾಸ ಪಡೆಯುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳೂ ಮಂಗಳೂರಿನಲ್ಲಿದ್ದಾರೆ. ಈ ವಿದ್ಯಾರ್ಥಿಗಳ ಜೀವನದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಮತ್ತು ಸರ್ಕಾರ ಚೆಲ್ಲಾಟ ಆಡುತ್ತಿದೆ. ಅಧಿಕಾರಿಗಳ ನಿರ್ಲ್ಯಕ್ಷ ಹಾಗೂ ದುರಾಡಳಿತದಿಂದಾಗಿ ಯುವಜನಸಮೂಹ ಸಂಕಷ್ಟದಲ್ಲಿದೆ.
ಮಂಗಳೂರು ನಗರವು ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿ. ಹಾಗಾಗಿ ಪ್ರತಿ ವರ್ಷ ದೇಶ – ವಿದೇಶಗಳಿಂದ ಸಾವಿರಾರು ವಿದ್ಯಾರ್ಥಿಗಳು ಮಂಗಳೂರಿಗೆ ಆಗಮಿಸುತ್ತಾರೆ.
ಆದರೆ ಈ ವಿಚಾರದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಹಾಗೂ ಸರ್ಕಾರ ನಿರ್ಲಕ್ಷ್ಯ ತಾಳಿದೆ.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಾಮಂಜೂರು ಸಮೀಪದ ಪಚ್ಚನಾಡಿಯ ಡಂಪಿಂಗ್ ಯಾರ್ಡ್ ಸುತ್ತಮುತ್ತಲ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಇದೀಗ ಆರೋಗ್ಯದ ಸಮಸ್ಯೆಕಾಡುತ್ತಿದೆ.
ಈ ಪ್ರದೇಶದ ಸುತ್ತಮುತ್ತ ಅನೇಕ ಶಾಲಾ ಕಾಲೇಜುಗಳಿವೆ. SDM Mangala Jyothi ITI College, SDM Mangala Jyothi Integrated School, Karavali College Of Pharmacy, St Joseph’s Engineering College, St. Raymond’s School, St Raymond’s PU College, St Raymond’s College ಸಹಿತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳನ್ನು ವಿದ್ಯಾರ್ಥಿ ಸಮೂಹ ನೆಚ್ಚಿಕೊಂಡಿದೆ. ಆದರೆ, ಈ ವಿದ್ಯಾರ್ಥಿಗಳು ನಿತ್ಯ 8 ಗಂಟೆಗೂ ಹೆಚ್ಚು ಹೊತ್ತು ತರಗತಿಯಲ್ಲಿ ಕುಳಿತು ದುರ್ವಾಸನೆಯಿಂದ ಪರಿತಪಿಸುವಂತಾಗಿದೆ. ಹಾನಿಕಾರಕ ಅನಿಲಗಳು, ಮೈಕ್ರೋ ಪ್ಲಾಸ್ಟಿಕ್ ಮತ್ತು ಧೂಳು ವಿದ್ಯಾರ್ಥಿಗಳ ಆರೋಗ್ಯಕ್ಕೆ ಹೊಡೆತ ನೀಡುತ್ತಿವೆ.
ಅನೇಕ ವಿದ್ಯಾರ್ಥಿಗಳು ಉಸಿರಾಟದ ತೊಂದರೆ ಹಾಗೂ ಬಗೆಬಗೆಯ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಎದೆ ನೋವು ಮತ್ತು ಇತರ ಹಲವಾರು ಸಮಸ್ಯೆಗಳು ಕಂಡುಬರುತ್ತಿವೆ.
ಇದೀಗ ಕಳೆದ ಕೆಲವು ದಿನಗಳಲ್ಲಿ ಹಲವರು ಕಾಯಿಲೆ ಉಲ್ಬಣಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದಕ್ಕೆ ಕಲುಷಿತ ವಾತಾವರಣವೇ ಕಾರಣ ಎಂಬುದು ವೈದ್ಯರ ಹೇಳಿಕೆ. ಆದರೆ ಅಧಿಕಾರಿಗಳು ಮಾತ್ರ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿರುವುದು ನಾಡಿನ ದೌರ್ಬಾಗ್ಯವಲ್ಲದೆ ಬೇರೇನೂ ಅಲ್ಲ.
ಜನವಸತಿ ಪ್ರದೇಶದಿಂದ ಈ ಡಂಪಿಂಗ್ ಯಾರ್ಡನ್ನು ನಗರದ ಹೊರಭಾಗಕ್ಜೆ ಸ್ಥಳಾಂತರಿಸುವಲ್ಲಿ ಮಂಗಳೂರು ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತ ವಿಫಲವಾಗಿದೆ. ಅದರಿಂದಾಗಿಯೇ ಈ ಪ್ರದೇಶದ ನಿವಾಸಿಗಳೂ ನರಕಯಾತನೆ ಅನುಭವಿಸುವಂತಾಗಿದೆ.
ಇದೀಗ ಹವಾಮಾನದ ವೈಪರೀತ್ಯದಿಂದಾಗಿ ಬಿಸಿಲಿನ ಝಳ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿ ಹೊತ್ತಿಕೊಳ್ಳುವ ಸಂಭವವೂ ಇದೆ. ಹಾನಿಕಾರಕ ರಾಸಾಯನಿಕ ಅನಿಲಗಳ ಈ ಹೊರಸೂಸುವಿಕೆಯು ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಬಲ್ಲದು. ಅದರಲ್ಲೂ ಸಮೀಪದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಬೇಸಿಗೆಯಲ್ಲಿ ಮಾತ್ರವಲ್ಲ, ಮಳೆ ಬಂದಾಗಲೂ ಅವಾಂತರ ಸೃಷ್ಟಿಯಾಗುತ್ತದೆ. ತ್ಯಾಜ್ಯ ಮತ್ತು ಕಸದ ಕೊಳಕು ವಾಸನೆ ಅಸಹನೀಯವಾಗಿದೆ. ಈ ಸಮಸ್ಯೆಯಿಂದಾಗಿ ಅಂತರ್ಜಲವೂ ಕೆಟ್ಟುಹೋಗುತ್ತಿದೆ ಮತ್ತು ಸುತ್ತಮುತ್ತ ಕುಡಿಯಲು ಯೋಗ್ಯ ನೀರು ಸಿಗದ ಪರಿಸ್ಥಿತಿಯೂ ನಿರ್ಮಾಣವಾಗಿದೆ.
ಈ ದುಸ್ಥಿತಿಯಿಂದ ಬೇಸತ್ತಿರುವ ಸಾರ್ವಜನಿಕರು ಮಂಗಳೂರು ಮಹಾನಗರ ಪಾಲಿಕೆ, ಜಿಲ್ಲಾಡಳಿತ ಹಾಗೂ ಸರ್ಕಾರದ ವಿರುದ್ದ ಹಿಡಿಶಾಪ ಹಾಕುತ್ತಿದ್ದಾರೆ. ಉಸಿರಾಟಕ್ಕೂ ಕಷ್ಟಪಡುತ್ತಿರುವ ವಿದ್ಯಾರ್ಥಿಗಳ ಬದುಕಿನ ಬಗ್ಗೆ ಸರ್ಕಾರಕ್ಕೆ ಕಾಳಜಿ ಇದೆಯೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಇದು ಜನರ ಮೂಲಭೂತ ಮಾನವ ಹಕ್ಕುಗಳ ಉಲ್ಲಂಘನೆ ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ. ವಿದ್ಯಾರ್ಥಿಗಳ ಮತ್ತು ಜನರ ಬಗ್ಗೆ ನಿಜವಾಗಿಯೂ ಸರ್ಕಾರಕ್ಕೆ ಕಾಳಜಿ ಇದ್ದರೆ, ಒಂದು ಸಮಿತಿಯನ್ನು ರಚಿಸಿ, ಡಂಪಿಂಗ್ ಯಾರ್ಡನ್ನು ನಗರದಿಂದ ಕನಿಷ್ಠ 5 ಕಿ.ಮೀ ಹೊರಗೆ ಸ್ಥಳಾಂತರಿಸಲಿ. ಯಾವುದೇ ಶಿಕ್ಷಣ ಸಂಸ್ಥೆ ಇಲ್ಲದ ಮತ್ತು ವಸತಿ ಇಲ್ಲದ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಲಿ ಎಂದು ಸ್ಥಳೀಯ ಮುಖಂಡರು ಒತ್ತಾಯಿಸಿದ್ದಾರೆ.
ಪ್ರಸ್ತುತ ಪರಿಸ್ಥಿತಿ ಬಗ್ಗೆ ವಿದ್ಯಾರ್ಥಿ ಸಂಘಟನೆಗಳೂ ಆಕ್ರೋಶ ವ್ಯಕ್ತಪಡಿಸಿವೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವ ವಿದ್ಯಾರ್ಥಿ ಸಂಘದ ಮುಖಂಡರು, ರಾಜಕಾರಣಿಗಳು ತಮ್ಮ ಚುನಾವಣೆ ನಂತರ ಮರೆತುಬಿಡುತ್ತಾರೆ. ಆದರೆ ವಿದ್ಯಾರ್ಥಿ ಶಕ್ತಿಯು ನ್ಯಾಯಕ್ಕಾಗಿ ಹೋರಾಡುವ ಸಾಮರ್ಥ್ಯವನ್ನು ಮತ್ತು ಸರ್ಕಾರ – ಚುನಾಯಿತ ಪ್ರತಿನಿಧಿಗಳನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ ಎಂಬುದನ್ನು ತಿಳಿದುಕೊಳ್ಳಲಿ ಎಂದು ಎಚ್ಚರಿಕೆ ನೀಡಿದ್ದಾರೆ.