--Ads--

” ಎಲ್ಲವೂ ವಿಫಲವಾದಾಗ ತಾಳ್ಮೆಯು ಸಫಲವಾಗುತ್ತದೆ……. “

On: May 23, 2026 4:41 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

” ಎಲ್ಲವೂ ವಿಫಲವಾದಾಗ ತಾಳ್ಮೆಯು ಸಫಲವಾಗುತ್ತದೆ……….. “

ಎಂಬ ದಾರ್ಶನಿಕರ ಮಾತು ಎಷ್ಟೊಂದು ಅನುಭಾವದ ಅರ್ಥಪೂರ್ಣ ಮಾತಲ್ಲವೇ….

ಇದಕ್ಕೆ ಅತ್ಯಂತ ನೈಜ ಮತ್ತು ಸೂಕ್ತವಾದ ಉದಾಹರಣೆಯನ್ನು ನಿಮಗೆ ಹೇಳಲು ಇಷ್ಟಪಡುತ್ತೇನೆ….

ಬೆಂಗಳೂರಿನ ಹಲಸೂರು ಕೆರೆಯ ಬಳಿ ಅಜಂತಾ ಎಂಬ ಒಂದು ಚಲನಚಿತ್ರ ಮಂದಿರ ಇತ್ತು ಅಥವಾ ಈಗಲೂ ಇರಬಹುದೇನೋ. ಅಲ್ಲಿ ಬಹುತೇಕ ತಮಿಳು ಸಿನಿಮಾಗಳನ್ನೇ ಹೆಚ್ಚಾಗಿ ಪ್ರದರ್ಶಿಸಲಾಗುತ್ತಿತ್ತು….

ಸುಮಾರು ನಾಲ್ಕೈದು ವರ್ಷಗಳ ಹಿಂದೆ ಅಲ್ಲಿ ನಡೆದ ಒಂದು ಘಟನೆ ವ್ಯಕ್ತಿಗಳಿಗೆ ತಾಳ್ಮೆ ಎಷ್ಟು ಮುಖ್ಯ ಎಂಬುದನ್ನು ಅತ್ಯಂತ ಸ್ಪಷ್ಟವಾಗಿ ಅರ್ಥ ಮಾಡಿಸುತ್ತದೆ.

ವೇಲನ್ ಎಂಬುವವರು ಅಲ್ಲಿ ವಾಹನ ನಿಲ್ದಾಣದ ಜಾಗವನ್ನು ಗುತ್ತಿಗೆ ಪಡೆದಿರುತ್ತಾರೆ. ಸುಮಾರು 55 ವರ್ಷ ವಯಸ್ಸಿನ ಅವರು ಆ ಚಿತ್ರಮಂದಿರದ ನಾಲ್ಕೂ ಶೋಗಳ ದ್ವಿಚಕ್ರ, ತ್ರಿಚಕ್ರ ಮತ್ತು ಕಾರುಗಳ ಸಂಪೂರ್ಣ ಪಾರ್ಕಿಂಗ್ ಹಣವನ್ನು ಅವರೇ ಸಂಗ್ರಹಿಸುತ್ತಾರೆ. ಸುಮಾರು ಹತ್ತು ಹದಿನೈದು ವರ್ಷಗಳಿಂದ ಅವರು ಆ ಕೆಲಸ ಮಾಡುತ್ತಿರುತ್ತಾರೆ…..

ಅವರಿಗೆ ಸುಮಾರು 25 ವರ್ಷದ ಮಗ ಸಹ ಇರುತ್ತಾನೆ. ಎಸ್ ಎಸ್ ಎಲ್ ಸಿ ಓದಿ ಯಾವುದೋ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುತ್ತಾನೆ. ಸಮಯವಿದ್ದಾಗ ಆಗಾಗ ಬಂದು ತಂದೆಗೂ ಸಹಾಯ ಮಾಡುತ್ತಿರುತ್ತಾನೆ. ಒಂದು ಒಳ್ಳೆಯ ಸಂಪ್ರದಾಯಸ್ಥ ಕುಟುಂಬ ನೆಮ್ಮದಿಯಾಗಿ ಇರುತ್ತದೆ….

ಇತ್ತ ಕಡೆ ಮುಕೇಶ್ ಎಂಬುವವರು ಒಬ್ಬ ಯುವ ಉದ್ಯಮಿ. ಸುಮಾರು 40 ವರ್ಷದ ಇವರು ಪ್ಲಾಸ್ಟಿಕ್ ಉದ್ಯಮವನ್ನು ಪ್ರಾರಂಭಿಸಿ ಸಾಕಷ್ಟು ಯಶಸ್ವಿಯಾಗಿರುತ್ತಾರೆ. ತುಂಬಾ ಕಷ್ಟಪಟ್ಟು ಬಡತನದಲ್ಲಿ ಬೆಳೆದ ಇವರು ಬಿಇ ಸಿವಿಲ್ ಇಂಜಿನಿಯರಿಂಗ್ ಮಾಡಿ ಆಕಸ್ಮಿಕವಾಗಿ ಪ್ಲಾಸ್ಟಿಕ್ ಉದ್ಯಮಕ್ಕೆ ಬಂದು 10 ವರ್ಷದಲ್ಲೇ ಹತ್ತಾರು ಕೋಟಿ ವ್ಯವಹಾರ ಮಾಡುವ ಹಂತಕ್ಕೆ ಬೆಳೆದಿರುತ್ತಾರೆ. ಸುಮಾರು 75 ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿರುತ್ತಾರೆ. ಮದುವೆಯಾಗಿ 10 ವರ್ಷದ ಮಗಳು ಇರುತ್ತಾಳೆ. ಸ್ವಂತ ಮನೆ ಹೊಂದಿದ್ದು ಓಡಾಡಲು ಪ್ರತಿಷ್ಠಿತ ಬಿ ಎಂ ಡಬ್ಲ್ಯೂ ಕಾರು ಕೊಂಡಿರುತ್ತಾರೆ…..

ಮುಕೇಶ್ ಅವರಿಗೆ ಸಿನಿಮಾ ನೋಡುವ ಹುಚ್ಚು. ಅದರಲ್ಲೂ ಈಗಿನ ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ಅವರ ಕಟ್ಟಾ ಅಭಿಮಾನಿ……

ಅಜಂತಾ ಚಿತ್ರಮಂದಿರದಲ್ಲಿ ವಿಜಯ್ ಅವರ ಹೊಸ ಚಿತ್ರ ಬಿಡುಗಡೆಯಾಗಿರುತ್ತದೆ. ರಾತ್ರಿ ಪ್ರದರ್ಶನ ಸಮಯ
7. 30….

ತುಂಬಾ ಕೆಲಸದ ಒತ್ತಡವಿದ್ದರೂ ಹೇಗೋ ಸಮಯ ಮಾಡಿಕೊಂಡು ಈ ಸಿನಿಮಾ ನೋಡಲು ಅದೇ ಬಿಎಂಡಬ್ಲ್ಯೂ ಕಾರಿನಲ್ಲಿ ಒಬ್ಬರೇ ಬೇಗ ಬೇಗ ಬರುತ್ತಾರೆ. ಎಷ್ಟೇ ವೇಗವಾಗಿ ಬಂದರೂ ಈ ಟ್ರಾಫಿಕ್ ಸಮಸ್ಯೆಯಲ್ಲಿ ಸಿನಿಮಾ ಮಂದಿರ ತಲುಪುವುದು 7/45 ಆಗುತ್ತದೆ. ಸಾಮಾನ್ಯವಾಗಿ ಕಟ್ಟಾ ಅಭಿಮಾನಿಗಳಿಗೆ ಅವರ ಆರಾಧ್ಯ ನಟನ ಸಿನಿಮಾವನ್ನು ಪ್ರಾರಂಭದಿಂದಲೇ ನೋಡಬೇಕು ಎಂಬ ಕುತೂಹಲ ಇರುತ್ತದೆ.

ಮುಕೇಶ್ ಅವರು ಕಾರನ್ನು ನೇರವಾಗಿ ಥೀಯೇಟರ್ ಆವರಣಕ್ಕೆ ತಂದು ಬೇಗ ಎಲ್ಲೋ ಜಾಗ ಸಿಕ್ಕಿದ ಒಂದು ಕಡೆ ನಿಲ್ಲಿಸಿ ಟಿಕೆಟ್ ಕೌಂಟರ್ ಕಡೆಗೆ ಓಡುತ್ತಾರೆ. ಅಲ್ಲಿ ಟಿಕೆಟ್ ಪಡೆದು ಅಲ್ಲಿಂದ ಮುಖ್ಯದ್ವಾರಕ್ಕೆ ಬಂದು ಇನ್ನೇನು ಥಿಯೇಟರ್ ಒಳ ಪ್ರವೇಶಿಸಬೇಕು….

ಅಷ್ಟರಲ್ಲಿ ಇತ್ತ ಕಡೆ ವೇಲನ್ ಅವರು ಕಾರ್ ಪಾರ್ಕಿಂಗ್ ನಲ್ಲಿ ಕಾಯುತ್ತಿರುತ್ತಾರೆ. ಈ ಬಿಎಂಡಬ್ಲ್ಯೂ ಕಾರ್ ನ ಮಾಲೀಕರು ಕಾರನ್ನು ನಿಲ್ಲಿಸಿ ಪಾರ್ಕಿಂಗ್ ಚಾರ್ಜ್ ಕೊಡೋದೇ ನೇರವಾಗಿ ಥಿಯೇಟರ್ ಕಡೆ ಓಡುವುದು ಗಮನಿಸುತ್ತಾರೆ….

ಸಾಮಾನ್ಯವಾಗಿ ಎಲ್ಲಾ ಥಿಯೇಟರ್ಗಳ ಬಳಿಯೂ ಕಾರ್ ಪಾರ್ಕಿಂಗ್ ಮಾಡಿ ಮೊದಲೇ ಆದರ ಬಾಡಿಗೆ ಐವತ್ತೋ ಅಥವಾ ನೂರೋ ರೂಪಾಯಿ ನೀಡಿ ರಶೀದಿ ಪಡೆದೆ ಹೋಗುತ್ತಾರೆ. ಸಿನಿಮಾ ಮುಗಿದ ನಂತರ ಯಾವುದೇ ಅಡೆತಡೆ ಇಲ್ಲದೆ ಹೊರಹೋಗಲು ಸುಲಭವಾಗಬಹುದು ಎಂದೋ, ಪಾರ್ಕಿಂಗ್ ಉಸ್ತುವಾರಿಗಳ ಅನುಕೂಲ ಎಂದೋ ಈ ವ್ಯವಸ್ಥೆಯೇ ಜಾರಿಯಲ್ಲಿದೆ.

ಮುಕೇಶ್ ಪಾರ್ಕಿಂಗ್ ದುಡ್ಡು ನೀಡಿ ರಸೀದಿ ಪಡೆಯದೆ ಸಿನಿಮಾ ಬೇಗ ಪ್ರಾರಂಭವಾಗಿರುತ್ತದೆ ಎಂದು ಥೇಟರ್ ಒಳಗೆ ಧಾವಿಸುವ ಸಮಯಕ್ಕೆ ಸರಿಯಾಗಿ ವೇಲನ್ ಅವರು ಮುಕೇಶನನ್ನು ಪಾರ್ಕಿಂಗ್ ಚಾರ್ಜ್, ಪಾರ್ಕಿಂಗ್ ಚಾರ್ಜ್ ಎಂದು ಕೂಗಿ ಕರೆಯುತ್ತಾರೆ. ಆತ ತಲೆಕೆಡಿಸಿಕೊಳ್ಳದೆ ಏಯ್ ಆಮೇಲೆ ಕೊಡುತ್ತೇನೆ ಎಂದು ಹೇಳಿ ಥಿಯೇಟರ್ ಒಳಗೆ ಮುನ್ನುಗ್ಗುತ್ತಾರೆ……

ಪಾರ್ಕಿಂಗ್ ಹಣ ಮೊದಲೇ ಕೊಡದ ಕಾರಣಕ್ಕೆ ವೇಲನ್ ಗೆ ಕೋಪ ಬರುತ್ತದೆ. ಈಗಲೇ ಕೊಡಬೇಕೆಂದು ಓಡಿಹೋಗಿ ಮುಕೇಶರ ಹಿಂದಿನಿಂದ ಅವರ ಬಟ್ಟೆ ಹಿಡಿಯುತ್ತಾರೆ. ಏಕೆಂದರೆ ಮುಕೇಶ್ ಹಿಂದೆ ವೆಲನ್ ಸಹ ಓಡಿಬರುವುದರಿಂದ ಅವರ ಕೈಗೆ ಇವರ ಶರ್ಟು ಸುಲಭವಾಗಿ ಸಿಗುತ್ತದೆ. ಮುಕೇಶ್ ಶರ್ಟು ಸ್ವಲ್ಪ ಕಿತ್ತು ಹೋಗುತ್ತದೆ….

ಬಿಎಂಡಬ್ಲ್ಯೂ ಕಾರಿನ ಮಾಲೀಕ ಮತ್ತು ಉದ್ಯಮಿಯಾದ ಮುಖೇಶ್ ಗೆ ಕೇವಲ 50 ಅಥವಾ 100 ರೂಪಾಯಿ ಹಣಕ್ಕಾಗಿ ಪಾರ್ಕಿಂಗ್ ಮಾಲೀಕ ತನ್ನ ಶರ್ಟ್ ಅನ್ನು ಹಿಡಿದು ಎಳೆದು ಹರಿದದ್ದು ತಕ್ಷಣಕ್ಕೆ ಕೋಪ ಉಕ್ಕಿ ಬರುತ್ತದೆ. ನೇರವಾಗಿ ಹಿಂದೆ ತಿರುಗಿ ವೇಲನ್ ಕಪಾಳಕ್ಕೆ ಜೋರಾಗಿ ಭಾರಿಸುತ್ತಾರೆ. ಆಗ ವೇಲನ್ ದಿಢೀರನೆ ಕೆಳಗೆ ಬೀಳುತ್ತಾರೆ……

ಮುಕೇಶ್ ಮತ್ತು ವೇಲನ್ ಅವರ ದುರಾದೃಷ್ಟವೇನೆಂದರೆ, ಅಂದು ಶನಿವಾರವಾದ್ದರಿಂದ ಮತ್ತು ಸಂಜೆಯೂ ಆಗಿದ್ದರಿಂದ ವೇಲನ್ ಅವರ ಮಗ ತಂದೆಗೆ ಸಹಾಯ ಮಾಡಲು ಅಲ್ಲೇ ಬಂದು ದ್ವಿಚಕ್ರ ವಾಹನಗಳ ಉಸ್ತುವಾರಿ ನೋಡಿಕೊಳ್ಳುತ್ತಿರುತ್ತಾನೆ. ತನ್ನ ತಂದೆ ಮುಖೇಶ್ ನಿಂದ ಏಟು ತಿಂದು ಅಯ್ಯೋ ಎಂದು ಕೂಗುತ್ತಾ ಕೆಳಗೆ ಬಿದ್ದಿದ್ದನ್ನು ಆತ ಗಮನಿಸುತ್ತಾನೆ…..

25 ಹರೆಯದ ಬಿಸಿ ರಕ್ತದ ವೇಲನ್ ರ ಮಗನಿಗೆ ಯಾರೋ ಒಬ್ಬ ಅಪರಿಚಿತ ತನ್ನ ತಂದೆಗೆ ಹೊಡೆದದ್ದನ್ನು ನೋಡಿ ಸಹಿಸಲು ಸಾಧ್ಯವಾಗುವುದಿಲ್ಲ. ಅಲ್ಲಿಯೇ ಇದ್ದ ಕಬ್ಬಿಣದ ರಾಡನ್ನು ತೆಗೆದುಕೊಂಡು ಬಂದು ಇನ್ನೇನು ಥಿಯೇಟರ್ ಒಳಗೆ ಹೆಜ್ಜೆ ಇಡುತ್ತಿದ್ದ ಮುಕೇಶ್ ತಲೆಗೆ ಹಿಂದಿನಿಂದ ಬಲವಾಗಿ ಬಾರಿಸುತ್ತಾನೆ. ಆ ಯುವಕನ ಏಟಿಗೆ ಮುಕೇಶ್ ಅಲ್ಲಿಯೇ ಕುಸಿದು ರಕ್ತ ಕಾರುತ್ತಾ ಸ್ಥಳದಲ್ಲಿಯೇ ಒದ್ದಾಡುತ್ತಾ ಪ್ರಾಣ ಬಿಡುತ್ತಾನೆ……

ಮುಕೇಶನ ಜೀವ ಹಾರಿಹೋಯಿತು. ವೇಲನ್ ಮತ್ತು ಆತನ ಮಗ ಜೈಲು ಪಾಲಾದರು. ಇಬ್ಬರ ಕುಟುಂಬಗಳು ಸಾಕಷ್ಟು ನೋವು ಅನುಭವಿಸುತ್ತವೆ. ಇದೆಲ್ಲವೂ ಕೇವಲ ನೂರು ರೂಪಾಯಿಯ ಪಾರ್ಕಿಂಗ್ ಹಣಕ್ಕಾಗಿ, ಅದಕ್ಕಿಂತ ಹೆಚ್ಚಾಗಿ ಸಮಯಪ್ರಜ್ಞೆ, ಸಾಮಾನ್ಯ ಜ್ಞಾನ, ತಾಳ್ಮೆ ಇಲ್ಲದೇ ಮೂವರೂ ವರ್ತಿಸಿದ ಪರಿಣಾಮ ಒಂದು ಜೀವ ಹೋಯಿತು, ಎರಡು ಜೀವಗಳು ಮತ್ತು ಕುಟುಂಬಗಳು ಪಡಬಾರದ ಕಷ್ಟ ಪಟ್ಟವು. ಒಂದೇ ಒಂದು ನಿಮಿಷದ ಕೋಪ ಎಂಬ ಭಾವ ಯಾವ ಹಂತಕ್ಕೆ ತೆಗೆದುಕೊಂಡು ಹೋಗಬಹುದು ನೋಡಿ.

ಇದು ಕೇವಲ ಸಾಂಕೇತಿಕ. ನಮ್ಮ ಜೀವನದ ಪ್ರತಿನಿತ್ಯದ ಚಟುವಟಿಕೆಗಳಲ್ಲಿ ಅಥವಾ ಕೆಲವು ವೃತ್ತಿ, ಟ್ರಾಫಿಕ್ ಸಿಗ್ನಲ್, ರಸ್ತೆ, ವ್ಯಾಪಾರ ವ್ಯವಹಾರ ಮುಂತಾದ ಕಡೆ ಈ ರೀತಿಯ ಅನೇಕ ಘಟನೆಗಳು ಘಟಿಸಬಹುದಾದ ಸಾಧ್ಯತೆ ಇರುತ್ತದೆ ಗಂಡ ಹೆಂಡತಿ, ತಂದೆ ಮಕ್ಕಳು, ಅಣ್ಣ ತಮ್ಮಂದಿರು, ಅಕ್ಕತಂಗಿಯರು, ಅಕ್ಕಪಕ್ಕದ ಮನೆಯವರು, ಗೆಳೆಯರು, ಸಹಪಾಠಿಗಳು ಹೀಗೆ ಯಾರೊಂದಿಗೆ ಬೇಕಾದರೂ ಈ ರೀತಿಯ ಭಾವ ತೀವ್ರತೆ ಉಂಟಾಗುವ ಸಂಭವ ಇರುತ್ತದೆ. ಅದನ್ನು ಮೀರಬೇಕಾದ ಮನಸ್ಥಿತಿಯನ್ನ ನಾವು ಪ್ರಜ್ಞಾಪೂರ್ವಕವಾಗಿ ಅಳವಡಿಸಿಕೊಳ್ಳಬೇಕು…..

ಹೇಳುವುದು ಸುಲಭ ಆ ಕ್ಷಣದಲ್ಲಿ ನಿಯಂತ್ರಣ ಇರುವುದಿಲ್ಲ ಎಂದು ನೆಪ ಹೇಳಬಹುದು. ದಯವಿಟ್ಟು ನೆಪ ಹೇಳಬೇಡಿ. ಅದು ನಿಮ್ಮ ಬದುಕನ್ನೇ ಸರ್ವನಾಶ ಮಾಡಬಹುದು. ಆದ್ದರಿಂದಲೇ ಹೇಳಿದ್ದು ಎಲ್ಲವೂ ವಿಫಲವಾದಾಗ ತಾಳ್ಮೆಯು ಸಫಲವಾಗುತ್ತದೆ. ಇದು ಬದುಕಿನ ಇತರ ಅನೇಕ ಅಂಶಗಳಿಗೆ ಒಂದು ಎಚ್ಚರಿಕೆಯ ಪಾಠವಾಗಬೇಕು…..

ಒಮ್ಮೆ ಏಕಾಂತದಲ್ಲಿ ಕುಳಿತು ಧ್ಯಾನಸ್ಥ ಮನಸ್ಥಿತಿಯಲ್ಲಿ ಈ ಘಟನೆಯನ್ನು ನೆನಪಿಸಿಕೊಂಡು, ಇನ್ನು ಮುಂದೆ ಯಾವುದೇ ಘಟನೆಯ, ಯಾವುದೇ ಹಂತದಲ್ಲಿ ಕೋಪದ ಕೈಗೆ ನನ್ನ ಮನಸ್ಸನ್ನು ಕೊಡುವುದಿಲ್ಲ ಎಂದು ಸ್ವಯಂ ಪ್ರತಿಜ್ಞೆ ಮಾಡಿಕೊಳ್ಳಿ. ಇಂತಹ ಅತ್ಯಂತ ಕೆಟ್ಟ ಸಮಯದಲ್ಲಿ ಆ ಮನಸ್ಥಿತಿ ಜಾಗೃತಿಗೊಳ್ಳಬಹುದು ದಯವಿಟ್ಟು ಪ್ರಯತ್ನಿಸಿ.
ಇದು ನನ್ನ ಕಳಕಳಿಯ ಮನವಿ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9663750451…….
9844013068…….

WhatsApp

Join Now

Telegram

Join Now

Instagram

Join Now