ವಿಜಯ ದರ್ಪಣ ನ್ಯೂಸ್…..
ಇದ್ದಕ್ಕಿದ್ದಂತೆ ನುಗ್ಗಿಬಂದ ಆರ್ಥಿಕ ಸ್ವಾತಂತ್ರ್ಯ,

ಬಲವಾಗಿ ಜಾಗೃತಗೊಂಡ ಮಹಿಳಾ ಸ್ವಾತಂತ್ರ್ಯ,
ಎಚ್ಚರಗೊಂಡ ಸಾಮಾನ್ಯ ಜನರ ಅಭಿವ್ಯಕ್ತಿ ಸ್ವಾತಂತ್ರ್ಯ,
ಸಿಡಿದೆದ್ದ ಶೋಷಿತರ ಸಮಾನತೆಯ ಸ್ವಾತಂತ್ರ್ಯ,
ಕೀಳರಿಮೆಗೆ ಒಳಗಾದ ಶೋಷಕರ ತಿಳುವಳಿಕೆಯ ಸ್ವಾತಂತ್ರ್ಯ,
ಸರ್ವಾಂತರ್ಯಾಮಿಯಾಗಿ ಜನರ ಕೈಗೆಟುಕಿದ ಸಮೂಹ ಸಂಪರ್ಕದ ಸ್ವಾತಂತ್ರ್ಯ,
ಕನಸುಗಳಂತೆ ಗರಿಗೆದರಿದ ವ್ಯಕ್ತಿ ಸ್ವಾತಂತ್ರ್ಯ,
ಜನರಲ್ಲಿ ಹೆಚ್ಚಿದ ಸಂಘಟನಾ ಸಾಮರ್ಥ್ಯ,
ಸಾಮಾನ್ಯರಲ್ಲಿ ಮೂಡಿದಾ ವಿಶ್ವಮಟ್ಟದ ಚಿಂತನಾ ಸಾಮರ್ಥ್ಯ,
ಭ್ರಮನಿರಸನಗೊಂಡು ಮಂಕಾದ ದೇವರು, ಧರ್ಮದ ಸಾಮರ್ಥ್ಯ,
ತಲೆಕೆಳಗಾಗಿ ಗಲಿಬಿಲಿ ಮೂಡಿಸಿದ ಪಾಶ್ಚಾತ್ಯ, ಪೌರಾತ್ಯ ಸಾಂಸ್ಕೃತಿಕ ಮಿಲನ,
ವ್ಯಾಪಾರೀಕರಣದಿಂದ ಕಳೆದುಹೋದ ಮಾನವೀಯ ಮೌಲ್ಯಗಳು,
ಪಾಶ್ಚಿಮಾತ್ಯ ಜೀವನ ಶೈಲಿಯ ಕೆಟ್ಟ ಅಂಶಗಳ ನಕಲು,
ಕಾರ್ಪೊರೇಟ್ ಸಂಸ್ಕೃತಿ ಎಂಬ ಆತ್ಮಘಾತುಕ ವಂಚನಾ ಶ್ಯೆಲಿಯ ಆಕರ್ಷಣೆ,
ನಮ್ಮೊಳಗಡಗಿದ್ದ ಸಾಂಪ್ರದಾಯಿಕ ಶ್ಯೆಲಿಯ ಚಿಂತನೆಗಳು, ವಸ್ತುಗಳು
ನಂಬಿಕೆಗಳು, ಆಚರಣೆಗಳಲ್ಲಿ ಉಂಟಾದ ದ್ವಂದ್ವಗಳು,
ಸರಿ – ತಪ್ಪು, ಒಳ್ಳೆಯದು – ಕೆಟ್ಟದ್ದು, ನಿಜ – ಸುಳ್ಳು, ಮೌಲ್ಯಗಳು – ಅಪಮೌಲ್ಯಗಳು,
ಆದರ್ಶಗಳು – ವಾಸ್ತವಗಳ ನಡುವೆ ತೆಳುವಾಗುತ್ತಾ ಸಾಗಿದ ಗೆರೆ,
ಎಲ್ಲವನ್ನೂ, ಯಾವುದೇ ಕ್ರೌರ್ಯವನ್ನು ಸಮರ್ಥಿಸುವ, ಒಪ್ಪಿಸುವ, ನಂಬಿಸುವ, ಚಾಣಾಕ್ಷ, ಕುಟಿಲ ಮಾರುಕಟ್ಟೆಯ ತಂತ್ರಗಾರಿಕೆ,
ಅನಾವಶ್ಯಕಷ ಸ್ಪರ್ಧಾ ಪೈಪೋಟಿಯ ಭ್ರಮೆ,
ಜನಪ್ರಿಯತೆಯೇ ಸತ್ಯ, ಸಾಧನೆ ಎಂಬ ಅರ್ಥ,
ಹೇಗಾದರೂ ಮಾಡು, ಏನಾದರೂ ಮಾಡು ಆದರೆ ಯಶಸ್ವಿಯಾಗು ಎಂಬ ಅಪಾಯಕಾರಿ ಕಲ್ಪನೆ,
ಇತ್ಯಾದಿ ಅಂಶಗಳು ಇಂದು ಈ ಸಮಾಜವನ್ನು ಬದಲಾವಣೆಯ ಕಡೆಗೆ ಮುನ್ನಡೆಸುತ್ತಿದೆ,
ಅಪಾಯಕಾರಿ ಅಂಶಗಳ ಜೊತೆಗೆ ಅತ್ಯಂತ ಉನ್ನತ ಅತ್ಯಮೂಲ್ಯ ಅಂಶಗಳು,
ಈ ಬದಲಾವಣೆಯಲ್ಲಿ ಇವೆ.
ಇದಕ್ಕೆ ಸರಿಯಾದ ದಿಕ್ಕು ತೋರಿಸಬೇಕಿದೆ,
ಇದನ್ನು ಅತ್ಯುತ್ತಮ ಮಾನವೀಯ, ಸಮಾನತೆಯ, ಸರಳತೆಯ, ಜೀವಪರ, ಉತ್ಕೃಷ್ಟ ಅಭಿವೃದ್ಧಿ ಪರ ದಿಕ್ಕಿನೆಡೆಗೆ ಕೊಂಡೊಯ್ಯಬೇಕಿದೆ.
ಏಕೆಂದರೆ ಈಗಿನ ಸಂದರ್ಭದಲ್ಲಿ,
ಪೋಲೀಸ್ ಸ್ಟೇಷನ್ ಗಳಲ್ಲಿ ಹಣ ಇಲ್ಲದವರಿಗೆ ನ್ಯಾಯ ಸಿಗುವುದು ಬಹಳ ಕಡಿಮೆ,
ಆಸ್ಪತ್ರೆಗಳಲ್ಲಿ ಬಡವರಿಗೆ ಒಳ್ಳೆಯ ಚಿಕಿತ್ಸೆ ದೊರೆಯುವುದು ಅಪರೂಪ,
ಶಿಕ್ಷಣ ಸಂಸ್ಥೆಗಳಲ್ಲಿ ನಿರ್ಗತಿಕರಿಗೆ ಒಳ್ಳೆಯ ಶಿಕ್ಷಣ ಸಿಗುವುದು ಕನಸಿನ ಮಾತು,
ರಾಜಕೀಯದಲ್ಲಿ ಹಣವಿಲ್ಲದವರಿಗೆ ಅಧಿಕಾರ ಸಿಗುವುದು ಸಾಧ್ಯವೇ ಇಲ್ಲ,
ಸಿನಿಮಾಗಳಲ್ಲಿ ದುಡ್ಡಿಲ್ಲದವರಿಗೆ ಅವಕಾಶ ಸಿಗುವುದು ಅಪರೂಪ,
ಸರ್ಕಾರಿ ಕಛೇರಿಗಳಲ್ಲಿ ಬಡವರ ಕೆಲಸಗಳಾಗುವುದು ವಿರಳ,
ಸಮಾರಂಭಗಳಲ್ಲಿ ಹಳೆಯ, ಮಾಸಿದ ಬಟ್ಟೆಯವರಿಗೆ ಮರ್ಯಾದೆ ಸಿಗುವುದೇ ಇಲ್ಲ,
ಕ್ರೀಡಾರಂಗದಲ್ಲಿ ಪ್ರತಿಭೆಯಿದ್ದರೂ ಹಣವಿಲ್ಲದಿದ್ದರೆ ಪ್ರೋತ್ಸಾಹ ಸಿಗುವುದು ಕಡಿಮೆಯೇ,
ಚುನಾವಣೆಗಳಲ್ಲಿ ಹಣವಿಲ್ಲದವರು ಗೆಲ್ಲುವುದು ಕನಸಿನ ಮಾತು,
ನ್ಯಾಯಾಲಯಗಳಲ್ಲಿ ಬಡವರಿಗೆ ನ್ಯಾಯ ಸಿಗುವುದು ಕಷ್ಟ,
ಜೈಲುಗಳಲ್ಲಿ ಹಣವಿಲ್ಲದ ಕೈದಿಗಳ ಪಾಡು ನರಕಯಾತನೆ,
ಹಣವಿಲ್ಲದೆ ಸರ್ಕಾರಿ ಕೆಲಸ ಸಿಗುವುದು ಅಸಾಧ್ಯ,
ಹಣ, ಹಣ, ಹಣ, ಹಣವೇ ನಿನ್ನಯ ಗುಣ ಎನ್ನುವ ಮಟ್ಟಿಗೆ ಈ ವ್ಯವಸ್ಥೆ ರೂಪಗೊಂಡಿದೆ,
ಆದ್ದರಿಂದಲೇ ಭ್ರಷ್ಟಾಚಾರ ಸರ್ವವ್ಯಾಪಿಯಾಗಿದೆ.
ಹಣದ ಮಹತ್ವ ಕಡಿಮೆಯಾದರೆ ಭ್ರಷ್ಟಾಚಾರವೂ ಕಡಿಮೆಯಾಗುತ್ತದೆ,
ನಿಜವಾಗಿಯೂ ಶ್ರಮಕ್ಕೆ ತಕ್ಕ ಹಣ, ಪ್ರತಿಫಲ, ಪ್ರತಿಭೆಗೆ ತಕ್ಕ ಅಧಿಕಾರ ಸಿಗಬೇಕು,
ಸಾಮಾಜಿಕ ನ್ಯಾಯಕ್ಕೆ ಸರಿಯಾಗಿ ಸಂಪತ್ತಿನ ಹಂಚಿಕೆಯಾಗಬೇಕು,
ದಕ್ಷತೆ, ಪ್ರಾಮಾಣಿಕತೆ, ಸರಳತೆಗೆ ಪ್ರೋತ್ಸಾಹ ಸಿಗಬೇಕು,
ವಾಮಮಾರ್ಗ, ದಿಢೀರ್ ಶ್ರೀಮಂತಿಕೆ, ಹಣದ ಅಸಭ್ಯ ಪ್ರದರ್ಶನಕ್ಕೆ ಕಡಿವಾಣ ಹಾಕಬೇಕು,
ಆಗ ಸುಧಾರಣೆಯ ಹೆಜ್ಜೆಗಳು ಪ್ರಗತಿ ಪಥದತ್ತ ಸಾಗಬಹುದು,
ಭ್ರಷ್ಟಾಚಾರ ಕನಿಷ್ಠ ಪ್ರಮಾಣಕ್ಕೆ ಇಳಿಯಬಹುದು.
ಈ ನಿಟ್ಟಿನಲ್ಲಿ ನಮ್ಮೆಲ್ಲರ ಪ್ರಯತ್ನ ಸಾಗಲಿ, ನಮ್ಮೆಲ್ಲರ ಮನಸ್ಥಿತಿ ಜಾಗೃತಗೊಳ್ಳಲಿ,
ಧನ್ಯವಾದಗಳು,
ಶುಭೋದಯ……..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9663750451…….
9844013068………








