ವಿಜಯ ದರ್ಪಣ ನ್ಯೂಸ್….
ಕೆಐಡಿಬಿಗೆ ನಮ್ಮ ಜಮೀನು ಕೊಡಲು ಸಿದ್ದ

ಶಿಡ್ಲಘಟ್ಟ : ಜಂಗಮಕೋಟೆ ಭಾಗದಲ್ಲಿನ ನಮ್ಮ ಜಮೀನನ್ನು ಕೆಐಎಡಿಬಿಗೆ ಕೊಡಲು ನಾವು ಸಿದ್ದರಿದ್ದು 72 ದಿನಗಳಿಂದಲೂ ಜಿಲ್ಲಾಡಳಿತ ಆವರಣದಲ್ಲಿ ಧರಣಿ ನಡೆಸುತ್ತಿದ್ದರೂ ರಾಜ್ಯ ಸರ್ಕಾರ, ಜಿಲ್ಲಾಧಿಕಾರಿಗಳು ನಮಗೆ ಯಾವುದೆ ರೀತಿಯಲ್ಲೂ ಸ್ಪಂದಿಸುತ್ತಿಲ್ಲ ಎಂದು ಸಾಮೂಹಿಕ ನಾಯಕತ್ವ ರೈತ ಸಂಘದ ಮುಖಂಡ ಮುನಿಕೆಂಪಣ್ಣ ಆಗ್ರಹಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೆ ಅಲ್ಲಿನ ಫಲವತ್ತಾದ ಭೂಮಿಯನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡಲಾಗಿದೆ. ಇನ್ನುಳಿದಂತೆ ಇರುವ ಬಂಜರೂ ಭೂಮಿ, ಕೃಷಿ ನಡೆಸಲು ಅಷ್ಟಾಗಿ ಯೋಗ್ಯವಲ್ಲದ ಭೂಮಿ, ಸರ್ಕಾರಿ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಧರಣಿಗೆ ಸರ್ಕಾರ, ಜಿಲ್ಲಾಡಳಿತದಿಂದ ಸ್ಪಂದನೆ ಸಿಗುತ್ತಿಲ್ಲ. ಅದಕ್ಕಾಗಿ ಜೂ.4ರಂದು ಚಿಕ್ಕಬಳ್ಳಾಪುರ ನಗರದ ಶಿಡ್ಲಘಟ್ಟ ವೃತ್ತದಿಂದ ಧರಣಿ ನಡೆಯುತ್ತಿರುವ ಡಿಸಿ ಕಚೇರಿವರೆಗೂ ಪಂಜಿನ ಮೆರವಣಿಗೆ ಹಮ್ಮಿಕೊಂಡಿದ್ದೇವೆ, ಜೂ.5ರಿಂದ ನಮ್ಮ ಬೇಡಿಕೆ ಈಡೇರುವವರೆಗೂ ಉಪವಾಸ ಸತ್ಯಾಗ್ರಹ ಮುಂದುವರೆಸುತ್ತೇವೆ ಎಂದರು.
ಜಿಲ್ಲಾ ಯುವ ಘಟಕದ ಅಧ್ಯಕ್ಷ ಸುಬ್ರಮಣಿ ಮಾತನಾಡಿ, ನಾವು ನಮ್ಮ ಪಾಲಿನ ಬಂಜರೂ ಭೂಮಿಯನ್ನು ಕೆಐಎಡಿಬಿಗೆ ಬಿಟ್ಟುಕೊಡಲು ಸಿದ್ಧರಿದ್ದೇವೆ ,ಫಲವತ್ತಾದ ಭೂಮಿಯನ್ನು ಬಿಡಿ ಎಂದು ಯಾರಿಗೂ ಬಲವಂತ ಮಾಡುತ್ತಿಲ್ಲ. 72 ದಿನಗಳಿಂದಲೂ ನಾವುಗಳೇ 50, 100 ರೂ. ಕೈಯಿಂದ ಹಾಕಿಕೊಂಡು ಪೆಂಡಾಲ್, ಚೇರು ಹಾಕಿಕೊಂಡು ಪ್ರತಿಭಟನೆ ನಡೆಸುತ್ತಿದ್ದೇವೆ. ಯಾರಿಂದನ್ನು ದೇಣಿಗೆ ಪಡೆದಿಲ್ಲ. ಸುಖಾ ಸುಮ್ಮನೆ ನಮ್ಮ ಮೇಲೆ ಆರೋಪ ಮಾಡಬಾರದು ಎಂದು ವಿರೋಧಿಗಳಿಗೆ ಹೇಳಿದರು.
ಈ ಸಂದರ್ಭದಲ್ಲಿ ಭಕ್ತರಹಳ್ಳಿ ಪ್ರತೀಶ್,
ಡಿ.ವಿ.ನಾರಾಯಣಸ್ವಾಮಿ, ಮುನೇಗೌಡ,ಆಂಜಿನಪ್ಪ, ಹರೀಶ್,ನಾಗರಾಜ್,, ಪ್ರಭುಗೌಡ ಹಾಜರಿದ್ದರು.











