ವಿಜಯ ದರ್ಪಣ ನ್ಯೂಸ್….
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉತ್ತಮ ಆಡಳಿತ ನೀಡಲಿ : ಸೀಕಲ್ ರಾಮಚಂದ್ರಗೌಡ

ಶಿಡ್ಲಘಟ್ಟ : ಈ ನಾಡಿನ ರೈತರು, ಮಹಿಳೆಯರು, ವಿದ್ಯಾರ್ಥಿ ಮತ್ತು ಯುವಕರಿಗೆ ಅನುಕೂಲ ಆಗುವಂತ ಗ್ಯಾರಂಟಿ ಯೋಜನೆಗಳಿಗೆ ನಮ್ಮ ತಕರಾರಿಲ್ಲ ಆದರೆ ಗ್ಯಾರಂಟಿ ಯೋಜನೆಗಳ ವೆಚ್ಚವನ್ನು ಸರಿದೂಗಿಸಲು ಆರ್ಥಿಕ ಸಂಪನ್ಮೂಲವನ್ನು ಕ್ರೂಡೀಕರಿಸುವ ಕೆಲಸವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಲಿಲ್ಲ
ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ತಿಳಿಸಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ಬಿಜೆಪಿ ಸೇವಾಸೌಧ ಕಚೇರಿ ಆವರಣದಲ್ಲಿ ಸಸಿ ನೆಟ್ಟು ಆನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಸಿದ್ದರಾಮಯ್ಯ ಸರ್ಕಾರ ಮಾಡಿದ ಸಾಲವು ರಾಜ್ಯದ ಜನ ಸಾಮಾನ್ಯರ ತಲಾ ಸಾಲ ಪ್ರಮಾಣವನ್ನು ಹೆಚ್ಚಿಸಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಗ್ಯಾರಂಟಿಗಳಿಂದ ಜನರ ತಲೆ ಮೇಲೆ ಸಾಕಷ್ಟು
ಸಾಲವನ್ನು ಸಿದ್ದರಾಮಯ್ಯ ಅವರ ಸರ್ಕಾರ ಹೊರಿಸಿದೆ ಆದರೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಾದರೂ ಆ ರೀತಿ ಮಾಡದೆ ಉತ್ತಮ ಆಡಳಿತ ನೀಡುವ ನಿರೀಕ್ಷೆ ಇದೆ ಎಂದು ಹೇಳಿದರು.
ಡಿಕೆಶಿ ಅವರು ಪಂಚ ಗ್ಯಾರಂಟಿಗಳ ಜತೆಗೆ ಇನ್ನೊಂದಷ್ಟು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದು ಯೋಜನೆಯ ಫಲ ಎಲ್ಲ ಅರ್ಹರಿಗೂ ಸಿಗಲಿ ರಾಜ್ಯದ ಖಜಾನೆಯನ್ನು ತುಂಬಿಸುವ ಕೆಲಸವನ್ನೂ ಡಿಕೆಶಿ ಮಾಡಬೇಕು, ಮಾಡುತ್ತಾರೆಂಬ ನಿರೀಕ್ಷೆಯಿದೆ ಎಂದರು.
ನಾವು ಕೈಗಾರಿಕೆಗಳ ವಿರೋಧಿಗಳಲ್ಲ ಹಾಗಂತ ಫಲವತ್ತಾದ ಕೃಷಿ ಭೂಮಿಯನ್ನು ಕೈಗಾರಿಕೆಗಳಿಗಾಗಿ ಕೆಐಎಡಿಬಿಯು ಸ್ವಾಧೀನ ಪಡಿಸಿಕೊಳ್ಳುವುದಕ್ಕೆ ನಮ್ಮ ತೀವ್ರ ವಿರೋಧವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಒಪ್ಪಿಗೆ ಇಲ್ಲದೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಕೆಲಸಕ್ಕೆ ಸರ್ಕಾರ ಮುಂದಾಗಬಾರದು ಮತ್ತು “ಫಲವತ್ತಾದ ಎ ಮತ್ತು ಬಿ ಗ್ರೇಡ್ ಕೃಷಿ” ಯನ್ನು ಸ್ವಾಧೀನಪಡಿಸಿಕೊಳ್ಳುವಂತಿಲ್ಲ ಸಿ ಮತ್ತು ಡಿ ಗ್ರೇಡ್ ಭೂಮಿಯನ್ನು ಮಾತ್ರ ಸ್ವಾಧೀನಪಡಿಸಿಕೊಳ್ಳಬಹುದಿದ್ದು ನೂತನ ಸರ್ಕಾರ ಇತ್ತ ಗಮನ ಹರಿಸಬೇಕು ಎಂದರು
ರೈತರು ಕಳೆದ 81 ದಿನದಿಂದ ಜಿಲ್ಲಾಡಳಿತ ಭವನದ ಆವರಣದಲ್ಲಿ ಮಹಿಳೆಯರೊಂದಿಗೆ ಹಸು, ಕರು ಮೇಕೆಗಳನ್ನು ಕಟ್ಟಿ ಹಾಕಿಕೊಂಡು ಅನಿರ್ಧಿಷ್ಟ ಧರಣಿ ನಡೆಸುತ್ತಿದ್ದರೂ ಸರ್ಕಾರ ಕ್ಯಾರೆ ಅಂದಿಲ್ಲ ಇದು ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ರೈತರ ಬಗ್ಗೆ ಇರುವ ಕಾಳಜಿಯನ್ನು ತೋರುತ್ತದೆ ಎಂದು ಸರ್ಕಾರದ ರೈತ ವಿರೋಧಿ ಧೋರಣೆಯನ್ನು ಅವರು ಖಂಡಿಸಿದರು.
ತಾಯಿಯ ಹೆಸರಲ್ಲಿ ಗಿಡ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಇಡೀ ದೇಶದಲ್ಲಿ ಎಲ್ಲ ಬೂತ್ ಮಟ್ಟದ ಪದಾಧಿಕಾರಿಗಳು ತಮ್ಮ ಹೆಸರಲ್ಲಿ ಒಂದೊಂದು ಸಸಿಯನ್ನು ನೆಡುವಂತೆ ಪಕ್ಷದಿಂದ ಸೂಚಿಸಿದ್ದು ಎಲ್ಲರೂ ತಾಯಿಯ ಹೆಸರಲ್ಲಿ ಸಸಿಗಳನ್ನು ನೆಟ್ಟಿದ್ದೇವೆ ಎಂದರು.
ಇದು ಕೇವಲ ಸಾಂಕೇತಿಕ ಕಾರ್ಯಕ್ರಮವಾದರೂ ವರ್ಷಪೂರ್ತಿ ನಾವು ಪರಿಸರವನ್ನು ಉಳಿಸಿ ಬೆಳೆಸುವ ಕಾಯಕ್ರಮದಲ್ಲಿ ತಮ್ಮನ್ನು ತಾವು ತಮಗಾಗಿ ಹಾಗು ತಮ್ಮ ಮುಂದಿನ ಪೀಳಿಗೆಗಾಗಿ ತೊಡಗಿಸಿಕೊಳ್ಳ ಬೇಕೆಂದು ಮನವಿ ಮಾಡಿದರು.
ಸೇವಾಸೌಧ ಕಚೇರಿ ಆವರಣದಲ್ಲಿ ಸಸಿ ನೆಟ್ಟು ನೀರು ಹಾಕಲಾಯಿತು,ನಂತರ ನಗರದ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ನಡೆಸಿ ಚಿಕ್ಕಬಳ್ಳಾಪುರದಿಂದ ಬೆಂಗಳೂರು ವಿಧಾನಸೌಧ ಚಲೋ ಬೈಕ್ ರ್ಯಾಲಿಗೆ ತೆರಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಸೀಕಲ್ ಆನಂದಗೌಡ, ಮಾಜಿ ಅದ್ಯಕ್ಷ ಕಂಬದಹಳ್ಳಿ ಸುರೇಂದ್ರಗೌಡ, ನಗರ ಘಟಕ ಅದ್ಯಕ್ಷ ದೇವರಾಜ್, ನಗರಭೆ ಮಾಜಿ ಸದಸ್ಯ ನಾರಾಯಣಸ್ವಾಮಿ, ಬಂಗಾರು ರಾಮಕೃಷ್ಣ,ಉರುಷೋತ್ತಮ್, ತಲದುಮ್ಮನಹಳ್ಳಿ ಮಧು ಮತ್ತಿತರರು ಪಾಲ್ಗೊಂಡಿದ್ದರು.










