ವಿಜಯ ದರ್ಪಣ ನ್ಯೂಸ್…
ಇಸ್ಕಾನ್ ಗೆ ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ಪೂರೈಸಲು ಅವಕಾಶ ನೀಡಿರುವುದರ ವಿರುದ್ಧ
ಬಿಸಿಯೂಟ ನೌಕರರಿಂದ ತಾಲ್ಲೂಕು ಪಂಚಾಯಿತಿ ಎದುರು ಪ್ರತಿಭಟನೆ !

ಶಿಡ್ಲಘಟ್ಟ : ಸರಕಾರಿ ಶಾಲೆಗಳಿಗೆ ಸರಕಾರೇತರ ಸಂಘ ಸಂಸ್ಥೆ, ಧರ್ಮಾಧಾರಿತ ಸಂಸ್ಥೆಗಳಿದ ಬಿಸಿಯೂಟ ಪೂರೈಸುವುದನ್ನು ಸರಕಾರ ಮತ್ತು ಸುಪ್ರೀಂ ಕೋರ್ಟ್ ಕೂಡ ನಿಷೇಧಿಸಿದೆ ಆದರೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಮಾತ್ರ ಧರ್ಮಾಧಾರಿತ ಸಂಸ್ಥೆ ಇಸ್ಕಾನ್‌ಗೆ ಅನುಮತಿ ಕೊಟ್ಟಿರುವುದಕ್ಕೆ ಬಿಸಿಯೂಟ ನೌಕರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕು ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮದ್ಯಾಹ್ನದ ಬಿಸಿಯೂಟವನ್ನು ಪೂರೈಸಲು ಇಸ್ಕಾನ್ ಸಂಸ್ಥೆಯ ಅಕ್ಷಯ ಪಾತ್ರೆ ಫೌಂಡೇಷನ್‌ಗೆ ಅವಕಾಶ ಕೊಟ್ಟಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಬಿಸಿಯೂಟ ತಯಾರಿಸುವ ನೌಕರರು ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಸಿಐಟಿಯು ಜಿಲ್ಲಾಧ್ಯಕ್ಷೆ ಲಕ್ಷ್ಮಿದೇವಮ್ಮ ಮಾತನಾಡಿ, ಈಗಾಗಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಎಲ್ಲ ಸರಕಾರಿ ಶಾಲೆಗಳಲ್ಲೂ ಮದ್ಯಾಹ್ನದ ಬಿಸಿಯೂಟ ಯೋಜನೆಯು ಯಾವುದೆ ಅಡ್ಡಿ ಆತಂಕವಿಲ್ಲದೆ ಸುಸೂತ್ರವಾಗಿ ನಡೆಯುತ್ತಿದೆ, ೧,೧೩,೭೦೦ ಮಂದಿ ಮಹಿಳೆಯರು ಬಿಸಿಯೂಟ ತಯಾರಿಕೆಯಲ್ಲಿ ತೊಡಗಿದ್ದಾರೆ ಎಂದರು.
ಆರಂಭದಲ್ಲಿ ಅತಿ ಕಡಿಮೆ ಸಂಬಳಕ್ಕೆ ಕೆಲಸ ಮಾಡಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದು ಮುಖ್ಯ ಶಿಕ್ಷಕರಿಗೆ ಅಥವಾ ಇಲಾಖೆಯ ಅದಿಕಾರಿಗಳಿಗೆ ಯಾವುದೆ ರೀತಿಯ ಅಡಚಣೆ ತೊಂದರೆ ಇಲ್ಲದೆ ಮಕ್ಕಳಿಗೆ ಬಿಸಿಯೂಟ ತಯಾರಿಸಿ ಬಡಿಸಲಾಗುತ್ತಿದೆ ಎಂದು ನುಡಿದರು
ಆದರೂ ಇದೀಗ ಸುಪ್ರೀಂ ಕೋರ್ಟ್ ಸೂಚನೆಯನ್ನು ಉಲ್ಲಂಘಿಸಿ ಸರಕಾರೇತರ ಸಂಸ್ಥೆಗೆ ಸರಕಾರಿ ಶಾಲಾ ಮಕ್ಕಳಿಗೆ ಮದ್ಯಾಹ್ನದ ಬಿಸಿಯೂಟ ಪೂರೈಸಲು ಅವಕಾಶ ಮಾಡಿಕೊಟ್ಟಿರುವುದು ಹತ್ತು ಹಲವು ಅನುಮಾನಗಳಿಗೆ ಅವಕಾಶ ಮಾಡಿಕೊಟ್ಟಿದೆ ಎಂದು ಅವರು ಅನುಮಾನಪಟ್ಟರು.
ಮಕ್ಕಳಲ್ಲಿ ಪೌಷ್ಠಿಕತೆಯನ್ನು ಹೆಚ್ಚಿಸುವ ಬೆಳ್ಳುಳ್ಳಿ, ಈರುಳ್ಳಿಯನ್ನು ಇಸ್ಕಾನ್‌ನ ಅಕ್ಷಯ ಪಾತ್ರೆ ತಯಾರಿಸುವ ಬಿಸಿಯೂಟದ ಅಡುಗೆಯಲ್ಲಿ ಬಳಸುವುದಿಲ್ಲ ಇದು ಮಕ್ಕಳಲ್ಲಿ ಅಗತ್ಯ ಪೌಷ್ಟಿಕತೆ ಕುಗ್ಗಲು ಕಾರಣವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿ ಜತೆಗೆ ಅನೇಕ ವರ್ಷಗಳಿಂದಲೂ ಕೆಲಸ ಮಾಡಿಕೊಂಡು ಬಂದ ಬಿಸಿಯೂಟ ತಯಾರಿಸುವ ನೌಕರರ ಕೆಲಸಕ್ಕೂ ಕುತ್ತು ತರಲಿದೆ ಎಂದು ಬೇಸರ ವ್ಯಕ್ತಪಡಿಸಿದರು.ತಾಲ್ಲೂಕು ಪಂಚಾಯಿತಿ ಇಒ ಆರ್.ಹೇಮಾವತಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷೆ ಜಿ.ಎಂ.ಲಕ್ಷ್ಮಿ ದೇವಮ್ಮ, ಮುಖಂಡರಾದ ಮುನಿಕೃಷ್ಣಪ್ಪ, ಮುನಿಯಪ್ಪ, ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ಮುನಿಲಕ್ಷ್ಮಮ್ಮ ,ಗಾಯತ್ರಿ, ಮಂಜುಳಮ್ಮ,ಚಂದ್ರಕಲಾ, ನಾಗಮಣಿ, ಸುಶೀಲ,ಮಂಜುಳಾಬಾಯಿ ದ್ಯಾವಮ್ಮ, ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.










