ವಿಜಯ ದರ್ಪಣ ನ್ಯೂಸ್….
NDA ಅಭ್ಯರ್ಥಿ ಪರ ಪ್ರಚಾರಕ್ಕೆ ಸೆ.30ರಂದು ಬಿಜೆಪಿ-ಜೆಡಿಎಸ್ ಜಿಲ್ಲಾ ಮಟ್ಟದ ಸಭೆ
ಆಗ್ನೆಯ ಪದವೀಧರರ ಕ್ಷೇತ್ರದ NDA ಅಭ್ಯರ್ಥಿ ಸುರೇಶ್ : ಸೀಕಲ್ ರಾಮಚಂದ್ರಗೌಡ

ಶಿಡ್ಲಘಟ್ಟ : ಮುಂಬರುವ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ NDA ಅಭ್ಯರ್ಥಿಯಾಗಿ ಸುರೇಶ್ ಅವರು ಕಣದಲ್ಲಿದ್ದು, ಅವರು ದಾವಣಗೆರೆ ಮೂಲದವರಾಗಿದ್ದು ಕಳೆದ 25 ವರ್ಷಗಳಿಂದ ಬಿಜೆಪಿಯ ಸಾಮಾನ್ಯ ಕಾರ್ಯಕರ್ತರಾಗಿ ತಳಮಟ್ಟದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಬಿಜೆಪಿ ಜಿಲ್ಲಾದ್ಯಕ್ಷ ಸೀಕಲ್ ರಾಮಚಂದ್ರಗೌಡ ತಿಳಿಸಿದರು.
ಚಿಕ್ಕಬಳ್ಳಾಪುರ ನಗರದ ಹರ್ಷೋದಯ ಕಲ್ಯಾಣ ಮಂಟಪದಲ್ಲಿ ಸೆಪ್ಟೆಂಬರ್.30ರಂದು ಬೆಳಿಗ್ಗೆ 10.30ಕ್ಕೆ
ಸಭೆ ನಡೆಯಲಿದ್ದು, ಬಿಜೆಪಿ ಹಾಗೂ ಜೆಡಿಎಸ್ ನ ಎಲ್ಲಾ ಕಾರ್ಯಕರ್ತರು ಮತ್ತು ಮುಖಂಡರು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಆಗ್ನೆಯ ಪದವೀಧರರ ಕ್ಷೇತ್ರವು ಕೋಲಾರ ಜಿಲ್ಲೆಯ ಮುಳಬಾಗಿಲು ಗಡಿಯಿಂದ ಚಿತ್ರದುರ್ಗದವರೆಗೆ ವ್ಯಾಪಿಸಿದ್ದು, ಚಿತ್ರದುರ್ಗ, ದಾವಣಗೆರೆ, ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳನ್ನು ಒಳಗೊಂಡಿದೆ. ಸುಮಾರು 500 ಕಿ.ಮೀ ವ್ಯಾಪ್ತಿಯ ಈ ಕ್ಷೇತ್ರದಲ್ಲಿ ಎರಡು ಲಕ್ಷದವರೆಗೆ ಮತದಾರರಿದ್ದು, ಈ ಹಿಂದೆ ಒಂದು ಲಕ್ಷಕ್ಕಿಂತ ಕಡಿಮೆ ಮತದಾರರಿದ್ದರು ಎಂದು ಹೇಳಿದರು.
NDA ಅಭ್ಯರ್ಥಿಯ ಪರವಾಗಿ ನಡೆಯಲಿರುವ ಜಿಲ್ಲಾ ಮಟ್ಟದ ಸಭೆಗೆ ಎರಡೂ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.
ಈ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹಲವು ಬಾರಿ ಗೆಲುವು ಸಾಧಿಸಿವೆ ಈ ಬಾರಿ ಎರಡೂ ಪಕ್ಷಗಳು ಒಗ್ಗೂಡಿ ಒಂದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿವೆ. ಹೀಗಾಗಿ NDA ಅಭ್ಯರ್ಥಿಯ ಪರವಾಗಿ ಜಿಲ್ಲೆಯಾದ್ಯಂತ ಸಂಘಟಿತವಾಗಿ ಚುನಾವಣಾ ಕಾರ್ಯ ನಡೆಸಲು ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ಸಾರ್ವಜನಿಕ ಬದುಕಿನ 25 ವರ್ಷಗಳ ಸೇವೆಯನ್ನು ಸ್ಮರಿಸುವ ಉದ್ದೇಶದಿಂದ ಬಿಜೆಪಿ ವತಿಯಿಂದ ದೇಶದಾದ್ಯಂತ ಒಂದು ತಿಂಗಳ ಕಾಲ “ಸೇವಾ ಸಂಕಲ್ಪ ಅಭಿಯಾನ” ಹಮ್ಮಿಕೊಳ್ಳಲಾಗಿದೆ, ಸೆ.17ರಿಂದ ಅ.17ರವರೆಗೆ ನಡೆಯಲಿರುವ ಅಭಿಯಾನದಡಿ ವಿವಿಧ ಸೇವಾ ಹಾಗೂ ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಬೂತ್ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಜನರನ್ನು ಸೇವಾ ಚಟುವಟಿಕೆಗಳಲ್ಲಿ ತೊಡಗಿಸುವುದು ಹಾಗೂ ದೇಶದ ಅಭಿವೃದ್ಧಿಯ ಕುರಿತ ಅರಿವು ಮೂಡಿಸುವುದು ಅಭಿಯಾನದ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸೀಕಲ್ ಆನಂದಗೌಡ, ನಗರ ಮಂಡಲ ಅಧ್ಯಕ್ಷ ದೇವರಾಜ್, ನಿಕಟಪೂರ್ವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರಗೌಡ, ಕನಕಪ್ರಸಾದ್ ,ಕೊತ್ತನೂರು ರವಿಚಂದ್ರ,ರಾಮಕೃಷ್ಣಪ್ಪ ಹಾಜರಿದ್ದರು.











