ವಿಜಯ ದರ್ಪಣ ನ್ಯೂಸ್…..
*“ನೀರಾವರಿ ಯೋಜನೆಗಳಿಗೆ ವೇಗ ನೀಡಿ – ಭೂಸ್ವಾಧೀನ ವ್ಯಾಜ್ಯ ಇತ್ಯರ್ಥಕ್ಕೆ ಮಧ್ಯಸ್ಥಿಕೆ ಮೊರೆ”*
ಕೆರೆಗಳಿಗೆ ನೀರು ತುಂಬಿಸಿ, ಅಂತರಜಲ ಹೆಚ್ಚಿಸಿ : ಅಧಿಕಾರಿಗಳಿಗೆ ಸಚಿವ ಚಲುವರಾಯಸ್ವಾಮಿ ಸೂಚನೆ

ಬೆಂಗಳೂರು, ಆ, 28::
ರಾಜ್ಯದ ಜಲಸಂಪನ್ಮೂಲ ಯೋಜನೆಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅವರು ಇಂದು ವಿಧಾನಸೌಧದ 3ನೇ ಮಹಡಿಯಲ್ಲಿ ನಾಲ್ಕು ನಿಗಮಗಳ ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಕೃಷ್ಣಾ, ಕಾವೇರಿ, ವಿಶ್ವೇಶ್ವರಯ್ಯ ಹಾಗೂ ಕರ್ನಾಟಕ ನೀರಾವರಿ ನಿಗಮಗಳ ಭೌತಿಕ ಮತ್ತು ಆರ್ಥಿಕ ಪ್ರಗತಿಯನ್ನು ಸುದೀರ್ಘವಾಗಿ ಪರಾಮರ್ಶಿಸಿದ ಸಚಿವರು, ಬಾಕಿ ಯೋಜನೆಗಳಿಗೆ ವೇಗ ನೀಡಲು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕೆರೆಗಳ ಭರ್ತಿಗೆ ಆದ್ಯತೆ:
ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನೀರನ್ನು ಪಂಪ್ ಮಾಡಿ ಕೆರೆ-ಕಟ್ಟೆಗಳನ್ನು ತುಂಬಿಸಬೇಕು. ಅಂತರಜಲ ಹೆಚ್ಚಳಕ್ಕೆ ಸಾಂಪ್ರದಾಯಿಕ ವಿಧಾನದ ಜೊತೆಗೆ ವೈಜ್ಞಾನಿಕ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.
ಯುಕೆಪಿ-3 ವಿವಾದಗಳಿಗೆ ‘ಮಧ್ಯಸ್ಥಿಕೆ’ ಮದ್ದು:
ಕೃಷ್ಣಾ ಮೇಲ್ದಂಡೆ ಯೋಜನೆ (UKP-3) ಹಂತ 1 ಮತ್ತು 2ರಲ್ಲಿ 20 ವರ್ಷಗಳ ಹಿಂದಿನ ಸುಮಾರು *1500 ಭೂಸ್ವಾಧೀನ ಪ್ರಕರಣಗಳು* ನ್ಯಾಯಾಲಯದಲ್ಲಿ ಬಾಕಿ ಇವೆ. ಇವುಗಳನ್ನು *’ಮಧ್ಯಸ್ಥಿಕೆ’ (Mediation) ಮೂಲಕ* ತ್ವರಿತವಾಗಿ ಇತ್ಯರ್ಥಪಡಿಸಿ 9 ಉಪ-ಯೋಜನೆಗಳ ಭೂಸ್ವಾಧೀನ ಚುರುಕುಗೊಳಿಸುವಂತೆ ತಾಕೀತು ಮಾಡಿದರು. ಇತ್ತೀಚೆಗೆ ಸಚಿವ ಸಂಪುಟ ಘೋಷಿಸಿರುವ ಪರಿಹಾರದ ಹಣ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲು ನಿರ್ದೇಶಿಸಿದರು.
ಮೇಕೆದಾಟು ಯೋಜನೆ: 67 ಟಿಎಂಸಿ ಸಾಮರ್ಥ್ಯದ ಪರಿಷ್ಕೃತ ಡಿಪಿಆರ್ ಅನ್ನು ಆಗಸ್ಟ್ 13ರಂದು ಕೇಂದ್ರಕ್ಕೆ ಕಳುಹಿಸಲಾಗಿದೆ. ಡ್ಯಾಂ ಸುತ್ತಲೂ ನೀರಾವರಿ ಪ್ರದೇಶವಿಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ತಮಿಳುನಾಡಿನ ಅನುಮಾನಗಳಿಗೆ ತಾರ್ಕಿಕ ಅಂತ್ಯ ಹಾಡಲಾಗಿದೆ. ಈ ಬಗ್ಗೆ ಪ್ರತ್ಯೇಕ ಸಭೆ ನಡೆಸಲು ಸೂಚನೆ.
ಮಹದಾಯಿ (ಕಳಸಾ-ಬಂಡೂರಿ):*ಯ ಜಲವಿವಾದ ನ್ಯಾಯಾಧಿಕರಣ ಅಂತಿಮ ತೀರ್ಪು ನೀಡಿದ್ದು, ಕೇಂದ್ರ ಜಲ ಆಯೋಗ (CWC) ಪರಿಷ್ಕೃತ ಡಿಪಿಆರ್ಗೆ ಅನುಮತಿ ನೀಡಿದೆ. ಸುಪ್ರೀಂ ಕೋರ್ಟ್ನಲ್ಲಿ ಯಾವುದೇ ಪ್ರಕರಣ ಇಲ್ಲದಿದ್ದರೂ ಅರಣ್ಯ ಇಲಾಖೆ ಪ್ರಕರಣದ ಬಗ್ಗೆ ಪ್ರಸ್ತಾಪಿಸುತ್ತಿದೆ. ಹೀಗಾಗಿ ಅರಣ್ಯ ಇಲಾಖೆಗೆ ಪತ್ರ ಬರೆದು ವಾಸ್ತವ ತಿಳಿಸಿ, *ನ್ಯಾಷನಲ್ ಬೋರ್ಡ್ ಫಾರ್ ವೈಲ್ಡ್ ಲೈಫ್ (NBWL) ಕ್ಲಿಯರೆನ್ಸ್* ಚುರುಕುಗೊಳಿಸಲು ಸೂಚನೆ.
ಎತ್ತಿನಹೊಳೆ ಯೋಜನೆ:* 256 ಕಿ.ಮೀ ಉದ್ದದ ಗುರುತ್ವಾಕರ್ಷಣಾ ಕಾಲುವೆಯಲ್ಲಿ ಈಗಾಗಲೇ 40 ಕಿ.ಮೀ ವರೆಗೆ ನೀರು ಹರಿದಿದೆ. ಮೊದಲ ಹಂತದಲ್ಲಿ 111 ಹೆಕ್ಟೇರ್ ಅರಣ್ಯ ಬಳಕೆಗೆ ಕೇಂದ್ರದ ಒಪ್ಪಿಗೆ ಸಿಕ್ಕಿದ್ದು, ಸಣ್ಣಪುಟ್ಟ ಸಮಸ್ಯೆ ಬಗೆಹರಿಸಲು ಹಾಸನ ಜಿಲ್ಲಾಧಿಕಾರಿಗೆ ಸೂಚನೆ.
ಭದ್ರಾ ಮೇಲ್ದಂಡೆ: 2023-24ರ ಬಜೆಟ್ನಲ್ಲಿ ಕೇಂದ್ರ ಸರ್ಕಾರ ಘೋಷಿಸಿದ್ದ *5,300 ಕೋಟಿ ರೂ. ನೆರವು* ಇನ್ನೂ ಬಿಡುಗಡೆಯಾಗದ ಬಗ್ಗೆ ಸಭೆಯಲ್ಲಿ ಕಳವಳ ವ್ಯಕ್ತ.
*ತುಂಗಭದ್ರಾ ಡ್ಯಾಂ:* ಎಲ್ಲಾ ಗೇಟ್ಗಳನ್ನು ಹೊಸದಾಗಿ ಅಳವಡಿಸಲಾಗಿದ್ದು, ನವಲಿ ಸಮತೋಲನಾ ಜಲಾಶಯ ನಿರ್ಮಾಣದ ಬಗ್ಗೆಯೂ ಪ್ರಸ್ತಾಪ.
ಆರ್ಥಿಕ ಸಮಸ್ಯೆಗಳಿಗೆ ಸಿಎಂ ಜೊತೆ ಚರ್ಚೆ:
ಇಲಾಖೆಯ ಬಾಕಿ ಬಿಲ್ಗಳ ಪಾವತಿ ಮತ್ತು ಆರ್ಥಿಕ ಸಮಸ್ಯೆಗಳ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಲಾಗಿದ್ದು, ಪ್ರತ್ಯೇಕ ಸಭೆಯಲ್ಲಿ ಪರಿಹಾರ ಕಂಡುಕೊಳ್ಳುವುದಾಗಿ ಸಚಿವರು ಭರವಸೆ ನೀಡಿದರು. ಪ್ರಸ್ತುತ ಇಲಾಖೆಯಲ್ಲಿ *16,000 ಕೋಟಿ ರೂ. ಮೊತ್ತದ ಹೊಸ ಯೋಜನೆಗಳು* ಪ್ರಗತಿಯಲ್ಲಿವೆ. ವಿಶ್ವಬ್ಯಾಂಕ್ ನೆರವಿನ DRIP ಮತ್ತು ಜಲಶಕ್ತಿ ಸಚಿವಾಲಯದ M-CADWM ಯೋಜನೆಗಳ ಕುರಿತೂ ಪರಾಮರ್ಶೆ ನಡೆಯಿತು.
ರಾಜ್ಯದಲ್ಲಿ 140.60 ಲಕ್ಷ ಹೆಕ್ಟೇರ್ ಬೇಸಾಯ ಯೋಗ್ಯ ಭೂಮಿ ಇದ್ದು, 107 ಲಕ್ಷ ಹೆಕ್ಟೇರ್ ಬಿತ್ತನೆ ಕ್ಷೇತ್ರದಲ್ಲಿ ಬೃಹತ್ ನೀರಾವರಿ ಯೋಜನೆಯಡಿ 42 ಲಕ್ಷ ಹೆಕ್ಟೇರ್ ಪ್ರದೇಶವನ್ನು ತರಲಾಗಿದೆ.
ಸಭೆಯಲ್ಲಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ *ಗೌರವ್ ಗುಪ್ತ* ಸೇರಿದಂತೆ ನಾಲ್ಕು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಮತ್ತು ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.











