ವಿಜಯ ದರ್ಪಣ ನ್ಯೂಸ್….
ಕೈಲ್ ಮುಹೂರ್ತ ಕೊಡಗಿನ ಆತ್ಮದ ಹಬ್ಬ

ಕೊಡಗು : ಬ್ರಹ್ಮಗಿರಿಯ ಮಡಿಲಲ್ಲಿ ಜನ್ಮತಾಳಿದ ಕಾವೇರಿ* *ತಾಯಿ ಹಸಿರು ಭತ್ತದ ಗದ್ದೆಗಳು ಮಂಜು ಹೊದ್ದ ಬೆಟ್ಟಗಳು ಐನ್‌ಮನೆಗಳ ಸಂಪ್ರದಾಯ ಮತ್ತು ವೀರರ ಇತಿಹಾಸವನ್ನು ತನ್ನೊಳಗೆ ಹೊತ್ತಿರುವ ನಾಡು ಕೊಡಗು ಈ ಪವಿತ್ರ ನೆಲದಲ್ಲಿ ತಲೆಮಾರುಗಳಿಂದ ಆಚರಿಸಿಕೊಂಡು ಬಂದಿರುವ ವಿಶಿಷ್ಟ ಸಾಂಸ್ಕೃತಿಕ ಮಹೋತ್ಸವವೇ ಕೈಲ್ ಮುಹೂರ್ತ (ಕೈಲ್ ಪೋಳ್ದ್)
ಕೊಡವ ಭಾಷೆಯಲ್ಲಿ “ಕೈಲ್” ಎಂದರೆ ಆಯುಧ ಪೋಳ್ದ್” ಎಂದರೆ ಹಬ್ಬ ಕೈಲ್ ಮುಹೂರ್ತವು ಕೇವಲ ಆಯುಧಗಳ ಹಬ್ಬವಲ್ಲ ಅದು ಕೃಷಿ ಶೌರ್ಯ ಸಂಸ್ಕೃತಿ ಮತ್ತು ಪೂರ್ವಜರ ಸ್ಮರಣೆಯ ಮಹೋತ್ಸವ

ಹಿಂದಿನ ಕಾಲದಲ್ಲಿ ಕೊಡಗಿನ ಜನರ ಬದುಕು ಸಂಪೂರ್ಣವಾಗಿ ಭತ್ತದ ಕೃಷಿಯನ್ನು ಅವಲಂಬಿಸಿತ್ತು ಮಳೆಗಾಲದ ಆರಂಭದಿಂದಲೇ ರೈತರು ಗದ್ದೆಗಳಲ್ಲಿ ದುಡಿದು ನಾಟಿ ಕಾರ್ಯವನ್ನು ಪೂರ್ಣಗೊಳಿಸುತ್ತಿದ್ದರು. ನಾಟಿ ಮುಗಿದ ಬಳಿಕ ಬೆಳೆಗಳನ್ನು ಕಾಡುಹಂದಿ ಮತ್ತು ಇತರ ವನ್ಯಜೀವಿಗಳಿಂದ ರಕ್ಷಿಸುವ ಹೊಣೆಗಾರಿಕೆ ಆರಂಭವಾಗುತ್ತಿತ್ತು ಆಗ ಮನೆಗಳ ಪೂಜಾ ಕೋಣೆಯಲ್ಲಿ ಇರಿಸಲಾಗಿದ್ದ ಕೋವಿ ಕತ್ತಿ ಹಾಗೂ ಇತರ ಆಯುಧಗಳನ್ನು ಹೊರತೆಗೆದು ಶುಚಿಗೊಳಿಸಿ ಪೂಜಿಸುವ ಸಂಪ್ರದಾಯ ಬೆಳೆದಿತು ಅದುವೇ ಕಾಲಕ್ರಮೇಣ ಕೈಲ್ ಮುಹೂರ್ತವಾಗಿ ರೂಪುಗೊಂಡಿತು
ಹಾಲೇರಿ ಅರಸರ ಕಾಲದಲ್ಲಿ ಕೊಡಗಿನ ಶೌರ್ಯ ಮತ್ತು ಸಂಸ್ಕೃತಿಗೆ ವಿಶೇಷ ಸ್ಥಾನಮಾನ ಇತ್ತು ಕೃಷಿಕನೂ ವೀರನೂ ಒಂದೇ ವ್ಯಕ್ತಿಯಾಗಿದ್ದ ಕಾಲ ಅದು ಒಂದು ಕೈಯಲ್ಲಿ ನೇಗಿಲು ಮತ್ತೊಂದು ಕೈಯಲ್ಲಿ ಆಯುಧ ಹಿಡಿದು ಬದುಕಿದ ಕೊಡವ ಜನಾಂಗದ ಜೀವನ ದರ್ಶನವೇ ಕೈಲ್ ಮುಹೂರ್ತದ ಆತ್ಮವಾಗಿದೆ.
ಈ ದಿನ ಕೋವಿ ಒಡಿಕತ್ತಿ ಪೀಚೆಕತ್ತಿ ಹಾಗೂ ಕೃಷಿ ಉಪಕರಣಗಳನ್ನು ಹೂವಿನಿಂದ ಅಲಂಕರಿಸಿ ಪೂಜಿಸಲಾಗುತ್ತದೆ ಗುರುಕಾರಣರನ್ನು ಸ್ಮರಿಸಲಾಗುತ್ತದೆ ಹಿರಿಯರ ಆಶೀರ್ವಾದ ಪಡೆಯಲಾಗುತ್ತದೆ ಕುಟುಂಬಗಳು ಒಂದಾಗಿ ಸೇರಿ ಸಂಭ್ರಮಿಸುತ್ತವೆ ಊರಿನ ಮಂದ್‌ಗಳಲ್ಲಿ ಸಾಂಪ್ರದಾಯಿಕ ಕ್ರೀಡೆಗಳು ಮತ್ತು ಶೌರ್ಯದ ಸಂಕೇತವಾದ ಸ್ಪರ್ಧೆಗಳು ನಡೆಯುತ್ತವೆ
ಕೈಲ್ ಮುಹೂರ್ತವನ್ನು ಅರಿಯಬೇಕಾದರೆ ಕಾವೇರಿ ತಾಯಿಯನ್ನು ಅರಿಯಬೇಕು ಕಾವೇರಿ ಕೇವಲ ನದಿಯಲ್ಲ* *ಕೊಡಗಿನ ಸಂಸ್ಕೃತಿಯ ಜೀವನಾಡಿ ಆಕೆಯ ನೀರಿನಿಂದ ಭತ್ತದ ಗದ್ದೆಗಳು ಹಸಿರಾಗಿವೆ ಆಕೆಯ ಕೃಪೆಯಿಂದ ಬದುಕುಗಳು ಸಮೃದ್ಧವಾಗಿವೆ ಆಕೆಯ ಹರಿವಿನೊಂದಿಗೆ ಕೊಡಗಿನ ಪರಂಪರೆ ಮತ್ತು ಸಂಸ್ಕೃತಿಯೂ ನಿರಂತರವಾಗಿ ಹರಿದು ಬಂದಿದೆ
ಇಂದು ಮೊಳಗುವ ಕೋವಿಯ ಸದ್ದು ಕೇವಲ ಸಂಭ್ರಮದ ಸದ್ದಲ್ಲ
ಬ್ರಹ್ಮಗಿರಿಯ ಪ್ರತಿಧ್ವನಿ
ಕಾವೇರಿಯ ಕಲಕಲ ನಾದ
ಹಾಲೇರಿ ಅರಸರ ಕಾಲದಿಂದ ಹರಿದು ಬಂದ ಶೌರ್ಯದ ಘೋಷಣೆ
ಪೂರ್ವಜರ ನೆನಪು
ಕೊಡಗಿನ ಆತ್ಮ
ಕೈಲ್ ಮುಹೂರ್ತವು
ಕೊಡಗಿನ ಮಣ್ಣಿನ ಸ್ಮೃತಿ
ಕಾವೇರಿ ತಾಯಿಯ ಕೃಪೆ
ಪೂರ್ವಜರ ಶೌರ್ಯದ ಪರಂಪರೆ
ಮತ್ತು ಮುಂದಿನ ತಲೆಮಾರಿಗೆ ನಾವು ಹಸ್ತಾಂತರಿಸುವ ಸಂಸ್ಕೃತಿಯ ಅಮೂಲ್ಯ ಆಸ್ತಿ
ಕಾವೇರಿ ಹರಿಯುವವರೆಗೂ
ಕೊಡಗಿನ ಮಣ್ಣಿನ ಪರಿಮಳ ಉಳಿಯುವವರೆಗೂ
ಐನ್‌ಮನೆಗಳಲ್ಲಿ ದೀಪ ಬೆಳಗುವವರೆಗೂ
ಕೈಲ್ ಮುಹೂರ್ತದ ವೈಭವ ಚಿರಂತನ
ನಾಡಿನ ಸಮಸ್ತ ಜನತೆಗೆ ಕೈಲ್ ಮುಹೂರ್ತ (ಕೈಲ್ ಪೋಳ್ದ್) ಹಬ್ಬದ ಹಾರ್ದಿಕ ಶುಭಾಶಯಗಳು
✍️ ಎಂ ಎಂ ದಾವುದ್
9945375180










