--Ads--

ಎತ್ತಿನಹೊಳೆ ಯೋಜನೆಗೆ ವೇಗ:  ಕಾಮಗಾರಿ ಪರಿಶೀಲಿಸಿದ ಸಚಿವ ಚಲುವರಾಯಸ್ವಾಮಿ: ವಿಳಂಬವಾದರೆ ಕಠಿಣ ಕ್ರಮದ ಎಚ್ಚರಿಕೆ

On: September 17, 2026 11:14 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಎತ್ತಿನಹೊಳೆ ಯೋಜನೆಗೆ ವೇಗ:  ಕಾಮಗಾರಿ ಪರಿಶೀಲಿಸಿದ ಸಚಿವ ಚಲುವರಾಯಸ್ವಾಮಿ: ವಿಳಂಬವಾದರೆ ಕಠಿಣ ಕ್ರಮದ ಎಚ್ಚರಿಕೆ

ತುಮಕೂರು/ತಿಪಟೂರು (ಸೆ.17) ಬಹುನಿರೀಕ್ಷಿತ ಎತ್ತಿನಹೊಳೆ ಯೋಜನೆಯನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವ ಸಂಕಲ್ಪ ತೊಟ್ಟಿರುವ ರಾಜ್ಯ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅವರು, ಗುರುವಾರ ತಿಪಟೂರು ಸಮೀಪದ ಚೌಡ್ಲಪುರದ ಎತ್ತಿನಹೊಳೆ ಕಾಮಗಾರಿಯ ಪ್ಯಾಕೇಜ್ 18 ಹಾಗೂ ತಿಪಟೂರಿನ ಬೈಪಾಸ್ ಬಳಿ ನಡೆಯುತ್ತಿರುವ ‘ಎಲಿವೇಟೆಡ್ ಟ್ರಫ್’ (Elevated trough) ಕಾಮಗಾರಿಗಳನ್ನು ಖುದ್ದು ಪರಿಶೀಲನೆ ನಡೆಸಿದರು.

ಕಾಮಗಾರಿ ವಿಳಂಬ ಮಾಡುತ್ತಿರುವ ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ಅಕ್ಟೋಬರ್ ಅಂತ್ಯದ ಗಡುವು ನೀಡಿದ ಸಚಿವರು, ಯಾವುದೇ ಕಾರಣಕ್ಕೂ ನೆಪಗಳನ್ನು ಸಹಿಸುವುದಿಲ್ಲ ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

ಕಾಲುನೋವು ಲೆಕ್ಕಿಸದೆ ಕಾಲ್ನಡಿಗೆಯಲ್ಲಿ ಸಚಿವರ ಪರಿಶೀಲನೆ:
ಯೋಜನೆಯ ಪ್ರಗತಿಯನ್ನು ಕಣ್ಣಾರೆ ಕಂಡು ಖಾತ್ರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಸಚಿವ ಚಲುವರಾಯಸ್ವಾಮಿ ಅವರ ಕಾರ್ಯತತ್ಪರತೆ ಎದ್ದು ಕಾಣುತ್ತಿತ್ತು. ತಮ್ಮ ಅಧಿಕೃತ ಸರಕಾರಿ ಕಾರನ್ನು ಬದಿಗೊತ್ತಿದ ಸಚಿವರು, ಇಲಾಖೆಯ ಬೊಲೆರೊ ಜೀಪ್ ಏರಿ, ಗುಡ್ಡಗಾಡು ಹಾಗೂ ಕಡಿದಾದ ರಸ್ತೆಯಲ್ಲಿ ಬಹುದೂರ ಸಂಚರಿಸಿದರು. ಇಷ್ಟಕ್ಕೇ ಸುಮ್ಮನಾಗದ ಅವರು, ತಮಗಿದ್ದ ಕಾಲುನೋವಿನ ಬಾಧೆಯನ್ನೂ ಲೆಕ್ಕಿಸದೆ ಸತತ ಒಂದು ಕಿಲೋಮೀಟರ್‌ಗಿಂತಲೂ ಹೆಚ್ಚು ದೂರ ಕಾಲ್ನಡಿಗೆಯಲ್ಲಿಯೇ ತೆರಳಿ, ಚೌಡ್ಲಪುರದ 127 ರಿಂದ 137 ಕಿ.ಮೀ ವ್ಯಾಪ್ತಿಯ ಕಾಮಗಾರಿಯ ಪ್ರತಿಯೊಂದು ಹಂತವನ್ನೂ ಕೂಲಂಕಷವಾಗಿ ವೀಕ್ಷಿಸಿದರು.

ಚೌಡ್ಲಪುರ ಪ್ಯಾಕೇಜ್:
ಚೌಡ್ಲಪುರ ಭಾಗದಲ್ಲಿ ಕಳೆದ ಎರಡು ವರ್ಷಗಳಿಂದ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ದಾಖಲೆಗಳ ಕೊರತೆಯಿಂದಾಗಿ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಇದೀಗ ಎಲ್ಲಾ ತೊಡಕುಗಳನ್ನು ನಿವಾರಿಸಿ, ಭರದಿಂದ ಕಾಮಗಾರಿ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.

ಈ ಭಾಗದಲ್ಲಿ 22 ಮೀಟರ್ ಡೀಪ್ ಕಟ್ (Deep cut) ಮಾಡಲಾಗಿದ್ದು, ಲೈನಿಂಗ್ ಕಾರ್ಯ ಪ್ರಗತಿಯಲ್ಲಿದೆ. ಹೆದ್ದಾರಿಯ ಬಳಿ ಕಟ್ ಅಂಡ್ ಕವರ್ (Cut and cover) ಕಾಮಗಾರಿಯನ್ನು ನಡೆಸಲಾಗಿದೆ. ಒಟ್ಟು 606 ಕೋಟಿ ರೂ. ವೆಚ್ಚದ ಈ ಪ್ಯಾಕೇಜ್‌ನಲ್ಲಿ ಈಗಾಗಲೇ ಶೇ. 86ರಷ್ಟು ಕಾಮಗಾರಿ ಮುಕ್ತಾಯಗೊಂಡಿದ್ದು, ದಿನದ 22 ಗಂಟೆಗಳ ಕಾಲ ನಿರಂತರವಾಗಿ ಕೆಲಸ ಸಾಗುತ್ತಿದೆ. ಇಲ್ಲಿಂದ ತುಮಕೂರಿನವರೆಗೂ ಯಾವುದೇ ಅಡೆತಡೆಗಳಿಲ್ಲ. ಹೀಗಾಗಿ ಅಕ್ಟೋಬರ್ ತಿಂಗಳಿನಲ್ಲಿಯೇ ಈ ಭಾಗದ ಕಾಮಗಾರಿ ಸಂಪೂರ್ಣವಾಗಿ ಕ್ಲಿಯರ್ ಆಗಲೇಬೇಕು ಎಂದು ಸಚಿವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ‘ಎಲಿವೇಟೆಡ್ ಟ್ರಫ್’:
ತಿಪಟೂರು ಬೈಪಾಸ್ ಬಳಿ ರಸ್ತೆಯ ಮೇಲ್ಭಾಗದಲ್ಲಿ ಎತ್ತಿನಹೊಳೆ ನೀರು ಹರಿಯಲು ನಿರ್ಮಿಸುತ್ತಿರುವ ‘ಎಲಿವೇಟೆಡ್ ಟ್ರಫ್’ (ಮೇಲ್ಸುತುವೆ) ಕಾಮಗಾರಿಯನ್ನು ವೀಕ್ಷಿಸಿದ ಸಚಿವರು, ಕಳೆದ ಮೂರು ವರ್ಷಗಳಿಂದಲೂ ಈ ಕಾಮಗಾರಿ ಪೂರ್ಣಗೊಳ್ಳದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ಯೋಜನೆಯಲ್ಲಿ ಸಮಯ ಪಾಲನೆ ಅತ್ಯಂತ ಮುಖ್ಯ. ರಾಷ್ಟ್ರೀಯ ಹೆದ್ದಾರಿಯ ನಡುವೆ ಕೆಲಸ ನಡೆಯುತ್ತಿರುವುದರಿಂದ ವಾಹನಗಳ ಸಂಚಾರಕ್ಕೂ ಯಾವುದೇ ರೀತಿಯಲ್ಲಿ ಸಮಸ್ಯೆಯಾಗಬಾರದು. ಮುಂದಿನ ಒಂದೂವರೆ ತಿಂಗಳೊಳಗೆ (ಅಕ್ಟೋಬರ್ ಅಂತ್ಯಕ್ಕೆ) ಈ ಕಾಮಗಾರಿ ಕಡ್ಡಾಯವಾಗಿ ಮುಗಿಯಲೇಬೇಕು. ಯಾವುದೇ ಕಾರಣಕ್ಕೂ ಇಲಾಖೆಗೆ ಮುಜುಗರವಾಗುವಂತಹ ಸನ್ನಿವೇಶ ಸೃಷ್ಟಿಯಾಗಬಾರದು” ಎಂದು ತಾಕೀತು ಮಾಡಿದರು.

“ಖುದ್ದು ನಾನೇ ಬಂದು ಸ್ಥಳ ಪರಿಶೀಲನೆ ನಡೆಸಿದ್ದೇನೆ. ಇನ್ನಾದರೂ ಕಾಮಗಾರಿ ವಿಳಂಬವಾಗುವಂತಿಲ್ಲ. ಒಂದು ವೇಳೆ ಮತ್ತೆ ಅದೇ ಹಳೇ ರಾಗದಂತೆ ಕೆಲಸ ತಡವಾದರೆ, ಗುತ್ತಿಗೆದಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಮೇಲೆಯೇ ನೇರ ಕ್ರಮ ಜರುಗಿಸಲಾಗುವುದು. ಮುಂದಿನ ಅನಾಹುತಗಳಿಗೆ ನಾನಂತೂ ಜವಾಬ್ದಾರನಲ್ಲ” ಎಂದು ಸಚಿವರು ಎಚ್ಚರಿಕೆ ರವಾನಿಸಿದರು.

ಸಚಿವರ ಪರಿಶೀಲನಾ ಕಾರ್ಯದ ವೇಳೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಲಿಂಗೇಗೌಡ, ತಿಪಟೂರು ಕ್ಷೇತ್ರದ ಶಾಸಕರಾದ ಷಡಕ್ಷರಿ ಹಾಗೂ ಜಲಸಂಪನ್ಮೂಲ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

WhatsApp

Join Now

Telegram

Join Now

Instagram

Join Now