ವಿಜಯ ದರ್ಪಣ ನ್ಯೂಸ್….
ರಾಜ್ಯ ಒಕ್ಕಲಿಗರ ಸಂಘ ಸಮುದಾಯಕ್ಕೆ ಶಕ್ತಿ ತುಂಬಬೇಕು: ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ

ತುಮಕೂರು, ಏಪ್ರಿಲ್ 15: ಶಿಕ್ಷಣ, ಆರೋಗ್ಯ ಸೇವೆಗೆ ಹೆಚ್ಚು ಒತ್ತು ನೀಡುತ್ತಿರುವ ರಾಜ್ಯ ಒಕ್ಕಲಿಗರ ಸಂಘವು ಮತ್ತಷ್ಟು ಉತ್ತಮ ಕಾರ್ಯಕ್ರಮಗಳನ್ನು ರೂಪಿಸಿ ಸಮುದಾಯಕ್ಕೆ ಶಕ್ತಿ ತುಂಬಬೇಕು. ತುಮಕೂರಿನಲ್ಲಿ ಸಂಘದಿಂದ ಆಸ್ಪತ್ರೆ ಸ್ಥಾಪನೆ ಮಾಡಬೇಕು ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಸಲಹೆ ನೀಡಿದರು.
ನಗರದ ಮೆಳೆಕೋಟೆಯ ರಾಜ್ಯ ಒಕ್ಕಲಿಗರ ಸಂಘದ ವಿದ್ಯಾರ್ಥಿನಿಯರ ಉಚಿತ ವಸತಿ ನಿಲಯದ 2 ಮತ್ತು 3ನೇ ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ನಂತರ ನಡೆದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಹಾಸ್ಟೆಲ್ ಪಕ್ಕದಲ್ಲಿ ಸಂಘದ ನಿವೇಶನವಿದೆ. ಸಾರ್ವಜನಿಕರ ಉಪಯೋಗಕ್ಕಾಗಿ ಆಸ್ಪತ್ರೆ ಸ್ಥಾಪನೆ ಮಾಡಬೇಕು. ಈ ಕಾರ್ಯ ಶೀಘ್ರವಾಗಿ ಆರಂಭಗೊಳ್ಳಲು ಒಕ್ಕಲಿಗರ ಸಂಘದ ಪದಾಧಿಕಾರಿಗಳು ನಿರ್ಧಾರ ಮಾಡಬೇಕು ಎಂದರು.
ಸಮುದಾಯದ ಭವಿಷ್ಯಕ್ಕಾಗಿ ಒಕ್ಕಲಿಗರ ಸಂಘ ಆಸ್ತಿ ನಿರ್ಮಾಣ ಮಾಡಬೇಕು. ಸಂಘದಲ್ಲಿ ಸಾಕಷ್ಟು ಹಣವಿದೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಒಂದೊಂದು ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಬೇಕು ಎಂದು ತಿಳಿಸಿದ ಸ್ವಾಮೀಜಿ, ದಾಬಸ್‌ಪೇಟೆ ಬಳಿ 100 ಎಕರೆ ಜಮೀನು ಖರೀದಿಸಿ ಅಲ್ಲಿ ವಿದ್ಯಾ ಸಂಸ್ಥೆಗಳನ್ನು ಆರಂಭಮಾಡಿ ಒಕ್ಕಲಿಗರ ಸಂಘದ ವಿಶ್ವವಿದ್ಯಾಲಯ ಸ್ಥಾಪಿಸುವ ಸಂಘದ ಉದ್ದೇಶ ಉತ್ತಮವಾಗಿದೆ. ಒಳ್ಳೆಯ ಕೆಲಸಗಳಿಗೆ ತಡ ಮಾಡಬಾರದು, ಅತಿ ಶೀಘ್ರವಾಗಿ ಅನುಷ್ಠಾನಗೊಳಿಸುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ರಾಜ್ಯ ಒಕ್ಕಲಿಗರ ಸಂಘ ಒಂದು ಸರ್ಕಾರದ ರೂಪದಲ್ಲಿದೆ ಆಸ್ಪತ್ರೆ, ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಿ ಹೆಚ್ಚಿನ ಮಕ್ಕಳು ವೈದ್ಯರಾಗಲು ಹಾಗೂ ಅವರು ಸಂಘದ ಆಸತ್ರೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶವಾಗುತ್ತದೆ. ಈ ರೀತಿಯ ಸಮುದಾಯ ಕಟ್ಟುವ ಕೆಲಸಗಳಾದರೆ ಒಕ್ಕಲಿಗ ಸಮುದಾಯಕ್ಕೆ ಸರ್ಕಾರವನ್ನು ರಚಿಸಬಹುದಾದ ಶಕ್ತಿ ಬರುತ್ತದೆ ಎಂದರು. ಕುಣಿಗಲ್ ಅರೇಶಂಕರ ಮಠದ ಶ್ರೀ ಸಿದ್ಧರಾಮ ಚೈತನ್ಯ ಸ್ವಾಮೀಜಿ ಮಾತನಾಡಿ, ಸಾಂಘಿಕ ಶಕ್ತಿ ನಿಜವಾದ ಸಮುದಾಯದ ಶಕ್ತಿ. ರಾಜಕೀಯ,
ಆರ್ಥಿಕಶಕ್ತಿ ಹೆಚ್ಚಿಸಿಕೊಳ್ಳಲು ರಾಜ್ಯ ಒಕ್ಕಲಿಗರ ಸಂಘ ಆಗಿಂದಾಗ್ಗೆ ಸಮುದಾಯದ ಸಮಾವೇಶಗಳನ್ನು ಮಾಡಿಜಾಗೃತಿ ಮೂಡಿಸಬೇಕು. ಸಮುದಾಯದ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕು. ಅದಕ್ಕಾಗಿ ಒಕ್ಕಲಿಗರ ಸಂಘವು ವೈದ್ಯಕೀಯ ಕಾಲೇಜು ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪನೆ ಮಾಡಬೇಕು ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಎಲ್ ಶ್ರೀನಿವಾಸ್ ಮಾತನಾಡಿ, ರಾಜ್ಯ ಒಕ್ಕಲಿಗರ ಸಂಘ ಸಮುದ್ರವಿದ್ದಂತೆ, ಆರ್ಥಿಕವಾಗಿಯೂಸದೃಢವಾಗಿದೆ. ಸಂಘದಿಂದ ಸಮುದಾಯಕ್ಕೆ ಆಗಬೇಕಾಗಿರುವ ಕೆಲಸಗಳನ್ನು ಬದ್ಧತೆಯಿಂದ ಮಾಡಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವ ಸಲುವಾಗಿ ಅಗತ್ಯವಿರುವ ಕಡೆ ವಿದ್ಯಾರ್ಥಿನಿಲಯಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. ಇಲ್ಲಿ ಆಸ್ಪತ್ರೆ ಸ್ಥಾಪನೆಗೂ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸುವುದಾಗಿ ಭರವಸೆ ನೀಡಿದರು.
ಸಂಘದ ಗೌರವಾಧ್ಯಕ್ಷ ಬಿ ಕೆಂಚಪ್ಪಗೌಡ ಮಾತನಾಡಿ, ಸಮುದಾಯದ ಕೆಲಸಕಾರ್ಯಗಳಿಗಾಗಿ ಆಸ್ತಿ ನಿರ್ಮಾಣ ಮಾಡಲು ಸಂಘ ತೀರ್ಮಾನ ಮಾಡಿದೆ. ಎಲ್ಲಾ ಜಿಲ್ಲೆಗಳಲ್ಲೂ ಆದ್ಯತೆ ಮೇಲೆ ವಿದ್ಯಾರ್ಥಿನಿಲಯ ಸ್ಥಾಪನೆ ಮಾಡಲಾಗುವುದು. ಸಮುದಾಯದವರು ಸಂಘದ ಸೇವಾ ಕಾರ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಸಂಘದ ನಿರ್ದೇಶಕ ಹಾಗೂ ಭೂ ಖರೀದಿ ಸಮಿತಿ ಅಧ್ಯಕ್ಷ ಆರ್ ಹನುಮಂತರಾಯಪ್ಪ ಮಾತನಾಡಿ, ಈ ವಿದ್ಯಾರ್ಥಿ ನಿಲಯಕ್ಕೆ ಬೇಡಿಕೆ ಹೆಚ್ಚಾಗಿದೆ. ಹೆಣ್ಣು ಮಕ್ಕಳಿಗೆ ಸ್ಥಳಾವಕಾಶವಿಲ್ಲದೆ ಸಮಸ್ಯೆಯಾಗಿದೆ. ಸುಮಾರು ಆರು ಕೋಟಿ ರೂ. ವೆಚ್ಚದಲ್ಲಿ ಹೆಚ್ಚುವರಿ ಎರಡು ಅಂತಸ್ತಿನ ಕಟ್ಟಡ ನಿರ್ಮಿಸಿ ಸುಮಾರು 200 ವಿದ್ಯಾರ್ಥಿನಿಯರಿಗೆ ಸ್ಥಳಾವಕಾಶ ಮಾಡಿಕೊಡಲಾಗುವುದು. ಆರು ತಿಂಗಳಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
ಸಂಘದ ನಿರ್ದೇಶಕ, ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯ ಅಧ್ಯಕ್ಷ ಲೋಕೇಶ್ ನಾಗರಾಜಯ್ಯ ಮಾತನಾಡಿ, ಈ ವಿದ್ಯಾರ್ಥಿನಿಲಯ ವಿಸ್ತರಣೆ ಪ್ರಯತ್ನಕ್ಕೆ ಫಲ ದೊರಕಿದೆ. ಶೀಘ್ರದಲ್ಲೇ ಇಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಜಿ ಗಂಗಾಧರ್, ಹಾಸ್ಟೆಲ್ ಸಮಿತಿ ಅಧ್ಯಕ್ಷ ವೆಂಕಟರಾಮೇಗೌಡ, ನಗರಪಾಲಿಕೆ ಮಾಜಿ ಉಪಮೇಯರ್ ಟಿ.ಆರ್.ನಾಗರಾಜು, ಮಾಜಿ ಸದಸ್ಯರಾದ ಧರಣೇಂದ್ರಕುಮಾರ್, ಶ್ರೀನಿವಾಸ್, ಮನೋಹರಗೌಡ, ಟೂಡಾ ಮಾಜಿ ಅಧ್ಯಕ್ಷ ದೇವೇಗೌಡ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರಾದ ಲಕ್ಕೇಗೌಡ, ಭೈರವ ಗಿರೀಶ್, ಮಂಜುನಾಥ್, ನಟೇಶ್, ಜಯಮ್ಮ, ನಾಗಮಣಿ ಕಾಮೇಶ್, ಪುಟ್ಟಸ್ವಾಮಿ, ರಂಗಪ್ಪ, ನರಸಿಂಹಮೂರ್ತಿ, ಉಪ್ಪಾರಹಳ್ಳಿ ಕುಮಾರ್, ಪ್ರೊ.ವೀರಯ್ಯ, ಮುನಿಸ್ವಾಮಿಗೌಡ, ಲೀಲಾವತಿ, ಮಂಜುಳಾ ಮತ್ತಿತರರು ಭಾಗವಹಿಸಿದ್ದರು.







