ವಿಜಯ ದರ್ಪಣ ನ್ಯೂಸ್……
ಶ್ರಮದಾನ – 7…
°°°°°°°°°°°°°°°°
(ದಿನಾಂಕ 10/10/2026ರ ಶನಿವಾರ)
ಇದೊಂದು ವಿಶೇಷ ಅನುಭವ ನೀಡಿದ ಶ್ರಮದಾನ. ರಾಷ್ಟ್ರೀಯ ಅಂಧರ ಒಕ್ಕೂಟದ ( National Federation of blind ) ಕರ್ನಾಟಕ ಶಾಖೆಯ ಬೆಂಗಳೂರಿನ ಕಚೇರಿಯಲ್ಲಿ ನಾನೇ ಬರೆದ ” ಬಾಬಾ ಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಅವರ ಸಾಮಾಜಿಕ ಹೋರಾಟಗಳ ಒಳನೋಟ… ” ಪುಸ್ತಕವನ್ನು ಧ್ವನಿ ಪುಸ್ತಕವಾಗಿ ( Audio book ) ಅಂದರೆ ಓದಲು ಸಾಧ್ಯವಿಲ್ಲದ, ಸಾಧ್ಯವಾಗದ ದೃಷ್ಟಿ ಇಲ್ಲದ ವಿಶೇಷ ಚೇತನರಿಗಾಗಿ ಮಾಡಿಕೊಟ್ಟ ಒಂದು ಶ್ರಮದಾನ……
ಬೆಳಗ್ಗೆ ಎಂಟು ಗಂಟೆಗೆ ಮನೆಯಿಂದ ಹೊರಟು ಸುಮಾರು 10 ಗಂಟೆಯ ವೇಳೆಗೆ ಅವರ ಆ ಕಚೇರಿ ತಲುಪಿದೆನು. ಈ ಸಂಸ್ಥೆಯ ಯುವ ಕಾರ್ಯದರ್ಶಿ, ಈಗಿನ ರೈಲ್ವೆ ಇಲಾಖೆಯ ಉದ್ಯೋಗಿ ಮತ್ತು ಸ್ವತಃ ದೃಷ್ಟಿ ಇಲ್ಲದ ವಿಶೇಷ ಚೇತನರಾದ ಮತ್ತು ನನ್ನ ಆತ್ಮೀಯರೂ ಆದ ಶ್ರೀ ವಿಕ್ಟರಿ ವೀರೇಶ್ ಅವರ ಸಲಹೆಯಂತೆ ಕರ್ನಾಟಕ ಅರಣ್ಯ ಇಲಾಖೆಯ ಉದ್ಯೋಗಿಯು ಮತ್ತು ಸ್ವತಃ ದೃಷ್ಟಿ ಇಲ್ಲದ ವಿಶೇಷ ಚೇತನರಾದ
ಶ್ರೀ ಶ್ರೀನಿವಾಸ್ ಮೂರ್ತಿಯವರು ನನ್ನೊಂದಿಗೆ ಅದೇ ಸಮಯಕ್ಕೆ ಕಚೇರಿಯನ್ನು ತಲುಪಿದರು. ಅವರು ಅಲ್ಲಿಯ ಉದ್ಯೋಗಿಗಳನ್ನು ಪರಿಚಯಿಸಿ ಸಂಸ್ಥೆಯ ಹುಟ್ಟು ಮತ್ತು ಬೆಳವಣಿಗೆಯನ್ನು, ಅದರ ಕಾರ್ಯ ಚಟುವಟಿಕೆಗಳನ್ನು ಸಂಪೂರ್ಣವಾಗಿ ವಿವರಿಸಿದರು.
ದೆಹಲಿಯಲ್ಲಿ 1970ರ ಆಸುಪಾಸಿನಲ್ಲಿ ಸಂಸ್ಥೆ ಪ್ರಾರಂಭವಾಗುತ್ತದೆ. ಕರ್ನಾಟಕದಲ್ಲಿ ಅದರ ಶಾಖಾ ಕಚೇರಿಯಾಗಿ 2004ರಲ್ಲಿ ಪ್ರಾರಂಭವಾಗಿ ಈಗಲೂ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಸಂಸ್ಥೆ ಬಹುಮುಖ್ಯವಾಗಿ ವಿಶೇಷ ಚೇತನರ ಸಾಮಾನ್ಯ ಸಮಸ್ಯೆಗಳು, ನಿರುದ್ಯೋಗಿ ಸದಸ್ಯರುಗಳಿಗೆ ಉದ್ಯೋಗದ ವ್ಯವಸ್ಥೆ, ಬಸ್ ಪಾಸ್, ರೈಲ್ವೆ ಪಾಸ್ ವ್ಯವಸ್ಥೆ, ಸರ್ಕಾರದ ಯೋಜನೆಗಳನ್ನು ತಲುಪಿಸುವುದು, ಸರ್ಕಾರಕ್ಕೆ ವಿಶೇಷ ಚೇತನರ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವುದು, ಪತ್ರ ವ್ಯವಹಾರ ನಡೆಸುವುದು ಮುಂತಾದ ಕೆಲಸಗಳನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಅದೇ ಕಚೇರಿಯಲ್ಲಿಯೇ ಅನೇಕ ವಿಶೇಷ ಚೇತನರ ಅಗತ್ಯ ಪರಿಕರಗಳನ್ನು ಸಹ ಕೈಗೆ ಎಟಕುವ ದರದಲ್ಲಿ ಮಾರಲಾಗುತ್ತದೆ.
ಮತ್ತೆ ಅಲ್ಲಿ ವಿಶೇಷ ಚೇತನರ ಓದಿಗಾಗಿ ಬ್ರೈಲ್ ಲಿಪಿಯ ಆಡಿಯೋ ಮತ್ತು ಡಿಜಿಟಲ್ ನ ವಿಶೇಷ ಸುಸಜ್ಜಿತ ಗ್ರಂಥಾಲಯವು ಇದೆ. ಐದು ಜನ ಖಾಯಂ ಸಿಬ್ಬಂದಿಯೂ ಇದ್ದಾರೆ.
ಅಲ್ಲಿನ ಮ್ಯಾನೇಜರ್
ಶ್ರೀ ಹೇಮಂತ್ ಕುಮಾರ್, ಸ್ವಾಗತಕಾರರಾದ ಶ್ರೀಮತಿ ಹೇಮಾ, ಪರಿಕರಗಳನ್ನು ಮಾರುವ ಶ್ರೀ ಮೋಹನ್ ಕುಮಾರ್, ಕಚೇರಿ ನಿರ್ವಹಣೆಯ ಶ್ರೀ ಫಕೀರಪ್ಪನವರು ಎಲ್ಲರೂ ತುಂಬಾ ಆತ್ಮೀಯತೆಯಿಂದ ಮಾತನಾಡಿಸಿದರು. ವಿಶೇಷವಾಗಿ ಬೆಳಗಾವಿಯವರಾಗಿದ್ದು ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಶ್ರೀ ಧವನ್ ಅವರು ಸಹ ನಮ್ಮೊಂದಿಗೆ ಅಲ್ಲಿ ಇದ್ದರು.
ತದನಂತರ ಸುಮಾರು 12 ಗಂಟೆಗೆ ಆಡಿಯೋ ರೆಕಾರ್ಡ್ ಮಾಡಲು ಶುರು ಮಾಡಿದೆನು. ಮಧ್ಯಾಹ್ನದ ಸುಮಾರು ಅರ್ಧ ಗಂಟೆಯ ಊಟದ ವಿರಾಮ ಹೊರತುಪಡಿಸಿ ಸಂಜೆ 6:00 ವರೆಗೂ ನಿರಂತರವಾಗಿ ಸುಮಾರು 110 ಪುಟಗಳ ಬಾಬಾ ಸಾಹೇಬರ ಪುಸ್ತಕವನ್ನು ಸಾಧ್ಯವಾದಷ್ಟು ಮಟ್ಟಿಗೆ ನನ್ನದೇ ಶೈಲಿಯಲ್ಲಿ ಓದಿ ಧ್ವನಿ ಮುದ್ರಣ ಮಾಡಿದೆನು.
ಈ ಮಧ್ಯೆ ಒಬ್ಬ ವಿಶೇಷ ಸಮಾಜ ಸೇವಕಿಯವರನ್ನು ಎರಡನೇ ಬಾರಿಗೆ ಭೇಟಿಯಾದೆನು. ಮೊದಲನೇ ಬಾರಿ ಕಳೆದ ವರ್ಷ ನವೆಂಬರ್ ನಲ್ಲಿ ಗೋವಾದಲ್ಲಿ ನಡೆದ ಪರ್ಪಲ್ ಫೆಸ್ಟ್ ಎಂಬ ವಿಶ್ವ ವಿಶೇಷ ಚೇತನರ ಸಮ್ಮೇಳನದಲ್ಲಿ ಭೇಟಿಯಾಗಿದ್ದೆನು. ಕೆನರಾ ಬ್ಯಾಂಕಿನ ಉದ್ಯೋಗಿಯಾಗಿದ್ದು ನಿವೃತ್ತಿಯ ನಂತರ ಅತ್ಯಂತ ನಿಸ್ವಾರ್ಥದಿಂದ ವಿಶೇಷ ಚೇತನರ ವಿವಿಧ ಸಂಘ ಸಂಸ್ಥೆಗಳೊಂದಿಗೆ, ಕೆಲವು ಶಾಲೆಗಳೊಂದಿಗೆ ತಮ್ಮದೇ ಖರ್ಚಿನಲ್ಲಿ ಓಡಾಡುತ್ತಾ, ಸೇವೆ ಮಾಡುತ್ತಾ, ಅವರಲ್ಲಿ ಜಾಗೃತಿ ಉಂಟು ಮಾಡುತ್ತಾ , ಅವರ ಬೇಕು ಬೇಡಗಳನ್ನು ನೋಡಿಕೊಳ್ಳುತ್ತಾ ಬದುಕನ್ನು ಕಳೆಯುತ್ತಿರುವ ಶ್ರೀಮತಿ ಗೀತಾ ರಾಮ್ ಮೋಹನ್ ಅವರು ಕಚೇರಿಗೆ ಬಂದರು. ಅವರೊಂದಿಗೆ ಒಂದಷ್ಟು ಮಾತುಕತೆಯಾಡಿದೆನು. ನಿಜಕ್ಕೂ ಒಂದು ರೀತಿ ಕರ್ನಾಟಕದ ಮದರ್ ತೆರೆಸಾ ಎಂದು ಇವರನ್ನು ಕರೆಯಬಹುದು. ಇವರು ವಿಶೇಷ ಚೇತನರ ಸೇವೆಗಳಲ್ಲಿಯೇ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಅವರಿಗೆ ಅಕ್ಷರ ಅಭ್ಯಾಸ, ಸ್ವಚ್ಛತೆ, ಸಮಾಜದ ಬೇರೆ ಬೇರೆ ವಿಭಾಗಗಳ ಬಗ್ಗೆ ಮಾಹಿತಿ ಎಲ್ಲವನ್ನು ಅತ್ಯಂತ ತಾಳ್ಮೆಯಿಂದ ಹೇಳಿಕೊಡುತ್ತಾರೆ. ಅನೇಕ ದೃಷ್ಟಿ ಕಳೆದುಕೊಂಡವರು ಈ ಜಗತ್ತನ್ನೇ ನೋಡಿರುವುದಿಲ್ಲ. ಅಂತಹವರಿಗು ಜಗತ್ತಿನ ಪರಿಚಯ ಮಾಡಿಸುತ್ತಾರೆ. ಅವರ ಬಗ್ಗೆ ತಿಳಿಯುತ್ತಾ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಲ್ಲಿ ಅವರು ಹೆಸರು ಇದ್ದರೆ ಚೆನ್ನಾಗಿರುತ್ತದೆ. ಇವರ ಬಗ್ಗೆ ತಿಳಿದವರು ಒಂದಷ್ಟು ಪ್ರಯತ್ನ ಹಾಕಿ ಸರ್ಕಾರಕ್ಕೆ ಮಾಹಿತಿ ನೀಡಿ ಎಂದು ಗೆಳೆಯರಿಗೆ ಹೇಳಿದೆನು. ಏಕೆಂದರೆ ನಿಜಕ್ಕೂ ಅವರು ವಿಶೇಷ ಚೇತನರಿಗಾಗಿ ಅನೇಕ ವರ್ಷಗಳಿಂದ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ತಮ್ಮದೇ ಖರ್ಚಿನಲ್ಲಿ ವಿಶೇಷ ಚೇತನರ ಸೇವೆ ಮಾಡುವುದು ಮತ್ತು ಸಮಯ ನೀಡುವುದು ಅಷ್ಟು ಸುಲಭವೂ ಅಲ್ಲ.
ಸರ್ಕಾರ ಪ್ರಕಟಿಸಿರುವ 21 ರೀತಿಯ ವಿಶೇಷ ಚೇತನರ ಯಾವುದೇ ವ್ಯಕ್ತಿಯು ತಮಗಿರುವ ಸಮಸ್ಯೆಗಳ ಬಗ್ಗೆ ಯಾವುದೇ ಸಂದರ್ಭದಲ್ಲಿ ಈ ಸಂಸ್ಥೆಯನ್ನು ಸಂಪರ್ಕಿಸಬಹುದು. ಅದರ ಸದಸ್ಯತ್ವವನ್ನು ಪಡೆದು ಅಲ್ಲಿನ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳಬಹುದು. ಈ ರೀತಿಯ ಸಂಸ್ಥೆಗಳು ಅಸಹಾಯಕರಿಗೆ ಒಂದು ವರವಿದ್ದಂತೆ.
ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ.
ಶ್ರೀ ವಿಕ್ಟರಿ ವೀರೇಶ್
9900490718
ಶ್ರೀ ಶ್ರೀನಿವಾಸ ಮೂರ್ತಿ
9035911023
ಗೌತಮ್ ಪ್ರಕಾಶ್ ಅಗರ್ವಾಲ್.
ಪ್ರಧಾನ ಕಾರ್ಯದರ್ಶಿ,
ರಾಷ್ಟ್ರೀಯ ಅಂಧರ ಒಕ್ಕೂಟ ಕರ್ನಾಟಕ ಶಾಖೆ.
ನಾಗರಾಜ್ ಎಂ,
ಅಧ್ಯಕ್ಷರು, ರಾಷ್ಟ್ರೀಯ ಅಂಧರ ಒಕ್ಕೂಟ,
ಕರ್ನಾಟಕ ಶಾಖೆ.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9663750451…….
9844013068…….











