ವಿಜಯ ದರ್ಪಣ ನ್ಯೂಸ್…..
ಗ್ರಾಮೀಣ ಜೀವನದಿಂದ ಕಲಿತ ಪಾಠಗಳು ಮುಂದಿನ ವೃತ್ತಿಜೀವನಕ್ಕೆ ಸಹಕಾರಿ : ಶ್ರೀನಿವಾಸ್ ರಾಮಯ್ಯ

ಶಿಡ್ಲಘಟ್ಟ : ಗ್ರಾಮೀಣ ಜೀವನದಿಂದ ಕಲಿತ ಪಾಠಗಳು ಮುಂದಿನ ವೃತ್ತಿಜೀವನಕ್ಕೆ ಸಹಕಾರಿಯಾಗಲಿದ್ದು ಕೃಷಿಯ ಮಹತ್ವದ ಜತೆಗೆ ರೈತರ ನೈಜ ಬದುಕು, ಗ್ರಾಮಗಳಲ್ಲಿ ಎದುರಾಗುವ ಸವಾಲುಗಳನ್ನು ತಿಳಿದುಕೊಳ್ಳಲು ಅವಕಾಶ ಕಲ್ಪಿಸಲಿವೆ ಎಂದು ಕೆಎಂಎಫ್ನ ಮಾಜಿ ನಿರ್ದೇಶಕ ಶ್ರೀನಿವಾಸ್ ರಾಮಯ್ಯ ತಿಳಿಸಿದರು.
ತಾಲ್ಲೂಕಿನ ಕೆ.ಮುತ್ತುಕದಹಳ್ಳಿಯಲ್ಲಿ ಬೆಂಗಳೂರಿನ ಕೃಷಿ ವಿವಿ ಅಂತಿಮ ವರ್ಷದ ವಿದ್ಯಾರ್ಥಿಗಳು ನಡೆಸಿಕೊಟ್ಟ ಗ್ರಾಮೀಣ ಕೃಷಿ ಕಾರ್ಯಾನುಭವದ ಸಮಾರಂಭದಲ್ಲಿ ಅವರು ಮಾತನಾಡಿದರು.
ಗ್ರಾಮಗಳಲ್ಲಿ ಮೂರು ತಿಂಗಳ ಕಾರ್ಯಾನುಭವದ ಪಯಣವು ಮಹತ್ವದ ಅನುಭವಗಳನ್ನು ನೀಡಿದೆ ರೈತರು ಹಾಗೂ ಗ್ರಾಮಸ್ಥರೊಂದಿಗೆ ಬೆಳೆಸಿಕೊಂಡ ಸಂಬಂಧ ನಿಮಗೆ ಮುಂದಿನ ದಿನಗಳಲ್ಲಿ ಸಹಕಾರಿಯಾಗಲಿದೆ ಎಂದು ಹೇಳಿದರು.
ಕೃಷಿ ವಿದ್ಯಾರ್ಥಿಗಳು ರೈತರೊಂದಿಗೆ ಬೆರೆತು ಅವರ ಕಷ್ಟ-ನಷ್ಟಗಳನ್ನು ಅರಿತುಕೊಳ್ಳಬೇಕು ಕೃಷಿ ಕ್ಷೇತ್ರದಲ್ಲಿ ಎದುರಾಗುವ ಸಮಸ್ಯೆಗಳಿಗೆ ಸೂಕ್ತ ಹಾಗೂ ಪ್ರಾಯೋಗಿಕ ಪರಿಹಾರಗಳನ್ನು ಕಂಡುಕೊಳ್ಳುವ ಮೂಲಕ ರೈತರ ಏಳಿಗೆಗೆ ಶ್ರಮಿಸಬೇಕು ಎಂದರು.
ಜಿಕೆವಿಕೆ ಕುಲಪತಿ ಡಾ.ಎಸ್.ವಿ.ಸುರೇಶ್ ಮಾತನಾಡಿ,
ರೈತರ ಹೊಲ ಹಾಗು ತೋಟಗಳಲ್ಲಿ ದೊರೆಯುವ ಪ್ರಾಯೋಗಿಕ ಅನುಭವದೊಂದಿಗೆ ಬೆಸೆದುಕೊಂಡಾಗ ಪರಿಣಾಮಕಾರಿ ಯಾಗುತ್ತದೆ , ಕೃಷಿ ಶಿಕ್ಷಣವು ತರಗತಿಗಳಿಗೆ ಮಾತ್ರ ಸೀಮಿತವಾಗದೆ, ವಿದ್ಯಾರ್ಥಿಗಳು ತಾವು ಗಳಿಸಿದ ಜ್ಞಾನ ಮತ್ತು ಅನುಭವವನ್ನು ರೈತರ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎಂದರು.
ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿರುವವರಿಗೂ ಸರ್ಕಾರದಿಂದ ಆಯಾ ವಾತಾವರಣಕ್ಕೆ ಅನುಗುಣವಾಗಿ ಸೌಲಭ್ಯಗಳು ದೊರೆಯುವಂತಾಗಬೇಕು ಎಂದರು.
ಅಭಿವೃದ್ಧಿ ಕಾರ್ಯಗಳ ನೆಪದಲ್ಲಿ ರೈತರ ಜಮೀನು ಸ್ವಾಧೀನ ಪಡಿಸಿಕೊಳ್ಳುವ ಬದಲು ಅವರ ಹಿತಾಸಕ್ತಿಯನ್ನು ಕಾಪಾಡುವ ಕೆಲಸವನ್ನು ಆಳುವ ಸರ್ಕಾರಗಳು ಮಾಡಬೇಕು ಎಂದರು.
ಇದೇ ವೇಳೆ ವಿದ್ಯಾರ್ಥಿಗಳು ಗ್ರಾಮದಲ್ಲಿ ಬೆಳೆದ ವಿವಿಧ ಬೆಳೆಗಳನ್ನು ಹೊನ್ನಲೆ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು,ಕೃಷಿ ಮೇಳ, ವಸ್ತುಪ್ರದರ್ಶನ ಹಾಗೂ ವಿಚಾರಗೋಷ್ಠಿ ನಡೆಸಲಾಯಿತು.
ಕೃಷಿ ಚಟುವಟಿಕೆಗಳಲ್ಲಿ ಪಡೆದ ಅನುಭವ ಹಾಗೂ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಪ್ರದರ್ಶಿಸಿ, ಗ್ರಾಮಸ್ಥರಿಗೆ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಮುಖ್ಯ ಇಂಜಿನಿಯರ್ ಎಂ.ಗಣೇಶ, ಬೆಂಗಳೂರಿನ ಡೇರಿ ವಿಜ್ಞಾನ ಕಾಲೇಜಿನ ನಿವೃತ್ತ ಡೀನ್ ಡಾ.ಬಿ.ವಿ.ವೆಂಕಟೇಶಯ್ಯ, ಕೃಷಿ ವಿವಿ ನಿವೃತ್ತ ಪ್ರಾಧ್ಯಾಪಕ ಡಾ.ಟಿ.ಎನ್.ಆನಂದ, ಕೃಷಿ ಸೂಕ್ಷ್ಮ ಜೀವ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಸಿ.ಬಿಂದುಶ್ರೀ, ತೋಟಗಾರಿಕೆ ವಿಭಾಗದ ಡಾ.ಎಂ.ಶಾಲಿನಿ , ಬೀಜ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಕೆ.ಜೆ.ಸೌಮ್ಯಾ,
ಕೃಷಿ ವಿಸ್ತರಣಾ ವಿಭಾಗದ ಸಹ ಪ್ರಾಧ್ಯಾಪಕಿ ಹಾಗೂ ಸಹ ಸಂಯೋಜಕಿ ಡಾ.ಎಚ್.ಕೆ.ಪಂಕಜಾ ಹಾಗು ಕೃಷಿ ವಿವಿ. ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.











