ವಿಜಯ ದರ್ಪಣ ನ್ಯೂಸ್….
ಕೆಆರ್ಎಸ್ನಲ್ಲಿ ಎರಡನೇ ವರ್ಷದ ಕಾವೇರಿ ಆರತಿಗೆ ವಿದ್ಯುಕ್ತ ಚಾಲನೆ: ಭಕ್ತಿಭಾವದ ಬೆಳಕಿನಲ್ಲಿ ಮಿಂಚಿದ ಬೃಂದಾವನ
ಗಂಗಾರತಿ ಮಾದರಿಯಲ್ಲಿ ಕಾವೇರಿ ಮಾತೆಗೆ ದೀಪ ನಮನ: ಕೆಆರ್ಎಸ್ನಲ್ಲಿ ಸಂಭ್ರಮದ ಕಾವೇರಿ ಆರತಿ ಮಹೋತ್ಸವ
ದಕ್ಷಿಣ ಭಾರತದ ಹೆಮ್ಮೆಯ ಕಾವೇರಿ ಆರತಿಗೆ ಚಾಲನೆ: 6 ದಿನಗಳ ಕಾಲ ಸಾಂಸ್ಕೃತಿಕ, ಧಾರ್ಮಿಕ ವೈಭವ

ಕೆಆರ್ಎಸ್ (ಶ್ರೀರಂಗಪಟ್ಟಣ), ಅಕ್ಟೋಬರ್ 16:
ಕಾವೇರಿ ಒಡಲಿನ ಐತಿಹಾಸಿಕ ಕೃಷ್ಣರಾಜಸಾಗರ ಬೃಂದಾವನದ ದೋಣಿ ವಿಹಾರ ಕೇಂದ್ರದ ಬಳಿ ಇಂದು ನಡೆದ ಎರಡನೇ ವರ್ಷದ ಕಾವೇರಿ ಆರತಿ ಕಾರ್ಯಕ್ರಮಕ್ಕೆ ಸಾಂಪ್ರದಾಯಿಕವಾಗಿ ನಾಂದಿ ಹಾಡಲಾಯಿತು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಟ್ಟಿಗೆ ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಅವರು ಕಾವೇರಿ ಮಾತೆಗೆ ಶಾಸ್ತ್ರೋಕ್ತವಾಗಿ ಪುಷ್ಪಾರ್ಚನೆ ಮತ್ತು ಆರತಿ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಸಾಂಪ್ರದಾಯಿಕವಾಗಿ ವಿದ್ಯುಕ್ತ ಚಾಲನೆ ನೀಡಿದರು.
ಸಂಪ್ರದಾಯ, ನಂಬಿಕೆಗಳನ್ನು ಒಳಗೊಂಡ ಕಾವೇರಿ ಆರತಿ ದಕ್ಷಿಣ ಭಾರತದಲ್ಲೇ ಪ್ರಪ್ರಥಮವಾಗಿ ಕಳೆದ ವರ್ಷ ಆರಂಭವಾಗಿತ್ತು. ಇದಕ್ಕೆ ಕೃಷ್ಣರಾಜಸಾಗರವು ಎರಡನೇ ವರ್ಷದ ಆರತಿಗೆ ಇಂದು ಸಾಕ್ಷಿಯಾಯಿತು.
ರಾತ್ರಿ 7.09 ಗಂಟೆಗೆ ಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಎನ್.ಚಲುವರಾಯಸ್ವಾಮಿ ಅವರನ್ನು ನಾದಸ್ವರದೊಂದಿಗೆ ಕೆಆರ್ಎಸ್ನಲ್ಲಿ ಸ್ವಾಗತಿಸಲಾಯಿತು. ಬಳಿಕ 7.33ಕ್ಕೆ ಕಾವೇರಿ ಮಾತೆ ಪ್ರತಿಮೆ ಬಳಿ ಆಗಮಿಸಿದ ಡಿಕೆಶಿ ಹಾಗೂ ಸಚಿವರ ಕುಟುಂಬವು, ಕಂಬದ ದೀಪಕ್ಕೆ ಜ್ಯೋತಿ ಬೆಳಗಿಸಿ ಪೂಜೆ ಸಲ್ಲಿಸಿತು.
ನಂತರ ವೈದಿಕರು ದೋಣಿವಿಹಾರ ಕೇಂದ್ರದ ದಡದಲ್ಲಿ 7.47ಕ್ಕೆ ವಿಧಿವಿಧಾನಗಳೊಂದಿಗೆ ಪೂಜಾ ಕೈಂಕರ್ಯ ನೆರವೇರಿಸಿ ಕಾವೇರಿ ಆರತಿ ಮಾಡಿದರು. ಈ ವೇಳೆ ನಾಡಿನ ಜನರ ಒಳಿತಿಗಾಗಿ ಪ್ರಾರ್ಥಿಸಿ, ನಾಡಿಗೆ ಉತ್ತಮ ಮಳೆ-ಬೆಳೆಯಾಗಲಿ, ಸಮೃದ್ಧಿ ನೆಲೆಸಲಿ ಎಂದು ಸಚಿವರು ಕಾವೇರಿ ತಾಯಿಯಲ್ಲಿ ಪ್ರಾರ್ಥಿಸಿದರು.
ಈ ವೇಳೆ ಸಚಿವರು, ಶಾಸಕರು ಹಾಗೂ ವಿವಿಧ ಮಠಗಳ ಪೀಠಾಧಿಪತಿಗಳು ಕಾವೇರಿ ಆರತಿಗೆ ಸಾಕ್ಷಿಯಾದರು.
ಭಕ್ತಿಭಾವಕ್ಕೆ ಸಾಕ್ಷಿಯಾದ ಕಾವೇರಿ ಆರತಿ
ಕೆ.ಆರ್.ಎಸ್.ನಲ್ಲಿ ಇಂದಿನಿಂದ ಆರಂಭಗೊಂಡ ಕಾವೇರಿ ಆರತಿಯು ಜನಮನ ಸೂರೆಗೊಳ್ಳುವ ಜತೆಗೆ ಭಕ್ತಿಭಾವಕ್ಕೆ ಪ್ರತ್ಯಕ್ಷ ಸಾಕ್ಷಿಯಾಯಿತು. ವೇದಿಕೆ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ಹಾಗೂ ಗಣ್ಯರ ಭಾಷಣಕ್ಕೂ ಮುನ್ನವೇ ರಾತ್ರಿ 7.47ಕ್ಕೆ ಸರಿಯಾಗಿ ಕಾವೇರಿ ಆರತಿಯ ಪೂಜಾ ವಿಧಿವಿಧಾನಗಳಿಗೆ ಚಾಲನೆ ದೊರೆಯಿತು. ಸುಮಾರು 30 ನಿಮಿಷಗಳ ಕಾಲ ಧಾರ್ಮಿಕ ದತ್ತಿ ಇಲಾಖೆಯ ವೈದಿಕರು ಕಾವೇರಿ ಆರತಿ ಸಲ್ಲಿಸಿದರು.
ಬಳಿಕ ವಾರಾಣಸಿ ತಂಡ ಆರತಿ ನೆರವೇರಿಸಿತು. ವಿವಿಧ ತಂಡಗಳು ಸೇರಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಮರ್ಪಿಸಿದ ಕಾವೇರಿ ಆರತಿಯನ್ನು ಮುಖ್ಯಮಂತ್ರಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರು ಭಕ್ತಿಭಾವದಿಂದ ವೀಕ್ಷಿಸಿದರು.
ಆರತಿ ವೇಳೆ ಗುರುಸ್ಮರಣೆ, ಗಣಪತಿ ಪ್ರಾರ್ಥನೆಯೊಂದಿಗೆ ವೇದಮಂತ್ರಗಳ ಪಠಣ ನಡೆಯಿತು. ಪ್ರಧಾನ ಅರ್ಚಕರು ನೆರೆದಿದ್ದ ಭಕ್ತರಿಗೆ ತಮ್ಮ ಹೆಸರು, ರಾಶಿ, ಗೋತ್ರ, ನಕ್ಷತ್ರ ಹೇಳಿಕೊಳ್ಳಲು ತಿಳಿಸಿ ಸ್ವಯಂ ಸಂಕಲ್ಪ ಮಾಡಿಸಿದರು.
ಈ ವೇಳೆ ಗಂಟೆ, ಶಂಖನಾದ ಮೊಳಗಿಸಲಾಯಿತು. ನೆರೆದಿದ್ದ ಸಾರ್ವಜನಿಕರು ಕೈಯಲ್ಲಿ ಹಿಡಿದಿದ್ದ ಹೂವಿನ ಎಸಳುಗಳನ್ನು ಕಾವೇರಿ ಪ್ರತಿಮೆ ಮತ್ತು ನದಿಯ ಒಡಲಿಗೆ ಅರ್ಪಿಸಿದರು.
ಮೊದಲಿಗೆ ಕರ್ನಾಟಕ ತಂಡದ ವೈದಿಕರಿಂದ ದಕ್ಷಿಣ ಭಾರತ ಶೈಲಿಯಲ್ಲಿ ಕಾವೇರಿ ಆರತಿ ನಡೆಯಿತು. ಚಾಮರ ಸೇವೆ, ಧೂಪಾರತಿ, ಪುಷ್ಪಾರತಿ, ದೀಪಾರತಿ ಹಾಗೂ ದೀಪಗಳ ಗುಚ್ಛದಾರತಿ ನೆರವೇರಿಸಿ ಅಂತಿಮವಾಗಿ ಮಹಾಮಂಗಳಾರತಿ ಮಾಡಲಾಯಿತು. ‘ಜಯ ಜಯ ಕಾವೇರಿ.. ಅಮ್ಮ ಜಯ ಜಯ ಕಾವೇರಿ.. ಭಕ್ತಿಯಿಂದ ಬೆಳಗುವೆ ಆರತಿ…’ ಹಾಡಿನ ಗಾಯನವು ಎಲ್ಲರನ್ನೂ ಭಕ್ತಿ ರಸದಲ್ಲಿ ಮುಳುಗುವಂತೆ ಮಾಡಿತು.
ವಾರಾಣಸಿಯ ಓಂ ಮಿಶ್ರಾ ಮತ್ತು ತಂಡದವರು ಗಂಗಾರತಿ ಮಾದರಿಯಲ್ಲಿ ಕಾವೇರಿ ಮಾತೆಗೆ ದೀಪ ನಮನ ಸಲ್ಲಿಸಿದರು. ಮೊದಲ ದಿನವೇ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು, ಪ್ರವಾಸಿಗರು ದೀಪದ ಬೆಳಕು ಮತ್ತು ಸಂಗೀತದ ಸಂಯೋಜನೆಯೊಂದಿಗೆ ಪ್ರಸ್ತುತಗೊಂಡ ಕಾವೇರಿ ಆರತಿಯನ್ನು ಕಣ್ತುಂಬಿಕೊಂಡರು.
ವೇದಿಕೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಜಲಸಂಪನ್ಮೂಲ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಚಾಲನೆ ನೀಡಿ ಮಾತನಾಡಿದರು.
ಜಲಸಂಪನ್ಮೂಲ ಸಚಿವರು ಹೇಳಿದ್ದಿಷ್ಟು ನಾಡಿನ ಜನರ ಬದುಕಿಗೆ ಕಾರ್ಯಕ್ರಮಗಳನ್ನು ರೂಪಿಸುವುದು ನಮ್ಮ ಸರ್ಕಾರದ ಕೆಲಸ. ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳು ಕೆಲವರ ಹೊಟ್ಟೆನೋವಿಗೆ ಕಾರಣವಾಗಿದೆ. ಜನರಿಗೆ ಒಳ್ಳೆಯದು ಮಾಡುವುದಕ್ಕೂ ಕೆಲವರು ಅಡ್ಡಿಪಡಿಸುತ್ತಿದ್ದಾರೆ” ಎಂದು ಜಿಲ್ಲಾ ಉಸ್ತುವಾರಿ ಹಾಗೂ ಜಲಸಂಪನ್ಮೂಲ ಸಚಿವರಾದ ಎನ್.ಚಲುವರಾಯಸ್ವಾಮಿ ಹೇಳಿದರು.
“ದಿನದ 24 ಗಂಟೆಯೂ ಸಾರ್ವಜನಿಕರ ಸೇವೆ ಮಾಡುತ್ತಿದ್ದೇವೆ. ಕಾವೇರಿ ತಾಯಿ ಕರುಣೆ ತೋರಿ, ಮಳೆ ಸುರಿಸಿದರೆ ಇಡೀ ನಾಡು ಸುಭಿಕ್ಷವಾಗಲಿದೆ. ಕಾವೇರಿ ಆರತಿಗಾಗಿಯೇ ನಿನ್ನೆಯ ಮಳೆ ಇಂದು ಬಿಡುವು ನೀಡಿರುವುದು ದೇವರ ಆಶೀರ್ವಾದಕ್ಕೆ ಸಾಕ್ಷಿ. ರೈತರು ನೆಮ್ಮದಿಯ ನಿಟ್ಟುಸಿರು ಬಿಡಲಿ ಎಂಬ ಉದ್ದೇಶದಿಂದಲೇ ಪ್ರತಿ ವರ್ಷವೂ ಕಾವೇರಿ ಆರತಿ ನಡೆಸಲಾಗುವುದು” ಎಂದು ಸಚಿವರು ಘೋಷಿಸಿದರು.
“ರೈತರ ಜೀವನಾಡಿಯಾದ ಕಾವೇರಿ ನದಿಗೆ ಆರತಿ ಸಮರ್ಪಿಸುವ ಕಲ್ಪನೆ ನಮ್ಮ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರದ್ದು. ಅನೇಕ ಹೋರಾಟಗಳ ನಡುವೆ ಕಳೆದ ವರ್ಷ ಕಾವೇರಿ ಆರತಿಗೆ ಅಂದು ಡಿಸಿಎಂ ಆಗಿದ್ದ ಡಿ.ಕೆ.ಶಿವಕುಮಾರ್ ಅವರೇ ಚಾಲನೆ ನೀಡಿದ್ದರು” ಎಂದು ಸಚಿವರು ಸ್ಮರಿಸಿದರು.
ದೀಪಾಲಂಕಾರದ ವೈಭವ
ಮೈಸೂರು-ಶ್ರೀರಂಗಪಟ್ಟಣ ದಸರಾ ಹಾಗೂ ಕಾವೇರಿ ಆರತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕೆ.ಆರ್.ಎಸ್. ಬೃಂದಾವನವು ಜಗಮಗಿಸುವ ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಸರ್ವಾಲಂಕೃತಗೊಂಡಿತ್ತು. ಕಣ್ಣು ಕೋರೈಸುವ ಲೇಸರ್ ಬೆಳಕು ಮತ್ತು ಹೈಬೀಮ್ ಲೈಟ್ಗಳು ನೆರೆದಿದ್ದವರ ಮನಸೆಳೆದವು.
ಜಲಸಂಪನ್ಮೂಲ ಇಲಾಖೆ, ಕಾವೇರಿ ನೀರಾವರಿ ನಿಗಮ, ಧಾರ್ಮಿಕ ದತ್ತಿ ಇಲಾಖೆ, ಬೆಂಗಳೂರು ಜಲಮಂಡಳಿ ಹಾಗೂ ಮಂಡ್ಯ ಜಿಲ್ಲಾಡಳಿತ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿದ್ದವು. ಆರತಿ ವೀಕ್ಷಿಸಲು ಆಗಮಿಸಿದ್ದ ಜನರಿಗೆ ಉಚಿತ ಪ್ರಸಾದ (ಊಟ) ವ್ಯವಸ್ಥೆ ಕಲ್ಪಿಸಲಾಗಿದ್ದು, ಮುಂದಿನ ಆರೂ ದಿನಗಳ ಕಾಲ ಪ್ರಸಾದ ವಿನಿಯೋಗ ನಡೆಯಲಿದೆ.
ದಸರಾ ಹಿನ್ನೆಲೆಯಲ್ಲಿ ನಿತ್ಯ 8 ರಿಂದ 10 ಸಾವಿರಕ್ಕೂ ಅಧಿಕ ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿದ್ದು, ಕರ್ನಾಟಕ ಸೇರಿದಂತೆ ತಮಿಳುನಾಡು, ಕೇರಳ ಭಾಗಗಳಿಂದ ಬರುವ ಪ್ರವಾಸಿಗರು ಕಾವೇರಿ ಆರತಿಯನ್ನು ಉಚಿತವಾಗಿ ಕಣ್ತುಂಬಿಕೊಳ್ಳಬಹುದಾಗಿದೆ.
ಕಲಾತಂಡಗಳ ಮೆರಗು
ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ನಾದಸ್ವರ, ಚೆಂಡೆ, ಪೂಜಾ ಕುಣಿತ, ಬೊಂಬೆಮೇಳ, ಮಹಿಳಾ ವೀರಗಾಸೆ, ಕೊಂಬು-ಕಹಳೆ, ಡೊಳ್ಳು ಕುಣಿತ, ನಂದಿಧ್ವಜ ಕುಣಿತ, ಜಗ್ಗಲಿಗೆ ಮೇಳ, ಕೀಲು ಕುದುರೆ, ಕಂಗೀಲು ನೃತ್ಯ, ತಮಟೆ ವಾದನ, ಕಂಸಾಳೆ, ಗೊರವರ ಕುಣಿತ ಮುಂತಾದ ಜಾನಪದ ಕಲಾತಂಡಗಳು ಕೃಷ್ಣರಾಜಸಾಗರ ಬೃಂದಾವನದ ಕಳೆಯನ್ನು ಹೆಚ್ಚಿಸಿದವು. ಗಣೇಶ, ಚಾಮುಂಡೇಶ್ವರಿ ಹಾಗೂ ತುಳುನಾಡಿನ ದೈವಾರಾಧನೆಯ ಪ್ರದರ್ಶನಗಳು ನೆರೆದಿದ್ದವರಲ್ಲಿ ಭಕ್ತಿಭಾವ ಮೂಡಿಸಿದವು.
6 ದಿನಗಳ ಕಾಲ ಕಾವೇರಿ ಆರತಿ
ಜಲಸಂಪನ್ಮೂಲ ಇಲಾಖೆ, ಕಾವೇರಿ ನೀರಾವರಿ ನಿಗಮ ಹಾಗೂ ಜಿಲ್ಲಾಡಳಿತದ ವತಿಯಿಂದ 2026ನೇ ಸಾಲಿನ ನಾಡಹಬ್ಬದ ಪ್ರಯುಕ್ತ ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಇಂದಿನಿಂದ ಅಕ್ಟೋಬರ್ 21ರವರೆಗೆ ಪ್ರತಿದಿನ ಸಂಜೆ 6ರಿಂದ ಬೃಂದಾವನ ಉದ್ಯಾನದಲ್ಲಿ ಜರುಗಲಿವೆ.
ಕಾರ್ಯಕ್ರಮದಲ್ಲಿ ಸಚಿವರಾದ ಪಿ.ಎಂ.ನರೇಂದ್ರಸ್ವಾಮಿ, ಶಿವಲಿಂಗೇಗೌಡ, ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್, ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ಕೆ.ಎಂ.ಉದಯ್, ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಶಿವಣ್ಣ ಹಾಗೂ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಉಪಸ್ಥಿತರಿದ್ದರು.
ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಆದಿಚುಂಚನಗಿರಿ ಮಠದ ಸೋಮೇಶ್ವರ ಸ್ವಾಮೀಜಿ, ಕೆಂಗೇರಿ ಒಕ್ಕಲಿಗರ ಮಹಾಸಂಸ್ಥಾನ ಮಠದ ಜಗದ್ಗುರು ಡಾ. ನಿಶ್ಚಲಾನಂದನಾಥ ಸ್ವಾಮೀಜಿ ಹಾಗೂ ಕಾಗಿನೆಲೆ ಕನಕ ಗುರುಪೀಠದ (ಮೈಸೂರು ವಿಭಾಗ) ಜಗದ್ಗುರು ಶ್ರೀ ಶಿವಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ನಿತ್ಯ ಸಂಗೀತ ಸಂಜೆ
ವೇದಿಕೆ ಕಾರ್ಯಕ್ರಮದ ಬಳಿಕ ನವೀನ್ ಸಜ್ಜು ಮತ್ತು ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಅ. 17: ಸಂಜೆ 7ಕ್ಕೆ ದಿವ್ಯಾ ರಾಮಚಂದ್ರ ಮತ್ತು ತಂಡ
ಅ. 18: ಆಲ್ ಓಕೆ ಮತ್ತು ತಂಡ
ಅ. 19: ಭಾಗ್ಯಶ್ರೀ ಗೌಡ ಮತ್ತು ತಂಡ
ಅ. 20: ಕಿಕ್ಕೇರಿ ಕೃಷ್ಣಮೂರ್ತಿ ಮತ್ತು ತಂಡ
ಅ. 21: ಕಂಬದ ರಂಗಯ್ಯ ಮತ್ತು ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ.











