ವಿಜಯ ದರ್ಪಣ ನ್ಯೂಸ್…..
ಬರಗಾಲದಲ್ಲೂ ನಮ್ಮ ಸಂಪ್ರದಾಯ ಬಿಡಲು ಸಾಧ್ಯವಿಲ್ಲ: ಶ್ರೀರಂಗಪಟ್ಟಣ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ

ಶ್ರೀರಂಗಪಟ್ಟಣ (ಅಕ್ಟೋಬರ್ 15):
ಈ ಬಾರಿ ರಾಜ್ಯದಲ್ಲಿ ಬರಗಾಲ ಸೃಷ್ಟಿಯಾಗಿದೆ. ಪ್ರಕೃತಿಯ ವಿರುದ್ಧವಾಗಿ ನಾವೇನು ಮಾಡಲು ಸಾಧ್ಯವಿಲ್ಲ. ಆದರೆ, ಬರಗಾಲದಲ್ಲೂ ಯಾವ ಆಚರಣೆಯನ್ನೂ ಕೈಬಿಡಲು ಸಾಧ್ಯವಿಲ್ಲ. ಹೀಗಾಗಿ ನಾಡಹಬ್ಬ ದಸರಾವನ್ನು ಯಾವುದೇ ಕಾಲದಲ್ಲೂ ಸ್ಥಗಿತಗೊಳಿಸಿಲ್ಲ. ನಾಡಿನ ಕಲೆ, ಸಂಸ್ಕೃತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ದಸರಾ ನಡೆಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ನಾಡಹಬ್ಬ 416ನೇ ಶ್ರೀರಂಗಪಟ್ಟಣ ದಸರಾ ಅಂಗವಾಗಿ ಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿರುವ ಶ್ರೀರಂಗವೇದಿಕೆಯಲ್ಲಿ ಇಂದು ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಚಾಲನೆ ನೀಡಿದರು.
ರಾಜ್ಯದ ಪ್ರತಿ ರೈತನ ಮನೆಯಲ್ಲೂ ಧಾನ್ಯಲಕ್ಷ್ಮಿ ತುಂಬಲಿ ಎಂಬ ಆಶಯದೊಂದಿಗೆ ರಾಗಿ ತೂರುವ ಮೂಲಕ ವಿಶಿಷ್ಟವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳಿಕ ಸಚಿವರು ಮಾತನಾಡಿದರು.
ನಾವು ಕಾವೇರಿ ತಾಯಿ ಮಕ್ಕಳು
ಕಾವೇರಿ ಪೂಜೆಗೂ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ನಾವು ಕಾವೇರಿ ತಾಯಿಯ ಮಕ್ಕಳು. ಆಕೆಯ ಕೃಪೆಯಿಂದಲೇ ನಮ್ಮ ಬದುಕು ಹಸನಾಗಲಿದೆ. ಹೀಗಾಗಿ ಕಾವೇರಿ ಪೂಜೆ ಸಲ್ಲಿಸುವ ಜವಾಬ್ದಾರಿಯೊಂದಿಗೆ ಈ ವರ್ಷವೂ ಕಾವೇರಿಗೆ ಆರತಿ ಬೆಳಗಿ, ಪೂಜೆ ಸಲ್ಲಿಸುತ್ತಿದ್ದೇವೆ. ನಮ್ಮ ಸಂಸ್ಕೃತಿಯ ಭಾಗವಾಗಿರುವ ಕಾವೇರಿ ಆರತಿ ಹಾಗೂ ಶ್ರೀರಂಗಪಟ್ಟಣ ದಸರಾಗಳು ಎಂದಿಗೂ ಆಡಂಬರವಲ್ಲ; ಅವು ನಮ್ಮ ಪರಂಪರೆಯ ಪ್ರತೀಕ ಎಂದರು.

1610ರಲ್ಲಿ ಪ್ರಾರಂಭವಾದ ನಮ್ಮ ದಸರಾ ನಂತರ ಮೈಸೂರಿಗೆ ವಿಸ್ತರಿಸಿತು. ಈ ಬಾರಿ ಹಿರಿಯ ನಟ ವಿ. ರವಿಚಂದ್ರನ್ ಅವರು ದಸರಾ ಉದ್ಘಾಟಿಸಿದ್ದು, ಮತ್ತೊಂದೆಡೆ ತಾಯಿ ಚಾಮುಂಡೇಶ್ವರಿಯ ಅಂಬಾರಿ ಹೊರುತ್ತಿದ್ದ ‘ಧನಂಜಯ’ ಆನೆ ಶ್ರೀರಂಗಪಟ್ಟಣ ದಸರಾದಲ್ಲಿ ಹೆಜ್ಜೆ ಹಾಕಿರುವುದು ಈ ಬಾರಿಯ ವಿಶೇಷ ಎಂದು ತಿಳಿಸಿದರು.
ಅಚ್ಚುಕಟ್ಟು ಪ್ರದೇಶದಲ್ಲಾದರೂ ಮಳೆಯಾಗಲಿ
ನಾಡಿನ ಜನತೆಗೆ ಒಳಿತಾಗಲಿ ಎಂಬ ಉದ್ದೇಶದಿಂದ ನಡೆಯುತ್ತಿರುವ ದಸರಾ ಹಾಗೂ ಕಾವೇರಿ ಆರತಿಗೆ ಇಡೀ ಸರ್ಕಾರ ಬೆನ್ನೆಲುಬಾಗಿ ನಿಂತಿದೆ. ಕನಿಷ್ಟ ಪಕ್ಷ ಅಚ್ಚುಕಟ್ಟು ವ್ಯಾಪ್ತಿಯಲ್ಲಾದರೂ ಉತ್ತಮ ಮಳೆಯಾದರೆ ರೈತರು ನೆಮ್ಮದಿಯ ನಿಟ್ಟುಸಿರು ಬಿಡಬಹುದು ಎಂಬ ನಿರೀಕ್ಷೆಯೊಂದಿಗೆ ಕಾವೇರಿ ತಾಯಿ ಹಾಗೂ ನಾಡದೇವತೆ ಚಾಮುಂಡೇಶ್ವರಿಯನ್ನು ಪ್ರಾರ್ಥಿಸಿ ದಸರಾ ಆಚರಣೆಗೆ ಚಾಲನೆ ನೀಡಲಾಗಿದೆ ಎಂದರು.
ಭಾವುಕರಾದ ಸಚಿವರು
ಮೇರುನಟ ಡಾ. ರಾಜ್ಕುಮಾರ್ ಅವರನ್ನು ನಾವು ದೂರದಲ್ಲೇ ನಿಂತು ಕೈಮುಗಿದು ನೋಡುತ್ತಿದ್ದೆವು. ನಟರಾದ ಅಂಬರೀಶ್, ವಿಷ್ಣುವರ್ಧನ್ ಹಾಗೂ ರವಿಚಂದ್ರನ್ ನನಗೆ ಕುಟುಂಬದ ಸ್ನೇಹಿತರಂತೆ. ಆದರೆ, ಅಂಬರೀಶ್ ಹಾಗೂ ವಿಷ್ಣುವರ್ಧನ್ ನಮ್ಮನ್ನು ಅಗಲಿರುವುದು ತೀವ್ರ ನೋವು ತಂದಿದೆ ಎಂದು ಸಚಿವರು ಭಾವುಕರಾದರು.
ವೇದಿಕೆ ಕಾರ್ಯಕ್ರಮದ ಬಳಿಕ, ಮುಂಭಾಗದಲ್ಲಿ ಆಸೀನರಾದ ಸಚಿವರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಣ್ತುಂಬಿಕೊಂಡರು.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸಚಿವರು ಅಭಿನಂದನೆ ಸಲ್ಲಿಸಿದರು.
ಮಳೆಯ ನಡುವೆ ಸಂಗೀತ ಸಂಜೆ
ಶ್ರೀರಂಗಪಟ್ಟಣ ದಸರೆಗೆ ಚಾಲನೆ ನೀಡಿದ ಬಳಿಕ ಕೃಪೆ ತೋರಿದ ವರುಣ ಸತತವಾಗಿ ಮಳೆ ಸುರಿಸಿದನು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಂಗೀತ ಸುಧೆಯ ರಸದೌತಣ ಒಂದೆಡೆಯಾದರೆ, ಮತ್ತೊಂದೆಡೆ ಇಳೆಯನ್ನು ತಂಪು ಮಾಡುತ್ತಿದ್ದ ಮಳೆರಾಯನ ಶಬ್ದವು ಸಂಭ್ರಮವನ್ನು ಇನ್ನಷ್ಟು ಇಮ್ಮಡಿಗೊಳಿಸಿತು.
ಕನಿಷ್ಠ ಅಚ್ಚುಕಟ್ಟು ಪ್ರದೇಶದಲ್ಲಾದರೂ ಮಳೆಯಾಗಲಿ ಎಂಬ ಪ್ರಾರ್ಥನೆಯೊಂದಿಗೆ ದಸರೆಗೆ ಚಾಲನೆ ನೀಡಲಾಗಿದೆ ಎಂದು ಸಚಿವರು ಹೇಳುತ್ತಿದ್ದಂತೆ ಮಳೆರಾಯನ ಆರ್ಭಟ ಇನ್ನಷ್ಟು ಹೆಚ್ಚಾಗಿದ್ದು, ಇಡೀ ಶ್ರೀರಂಗಪಟ್ಟಣ ಮಳೆರಾಯನ ಕೃಪೆಯೊಂದಿಗೆ ಸಂಭ್ರಮಕ್ಕೆ ಸಾಕ್ಷಿಯಾಯಿತು.
ಇಂದಿನಿಂದ ಒಟ್ಟು ನಾಲ್ಕು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಅಕ್ಟೋಬರ್ 18ರಂದು ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.
ಇದೇ ವೇಳೆ ನಟ ಹಾಗೂ ನಿರ್ದೇಶಕ ವಿ. ರವಿಚಂದ್ರನ್, ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮೈಷುಗರ್ ಕಾರ್ಖಾನೆ ಅಧ್ಯಕ್ಷ ಸಿ.ಡಿ. ಗಂಗಾಧರ್, ರಾಜ್ಯ ಕೈಮಗ್ಗ ನಿಗಮದ ಅಧ್ಯಕ್ಷ ವಿ. ನಾಗೇಂದ್ರ ಕುಮಾರ್, ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಅಪರ ಜಿಲ್ಲಾಧಿಕಾರಿ ಶಿವಾನಂದ್, ಶೋಭಾರಾಣಿ, ಭಾನುಪ್ರಕಾಶ್ ಶರ್ಮ ಗುರೂಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.











