ವಿಜಯ ದರ್ಪಣ ನ್ಯೂಸ್…..
ತಾವರೆಕೆರೆ ಗ್ರಾಮ ಪಂಚಾಯಿತಿಯಲ್ಲಿ ಆಯುಧ ಪೂಜೆ, ಪೌರಕಾರ್ಮಿಕರಿಗೆ ಸಿಹಿ ಹಾಗೂ ಸಮವಸ್ತ್ರ ವಿತರಣೆ

ತಾವರೆಕೆರೆ: ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿ ವ್ಯಾಪ್ತಿಯ ತಾವರೆಕೆರೆ ಗ್ರಾಮ ಪಂಚಾಯಿತಿಯಲ್ಲಿ ಆಯುಧ ಪೂಜೆ ಹಾಗೂ ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುನಿಗಂಗಯ್ಯ ಅವರ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಕಚೇರಿಯಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಕಚೇರಿಯ ಸಾಮಗ್ರಿಗಳು ಹಾಗೂ ಪಂಚಾಯಿತಿಗೆ ಸಂಬಂಧಿಸಿದ ವಾಹನಗಳಿಗೆ ಪೂಜೆ ಸಲ್ಲಿಸಲಾಯಿತು. ಬಳಿಕ ಪೌರಕಾರ್ಮಿಕರಿಗೆ ಸಿಹಿ ವಿತರಿಸಿ, ಸಮವಸ್ತ್ರಗಳನ್ನು ನೀಡಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುನಿಗಂಗಯ್ಯ, “ತಾಲೂಕಿನಲ್ಲಿ ಅತ್ಯುತ್ತಮವಾಗಿ ಅಭಿವೃದ್ಧಿ ಹೊಂದುತ್ತಿರುವ ಗ್ರಾಮ ಪಂಚಾಯಿತಿಗಳಲ್ಲಿ ತಾವರೆಕೆರೆ ಗ್ರಾಮ ಪಂಚಾಯಿತಿಯೂ ಮುಂಚೂಣಿಯಲ್ಲಿದೆ.
ಈ ಸಾಧನೆಗೆ ಪಂಚಾಯಿತಿ ಸಿಬ್ಬಂದಿ, ಗ್ರಾಮಸ್ಥರು ಹಾಗೂ ಸ್ಥಳೀಯ ನಾಯಕರ ಬೆಂಬಲ ಪ್ರಮುಖ ಕಾರಣವಾಗಿದೆ. ಎಲ್ಲರ ಸಹಕಾರದಿಂದಲೇ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಾಗಿದೆ,” ಎಂದು ತಿಳಿಸಿದರು.
ತಾಯಿ ಚಾಮುಂಡೇಶ್ವರಿಯ ಆಶೀರ್ವಾದದಿಂದ ಮುಂದಿನ ದಿನಗಳಲ್ಲಿ ತಾವರೆಕೆರೆ ಗ್ರಾಮ ಪಂಚಾಯಿತಿ ಇನ್ನಷ್ಟು ಉನ್ನತ ಮಟ್ಟದ ಅಭಿವೃದ್ಧಿ ಸಾಧಿಸಲಿ ಹಾಗೂ ಇತರ ಗ್ರಾಮ ಪಂಚಾಯಿತಿಗಳಿಗೆ ಮಾದರಿ ಪಂಚಾಯಿತಿಯಾಗಿ ಹೊರಹೊಮ್ಮಲಿ ಎಂದು ಪ್ರಾರ್ಥಿಸುವುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ರವಿಕುಮಾರ್, ಪವಿತ್ರ ಮಂಜುನಾಥ್, ರಮೇಶ್,ಜಿಯಾ ಉಲ್ಲಾಖಾನ್, ರೂಪ ನಾಗೇಶ್,ದೇವರಾಜ್, ಕರ ವಸೂಲಿಗಾರ ರಾಜಣ್ಣ, ಮೀನಾಕ್ಷಿ, ಬಚ್ಚೇಗೌಡ, ಮಂಜುನಾಥ್ , ಭರತ್, ಹಾಗೂ ಪಂಚಾಯಿತಿ ಸಿಬ್ಬಂದಿ ಗ್ರಾಮಸ್ಥರು ಹಾಜರಿದ್ದರು.









